(www.vknews.com) : ಕಾಡಿನಲ್ಲಿ ವಾಸಿಸುವ ವನ್ಯ ಜೀವಿಗಳ ಪೈಕಿ ಬಹಳ ಕ್ರೂರವಾದ ಒಂದು ಮೃಗವಾಗಿದೆ ತೋಳ. ಗರ್ಭಧಾರಣೆಯಾಗಿ ಬರೇ ಎರಡೇ ತಿಂಗಳಲ್ಲಿ ಮೂರರಿಂದ ಎಂಟರ ತನಕ ಮರಿಹಾಕುವ ಸಾಧಾರಣ ಬೂದಿ ಬಣ್ಣದ ಈ ಪ್ರಾಣಿ ಸರಿ ಸುಮಾರು ಇಪ್ಪತ್ತರಿಂದ ಮುವತ್ತು ವರ್ಷಗಳ ತನಕ ಬದುಕುತ್ತದೆ.
▪ಹುಟ್ಟುವ ನವಜಾತ ಮರಿಯ ಜನನ ಶರೀರದಲ್ಲಿ ರೋಮಗಳಿಲ್ಲದೆ, ಕುರುಡನಾಗಿಯೂ, ಕಿವುಡನಾಗಿಯೂ ಆಗಿರುತ್ತದೆ. ದೃಷ್ಟಿ, ಶ್ರವಣ ಶಕ್ತಿ, ಮತ್ತು ಶರೀರದಲ್ಲಿ ರೋಮ ಬರುವ ತನಕ ಸರಿ ಸುಮಾರು ಐದಾರು ವಾರಗಳ ಕಾಲ ತಂದೆ ತಾಯಂದಿರ ಪೂರ್ಣ ಸಂರಕ್ಷಣೆ ಮತ್ತು ಪೋಷಣೆಯಲ್ಲಿರುತ್ತದೆ.
▪ಪವಿತ್ರ ಕುರ್ಆನಿನಲ್ಲಿ ಪ್ರವಾದಿ ಯೂಸುಫ್ (ಅ) ಮತ್ತು ಅವರ ಸಹೋದರರ ವಿಚಾರವಾಗಿ ನಡೆದ ಐತಿಹಾಸಿಕ ಘಟನೆಯನ್ನು ವಿವರಿಸುವ ಅಧ್ಯಾಯವಾದ ಸೂರಃ ಅಲ್ ಯೂಸುಫ್ ನಲ್ಲಿ ಈ ತೋಳದ ಹೆಸರನ್ನು ಮೂರು ಬಾರಿ ಉಲ್ಲೇಖಿಸಲಾಗಿದೆ.
▪ಕಾಡಿನ ರಾಜನಾದ ಸಿಂಹದಂತೆಯೇ ಹಸಿವನ್ನು ತಡೆದು ಕೊಳ್ಳುವ ಶಕ್ತಿ ಮತ್ತು ತಾಳ್ಮೆ ಈ ತೋಳಕ್ಕೂ ಇದೆ. ಕೆಲವೊಮ್ಮೆ ಏನೂ ಸಿಗದಿದ್ದರೆ ಎಷ್ಟೋ ದಿನಗಳು ಏನನ್ನೂ ತಿನ್ನದೆ ಹಾಗೆಯೇ ಇರುತ್ತದೆ. ಆಹಾರ ಸಿಗದಿದ್ದರೆ ಮಾಂಸ ಅಥವಾ ಇನ್ಯಾವುದೇ ಆಹಾರ ಪದಾರ್ಥಗಳ ವಾಸನೆ ದೊರೆತರೂ ಆ ದಿನಕ್ಕೆ ಸಾಕಾಗುತ್ತದೆ. ಮತ್ತೆ ತಿನ್ನಬೇಕಾದ ಅಗತ್ಯವಿಲ್ಲ. ಸಿಂಹದಂತೆಯೇ ಯಾವತ್ತೂ ಎಷ್ಟು ಹಸಿವಾದರೂ ಸತ್ತ ಶವವನ್ನು ತಿನ್ನಲಾರದು. ಹಗಲು ಹೊತ್ತು ಬೆಳಗಿನಿಂದ ಸೂರ್ಯಾಸ್ತಮಾನದ ತನಕ ದೈನಂದಿನ ಕಸುಬಾದ ಹೊಟ್ಟೆಪಾಡಿನ ಸಂಚಾರವಾಗಿರುತ್ತದೆ. ಸರಿ ಸುಮಾರು ಐವತ್ತು ಕಿಲೋಮೀಟರ್ ವೇಗದಲ್ಲಿ ಓಡುವ ಈ ಮೃಗ ಎಂದೂ ಹಗಲು ಹೊತ್ತು ವಿಶ್ರಾಂತಿ ತೆಗೆದು ಕೊಳ್ಳುವುದಿಲ್ಲ. ಸೋಮಾರಿತನವೆಂಬುದು ಇದಕ್ಕೆ ಗೊತ್ತೇ ಇಲ್ಲ.
▪ ತೋಳನಿಗೆ ಅಲ್ಲಾಹನು ಬೇರೆ ಜೀವಿಗಳಿಗೆ ಕೊಡದ ಹಲವಾರು ವಿಶೇಷತೆಗಳನ್ನು ಕೊಟ್ಟಿದ್ದಾನೆ. ಖರ್ಜೂರದ ಒಳಗಿನ ಬೀಜ ಅಲ್ಲದ ಇತರ ಕಬ್ಬಿಣದಂತಹ ಗಟ್ಟಿಯಿರುವ ಯಾವ ಆಹಾರ ವಸ್ತುವನ್ನು ತಿಂದರೂ ಅದು ಇದರ ಜಠರದಲ್ಲಿ ನಿರಾಯಾಸ ಕರಗುತ್ತದೆ.
▪ ತೋಳವು ಸ್ವತಂತ್ರವಾಗಿ ಅಂದರೆ ಕಟ್ಟಿ ಹಾಕದ ರೀತಿಯಲ್ಲಿ ಕಾಡಿನಲ್ಲಿರುವುದಾದರೆ ಅದು ಅರಚುತ್ತಾ (ಬೊಗಳುವುದು) ಇರುತ್ತದೆ. ಎಷ್ಟರಮಟ್ಟಿಗೆ ಎಂದರೆ ರಾತ್ರಿ ಶಾಂತ ವಾತಾವರಣವಿರುವ ಸಮಯದಲ್ಲಿ ತೋಳ ಕೂಗಿದರೆ ಸರಿ ಸುಮಾರು ಏಳು ಮೈಲಿಯ ತನಕ ಕೇಳುತ್ತದೆ. ಆದರೆ ತೋಳವನ್ನು ಹೇಗಾದರು ಮಾಡಿ ಹಿಡಿದು ಹಗ್ಗದಲ್ಲಿ ಕಟ್ಟಿ ಹಾಕಿ ಜೀವಂತವಿರುವ ಆ ತೋಳಕ್ಕೆ ಹೊಡೆದರೆ ಅಥವಾ ಖಡ್ಗದಿಂದ ಅದರ ಶರೀರವನನ್ನು ಕೊಚ್ಚಿ ಹಾಕಿದರೆ ಅಥವಾ ಅದರ ಎಲುಬನ್ನು ಪುಡಿ ಪುಡಿ ಮಾಡಿದರೆ ಸಾಯುವ ತನಕವೂ ಮೌನವಾಗಿಯೇ ಇರುತ್ತದೆಯೇ ವಿನಾ ಗರ್ವದ ಕಾರಣದಿಂದ ಒಂದಿಷ್ಟೂ ಕೂಗದು. ಮಾತ್ರವಲ್ಲ ಕಠಿಣವಾದ ಗರ್ವದಿಂದ ಆಕ್ರಮಣ ಮಾಡುವವನನ್ನು ತೀಕ್ಷ್ಣವಾಗಿ ದೃಷ್ಟಿಯಿಟ್ಟು ನೊಡುತ್ತಿರುತ್ತದೆ.
▪ ತನ್ನ ಇಷ್ಟ ಭೋಜನವಾದ ಆಡು, ಮನುಷ್ಯ ಇತ್ಯಾದಿಗಳು ಮೂರು ನಾಲ್ಕು ಮೈಲಿ ದೂರದಲ್ಲಿ ಇರುವಾಗಲೂ ಅದರ ವಾಸನೆಯನ್ನು ತಿಳಿಯುವ ಶ್ರೇಷ್ಠ ಘ್ರಾಣಶಕ್ತಿ ಇದಕ್ಕಿದೆ. ಮಾತ್ರವಲ್ಲ ಹಗಲು ಹೊತ್ತು ಮೈದಾನದಂತಹ ಬಯಲು ಪ್ರದೇಶದಲ್ಲಿ ಎಷ್ಟೋ ಮೈಲು ದೂರದಲ್ಲಿರುವ ವಸ್ತುವನ್ನು ಕೂಡಾ ಬಹಳ ಸ್ಪಷ್ಟವಾಗಿ ಕಾಣುವ ದ್ರಷ್ಟಿಶಕ್ತಿಯೂ ಇದಕ್ಕಿದೆ.
▪ಇದರ ಮತ್ತೊಂದು ವಿಶೇಷತೆ ಎಂದರೆ ಇದು ಯಾವಾಗಲೂ ಒಂಟಿಯಾಗಿ ಇರುವುದು ಬಹಳ ಕಡಿಮೆ. ಕಾಡಿನಲ್ಲಿ ಇದಕ್ಕೆ ಒಂದು ಗುಂಪು ಇರುತ್ತದೆ. ಒಂದು ಗುಂಪಲ್ಲಿ ಹತ್ತು, ಹನ್ನೆರಡು, ಹದಿನೈದು ಹೀಗೆ ವ್ಯತ್ಯಸ್ತವಾಗಿ ಸದಸ್ಯ ಬಲ ಇರುತ್ತದೆ. ಎರಡು ಅಥವಾ ಮೂರು ಸದಸ್ಯರಿರುವ ದುರ್ಬಲ ತಂಡವೂ ಇರುತ್ತದೆ. ಗ್ರೂಪಿನಲ್ಲಿರುವ ಹಿರಿಯರು ಗ್ರೂಪಿನ ಚುಕ್ಕಾಣಿ ಹಿಡಿಯುತ್ತಾರೆ
▪ಒಂದು ಮೃಗವನ್ನು ಬೇಟೆಯಾಡಲ್ಪಟ್ಟರೆ ಹಿರಿಯ ನಾಯಕರ ನಿರ್ದೇಶದಂತೆ ಹಂಚಿಕೆ ಮಾಡಲಾಗುತ್ತದೆ. ಎರಡು ಸದಸ್ಯರಿರುವ ತಂಡಕ್ಕೆ ಒಬ್ಬ ಮನುಷ್ಯನನ್ನು ಬೇಟೆಯಲ್ಲಿ ಸಿಕ್ಕಿದರೆ ಸಮಾನವಾಗಿ ಎರಡು ತುಂಡು ಮಾಡಲಾಗುತ್ತದೆ. ತಿನ್ನುವಾಗಲೂ ಈ ಜಾಣ ತೋಳ ಸಿಕ್ಕಾಪಟ್ಟೆ ತಿನ್ನಲಾರದು. ಹೃದಯ, ಪಿತ್ತಜನಕಾಂಗ, ಲಿವರ್, ತೊಡೆಯ ಮಾಂಸ ಇತ್ಯಾದಿಗಳನ್ನು ಮೊದಲು ತಿನ್ನುತ್ತದೆ. ತಿಂದು ಸಾಕಾದರೆ ಬಾಕಿ ಇರುವುದನ್ನು ಅಲ್ಲೇ ಬಿಟ್ಟು ಬಿಡುತ್ತದೆ. ನಾಳೆಯ ಚಿಂತೆ ಈ ಜೀವಿಗೆ ಇಲ್ಲ.
▪ಪಾರಿವಾಳದಂತೆ ತೋಳವು ಜೀವಪರ್ಯಂತ ತನ್ನ ಸಂಗಾತಿಯೊಂದಿಗೆ ಇರುತ್ತದೆ. ಯೌವನ ವಯಸ್ಸು ತಲುಪಿದರೆ ಗಂಡು ಮತ್ತು ಹೆಣ್ಣು ಪರಸ್ಪರ ಒಪ್ಪಂದವಾಗಿ ಜೋಡಿಗಳಾಗುತ್ತವೆ. ನಂತರ ಈ ಜೋಡಿಯಲ್ಲದೆ ಬೇರೊಂದು ತೋಳದೊಂದಿಗೆ ಅನೈತಿಕ ಸಂಬಂಧದಲ್ಲಿ ಏರ್ಪಡುವ ಸಂಗತಿಯೇ ಇಲ್ಲ. ಸಾಯುವ ತನಕ ಎಲ್ಲಾ ವಿಷಯಗಳಲ್ಲೂ ಪರಸ್ಪರ ಒಪ್ಪಂದ ಮತ್ತು ಸಾಮರಸ್ಯ ಮನೋಭಾವವಿರುತ್ತದೆಮಾತ್ರವಲ್ಲ ತಂದೆ ತಾಯಂದಿರು ವೃದ್ಧಾಪ್ಯಕ್ಕೆ ತಲುಪಿದರೆ ನಂತರ ಬೇಟೆಗೆ ಹೋಗಬೇಕೆಂದಿಲ್ಲ. ಆಗ ಅವುಗಳ ಮರಿಗಳು ಗೂಡಿಗೆ ಆಹಾರ ಸರಬರಾಜು ಮಾಡುತ್ತವೆ. ಅಂತೆಯೇ ಪೂರ್ಣ ಗರ್ಭಿಣಿಗಳಿಗೂ ಈ ರಿಯಾಯಿತಿ ಇದೆ. ಆಗಲೂ ಬೇಟೆಗೆ ಹೋಗದೆ ಗೂಡಲ್ಲಿ ಕೂರಬಹುದು. ಎಂತಹಾ ಐಕ್ಯತೆಯ ಕೌಟುಂಬಿಕ ಜೀವನ ಸುಬ್’ಹಾನಲ್ಲಾ…!!!
▪ತೋಳದ ಮತ್ತೊಂದು ಸ್ವಭಾವವೆಂದರೆ, ಒಂದು ತೋಳಕ್ಕೆ ತಡೆಯಲಾರದ ಹಸಿವಾದರೆ ಅದು ದೊಡ್ಡ ಶಬ್ದದಲ್ಲಿ ಕೂಗುತ್ತದೆ. ಆಗ ಆ ಗುಂಪಿನ, ಕಾಡಿನಲ್ಲಿ ಅಲ್ಲಲ್ಲಿ ಹರಡಿರುವ ಎಲ್ಲಾ ಸದಸ್ಯರು ಒಂದು ಕಡೆ ಜಮಾಯಿಸುತ್ತಾರೆ. ಕೆಲವೊಮ್ಮೆ ಬೇರೆ ಗ್ರೂಪಿನ ಸದಸ್ಯರೂ ಒಗ್ಗೂಡುತ್ತಾರೆ. ನಂತರ ಎಲ್ಲರೂ ಒಂದೇ ಸಾಲಿನಲ್ಲಿ ನಿಂತು ಸಾಮೂಹಿಕವಾಗಿ ಕೂಗಲು ಶುರು ಮಾಡುತ್ತಾರೆ. ಅದು ಕೆಲವೊಮ್ಮೆ ಗಂಟೆಗಟ್ಟಲೆ ಮುಂದುವರಿಯುತ್ತದೆ. ಹಾಗೆಯೇ ಈ ಸಾಹಸ ಕಾರ್ಯ ಮುಂದುವರಿಯುತ್ತಿರುವಾಗ ದಣಿವು ಆಗಿ ಸಾಲಿನಿಂದ ಒಂದು ತೋಳ ಹೊರ ಹೋದರೆ ಹೊರಹೋದ ತೋಳವನ್ನು ಇತರರು ಸೇರಿ ಕೊಂದು ತಿನ್ನುತ್ತಾರೆ. ಸುಬ್’ಹಾನಲ್ಲಾ..!! ಇದು ಎಂತಹಾ ವಿಪರ್ಯಾಸ…?
▪ತೋಳಕ್ಕೆ ಅಲ್ಲಾಹನು ಯಾವ ಜೀವಿಗೂ ಕೊಡದ ಬಹಳ ಚೂಪಾದ ಮತ್ತು ಹರಿತವಾದ ಕೋರೆ ಹಲ್ಲನ್ನು ಕೊಟ್ಟಿದ್ದಾನೆ. ಎಂತಹಾ ಬಲಿಷ್ಠವಾದ ಎಲುಬನ್ನೂ ನಿರಾಯಾಸ ತುಂಡು ಮಾಡುತ್ತದೆ. ತೋಳವೊಂದು ಎಲುಬನ್ನು ತುಂಡು ಮಾಡುವಾಗ ಹತ್ತಿರವಿರುವವನಿಗೆ ಅದರ ಶಬ್ದ ಕೂಡ ಕೇಳದು. ಅಷ್ಟಕ್ಕೂ ಚೂಪಾಗಿರುತ್ತದೆ. ಮಾತ್ರವಲ್ಲ ಇದರ ನಾಲಗೆಗೆ ಎಂತಹಾ ಕಠಿಣ ವಸ್ತುಗಳನ್ನೂ ವಕ್ರ ಮಾಡುವ ತಾಕತ್ತೂ ಕೂಡ ಇದೆ.
▪ಇದರ ಬೇರೊಂದು ಅದ್ಭುತವೆಂದರೆ ನಿದ್ದೆ ಮಾಡುವಾಗ ಇದು ತನ್ನ ಒಂದು ಕಣ್ಣನ್ನು ಮಾತ್ರ ಮುಚ್ಚಿ ಮತ್ತೊಂದನ್ನು ತೆರೆದಿರುತ್ತದೆ. ಒಂದು ಹಂತ ಮುಗಿಯುವಾಗ ಮೊದಲು ಮುಚ್ಚಿದ್ದನ್ನು ತೆರೆದು ಮತ್ತೊಂದನ್ನು ಮುಚ್ಚುತ್ತದೆ. ಮಾತ್ರವಲ್ಲ ಒಂದು ಕಣ್ಣಲ್ಲಿ ನಿದ್ದೆಯಲ್ಲಿರುವಾಗಲೂ ಮತ್ತೊಂದು ಕಣ್ಣಲ್ಲಿ ಚೆನ್ನಾಗಿ ಕಾಣುತ್ತದೆ.
▪ಬೇರೊಂದು ಅದ್ಭುತವೆಂದರೆ ತೋಳದ ಚರ್ಮ ಮತ್ತು ಆಡಿನ ಚರ್ಮವನ್ನು ಒಂದೇ ಕಡೆ ಇಟ್ಟರೆ ಆಡಿನ ಚರ್ಮದಿಂದ ಅದರ ರೋಮಗಳು ತಾನಗಿಯೇ ಉದುರಿ ಹೋಗುತ್ತದೆ.
▪ ಮೂರು ಸಹಾಬಿಗಳೊಂದಿಗೆ ತೋಳವು ಮಾತನಾಡಿದ ಬಗ್ಗೆ ಚರಿತ್ರೆಯಿದೆ. ತೋಳವು ಅವರಲ್ಲಿ ಮಾತನಾಡುವಾಗ ಅವರು ಯಾರೂ ಸಹಾಬಿಗಳಾಗಿರಲಿಲ್ಲ. ಆದರೆ ಈ ಪವಾಡ ಮುಂದಕ್ಕೆ ಅವರ ಇಸ್ಲಾಮ್ ಸ್ವೀಕಾರಕ್ಕೆ ಕಾರಣವಾಯಿತು.
▪ ಅಹ್ಬಾನ್ ಬಿನ್ ಅವ್ಸ್ ಎಂಬವರು ತನ್ನ ಅಧೀನದಲ್ಲಿರುವ ಆಡುಗಳನ್ನು ಒಂದು ಬಯಲು ಪ್ರದೇಶದಲ್ಲಿ ಮೇಯಿಸುತ್ತಿರುವಾಗ ಅಲ್ಲಿಗೆ ಒಂದು ತೋಳ ಬಂದು ಆಡಿನ ಗುಂಪಿನಿಂದ ಒಂದು ಆಡನ್ನು ಕಚ್ಚಿಕೊಂಡು ಹೋಯಿತು. ಅಹ್ಬಾನ್ ರವರು “ಅಯ್ಯೋ ನನ್ನ ಆಡನ್ನು ತೋಳ ಕೊಂಡು ಹೋಯಿತು” ಎಂದು ಬೊಬ್ಬೆ ಹಾಕಿದರು. ಆಗ ಸುಬ್’ಹಾನಲ್ಲಾ ತೋಳ ಹೇಳಿತಂತೆ. “ಇದು ನಿಮ್ಮ ಆಡಲ್ಲ. ಇದು ಅಲ್ಲಾಹನು ನನಗೆ ಇವತ್ತಿಗೆ ಕೊಟ್ಟ ಆಹಾರ” ಆಗ ಅಹ್ಬಾನ್ ಆಶ್ಚರ್ಯದಿಂದ ಹೇಳಿದರು. “ಇದೇನು ಕತೆ…? ಮೃಗವೊಂದು ಮಾತನಾಡುವುದಾ.?” ಆಗ ತೋಳ ಹೇಳಿತು. “ಹೌದು. ಏನು ತೊಂದರೆ…? ಇದರಲ್ಲೇನು ಅದ್ಭುತ..? ಈ ಮದೀನದಲ್ಲಿ ಅಲ್ಲಾಹುನಿಂದ ನಿಯುಕ್ತರಾದ ಪ್ರವಾದಿಯೊಬ್ಬರು ನಡೆದ ಸಂಗತಿಗಳನ್ನೂ ನಡೆಯಲಿರುವುನ್ನೂ ಬಿಡಿಬಿಡಿಯಾಗಿ ಹೇಳುವುದರೊಂದಿಗೆ ನಿಮ್ಮನ್ನೆಲ್ಲಾ ಇಸ್ಲಾಮಿಗೆ ಮತ್ತು ಅಲ್ಲಾಹುವಿನಿಗೆ ಆರಾಧನೆ ಮಾಡಲು ಕರೆಯುತ್ತಿದ್ದಾರೆ. ಅದಾಗ್ಯೂ ನೀವು ಅವರಿಗೆ ಉತ್ತರ ಕೊಡುವುದಿಲ್ಲ. ಇದಕ್ಕಿಂತ ದೊಡ್ಡ ಅದ್ಭುತ ಬೇರೆ ಉಂಟಾ… ?”
▪ಆಶ್ಚರ್ಯದಿಂದ ಕೂಡಲೇ ಅಹ್ಬಾನ್ ಬಿನ್ ಅವ್ಸ್ ರವರು ಮದೀನದಲ್ಲಿದ್ದ ಪ್ರವಾದಿ ಸನ್ನಿಧಿಗೆ ಹೋಗಿ ನಡೆದ ಘಟನೆಯ ಬಗ್ಗೆ ಹೇಳಿದರು. ಮಾತ್ರವಲ್ಲ ಯಹೂದಿಯಾಗಿದ್ದ ಅವರು ಅಲ್ಲೇ ಇಸ್ಲಾಮ್ ಧರ್ಮ ಸ್ವೀಕರಿಸಿದರು. ನಂತರ ಇವರು ಅಹ್ಬಾನಿಗೆ ಬದಲು ಮುಕಲ್ಲಿಮುಝಿಹ್ಬ್ (ತೋಳದೊಂದಿಗೆ ಮಾತನಾಡಿದವರು) ಎಂಬ ಹೆಸರಲ್ಲಿ ಖ್ಯಾತರಾಗಿದ್ದರು.
▪ ರಾಫಿಅ್ ಬಿನ್ ಉಮೈರಾಃ, ಮತ್ತು ಸಲಮತ್ ಬಿನ್ ಅಲ್ ಅಕ್ವಅ್ ಎಂಬ ಇಬ್ಬರಲ್ಲೂ ಇದೇ ರೀತಿ ತೋಳ ಮಾತನಾಡಿ ಅವರ ಇಸ್ಲಾಮ್ ಸ್ವೀಕಾರಕ್ಕೆ ಕಾರಣವಾಗಿತ್ತು.
▪ಪ್ರವಾದಿ ದಾವೂದ್(ಅ) ರ ಕಾಲದಲ್ಲಿ ಒಂದು ಕುಗ್ರಾಮದಲ್ಲಿ ಮಾತನಾಡುವ ಪ್ರಾಯ ತಲುಪದ ಎರಡು ಪುಟ್ಟ ಮಕ್ಕಳು ಮನೆಯಂಗಳದಲ್ಲಿ ಆಟ ಆಡುತ್ತಿದ್ದಾಗ ಕಾಡಿನಿಂದ ಬಂದ ತೋಳವೊಂದು ಇದರಿಂದ ಒಂದು ಮಗುವನ್ನು ಕಚ್ಚಿ ಕೊಂಡು ಹೋಯಿತು. ಮಗು ಕೂಗುವ ಶಬ್ದ ಕೇಳಿ ಮನೆಯೊಳಗಿಂದ ತಾಯಂದಿರು ಬಂದು ನೋಡುವಾಗ ಒಂದು ಮಗು ತೋಳದ ಕೈಯಲ್ಲಾಗಿತ್ತು. ಈ ಎರಡು ಮಕ್ಕಳು ಹತ್ತಿರದ ಮನೆಯವರದಾಗಿತ್ತು. ಒಟ್ಟಿನಲ್ಲಿ ಎರಡು ಮಕ್ಕಳ ತಾಯಂದಿರ ನಡುವೆ ಅಲ್ಲಿ ಪರಸ್ಪರ ಜಟಾಪಟಿಯೇ ಜಟಾಪಟಿ. ಒಬ್ಬರು ತಾಯಿ “ತೋಳ ಕೊಂಡು ಹೋದ ಮಗು ನನ್ನದಲ್ಲ” ಎಂದು ಹೇಳುವಾಗ ಮತ್ತೊಬ್ಬಳು ತಾಯಿ “ದೇವರಾಣೆ.. ನನ್ನದಲ್ಲ. ನಿನ್ನದೇ” ಎಂದು ಹೇಳ ತೊಡಗಿದರು. ಕೊನೆಗೆ ಸಮಸ್ಯೆಯು ತುಂಬಾ ಸಂಕೀರ್ಣವಾದಾಗ ಸಮಸ್ಯೆಗೆ ಪರಿಹಾರ ಹುಡುಕಿ ಇಬ್ಬರು ತಾಯಂದಿರೂ ಪ್ರವಾದಿ ದಾವೂದ್ (ಅ) ರ ಸನ್ನಿಧಿಗೆ ಹೋದರು. ದಾವೂದ್ (ಅ) ರು “ಈ ಮಗು ಯಾರದು” ಎಂದು ಕೇಳಿದಾಗ ಇಬ್ಬರೂ “ನನ್ನದೇ ನನ್ನದೇ” ಎಂಬ ಹಟತನದ ಉತ್ತರ ಕೊಟ್ಟರು. ಕೊನೆಗೆ ಪ್ರವಾದಿ ದಾವೂದ್ (ಅ) ರು ಅದರಲ್ಲಿ ಪ್ರಾಯ ಜಾಸ್ತಿ ಇರುವ ತಾಯಿಯನ್ನು ನೋಡಿ ಅವರಿಗೆ ಕೊಡಲು ಆಜ್ಞಾಪಿಸಿದರು. ನಿಜವಾಗಿ ಅದು ಅವಳ ಮಗು ಆಗಿರಲಿಲ್ಲ. “ತೋಳ ತಿಂದರೇನು ತಿನ್ನಲಿ. ನಷ್ಟ ಆದ ಕಂದನಿಗೆ ಬದಲು ಬೇರೊಂದು ಸಿಕ್ಕಿತಲ್ವಾ…? ಅದುವೇ ಭಾಗ್ಯ “ ಎಂದು ಮನದಲ್ಲಿ ಲೆಕ್ಕ ಹಾಕುತ್ತಾ ಸಂತೊಷದಿಂದ ನಕಲಿ ತಾಯಿ ನಕಲಿ ಮಗುವನ್ನು ತನ್ನ ಹೆಗಲಲ್ಲಿ ಹಾಕಿ ತನ್ನ ಮನೆಯತ್ತ ನಡೆದಳು.
▪ಆದರೆ ಅಸಲಿ ತಾಯಿ ಬಿಡಲಿಲ್ಲ. ಮರುದಿನವೇ ಪ್ರವಾದಿ ದಾವೂದ್ (ಅ) ರ ಮಗನಾದ ಚಕ್ರವರ್ತಿ ಪ್ರವಾದಿ ಸುಲೈಮಾನ್ (ಅ) ರ ನ್ಯಾಯಾಲಯಕ್ಕೆ ಮೊರೆ ಹೋಗಿ ಅಲ್ಲಿ ಅಪೀಲು ಅರ್ಜಿ ಕೊಟ್ಟಳು. ಸುಲೈಮಾನ್ (ಅ) ರು ಇಬ್ಬರು ತಾಯಂದಿರನ್ನೂ ವಿಚಾರಣೆಗೆ ಒಳಪಡಿಸಿದರು. ಅಲ್ಲೂ ಇಬ್ಬರೂ ಅವರವರ ಹಟಮಾರಿತನದಲ್ಲೇ ಇದ್ದರು. ಅಸಲಿ ತಾಯಿ ಯಾರು ನಕಲಿ ತಾಯಿ ಯಾರೆಂದು ತಿಳಿಯದೇ ಹೋದಾಗ ಬುದ್ದಿವಂತನಾದ ಪ್ರವಾದಿ ಸುಲೈಮಾನ್ (ಅ) ರಿಗೆ ಒಂದು ಉಪಾಯ ತೋರಿತು. ತನ್ನ ಸೇವಕನನ್ನು ಕರೆದು ಹೇಳಿದರು. “ಮನೆಯೊಳಗಿಂದ ಹರಿತವಾದ ಒಂದು ಖಡ್ಗವನ್ನು ತೆಗೆದುಕೊಂಡು ಬಾ” ಸೇವಕ ಕೂಡಲೆ ಹರಿತವಾದ ಖಡ್ಗವನ್ನು ಪ್ರವಾದಿ ಸುಲೈಮಾನ್ (ಅ)ರ ಮುಂದಿಟ್ಟನು. ಸುಲೈಮಾನ್ (ಅ) ರು ಮಗುವನ್ನು ನೆಲದಲ್ಲಿ ಅಂಗಾತ ಮಲಗಿಸಿ “ನೀವಿಬ್ಬರೂ ಈ ಮಗು ನನ್ನದೆಂದು ನನ್ನದೆಂದು ಹಟ ಹಿಡಿಯುತ್ತಿದ್ದೀರಿ. ಪರವಾಗಿಲ್ಲ. ನಾನೀಗ ನಿಮಗಿಬ್ಬರಿಗೂ ತೊಂದರೆ ಆಗದ ರೀತಿಯಲ್ಲಿ ಎರಡು ತುಂಡು ಮಾಡಿ ಸಮಾನವಾಗಿ ಹಂಚಿಕೆ ಮಾಡಿ ಕೊಡುತ್ತೇನೆ” ಎಂದು ಹೇಳಿ ಖಡ್ಗವನ್ನು ಮಗುವಿನ ಶರೀರದ ಮೇಲೆ ಇಡಲು ರೆಡಿಯಾದಾಗ ಅಪೀಲು ಅರ್ಜಿ ಕೊಟ್ಟ ಮಹಿಳೆ ಅಂದರೆ ಮಗುವಿನ ಅಸಲಿ ತಾಯಿ ಹೇಳಿದರಂತೆ. “ಓ ಪ್ರವಾದಿಯವರೇ, ಅಲ್ಲಾಹನು ನಿಮಗೆ ಬರಕತ್ತು ನೀಡಿ ಅನುಗ್ರಹಿಸಲಿ. ಮಗುವನ್ನು ತುಂಡು ಮಾಡಬೇಡಿ. ಮಗು ನನ್ನದಲ್ಲ. ಅವಳದ್ದೇ. ಅವಳಿಗೇ ಕೊಡಿ. ನನಗೆ ಬೇಡ.” ಈ ಸಮಯದಲ್ಲಿ ನಕಲಿ ತಾಯಿ ಮೌನವಾಗಿಯೇ ಇದ್ದಳು. ಬುದ್ದಿವಂತ ಸುಲೈಮಾನ್ (ಅ)ರು ಮಗುವನ್ನು ಮಗು ನನ್ನದಲ್ಲ ಎಂದು ಹೇಳಿದ ಮಹಿಳೆಗೇ ಕೊಟ್ಟರು.
▪ಒಟ್ಟಿನಲ್ಲಿ ಹೆತ್ತ ತಾಯಿಯ ಪ್ರೀತಿಗೆ ಸಮಾನವಾದ ಪ್ರೀತಿ ಬೇರೆ ಇಲ್ಲ. ತಾಯಿಗೆ ಸಮಾನ ತಾಯಿ ಮಾತ್ರ. “ನಿನ್ನನ್ನು ಈ ಜಗತ್ತಿನಲ್ಲಿ ಒಂದು ಸಾವಿರ ಮಂದಿ ಪ್ರೀತಿಸುತ್ತಾರೆ ಎಂದಾದರೆ ಅವರಲ್ಲಿ ಮೊದಲನೆಯವಳು ನಾನಾಗಿರುವೆ. ಈ ಜಗತ್ತಿನಲ್ಲಿ ನಿನ್ನನ್ನು ಬರೇ ಒಬ್ಬರು ಮಾತ್ರ ಪ್ರೀತಿಸುವುದಾದರೆ ಅದೂ ಕೂಡ ನಾನಾಗಿರುವೆ. ಇನ್ನು ಈ ಪ್ರಪಂಚದಲ್ಲಿ ನಿನ್ನನ್ನು ಪ್ರೀತಿಸುವ ಯಾವೊಬ್ಬನೂ ಇಲ್ಲ ಎಂದಾದರೆ ಆಗ ನೀನು ತಿಳಿದುಕೊ ನಿನ್ನ ಹೆತ್ತ ತಾಯಿ ಈ ಲೋಕ ಬಿಟ್ಟು ಪರಲೋಕ ತಲುಪಿದ್ದಾರೆ ಎಂದು ಪ್ರಮುಖ ಮುಸ್ಲಿಮ್ ಅರಬಿ ಕವಿಯೊಬ್ಬರು ಆಡಿದ ಈ ಮೇಲಿನ ಅರ್ಥವತ್ತಾದ ಮಾತನ್ನು ಸಾಂದರ್ಭಿಕವಾಗಿ ಓದುಗರ ಗಮನಕ್ಕೆ ತರುತ್ತಿದ್ದೇನೆ.
▪ಬನೂ ಇಸ್ರಾಯೀಲ್ ಕಾಲದಲ್ಲಿ ಮಹಿಳೆಯೊಬ್ಬಳು ತನ್ನ ಪುಟ್ಟ ಮಗುವನ್ನು ಸಮೀಪದಲ್ಲಿ ಮಲಗಿಸಿ ಬಟ್ಟೆ ತೊಳೆಯುತ್ತಿದ್ದಾಗ ಭಿಕ್ಷುಕನೊಬ್ಬ ಬಂದು ಹೇಳಿದ. “ಹಸಿವಾಗುತ್ತದೆ. ಏನಾದರು ಇದ್ದರೆ ಕೊಡಿ” ಆಗ ಮಹಿಳೆಯು ತನ್ನ ಕಂದನಿಗೆ ತಂದಿದ್ದ ಆಹಾರದ ಕಟ್ಟನ್ನು ಭಿಕ್ಷುಕನಿಗೆ ಕೊಟ್ಟಳು. ಅಷ್ಟರಲ್ಲೇ ಒಂದು ತೋಳ ಜಿಗಿದು ಬಂದು ಇವಳ ಕಂದನನ್ನು ಬಾಯಿಯಲ್ಲಿ ಕಚ್ಚಿಕೊಂಡು ಹೋಯಿತು. “ನನ್ನ ಕಂದ… ನನ್ನ ಕಂದ…” ಎಂದು ಕೂಗುತ್ತಾ ಆ ಸಾಧು ಮಹಿಳೆ ತೋಳವನ್ನು ಹಿಂಬಾಲಿಸಿ ಓಡಿದಳು. ಅಷ್ಟರಲ್ಲಿ ಅಲ್ಲಾಹನ ಆಜ್ಞೆಯಂತೆ ಆಕಾಶ ಲೋಕದಿಂದ ಮಲಕೊಂದು ಬಂದು ತೋಳದ ಬಾಯಿಂದ ಮಗುವನ್ನು ಕಿತ್ತುತೆಗೆದು ಮಹಿಳೆಯತ್ತ ಬಿಸಾಡುತ್ತಾ ಹೇಳಿತು “ಆಗ ನೀನು ಭಿಕ್ಷುಕನಿಗೆ ಕೊಟ್ಟ ಕಟ್ಟಿಗೆ ಬದಲಾಗಿ ಈ ಕಟ್ಟನ್ನು ಹಿಡಿದುಕೊಳ್ಳು”
▪ಒಬ್ಬನಿಗೆ ಶ್ರವಣಶಕ್ತಿ ಕಡಿಮೆಯಿದ್ದರೆ ತೋಳದ ರಕ್ತ ಮತ್ತು ತೆಂಗಿನ ಎಣ್ಣೆಯನ್ನು ಮಿಶ್ರಣಮಾಡಿ ದಿನಾಲೂ ಮೂರು ನಾಲ್ಕು ಹನಿ ಅವನ ಕಿವಿಗೆ ಹಾಕಿ ಕೆಲವು ದಿನಗಳ ಕಾಲ ಇದನ್ನು ಮುಂದುವರಿಸುವುದಾದರೆ ಕಿವುಡುತನ ಮಾಯವಾಗುತ್ತದೆ. ಅಂತೆಯೇ ಗಾಯವಾದಲ್ಲಿ ತೋಳದ ರಕ್ತವನ್ನು ಹಚ್ಚಿದರೆ ಕೂಡಲೇ ಒಣಗುತ್ತದೆ.
▪ ಯಾವ ಚಿಕಿತ್ಸೆ ಮಾಡಿಯೂ ಫಲಕಾಣದ ಆಗಾಗ್ಗೆ ನಿರಂತರ ಬರುವ ತೀವ್ರವಾದ ತಲೆ ಶಾಲೆ (ಚೆನ್ನಿಕುತ್ತ್) ಖಾಯಿಲೆ ಇರುವವನು ತೋಳದ ಪಿತ್ತಕೋಶವನ್ನು ತೆಗೆದು ಅದು ದ್ರವ ರೂಪವಾಗುವ ತನಕ ಅರೆದು ಅದರಿಂದ ಎರಡು ಮೂರು ಹನಿ ಮೂಗಿನ ದ್ವಾರದ ಮೂಲಕ ಹಾಕಿದರೆ ಜೀವಪರ್ಯಂತ ಮತ್ತೆ ಆ ರೋಗ ಮರುಕಳಿಸದು. ಪುಟ್ಟ ಮಗುವಿಗೆ ಒಮ್ಮೆ ಹೀಗೆ ಮಾಡಿದರೆ ಅವನು ಆಯುಷ್ಯದಲ್ಲಿ ಒಮ್ಮೆಯೂ ಅಪಸ್ಮಾರ ರೋಗಕ್ಕೆ ಬಲಿಯಾಗಲಾರ.
▪ ತೋಳದ ಚರ್ಮದ ಮೇಲೆ ಕುಳಿತು ಕೊಳ್ಳುವ ರೂಡಿ ಮಾಡಿದವನಿಗೆ ಕರಳು ಸಂಬಂಧಿಸಿದ ಯಾವುದೇ ರೋಗ ಬಾರದು.
▪ಕೂದಲು ಉದುರುವ ರೋಗ ಇರುವವರು ಇದರ ಕೊಬ್ಬನ್ನು ಕೆಲವು ದಿನಗಳ ಕಾಲ ತಲೆಗೆ ಹಚ್ಚಿದರೆ ಕೂದಲ ಉದುರುವಿಕೆ ಸಂಪೂರ್ಣ ನಿಲ್ಲುತ್ತದೆ.
▪ಒಬ್ಬನ ಮನೆಯ ಒಳಗೆ ತೋಳ ನುಗ್ಗಿದ ಕನಸು ಕಂಡರೆ ಆ ಮನೆಗೆ ಕಳ್ಳರು ನುಗ್ಗುವರು ಎಂಬುದರ ನಿಶಾನೆಯಾಗಿದೆ.
▪ಯಾವುದಾದರೊಂದು ನಿಗೂಢ ಪ್ರಕರಣದಲ್ಲಿ ಅದರ ಆರೋಪಿಯನ್ನು ಹುಡುಕುತ್ತಿರುವಾಗ ನಮಗೆ ಒಬ್ಬರ ಮೇಲೆ ಅನುಮಾನ ಬಂತೆಂದು ಇಟ್ಟುಕೊಳ್ಳಿ, ಆ ವೇಳೆ ನಮಗೆ ತೋಳದ ಕನಸು ಬಿದ್ದರೆ, ನಾವು ಸದರಿ ತಪ್ಪಿನಲ್ಲಿ ಯಾರನ್ನು ಸಂಶಯದಿಂದ ನೋಡಿದೆವಾ ಆ ಆರೋಪಿತ ವ್ಯಕ್ತಿ ದೋಷಮುಕ್ತ ಎಂಬುದರ ನಿಶಾನೆಯಾಗಿದೆ.
▪ತೋಳದ ಮಾಂಸ ಇಸ್ಲಾಮಿನಲ್ಲಿ ಭಕ್ಷ್ಯ ಯೋಗ್ಯವಲ್ಲ. ಹರಾಮ್ ಆಗಿದೆ.
▪ಸಂಗ್ರಹ : ಇಮಾಮ್ ದುಮೈರಿಯವರ ಹಯಾತುಲ್ ಹಯವಾನ್ ಇಮಾಮ್ ಖಝ್ವೀನಿಯವರ ಅಜಾಇಬುಲ್ ಮಖ್ಲೂಕಾತ್ ಮತ್ತು ತತ್ವಜ್ಞಾನಿ ಜಾಹಿಳ್ ರವರ ಕಿತಾಬುಲ್ ಹಯವಾನ್ ಎಂಬ ಗ್ರಂಥ.
ಪ್ರಾಣಿ ಜಗತ್ತು ಹಿಂದಿನ ಭಾಗಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ …
✒ಯೂಸುಫ್ ನಬ್ಹಾನಿ ಕುಕ್ಕಾಜೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.