ಕಲ್ಪಿಸಲಾಗದ ಕಣ್ಮರೆ……!! (ಲೇಖನ)

(www.vknews.com) : ಮರಣವೇ ಹಾಗೆ. ಯಾರೂ ಊಹಿಸಲಾಗದ ರೀತಿಯಲ್ಲಿ ಯಾವುದೇ ಸಮಯ, ರೂಪದಲ್ಲಿ ಬಂದೆರಗಬಹುದು. ಇಲ್ಲಿ ಬಹುಶಕ್ತಿಶಾಲಿಯೆಂದು ಮೆರೆದಾಡುವ ಮನುಜ ಬರೇ ತೃಣ ಮಾತ್ರ.

ಹೌದು, ಆ ಸುಂದರ ಯುವಕರು ಕಟ್ಟಿಕೊಂಡಿದ್ದ ಬದುಕಿನ ಸಾವಿರಾರು ಹೊಂಗನಸುಗಳು ಕಮರಿ ಹೋದವು. ಅವರಲ್ಲಿದ್ದ ಅದಮ್ಯ ಉತ್ಸಾಹ, ನಗು, ಪ್ರೀತಿ, ಸ್ನೇಹ…… ಎಲ್ಲವೂ ನಿಸ್ತೇಜಗೊಂಡವು.

ಅವರಿಗೆ ಕುಟುಂಬ, ಸಂಬಂಧಿಕರು, ಸ್ನೇಹಿತರು, ಆರೋಗ್ಯ, ರೂಪ, ಅಗತ್ಯಕ್ಕೆ ಸಂಪತ್ತು…. ಎಲ್ಲವೂ ಇದ್ದವು ಆದರೆ ಆಯುಷ್ಯ ಮಾತ್ರ ಇರಲಿಲ್ಲ

ಬೆರಳೆಣಿಕೆಯ ದಿನಗಳಲ್ಲಿ ಎಲ್ಲರೆದುರು ಹಾರತುರಾಯಿ,ಶುಭಹಾರೈಕೆಗಳನ್ನು ಗಿಟ್ಟಿಸಿ ಮದುವಣಿಗರಾಗಿ ತಮ್ಮ ಮನದನ್ನೆಯರನ್ನು ತೆಕ್ಕೆಯೊಳಗೆ ಬರಸೆಳೆದು ರಮಿಸುವ, ಹೊಸ ಬಾಳಿನ ಸುಂದರ ಕನಸುಗಳನ್ನು ಕಂಡವರು ಕ್ಷಣ ಮಾತ್ರದಲ್ಲಿ ಬಾರದಲೋಕಕ್ಕೆ ಶಾಶ್ವತವಾಗಿ ನಿರ್ಗಮಿಸಿದರು.

ಎಂತಹ ಕಲ್ಲೆದೆಯವರ ಮನಸ್ಸು ಕರಗುವಂತೆ ಬೆಚ್ಚಿಬೀಳಿಸಿ, ಕಣ್ಣೀರಿಳಿಸಿ, ದಿಗ್ಬ್ರಮೆಗೊಳಿಸಿದ ಯಾತನಾಮಯ ಮರಣಗಳು. ಕಲ್ಪನೆಗೂ ಮೀರಿದ ದುರಂತ.

ಆ ಐದು ಕುಟುಂಬದಲ್ಲಿ ವಿವಾಹ ಸಂಭ್ರಮದ ತಯಾರಿಯಾಗಿತ್ತು. ಕರೆಯೋಲೆಗಳು ಸಂಬಂಧಿಕರ ಮನೆ ಸೇರಿತ್ತು. ಮದುವೆ ಹಾಲ್ ನಿಶ್ಚಿತಗೊಂಡಿತ್ತು. ಅಡುಗೆಯವರ ನಿಗದಿಯಾಗಿತ್ತು. ಹೊಸ ವಸ್ತ್ರಗಳ, ಆಭರಣಗಳ ಖರೀದಿಯಾಗಿತ್ತು……. ಎಲ್ಲಾ ಸಜ್ಜಾಗಿತ್ತು. ಆದರೆ… ವಿಧಿ ಬೇರೆಯೇ ತೀರ್ಪು ಕಲ್ಪಿಸಿತ್ತು. ಮದುವೆಯ ಮನೆಗಳನ್ನು ಮರಣದ ಶೋಕಸಾಗರದಲ್ಲಿ ಮುಳುಗಿಸಿತ್ತು.

ನವ ವಧುವರು, ಹೆತ್ತವರು, ಕುಟುಂಸ್ಥರು, ಅತ್ಮೀಯ ದೇಶ-ವಿದೇಶದಲ್ಲಿರುವ ಮಿತ್ರರು … ಎಲ್ಲರನ್ನೂ ಅಗಲಿ ಅಳಕೆಮಜಲಿನ ಸಾದಿಕ್, ಕಬಕದ ಮಜೀದ್ ಬರೇ ನೆನಪಾಗಿ ಇಹಲೋಕದ ಯಾತ್ರೆಯನ್ನು ಅಂತ್ಯಗೊಳಿಸಿ, ಪಾರತ್ರಿಕ ಬದುಕನ್ನು ಆರಂಭಿಸಿದರು. ಕಾಲೇಜಿನಲ್ಲಿ ಗೆಳೆತಿಯರೊಂದಿಗೆ ಆಡಿ ಬೆಳೆಯುತ್ತಿರುವ ಆ ಮುಗ್ದ ಸುನೈನ ಎಂಬ ಬಾಲಕಿಯೂ ಜತೆಯಾದಳು.

“ಜಗತ್ತು ಕ್ಷಣಿಕ ನಮಗೆ ಶಾಶ್ವತ ಎಂಬ ಭ್ರಮೆ.”

ಮರಣ-ಮಾತು, ಬರಹ, ಊಹೆಗಳಿಗೆ ನಿಲುಕದ್ದು. ಆದರೆ, ಅದು ನಿತ್ಯಸತ್ಯ.

“Kullu nafsi Zayikathul mouth”

ನಾವು ಅಸಹಾಯಕರು. ಪ್ರಾರ್ಥನೆಯೊಂದೇ ನಮಗುಳಿದ ದಾರಿ.
ಯಾ ಅಲ್ಲಾಹ್ ! ಅಗಲಿದ ಆ ಸಹೋದರ, ಸಹೋದರಿಯರಿಗೆ ಸ್ವರ್ಗದ ಬಾಗಿಲನ್ನು ತೆರೆದು “ಜನ್ನತುಲ್ ಫಿರ್ದೌಸಿ”ನಲ್ಲಿ ಸುಖ ಬದುಕನ್ನು ಅನುಗ್ರಹಿಸು. ಮನೆಯವರಿಗೆ, ಕುಟುಂಬದವರಿಗೆ ನೋವನ್ನು ಸಹಿಸುವ ಶಕ್ತಿಯನ್ನು ದಯಪಾಲಿಸು.(ಆಮೀನ್)

“ರಬ್ಬನಾ ಆತಿನಾ ಫಿದ್ದುನ್ಯಾ ಹಸನತನ್ … ವಫಿಲ್ ಆಖಿರತಿ ಹಸನತನ್ ವಕಿನಾ ಅದಾಬನ್ನಾರ್”

✍ ಹೈದರ್ ಆಲಿ ಐವತ್ತೊಕ್ಲು

 

ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...