ಆಯುರ್ ಕೊಡ ಅಭಿಷೇಕ ಪುರಾಣಪ್ರಸಿದ್ಧ ಗುಡ್ಡೆಟ್ಟು ಮಹಾಗಣಪತಿ (ಲೇಖನ)

(www.vknews.com) : “ನಮೋ ಪ್ರಾತಪತಯೇ ನಮೋ ಗಣಪತಯೇ ನಮಃ!! ಪ್ರಥಮತಯೇ ನಮಸ್ತೇ ಅಸ್ತು ಲಂಬೋದರಾಯ ಏಕದಂತಾಯ ವಿಘ್ನವಿನಾಶಿನೇ!! ಶಿವಸುತಾಯ ವರದಮೂರ್ತಯೇ ಪ್ರಸನ್ನವಾದನಯ ನಮೋ ನಮಃ!!” ಪರಶುರಾಮ ಸೃಷ್ಠಿಯ ನೋಡುದೆ ಒಂದು ಭಾಗ್ಯ. ಆಹಾ ಅದೇನೋ ಆನಂದ ಎಂದು ಕಣ್ಮನ ಸೆಳೆಯುವ ಪ್ರಕೃತಿ ಸೌಂದರ್ಯದ ನಾಡು , ಮೇಲೆ ಗಗನ ಸುತ್ತ ಮೋಡಕವಿದ ವಾತಾವರಣ ಕಲ್ಲಿನ ಗುಡ್ಡದ ಹೊದಿಕೆ ಅದರಲ್ಲಿರುವ ಗುಹೆ ಆ ಗುಹೆಯೊಳಗೆ ಉದ್ವವ ಗುಡ್ಡೆಟ್ಟು ಮಹಾ ಗಣಪತಿ ಮೂಲಬಿಂಬ ನೋಡುವೆ ಕಣ್ಮನ ತಣಿಸುವುದೇ ಆನಂದ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಗುಡ್ಡೆಟ್ಟು ಗ್ರಾಮ ವಿಘ್ನೇಶ್ವರ, ವಿಘ್ನನಿವಾರಕ, ವಿನಾಯಕ, ಗಣಪತಿ, ಗಜಾನನ ಎಂತೆಲ್ಲಾ ಕರೆಸಿಕೊಳ್ಳುವ ಮಹಾಗಣಪತಿ ನೆಲೆಸಿರುವ ಪಾವನ ಪುಣ್ಯ ಕ್ಷೇತ್ರವಾಗಿದೆ. ಈ ಗುಡ್ಡಟ್ಟು ದೇವಾಲಯ ಒಂದು ಪ್ರಾಕೃತಿಕ ದೇವಾಲಯ. ಕಾಡು ಮೇಡುಗಳು ಹಾಗೂ ಹಸಿರು ಬಯಲಿನ ಮಧ್ಯದಲ್ಲಿರುವ ರಮಣೀಯವಾದ ಬೃಹತ್‌ ಬಂಡೆಯೇ ಇಲ್ಲಿಯ ವಿನಾಯಕನ ಆವಾಸಸ್ಥಾನ. ಇಲ್ಲಿನ ಬೃಹತ್‌ ಬಂಡೆಯಲ್ಲಿ ಪೂರ್ವಾಭಿಮುಖವಾಗಿ ತೆರೆದಿರುವ ಮಡುವಿನಲ್ಲಿ ಸುಮಾರು 3 ಅಡಿ ಎತ್ತರದ ಕಪ್ಪು ಶಿಲೆಯಲ್ಲಿರುವ, ಕಾಲು ಮಡಚಿ, ಸೊಂಡಿಲು ತಿರುಚಿ ಕುಳಿತಿರುವ ಈ ಗಣಪತಿಯ ಸ್ವಯಂಭೂ ವಿಗ್ರಹವೇ ಇಲ್ಲಿಯ ಆರಾಧ್ಯ ದೈವ. ಸ್ವಯಂಭುವಿನಲ್ಲಿ ಬಹಳ ಸ್ಪಷ್ಟ ಆಕಾರ ಹೊಂದಿರುವ ಈ ಗಣಪತಿಯ ವಿಗ್ರಹವು ಕಂಠ ಪ್ರಮಾಣದವರೆಗೆ ಸದಾ ನೀರಿನಲ್ಲಿ ಮುಳುಗಿರುವುದೇ ಇಲ್ಲಿನ ವಿಶೇಷತೆ. ಈ ದೇವಾಲಯದ ಗರ್ಭಗುಡಿ ಪ್ರಾಕೃತಿಕವಾದರೂ ತೀರ್ಥಮಂಟಪ, ಹೆಬ್ಟಾಗಿಲುಗಳನ್ನು ನಂತ‌ರ ನಿರ್ಮಿಸಲಾಗಿದೆ. ಪುರಾಣ ಪ್ರಸಿದ್ಧವಾದ ಈ ದೇಗುಲದಲ್ಲಿ ಗಣಪತಿ ಬಂದು ನೆಲೆಸಲು ಒಂದು ಐತಿಹ್ಯವೇ ಇದೆ.

ಸ್ಥಳ ಪುರಾಣ

ಇಲ್ಲಿನ ಸ್ಥಳ ಪುರಾಣ ಈ ರೀತಿ ಇದೆ. ತ್ರಿಪುರಾಸುರ ಎಂಬ ರಾಕ್ಷಸನ ಸಂಹಾರ ಕಾಲದಲ್ಲಿ ಈಶ್ವರನು ಯುದ್ಧಕ್ಕೆ ಹೋಗುವಾಗ ಪ್ರಮಾದವಶಾತ್‌ ಮೊದಲೊಂದಿಪ ಗಣಪತಿಯನ್ನು ಸ್ಮರಿಸದೇ ತೆರಳುತ್ತಾನೆ. ಆದರೆ ಜಯ ಲಭಿಸದೇ ಪರದಾಡುವ ಪರಿಸ್ಥಿತಿ ಬಂದಾಗ ತ‌ನ್ನ ಮಗನಿಂದಲೇ ತನಗೆ ವಿಘ್ನ ಬಂದಿದೆ ಎಂದು ಅರಿತ ಪರಶಿವನು ಕೋಪಗೊಂಡು ಗಣಪತಿಯ ಮೇಲೆ ಆಗ್ನೇಯಾಸ್ತ್ರವನ್ನು ಪ್ರಯೋಗಿಸುತ್ತಾನೆ. ಆದರೆ ಯಾವ ಅಸ್ತ್ರವೂ ಗಣಪತಿಯನ್ನು ಏನೂ ಮಾಡಲು ಸಾಧ್ಯವಿಲ್ಲ. ಅದೇ ರೀತಿಯಾಗಿ ಶಿವನು ಪ್ರಯೋಗಿಸಿದ ಅಸ್ತ್ರ ಹುಸಿಯಾಗಲೂ ಸಾಧ್ಯವಿಲ್ಲ. ಈ ಒಂದು ಸಂದ್ಗ ಪರಿಸ್ಥಿತಿಯಲ್ಲಿ ಆ ಅಸ್ತ್ರವು ಗಣಪತಿಯನ್ನು ಹೊತ್ತೂಯ್ದು ಮಧುಸಾಗರದಲ್ಲಿ ಕೆಡುವುತ್ತದೆ. ಮಧು ಎಂದರೆ ಜೇನು ತುಪ್ಪ. ತ‌ನಗೆ ಅತ್ಯಂತ ಪ್ರಿಯವಾದ ಜೇನುತುಪ್ಪದಲ್ಲಿ ಬಿದ್ದ ಗಣಪತಿ ಯಥೇತ್ಛವಾಗಿ ಮಧುಪಾನ ಮಾಡಿ ತೃಪ್ತಿ ಹೊಂದುತ್ತಾನೆ. ತನ್ನನ್ನು ಇಲ್ಲಿ ತಂದು ಹಾಕಿದವರ ಕಾರ್ಯ ಜಯವಾಗಲೆಂದು ಹರಸುತ್ತಾನಂತೆ. ಆಗ ಈ ವರದ ಪರಿಣಾಮ ಶಿವನು ತ್ರಿಪುರಾಸುರನನ್ನು ಸಂಹಾರಮಾಡಿ ಜಯ ಶಾಲಿಯಾಗುತ್ತಾನೆ. ಇತ್ತ ಗಣಪತಿಗೆ ಅತಿಯಾದ ಮಧು ಸೇವನೆಯಿಂದ ದೇಹದಲ್ಲಿ ಉಷ್ಣ ಹೆಚ್ಚಾಗಿ ಉರಿ ಭಾದೆ ತಾಳಲಾರದೇ ಒದ್ದಾಡುತ್ತಿರುತ್ತಾನೆ. ಇದನ್ನು ಗಮನಿಸಿದ ಶಿವನು ಗಣಪತಿಯ ಉರಿಶಮನಕ್ಕಾಗಿ ನರಸಿಂಹ ತೀರ್ಥದ ಪಕ್ಕದಲ್ಲಿ ಜಲಾದಿವಾಸವಾಗಿರುವ ಎಂದು ಈ ಸ್ಥಾನವನ್ನು ಗಣಪತಿಗೆ ಅನುಗ್ರಹಿಸುತ್ತಾನೆ ಎನ್ನುವುದು ಇಲ್ಲಿನ ಸ್ಥಳಪುರಾಣ. ಅಂತೆಯೇ ಇಲ್ಲಿ ಹರಿಯುವ ನರಸಿಂಹ ತೀರ್ಥ ಎಂಬ ನದಿಯ ಪಕ್ಕದಲ್ಲಿ ಇರುವ ಬೃಹತ್‌ ಬಂಡೆಯ ಮಡುವಿನಲ್ಲಿ ಜಲಾದಿವಾಸವಾಗಿ ನೆಲೆಸಿ ಗಣಪತಿಯು ಭಕ್ತರನ್ನು ಉದ್ಧರಿಸುತ್ತಿದ್ದಾನೆ ಎನ್ನುವುದು ಇಲ್ಲಿನ ಭಕ್ತಾದಿಗಳ ನಂಬಿಕೆಯಾಗಿದೆ.

ನಿತ್ಯವೂ ಈ ಗುಹಾಂತರ ದೇವಾಲಯದಲ್ಲಿ ಸಾಕಷ್ಟು ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು. ಅವುಗಳಲ್ಲಿ ಮುಖ್ಯವಾಗಿ ಆಯುರ್‌ಕೊಡ ಅಭಿಷೇಕ ಎಂದರೆ ಸಾವಿರ ಕೊಡದ ನೀರಿನ ಅಭಿಷೇಕ. ನಿತ್ಯ ಬೆಳಗಿನ ಜಾವ ಶುಚಿಯಾಗಿ ಸ್ನಾನ ಮಾಡಿ ಒದ್ದೆ ಬಟ್ಟೆಯಲ್ಲಿ ಈ ದೇವಸ್ಥಾನದ ಪಕ್ಕದಲ್ಲಿರುವ ಬಾವಿಯಿಂದ ಸಾವಿರ ಕೊಡ ನೀರು ತಂದು ಗಣಪತಿಗೆ ಅಭಿಷೇಕ ಮಾಡಲಾಗುತ್ತದೆ. ಆ ಸಾವೇ ಇರದ ಒಂದು ಆತ್ಮ ಶುದ್ಧಿಯಾಗಿ ನೀರು ಗಣಪತಿ ಇರುವ ಹೊಂಡವನ್ನು ತುಂಬಿಸಿ ಹೊರಗೆ ಬಂದಾಗಲೇ ಅಭಿಷೇಕ ಪೂರ್ಣಗೊಳ್ಳುತ್ತದೆ. ಈ ಅಭಿಷೇಕಕ್ಕೆಂದೇ ಎರಡರಿಂದ – ಮೂರು ವರ್ಷಗಳವರೆಗೆ ಸರದಿಯನ್ನು ಕಾಯ್ದಿರಿಸಲಾಗುತ್ತದೆ. ಇನ್ನು ಅಕ್ಕಿ ಕಡುಬು ಸೇವೆ, ರುದ್ರಾಭಿಷೇಕ ಹೀಗೆ ವಿವಿಧ ಪ್ರಕಾರದ ಸೇವೆಗಳು ಇಲ್ಲಿ ಲಭ್ಯವಿವೆ. ಇನ್ನು ವಿಶೇಷ ದಿನಗಳಾದ ಗಣೇಶ ಚತುರ್ಥಿ, ಸಂಕಷ್ಟ ಹರ ಚತುರ್ಥಿಯಂದು ಲಕ್ಷಾಂತರ ಭಕ್ತಾದಿಗಳು ಬಂದು ಗಣಪತಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಬರುವ ಮಾರ್ಗ:

ಬೆಂಗಳೂರಿನಿಂದ ಹಾಸನ ಮಂಗಳೂರು ಉಡುಪಿ ಮಾರ್ಗವಾಗಿ ಗುಡ್ಡೆಟ್ಟು ಮಹಾಗಣಪತಿ ದೇವಸ್ಥಾನಕ್ಕೆ ಬರಬಹುದು. ಮುಂಬಯಿ, ಗೋವಾ ಕಾರವಾರ ಹೊನ್ನಾವರ ಕುಂದಾಪುರ ಮಾರ್ಗವಾಗಿ ಗುಡ್ಡೆಟ್ಟು ಮಹಾಗಣಪತಿ ದೇವಸ್ಥಾನಕ್ಕೆ ಬರಬಹುದು. ಶಿವಮೊಗ್ಗ ತೀರ್ಥಹಳ್ಳಿ ಆಗುಂಬೆ ಹೆಬ್ರಿ ಹಾಲಾಡಿ ಶಿರಿಯಾರ ಗುಡ್ಡೆಯಂಗಡಿಯಿಂದ 2ಕಿಲೋ ಮೀಟರ್ ಗುಡ್ಡೆಟ್ಟು ಮಹಾಗಣಪತಿ ದೇವಸ್ಥಾನಕ್ಕೆ ಬರಬಹುದು. ಹತ್ತಿರ ಕುಂದಾಪುರದಿಂದ 17 ಕಿಲೋ ಮೀಟರ್ ಕೋಟೇಶ್ವರದಿಂದ 15 ಕಿಲೋಮೀಟರ್ ಹತ್ತಿರದ ಮಂದಾರ್ತಿ ಹಾಗು ಆನೆಗುಡ್ಡೆ ಕಾಳಾವರ ಸುಬ್ರಮಣ್ಯ ಕೊಲ್ಲೂರು ಕಮಲಶಿಲೆ ನೋಡಬಹುದು.

ಲೇಖಕರು : ಚಾರ ಪ್ರದೀಪ್ ಹೆಬ್ಬಾರ್

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...