(ವಿಶ್ವ ಕನ್ನಡಿಗ ನ್ಯೂಸ್ ) : ‘ಡಿವಿಜಿ’ ಈ ಹೆಸರನ್ನು ಕೇಳಿದ ಕೂಡಲೇ ನಮ್ಮ ಕಣ್ಣಮುಂದೆ ಬರುವುದು “ಮಂಕುತಿಮ್ಮನ ಕಗ್ಗ”. ಅದರಂತೆ ಜನಾದರಣೆ ಪಡೆದಿರುವ ಮತ್ತೊಂದು ಆಧುನಿಕ ಸಾಹಿತ್ಯಕೃತಿಯನ್ನು ಹೆಸರಿಸುವುದು ಸುಲಭವಲ್ಲ. ಕಗ್ಗವನ್ನು ಕುರಿತಂತೆ ದಿನವೂ ಒಂದಲ್ಲ ಒಂದು ರೀತಿಯಲ್ಲಿ ಕಾರ್ಯಕ್ರಮಗಳು, ಉಲ್ಲೇಖಗಳು ತಪ್ಪದೆ ನಡೆಯುತ್ತಲಿರುತ್ತವೆ. ನಿತ್ಯಪಾರಾಯಣಗ್ರಂಥದಂತೆ ಇದು ಹಲವರಿಗೆ ಒದಗಿಬಂದಿರುವುದೂ ಸುಳ್ಳಲ್ಲ. ಜೀವನದ ಹಲವಾರು ಸಂದರ್ಭಗಳಲ್ಲಿ ನಮ್ಮನ್ನು ಜೀವನ ವಿಶ್ಲೇಷಣೆಗೆ ತೊಡಗಿಸುತ್ತದೆ. ತೊಡಕಿನ ಸಂದರ್ಭಗಳಲ್ಲಿ ವಿವೇಕಮಾರ್ಗವನ್ನು ತೋರಿಸಿ ಸಾಂತ್ವನವನ್ನೂ ನೀಡುತ್ತದೆ.
‘ಕಗ್ಗ’ ಕನ್ನಡದ ಭಗವದ್ಗೀತೆಯೆಂದೇ ಹೆಸರಾದ ಉತ್ಕೃಷ್ಟ ಸಂಕಲನ, ಜಗತ್ತಿನ ಅತೀ ಶ್ರೇಷ್ಠ ಕೃತಿಗಳ ಸಾಲಿನಲ್ಲಿ ನಿಲ್ಲಬಲ್ಲ ಸತ್ವವಿರುವಂತಹದು. “ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು” ಎಂದ ಗುಂಡಪ್ಪನವರು ಕವಿ ಪರಂಪರೆ ಹಾಗೂ ವಿಜ್ಞಾನ ನಂಬಿಕೆಗೆ ಕೊಂಡಿ ಬೆಸೆದವರು. ಡಿವಿಜಿಯವರ ಬರಹಗಳು ಪಡೆದಿರುವ ವೈಶಾಲ್ಯತೆ ಅಚ್ಚರಿ ಹುಟ್ಟಿಸುವಂತದ್ದು. ಅವರ ಬಹುಮುಖ ಸಾಧನೆಯನ್ನು ನೆನೆಯುವಾಗ ರೋಮಾಂಚನ ಉಂಟಾಗುತ್ತದೆ. ಪಾಂಡಿತ್ಯ-ಸಹೃದಯತೆ, ದಾರ್ಶನಿಕತೆ-ಲೌಕಿಕಾಸಕ್ತಿ, ವೈಚಾರಿಕತೆ-ಪರಂಪರಾಶ್ರದ್ಧೆ, ಪ್ರತಿಭೆ-ಪರಿಶ್ರಮ. ಹೀಗೆ ವಿವಿಧ ಗುಣಗಳ ಸಮನ್ವಯವನ್ನು ಅವರಂತೆ ಮೆರೆದವರು ವಿರಳ.
ಸಮಾಜಸೇವೆ, ರಾಜಕೀಯ ಚರ್ಚೆಗಳಲ್ಲಿಯೂ, ಪತ್ರಿಕೋದ್ಯಮದಲ್ಲಿಯೂ ಅವರು ಮಾಡಿದ ಪರಿಶ್ರಮ ಅಪಾರ. ‘ವನಸುಮದೊಲೆನ್ನ ಜೀವನ’ ಎಂದು ಕವಿತೆ ಬರೆದ ಅವರು ವನಸುಮದಂತೆಯೇ ಜೀವಿಸಿದವರು. ತಮ್ಮ ಅಂತಃಪುರ ಗೀತೆಗಳ ಮೂಲಕ ಸೌಂದರ್ಯೋಪಾಸನೆಯೂ ದೈವೀ ಮಟ್ಟಕ್ಕೇರಬಹುದೆಂದು ತೋರಿಸಿಕೊಟ್ಟವರು, “ಮಹನೀಯರು”, “ಜ್ಞಾಪಕ ಚಿತ್ರಶಾಲೆ” ಕೃತಿಗಳ ಮೂಲಕ ತಮ್ಮ ಕಾಲವನ್ನೂ, ಸಮಕಾಲೀನರನ್ನೂ ಅಕ್ಷರಲೋಕದಲ್ಲಿ ಅಜರಾಮರಗೊಳಿಸಿದ್ದಾರೆ.
ಡಿವಿಜಿ ಅವರನ್ನು ಆಧುನಿಕ ಭಾರತೀಯ ಸಾಹಿತ್ಯದ ಒಂದು ಅಶ್ವತ್ಥ ವೃಕ್ಷ ಎಂದು ಕರೆಯುತ್ತಾರೆ. ಅವರ ವಿದ್ವತ್ತು ಹಾಗೂ ಚಿಂತನೆ ಕಂಡವರು ಒಬ್ಬ ಋಷಿ ಎಂದಿದ್ದಾರೆ. ಅವರ ಸಾಹಿತ್ಯ ಬಾಳಿಗೊಂದು ನಂಬಿಕೆಯನ್ನೂ, ಭರವಸೆಯನ್ನೂ ಕೊಟ್ಟಿದೆ. ಅವರು ಸಾಹಿತಿಗಳಾಗಿ ಎಷ್ಟು ಮುಖ್ಯವೋ ರಾಜಕೀಯ ಚಿಂತಕರಾಗಿಯೂ ಅಷ್ಟೇ ಮುಖ್ಯರಾಗಿದ್ದಾರೆ. ಸಾಹಿತ್ಯ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸರಿಸಮನಾಗಿ ತೊಡಗಿಕೊಂಡಂತಹ ವಿರಳರಲ್ಲಿ ಅವರು ಪ್ರಮುಖರು.
ಈ ಕ್ಷೇತ್ರದಲ್ಲಿ ಅವರು ಸಾಧಿಸಿದ ಯಶಸ್ಸು ಕೂಡ ದೊಡ್ಡದು. ಡಿವಿಜಿ ಅವರು ಮಾಡಿದ ಸಾಹಿತ್ಯಕೃಷಿಯೆಲ್ಲವನ್ನೂ ಸಮಾಜದ ಸಂರಚನೆಯ ಭಾಗವಾಗಿಯೇ ಪರಿಗಣಿಸಿದವರು. ರಾಜ್ಯಾಂಗದ ನಾಲ್ಕನೆಯ ಅಂಗವಾಗಿಯೇ ಪತ್ರಿಕೋದ್ಯಮವನ್ನು ಸ್ವೀಕರಿಸಿದ್ದವರು ಅವರು. ಪತ್ರಿಕೆಗಳ ರೀತಿ-ನೀತಿ, ನೆಲೆ-ಬೆಲೆಗಳನ್ನು ಕನ್ನಡದಲ್ಲಿ ತಿಳಿಸಿದವರಲ್ಲಿ ಡಿವಿಜಿಯವರು ಮೊದಲಿಗರು. ಪ್ರಜಾಪ್ರಭುತ್ವದಲ್ಲಿ ಪತ್ರಿಕೆಗಳು ಸರ್ಕಾರವನ್ನೂ ಸಮಾಜವನ್ನೂ ಎಚ್ಚರವಾಗಿರಿಸಬಲ್ಲ, ಈ ಎರಡರ ನಡುವೆ ಸಂಬಂಧವನ್ನು ಹೊಣೆಗಾರಿಕೆಯಿಂದ ಜೋಡಿಸಬಲ್ಲ ಪ್ರಬಲ ಮಾಧ್ಯಮ ಎನ್ನುವುದನ್ನು ಸ್ಥಾಪಿಸಿ ತೋರಿಸಿದವರು. ಸಕ್ರಿಯ ರಾಜಕಾರಣದಲ್ಲೂ ಹಲವು ವರ್ಷಗಳಿದ್ದ ಡಿವಿಜಿಯವರು ಸಾಹಿತ್ಯ-ಪತ್ರಿಕೋದ್ಯಮ ಮತ್ತು ರಾಜಕಾರಣವನ್ನು ರಾಷ್ಟ್ರದ ಸಮಗ್ರ ಹಿತಕ್ಕೆ ಪೂರಕವಾಗುವಂತೆ ನಿರ್ವಹಿಸಿದ ಅಪರೂಪದ ಧೀಮಂತ.
ಮಿರ್ಜಾ ಇಸ್ಮಾಯಿಲ್ರವರು ದಿವಾನರಾಗಿದ್ದಾಗ, ಡಿವಿಜಿ 1927 ರಿಂದ 1940ರ ವರೆಗೆ ಶಾಸನಪರಿಷತ್ತಿನ ಸದಸ್ಯರಾಗಿದ್ದರು. ಹದಿನಾರು ವರ್ಷಗಳ ಕಾಲ (1927-43) ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿಯೂ, ಆರು ವರ್ಷ ಕಾಲ (1933-39) ಯೂನಿವರ್ಸಿಟಿ ಕೌನ್ಸಿಲ್ ಸದಸ್ಯರಾಗಿಯೂ ಕೆಲಸ ಮಾಡಿದರು. ಮೈಸೂರು ಪತ್ರಿಕೋದ್ಯೋಗಿಗಳ ಸಂಘದ ಸ್ಥಾಪಕರಲ್ಲೊಬ್ಬರು ಅವರು. ಅದರ ಪ್ರಥಮ ಅಧ್ಯಕ್ಷರೂ ಆಗಿದ್ದರು (1932-34). ಹಲವು ಸಾರ್ವಜನಿಕ ಸಮಾವೇಶಗಳನ್ನೂ ಅವರು ಸಂಘಟಿಸಿದ್ದರು. ಸರ್ ಎಂ. ವಿಶ್ವೇಶ್ವರಯ್ಯನವರಂತೂ ಡಿವಿಜಿಯವರನ್ನು ಆಡಳಿತದ ಎಷ್ಟೋ ಸಂದರ್ಭಗಳಲ್ಲಿ ಸಂಪರ್ಕಿಸಿ, ಅಭಿಪ್ರಾಯಗಳನ್ನು ಪಡೆಯುತ್ತಿದ್ದರು. ಹೀಗೆ ಸಾರ್ವಜನಿಕ ಕ್ಷೇತ್ರದಲ್ಲಿ ಡಿವಿಜಿ ಸಲ್ಲಿಸಿದ ಸೇವೆ ಅಸಾಧಾರಣವಾದುದು.
ಕರ್ನಾಟಕ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ (1933-37) ಡಿವಿಜಿ ಆ ಸಂಸ್ಥೆಯ ಕಾರ್ಯ ವಿಸ್ತರಣೆಗೆ ಕಾರಣರಾದರು. ವಸಂತ ಸಾಹಿತ್ಯೋತ್ಸವ, ಕನ್ನಡ ಶಿಕ್ಷಕರಿಗೆ ತರಬೇತಿ ಶಿಬಿರ, ಗಮಕ ತರಗತಿಗಳು ಮುಂತಾದ ಹಲವಾರು ಚಟುವಟಿಕೆಗಳ ಉಪಕ್ರಮವಾದದ್ದು ಡಿವಿಜಿಯವರ ಉತ್ಸಾಹದ ಫಲವಾಗಿ. ಕರ್ನಾಟಕ ವೃತ್ತಪತ್ರಿಕಾಕರ್ತರ ಸಂಘ, ಶೀಘ್ರಲಿಪಿ ಬರಹಗಾರರ ಸಂಘ, ಪಂಡಿತ ಮಂಡಲ, ರಾಮಾಯಣ ಪ್ರಕಾಶನ ಸಮಿತಿ, ರಾಮಾಯಣ, ಮಹಾಭಾರತಾದಿ ಪ್ರಕಾಶನ ಸಮಿತಿ ಮೊದಲಾದ ವಿವಿಧ ಗೋಷ್ಠಿಗಳಿಗೂ ಡಿವಿಜಿ ಯವರಿಂದ ಆರೈಕೆ ದೊರೆತಿತ್ತು. ಹೀಗೆ ಬಿಡುವಿಲ್ಲದ ಸಾರ್ವಜನಿಕ ಜೀವನದ ಚಟುವಟಿಕೆಗಳ ನಡುವೆಯೇ ಡಿ.ವಿ.ಜಿ.ಯವರ ಸಾಹಿತ್ಯಕೃತಿಗಳು ಹೊರಬಂದವು.
ಎಲ್ಲ ಸನ್ಮಾನಗಳಿಂದ ದೂರವಿರಿಸಬಯಸಿದ ಡಿ.ವಿ.ಜಿ.ಯವರಿಗೆ ಸಹಜವಾಗಿಯೇ ಹಲವು ಗೌರವಗಳು ಬಂದವು. ಮಡಿಕೇರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ‘ಶ್ರೀಮದ್ ಭಗವದ್ಗೀತಾ ತಾತ್ಪರ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ ಪ್ರಮುಖವಾದುದು. ಒಟ್ಟಿನಲ್ಲಿ ವೈಯಕ್ತಿಕ ನೋವುಗಳನ್ನು ಮರೆತು, ಜಗತ್ತಿನ ಒಳಿತಿನಲ್ಲಿಯೇ ತನ್ನ ಸುಖವನ್ನು ಕಂಡ ವಿರಕ್ತ ರಾಷ್ಟ್ರಕ ಡಾ. ಡಿ.ವಿ.ಗುಂಡಪ್ಪ ಅವರು ಬರೆದಂತೆಯೇ ಬದುಕಿದರು-ಬದುಕಿದಂತೆಯೇ ಬರೆದರು.
✍🏻 : ಆರ್. ವಿಶ್ವನಾಥನ್, ತುಮಕೂರು .
ಪತ್ರಿಕಾ ಪ್ರತಿನಿಧಿ, ವಿಕೆ ನ್ಯೂಸ್
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.