ಚಿತ್ರ ೧: ಹಾರಲು ಸಿದ್ಧವಾದ ನೀಲಿ ಮಿಂಚುಳ್ಳಿ.
(ವಿಶ್ವ ಕನ್ನಡಿಗ ನ್ಯೂಸ್) : ನೀರಿನ ಮೂಲಗಳ ಬಳಿಯಲ್ಲಿನ ಗಿಡಗಳ ಮೇಲೆ, ಕೊಂಬೆಗಳ ಮೇಲೆ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಿರುವ ನೀಲಿ ಬಣ್ಣದ ಪಕ್ಷಿಯನ್ನು ನೀವು ಕಂಡಿರುವಿರಾದರೆ ಅದು ನೀಲಿ ಮಿಂಚುಳ್ಳಿಯೇ ಸೈ!
ಆಂಗ್ಲ ಹೆಸರು: Common kingfisher (ಕಾಮನ್ ಕಿಂಗ್ ಫಿಷರ್), small blue kingfisher (ಸ್ಮಾಲ್ ಬ್ಲೂ ಕಿಂಗ್ ಫಿಷರ್), river kingfisher (ರಿವರ್ ಕಿಂಗ್ ಫಿಷರ್)
ವೈಜ್ಞಾನಿಕ ಹೆಸರು: Alcedo Atthis (ಅಲ್ಕೆಡೋ ಅಥಿಸ್)
ಪುಟ್ಟ ಕಾಲುಗಳು, ಚಿಕ್ಕ ಬಾಲ, ಡುಮ್ಮ ದೇಹ, ಉದ್ದ ಕೊಕ್ಕಿನ ಪಕ್ಷಿಯಿದು. ನಮ್ಮಲ್ಲಿ ಕಾಣಸಿಗುವ ಮಿಂಚುಳ್ಳಿಗಳಲ್ಲಿ ಇದೇ ಪುಟ್ಟದು. ಹಾಗಾಗಿ ಕಿರು ಮಿಂಚುಳ್ಳಿಯೆಂದೂ ಕರೆಯುತ್ತಾರೆ. ಬೆನ್ನು, ಬಾಲದ ಬಣ್ಣವೆಲ್ಲಾ ಪಳ ಪಳ ಹೊಳೆಯುವ ಕಡು ನೀಲಿ. ಎದೆಯ ಭಾಗ ಹೊಂಬಣ್ಣವನ್ನೊಂದಿದೆ. ನೆತ್ತಿ ನೀಲಿ ಬಣ್ಣದ್ದು, ಕಣ್ಣಿನ ಸುತ್ತ ಹೊಂಬಣ್ಣದ ಪಟ್ಟಿಯಿದೆ, ಇದರ ಹಿಂದೆ ಬಿಳಿ ಬಣ್ಣದ ಪಟ್ಟಿಯಿದೆ. ಇವುಗಳ ಕೆಳಗೆ ಮತ್ತೆ ನೀಲಿ ಬಣ್ಣದ ಪಟ್ಟಿಯಿದೆ, ಈ ನೀಲಿ ಬಣ್ಣ ಬೆನ್ನಿನ ಮೇಲೆ ಮುಂದುವರಿಯುತ್ತದೆ. ಕತ್ತಿನ ಭಾಗದಲ್ಲಿ ಕೊಂಚ ಬಿಳಿ ಬಣ್ಣವನ್ನು ಕಾಣಬಹುದು. ಕೊಕ್ಕಿನ ಬಣ್ಣ ಕಪ್ಪು.
ಚಿತ್ರ ೨: ಮೀನಿನೊಂದಿಗೆ ನೀಲಿ ಮಿಂಚುಳ್ಳಿ
ಹೆಣ್ಣು ಗಂಡುಗಳೆರಡೂ ಒಂದೇ ರೀತಿಯಾಗಿ ಕಾಣಿಸುತ್ತವೆ. ಕೆರೆ ನದಿಗಳ ದಡದ ದಂಡೆಯ ಮೆದು ಮಣ್ಣಿನಲ್ಲಿ ಪೊಟರೆ ಕೊರೆದು ಗೂಡು ಕಟ್ಟಿಕೊಳ್ಳುತ್ತವೆ.
ಹೆಚ್ಚಿನಂಶ ಒಂಟಿಯಾಗೇ ಆಹಾರ ಅರಸುವ ನೀಲಿ ಮಿಂಚುಳ್ಳಿಗಳು ಸಂಸಾರ ಹೂಡುವ ಸಮಯದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತವೆ. ಬಹಳಷ್ಟು ಸಮಯ ನೀರಿನೊಳಗಿನ ಮೀನುಗಳ ಚಲನೆಯನ್ನು ಗಮನಿಸುತ್ತಾ ಕುಳಿತುಕೊಂಡೇ ಇರುತ್ತವೆ. ಕತ್ತನ್ನು ಹಿಂದಕ್ಕೆ ಮುಂದಕ್ಕೆ ಬಲಕ್ಕೆ ಎಡಕ್ಕೆ ಕೆಳಕ್ಕೆ ತಿರುಗಿಸುತ್ತಲೇ ಇರುತ್ತವೆ. ಹಿಡಿಯಬಹುದಾದಂತಹ ಪುಟ್ಟ ಮೀನು ನೀರಿನಡಿ ಕಂಡಾಕ್ಷಣ ರೆಕ್ಕೆಗಳನ್ನು ಪಟ ಪಟ ಬಡಿಯುತ್ತಾ ನೀರಿನ ಮೇಲ್ಮೆಯಲ್ಲಿ ಹಾರುತ್ತಾ ದಡಕ್ಕನೆ ನೀರಿನೊಳಗೆ ಮುಳುಗಿ ಮೀನನ್ನು ಕೊಕ್ಕಿನಲ್ಲಿ ಕಚ್ಚಿಹಿಡಿದು ಮೇಲೆ ಬರುತ್ತದೆ. ಮತ್ತೆ ಕೊಂಬೆಯ ಮೇಲೆ ಕುಳಿತು ಸಾವಾಕಾಶವಾಗಿ ಮೀನು ಸಾಯುವವರೆಗೂ ಅದನ್ನು ಹಿಂದೆ ಮುಂದೆ ತಿರುಗಿಸಿ ಕೊಂಬೆಗೆ ಬಡಿಯುತ್ತದೆ. ಸತ್ತದ್ದು ಖಚಿತವಾದ ನಂತರ ನುಂಗಿಕೊಳ್ಳುತ್ತದೆ.
ಚಿಕ್ಕ ಪುಟ್ಟ ಏಡಿಗಳನ್ನೂ ತಿನ್ನುತ್ತದಾದರೂ ಮೀನೀ ಇದರ ಪ್ರಮುಖ ಆಹಾರ. ಮುಂದಿನ ಬಾರಿ ನದಿ ತೀರಕ್ಕೆ ಹೋದಾಗ, ಕೆರೆಯೇರಿಗೆ ಹೋದಾಗ ಮಿಂಚುಳ್ಳಿಗಳಲ್ಲೆಲ್ಲ ಉಜ್ವಲ ಬಣ್ಣಗಳಿಂದ ಹೊಳೆಯುವ ನೀಲಿ ಮಿಂಚುಳ್ಳಿಯನ್ನು ಗಮನಿಸುವುದನ್ನು ಮರೆಯಬೇಡಿ.
ಚಿತ್ರನೆನಪು:
ಚಿತ್ರ ೧: ಮಂಡ್ಯದ ಸೂಳೆಕೆರೆಯಲ್ಲಿ ತೆಗೆದ ಪಟವಿದು. ಕೆರೆಯಲ್ಲಿ ನೀರು ಕಡಿಮೆಯಿದ್ದ ಸಮಯ. ಕೆಸರಿನಲ್ಯಾರೋ ಮರದ ಒಣ ಕೊಂಬೆಯನ್ನುಉ ಸಿಕ್ಕಿಸಿದ್ದರು ಅಥವಾ ಬಹುಶಃ ಅದೇ ಸಿಕ್ಕಿಕೊಂಡಿತ್ತೇನೋ ಗೊತ್ತಿಲ್ಲ. ಕೆಸರಿನ ಸುತ್ತಲಿದ್ದ ಚೂರು ಪಾರು ನೀರಿನಲ್ಲಿದ್ದ ಮೀನುಗಳ ಹುಡುಕಾಟದಲ್ಲಿತ್ತು ಈ ನೀಲಿ ಮಿಂಚುಳ್ಳಿ. ಹಿಂದ್ಕೆ ಮುಂದ್ಕೆ ಹಾರಾಡಿಕೊಂಡು ಬಂದು ಇದೇ ಜಾಗದಲ್ಲಿ ಕುಳಿತುಕೊಳ್ಳುತ್ತಿತ್ತು. ನಿಧಾನಕ್ಕೆ ಹತ್ತಿರವಾದೆ. ಇನ್ನೇನು ಹಾರಲು ಸಿದ್ಧವಾಗುತ್ತಿದ್ದ ನೀಲಿ ಮಿಂಚುಳ್ಳಿ ಕ್ಯಾಮೆರಾದಲ್ಲಿ ಸೆರೆಯಾಯಿತು.
ಚಿತ್ರ ೨: ಮಂಡ್ಯದ ಸೂಳೆಕೆರೆಯ ದಂಡೆಯಲ್ಲಿ ಕುಳಿತು ತೆಗೆದ ಪಟವಿದು. ಸರಿಸುಮಾರು ಅರ್ಧ ತಾಸು ಕಾದು ಕುಳಿತಿದ್ದೆ, ಫೋಟೋಗಾಗಿ; ಈ ಮಿಂಚುಳ್ಳಿಯೂ ಕಾದು ಕುಳಿತಿತ್ತು, ಮೀನಿಗಾಗಿ! ಕೊನೆಗೂ ಒಂದು ಮೀನನ್ನು ಹಿಡಿದು ತಂದು ‘ಹೆಂಗಿದೆ ಬೇಟೆ?’ ಅಂತ ಕೇಳುವಂತೆ ನನ್ನೆಡೆಗೆ ನೋಡಿದಾಗ ಕ್ಲಿಕ್ಕಿಸಿದ ಪಟವಿದು. ರೆಕ್ಕೆಯ ಕೊಂಚ ಭಾಗ ತೆರೆದುಕೊಂಡಿರುವುದು, ದೇಹದ ಮೇಲೆ ನೀರಿನ ಹನಿಗಳಿರುವುದು ಚಿತ್ರದ ಅಂದವನ್ನು ಹೆಚ್ಚಿಸಿದೆ ಅಲ್ಲವೇ?
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.