ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಮತಬ್ಯಾಂಕ್ ರಾಜಕೀಯಕ್ಕಾಗಿ ಮುಸ್ಲಿಂ ಸಮುದಾಯ ಮತ್ತು ಮಂಗಳ ಮುಖಿಯರನ್ನು ಅವಮಾನಿಸುಂತಹ ಹೇಳಿಕೆ ನೀಡುವ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ತನ್ನದು ಎಂದೆಂದಿಗೂ ಹೊಲಸು ನಾಲಗೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಬಿಜೆಪಿ ಪಕ್ಷದ ಪ್ರತಿಯೊಬ್ಬ ಶಾಸಕರ ಒಂದೊಂದು ಆವಾಂತರವನ್ನು ಗಮನಿಸಿದರೆ ಇದೊಂದು ಅನಿಷ್ಟ ಪಕ್ಷ ಎಂಬುವುದು ಬಹಳ ಸ್ಪಷ್ಟವಾಗುತ್ತದೆ. ಸ್ವಾಭಿಮಾನದಿಂದ ಬದುಕುತ್ತಿರುವ ತೃತೀಯ ಲಿಂಗಿ ಸಮುದಾಯದ ಬಗ್ಗೆ ಮಾತನಾಡಲು ಬಿಜೆಪಿ ಪಕ್ಷಕ್ಕೆ ಏನು ನೈತಿಕತೆಯಿದೆ ಎಂದು ಎಸ್ಡಿಪಿಐ ಪ್ರಶ್ನಿಸಿದೆ.
ಭಾರತ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಕಾರ ಯಾರು ಯಾರಿಗೆ ಬೇಕಾದರೂ ಮತ ಹಾಕಬಹುದು ಅಥವಾ ಯಾವುದೇ ಅಭ್ಯರ್ಥಿಯು ಯಾವುದೇ ಸಮುದಾಯದ ಮತಗಳನ್ನು ಪಡೆಯಬಹುದು. ಆದರೆ ಇದರ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದ ಈಶ್ವರಪ್ಪರ “ಮುಸಲ್ಮಾನರ ಮತ ಪಡೆಯುವ ಶಾಸಕರು ಹಿಜಿಡಾಗಳು” ಎಂಬ ಹೇಳಿಕೆ ನೀಡುವ ಮೂಲಕ ಮತ್ತೆ ತನ್ನ ಮಾನಸಿಕ ಅಸ್ವಸ್ಥತೆಯನ್ನು ಪ್ರದರ್ಶಿಸಿರುತ್ತಾರೆ. ಈ ಮೂಲಕ ತಾನು ಜನಪ್ರತಿನಿಧಿಯಾಗಿರಲು ನಾಲಾಯಕ್ಕು ಎಂಬುದನ್ನು ಧೃಢಪಡಿಸಿರುತ್ತಾರೆ ಎಂದು ಎಸ್ಡಿಪಿಐ ಪಕ್ಷದ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಪ್ರತಿಕ್ರಿಯಿಸಿದ್ದಾರೆ.
ಮಾತೆತ್ತಿದರೆ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನ ಮಾಡುವ, ಪಾಕಿಸ್ತಾನಕ್ಕೆ ಸಂಬಂಧ ಕಲ್ಪಿಸುವ ಮತ್ತು ಸುಳ್ಳು ಪ್ರಚಾರ ಮಾಡುವ ಈಶ್ವರಪ್ಪರ ಈ ಚಾಳಿಯ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷವು ಮಾನನಷ್ಟ ಮೊಕದ್ದಮೆ ದಾಖಲಿಸುವುದರ ಮೂಲಕ ಕಾನೂನು ಹೋರಾಟವನ್ನು ನಡೆಸುವುದಲ್ಲದೆ, ಮಂಗಳಮುಖಿಯರು ಈಶ್ವರಪ್ಪರ ವಿರುದ್ಧ ಕಾನೂನು ಹೋರಾಟ ಮಾಡುವುದಾದರೆ ನೆರವನ್ನು ನೀಡುವುದಾಗಿ ರಿಯಾಝ್ ಫರಂಗಿಪೇಟೆ ಪ್ರಕಟಣೆಯಲ್ಲಿ ಭರವಸೆ ನೀಡಿದ್ದಾರೆ.