ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಸವಾಲುಗಳನ್ನು ಎದುರಿಸಲು ಎಡಪಂಥೀಯ ವಿಚಾರಧಾರೆಗಳಿಂದ ಮಾತ್ರ ಸಾಧ್ಯ-ಸುನಿಲ್ ಕುಮಾರ್ ಬಜಾಲ್

ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ದೇಶದಲ್ಲಿ ಇತ್ತೀಚಿಗೆ ಬಲಪಂಥೀಯ ರಾಜಕೀಯವು ಭಾರೀ ಮುನ್ನಡೆಯನ್ನು ಸಾಧಿಸುತ್ತಿದ್ದು,ಅದು ವಿವಿಧ ಸ್ವರೂಪಗಳಲ್ಲಿ ವ್ಯಕ್ತಗೊಳ್ಳುತ್ತಿದೆ.ಪ್ರಸ್ತುತ ಅಧಿಕಾರದಲ್ಲಿರುವ ಬಿಜೆಪಿ ನೇತ್ರತ್ವದ ಕೇಂದ್ರ ಸರ್ಕಾರವು ಅಧಿಕಾರದ ಮದದಿಂದ ಫ್ಯಾಸಿಸ್ಟ್ ರೂಪವನ್ನು ತಾಳುತ್ತಿದೆ.ಬೀದಿ ಬೀದಿಗಳಲ್ಲಿ ಗುಂಪು ಥಳಿತ,ಯುವತಿಯರ ಮಾನಭಂಗ,370ನೇ ವಿಧಿ ರದ್ದತಿ,ರಾಷ್ಟ್ರೀಯ ಪೌರತ್ವ ಪಟ್ಟಿ ಹಾಗೂ ಪೌರತ್ವ ತಿದ್ದುಪಡಿ ಮಸೂದೆ ಮುಂತಾದ ವಿಷಯಗಳಿಂದಾಗಿ ಕೋಮು ಪ್ರಚೋದನೆಗೆ ಆಸ್ಪದ ನೀಡುವ ಮೂಲಕ ಅನೇಕ ಸಂಕಷ್ಟಗಳಿಂದ ತೊಂದರೆಗೊಳಗಾದ ಜನಸಾಮಾನ್ಯರ ಗಮನವನ್ನು ಬೇರೆಡೆಗೆ ತಿರುಗಿಸಲು ದೇಶದಲ್ಲಿ ಅರಾಜಕತೆಯನ್ನು ಸ್ರಷ್ಠಿಸಲು ಆಳುವ ವರ್ಗಗಳು ಹವಣಿಸುತ್ತಿದೆ ಎಂದು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು ಅಭಿಪ್ರಾಯ ಪಟ್ಟರು.

ಹೆಚ್ಚುತ್ತಿರುವ ಆರ್ಥಿಕ ಬಿಕ್ಕಟ್ಟು ಹಾಗೂ ಜನಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟಗಳ ವಿರುದ್ಧ ಎಡಪಕ್ಷಗಳು ಕರೆ ನೀಡಿದ ಅಖಿಲ ಭಾರತ ಪ್ರತಿಭಟನೆಯ ಭಾಗವಾಗಿ ನಗರದಲ್ಲಿಂದು (14-10-2019) ದ.ಕ.ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಜರುಗಿದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ,ಈ ಮಾತುಗಳನ್ನು ಹೇಳಿದರು.

ಮುಂದುವರಿಸುತ್ತಾ ಅವರು, ಬಿಜೆಪಿ ಎರಡನೆಯ ಅವಧಿಗೆ ಅಧಿಕಾರ ಬಂದರೂ ಕಪ್ಪುಹಣವನ್ನು ತರಲಿಲ್ಲ, ಭ್ರಷ್ಟಾಚಾರವನ್ನು ನಿಲ್ಲಿಸಲಿಲ್ಲ,ಒಂದೇ ದೇಶ ಒಂದೇ ತೆರಿಗೆ ಹೆಸರಲ್ಲಿ ತಂದ ಮಿತಿಮೀರಿದ GST ಯಿಂದಾಗಿ ಕೈಗಾರಿಕೆಗಳು ನಷ್ಟವಾದವು,ಕಾರ್ಮಿಕರು ಕೆಲಸ ಕಳೆದುಕೊಂಡರು. ಆದರೆ ಸಂಪತ್ತು ಮಾತ್ರ ಅಧಾನಿ,ಅಂಬಾನಿ ಇತ್ಯಾದಿ ಮೋದಿಯ ಆಪ್ತರಲ್ಲಿ ಕೇಂದ್ರೀಕ್ರತವಾಗಿದೆ.ಜನರಲ್ಲಿ ಇಂದು ಕೊಂಡುಕೊಳ್ಳುವ ಶಕ್ತಿಯಿಲ್ಲ,ಯಾಕೆಂದರೆ ಅವರಿಗೆ ಉದ್ಯೋಗವಿಲ್ಲ. ಕಳೆದ ಒಂದು ವರ್ಷದಲ್ಲಿ ಒಂದೂವರೆ ಕೋಟಿ ನಿರುದ್ಯೋಗ ಹೆಚ್ಚಳವಾಗಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.

CPI ದ.ಕ‌.ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ರವರು ಮಾತನಾಡುತ್ತಾ, ದೇಶದ ಜಿಡಿಪಿ 6%ದಷ್ಟು ಇಳಿಕೆಯಾಗಿದ್ದರೂ,ಕೇಂದ್ರ ಸರ್ಕಾರದ ಬೆಂಬಲಿಗರು ಭಾರೀ ಬೆಳವಣಿಗೆ ಎಂದು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.ನೋಟು ರದ್ದತಿಯಿಂದಾಗಿ ಕಪ್ಪುಹಣವನ್ನು ಹೊರತರುತ್ತೇವೆಂಬ ಘೋಷಣೆ ನಿಜವಾಗಲಿಲ್ಲ. ವಿಪರೀತ GSTಯಿಂದಾಗಿ ದೇಶ ಆರ್ಥಿಕ ಕೊರತೆ ಅನುಭವಿಸುತ್ತಿದೆ.ಹಿಂದುತ್ವದ ಹೆಸರಿನಲ್ಲಿ ಜನರನ್ನು ವಂಚಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಸಭೆಯ ಅಧ್ಯಕ್ಷತೆಯನ್ನು CPIM ಮಂಗಳೂರು ನಗರ ಉತ್ತರ ಕಾರ್ಯದರ್ಶಿ ದಯಾನಂದ ಶೆಟ್ಟಿ ಯವರು ವಹಿಸಿದ್ದರು.
ವೇದಿಕೆಯಲ್ಲಿ CPI ಜಿಲ್ಲಾ ನಾಯಕರಾದ ವಿ.ಎಸ್. ಬೇರಿಂಜ,ಎಚ್.ವಿ.ರಾವ್, ಕರುಣಾಕರ್,CPIM ಜಿಲ್ಲಾ ನಾಯಕರಾದ ಜಯಂತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ವಾಸುದೇವ ಉಚ್ಚಿಲ್ ಮುಂತಾದವರು ಉಪಸ್ಥಿತರಿದ್ದರು.

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...