“ಉಗ್ರಗಾಮಿ..?” ಜೊತೆಗೊಂದಷ್ಟು ಹೊತ್ತು..!

(www.vknews.com) : ಕಳೆದ ವಾರ ಕೆಲ ಮಾಧ್ಯಮಗಳಲ್ಲಿ ರಾಜ್ಯ ರಾಷ್ಟ್ರ ಮಟ್ಟದ ಸುದ್ದಿಯಾಗಿದ್ದ “ಉಗ್ರ/ಶಂಕಿತ ಉಗ್ರ” ಬೆಳ್ತಂಗಡಿ ತಾಲೂಕಿನ ಜಾರಿಗೆಬೈಲು (ಗೋವಿಂದೂರು) ಅಬ್ದುಲ್ ರವೂಫ್ ಮುಸ್ಲಿಯಾರ್ ಜೊತೆ ಒಂದಷ್ಟು ಹೊತ್ತು ಅವರ ಮನೆಯಲ್ಲಿ ಕಳೆಯುವ ಅವಕಾಶ ದೊರಕಿತು.

ಪಾಪ..! ಏನೂ ತಿಳಿಯದ ಮುಗ್ದ ಮನಸ್ಸಿನ 28ರ ಹರೆಯದ ಅಬ್ದುಲ್ ರವೂಫ್ ಮುಸ್ಲಿಯಾರ್ ಬಗ್ಗೆ “ಅಕ್ಷರ ಭಯೋತ್ಪಾದನೆ” ಮಾಡಲಾಗಿತ್ತು. ಕೆಲ ಪತ್ರಿಕೆ ಮತ್ತು ಟಿವಿ ಮಾಧ್ಯಮಗಳು ರವೂಫ್ ರನ್ನು ಉಗ್ರಗಾಮಿ ಎಂದು ಚಿತ್ರಿಸಿತ್ತು. ಪಾಕಿಸ್ಥಾನದಿಂದ ಸ್ಯಾಟ್’ಲೈಟ್ ಕರೆ ಸಂಭಾಷಣೆ ನಡೆಸಿದ್ದಾರೆಂದು ಸುಳ್ಳು ಆರೋಪ ಮಾಡಿತ್ತು. ಕಪೋಲಕಲ್ಪಿತ ವರ್ಣರಂಜಿತ ವರದಿ ಬಿತ್ತರಿಸಿತು. ಆದರೆ ಈ ಬಗ್ಗೆ ಏನೂ ತಿಳಿಯದ ಮುಗ್ದ ರವೂಫ್ ಮಾದ್ಯಮ ಹೆಣೆದ ಬಳೆಗೆ ಸಿಲುಕಿ ನಲುಗಿದರು. ಇದೇ ಸಂದರ್ಭ ಮಂಗಳೂರು ಶಾಸಕ ಯು.ಟಿ.ಖಾದರ್ ಮತ್ತು ನಮ್ಮ ಜಿಲ್ಲೆಯ ಎಸ್ಪಿ ಮಧ್ಯ ಪ್ರವೇಶಿಸದೇ ಇದ್ದಿದ್ದರೆ ಅಮಾಯಕ ರವೂಫ್ ಭೀಕರ ಉಗ್ರನಾಗಿ ಒಂದೋ ಜೈಲಲ್ಲಿ ಅಥವಾ ತಲೆಮರೆಸಿಕೊಳ್ಳಬೇಕಾಗಿತ್ತು.

ರವೂಫ್ ಮನೆಗೆ ತೆರಳಿ ಅವರ ಕುಟುಂಬಿಕರನ್ನು ಮಾತಾಡಿಸುವ ಅವಕಾಶ ಬುಧವಾರ (28/08/2019) ಸಿಕ್ಕಿತು. ಉಮರ್ ಯು.ಎಚ್. ನೇತೃತ್ವದಲ್ಲಿ ಮುಸ್ಲಿಂ ಲೇಖಕರ ಸಂಘ ಸತ್ಯಶೋಧನಾ ವರದಿಯನ್ನು ತಯಾರಿಸುತ್ತಿದೆ. ಅದರ ಫಾಲೋಅಪ್’ಗೆ ಮುಂದಾಗಿದೆ. ಅದರ ವಿವರಣೆ ಮುಂದಕ್ಕೆ ಬರಲಿದೆ. ರವೂಫ್ ಕೂಡಾ ಕೇಸು ದಾಖಲಿಸುವ ನಿರ್ಧಾರದಲ್ಲಿದ್ದಾರೆ. ಮಂಜನಾಡಿ ಅಲ್ ಮದೀನಾ ಸೆಂಟರಲ್ಲಿ ಉದ್ಯೋಗದಲ್ಲಿರುವ ರವೂಫ್ ಅವರಿಗೆ ಕಳೆದ ವರ್ಷ ಮದುವೆಯಾಗಿ 2 ತಿಂಗಳ ಮಗುವಿದೆ. 94 ಸಿಯಲ್ಲಿ ಅರ್ಜಿಕೊಟ್ಟು ಸಿಕ್ಕ ಎರಡೂವರೆ ಸೆಂಟ್ಸ್ ಸ್ಥಳದಲ್ಲಿ ಆರ್ ಸಿ ಸಿ ಮನೆ ಕಟ್ಟಿದ್ದಾರೆ. ನೆಲಕ್ಕೆ ಕಾವಿ/ಟೈಲ್ಸ್ ಆಗಿಲ್ಲ. ಮನೆ ಕಟ್ಟಿ ಮದುವೆಯಾಗಿ ಸುಮಾರು ಒಂದು ಲಕ್ಷ ಎಪ್ಪತ್ತೈದು ಸಾವಿರ ರೂ. ಸಾಲದಲ್ಲಿದ್ದಾರೆ. ಅತ್ತಿಗೆಯ ಚಿನ್ನಾಭರಣವನ್ನು ಅಡವಿಟ್ಟು ಸಾಲ ಮಾಡಿದ್ದಾರೆ. ತಾಯಿಗೆ ಗರ್ಭಕೋಶದ ತೊಂದರೆ ಬೇರೆ. ತಂದೆ ಸಣ್ಣದರಲ್ಲೇ ಇಹಲೋಕ ತ್ಯಜಿಸಿದ್ದಾರೆ. ಮೂವರು ಅಣ್ಣಂದಿರಲ್ಲಿ ಇಬ್ಬರು ಬಸ್ ಕಂಡಕ್ಟರ್. ಒಬ್ಬ ಬೆಂಗಳೂರಲ್ಲಿ ಉದ್ಯೋಗಿ. ಇರುವ ಒಬ್ಬ ಅಕ್ಕನನ್ನು ಮದುವೆ ಮಾಡಿ ಕೊಡಲಾಗಿದೆ. ರವೂಫ್ ನ ಪತ್ನಿಯ ತಂದೆ ಹೃದ್ರೋಗಿ. ರವೂಫ್ ಗೆ ಹೇಳಿಕೊಳ್ಳುವಂತಹ ಆದಾಯವೇನೂ ಇಲ್ಲ.

ಉಗ್ರಗಾಮಿ ಅಂತ ಚಿತ್ರಿಸಿದ ಬಳಿಕ ರವೂಫ್ ಮಾನಸಿಕವಾಗಿ ಕುಗ್ಗಿದ್ದಾರೆ. ಜನರು ನೋಡುವ ದೃಷ್ಟಿ ಬೇರೆಯಾಗಿದೆ. 67ರ ಹರೆಯದ ತಾಯಿ ಮೂರ್ಛೆ ಹೋಗಿದ್ದಾರೆ. ಮನೆಯವರು, ಕುಟುಂಬಿಕರು ಹಿಂಸೆ ಅನುಭವಿಸಿದ್ದಾರೆ. ಹೆಂಡತಿ ಮನೆಯವರು ನೊಂದಿದ್ದಾರೆ. ಸಾರ್ವಜನಿಕರು ಸಂಶಯದ ನೋಟ ಬೀರುತ್ತಿದ್ದಾರೆ. ಏನೂ ಮಾಡದ, ಎಲ್ಲರಿಗೂ ಒಳಿತು ಬಯಸುವ ರವೂಫ್’ಗೆ ಇಂತಹ ಶಿಕ್ಷೆಯಾ? ಟಿವಿ ಟಿ ಆರ್ ಪಿ ಹೆಚ್ಚಿಸಲು, ಪತ್ರಿಕಾ ಪ್ರಸಾರ ಸಂಖ್ಯೆ ಏರಿಸಲು ರವೂಫ್ ಬಲಿಪಶುವಾದರು.

ಸಮಾಜವನ್ನು ತಿದ್ದಿ ಸರಿದಾರಿಗೆ ತರಬೇಕಾದ ಮಾಧ್ಯಮಗಳು ಇಂತಹ ತಪ್ಪು ಮಾಡಬಾರದು. ಪ್ರಜಾಪ್ರಭುತ್ವದ ನಾಲ್ಕು ಸ್ಥಂಭಗಳಲ್ಲಿ ಒಂದಾದ ಮಾಧ್ಯಮ ರಂಗ ಜನರ ಹಿತವನ್ನು ಕಾಪಾಡಬೇಕೇ ಹೊರತು ಸುದ್ದಿಯ ತಿರುಳು ಅರಿಯದೆ “ಅಕ್ಷರ ಭಯೋತ್ಪಾದನೆ” ನಡೆಸಿ ಅಮಾಯಕ ಕುಟುಂಬದ ಇಡೀ ಜೀವನವೇ ಸೊರಗುವಂತೆ ಮಾಡಿದ್ದು ವಿಷಾದನೀಯ. ಇದು ದೇವರು ಮೆಚ್ಚುವ ಕೆಲಸವಲ್ಲ.

– ರಶೀದ್ ವಿಟ್ಲ.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...