ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಶೇ. 76 ಸಾಲ ವಸೂಲಾತಿ ಸಾಧನೆ : ಸುದರ್ಶನ್ ಜೈನ್

ಸುದ್ದಿಗಾರರೊಂದಿಗೆ ಬ್ಯಾಂಕಿನ ಅಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿದರು

 

ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಬಂಟ್ವಾಳ ತಾಲೂಕಿನ 84 ಗ್ರಾಮಗಳ ವ್ಯಾಪ್ತಿಯಲ್ಲಿರುವ ಕೃಷಿಕರ ಸೇವೆಯ ಧ್ಯೇಯವನ್ನಿಟ್ಟು ಕೊಂಡು 1962ನೇ ಇಸವಿಯಲ್ಲಿ ಸ್ಥಾಪನೆಗೊಂಡ ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ತಾಲೂಕಿನ ರೈತರಿಗೆ ದೀರ್ಘಾವಧಿ ಹಾಗೂ ಮಧ್ಯಮಾವಧಿ ಸಾಲ ನೀಡುವ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಪ್ರಸ್ತುತ 12,036 ಸದಸ್ಯರನ್ನು ಹೊಂದಿರುತ್ತದೆ. ಒಟ್ಟು ಪಾಲು ಬಂಡವಾಳ 181.66 ಲಕ್ಷ ರೂಪಾಯಿ ಇರುತ್ತದೆ. ಈ ಬ್ಯಾಂಕ್ 2019 ರ ಮಾರ್ಚ್ ಅಂತ್ಯಕ್ಕೆ 33.60 ಲಕ್ಷ ರೂಪಾಯಿ ಕ್ಷೇಮ ನಿಧಿ ಮತ್ತು 120.40 ಲಕ್ಷ ರೂಪಾಯಿ ಇತರ ನಿಧಿ ಹಾಗೂ 16.37 ಕೋಟಿ ರೂಪಾಯಿ ಠೇವಣಿಯನ್ನು ಹೊಂದಿರುತ್ತದೆ ಎಂದು ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ತಿಳಿಸಿದರು.

 

ಬುಧವಾರ ಸಂಜೆ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನಿಂದ ಪಡೆದ ಸಾಲ ಹೊರಬಾಕಿ 13.79 ಕೋಟಿ ಆಗಿದ್ದು 2019ರ ಮಾರ್ಚ್ ಅಂತ್ಯಕ್ಕೆ ಸಂದಾಯವಾಗಬೇಕಿದ್ದ ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕಿನ ತಗಾದೆಯನ್ನು ಸಂಪೂರ್ಣ ಮರುಪಾವತಿಸಲಾಗಿದೆ ಎಂದರು.

 

ಸಾಲ ವಿತರಣೆ ಮತ್ತು ಠೇವಣಿ ಸಂಗ್ರಹ

 

ಬ್ಯಾಂಕು ಆರಂಭದಿಂದ ವಿವಿಧ ಯೋಜನೆಗಳಲ್ಲಿ 7389 ಜನ ಸದಸ್ಯರಿಗೆ 92 ಕೋಟಿಗೂ ಮೀರಿ ಸಾಲವನ್ನು ನೀಡಿರುತ್ತದೆ. ಪ್ರಸ್ತುತ 2018-19 ನೇ ಸಾಲಿನಲ್ಲಿ ವಿವಿಧ ಯೋಜನೆಗಳಲ್ಲಿ 715.96 ಲಕ್ಷ ಸಾಲ ವಿತರಿಸಿರುತ್ತದೆ ಎಂದ ಜೈನ್ 2018-19 ರಲ್ಲಿ ನಬಾರ್ಡ್ ಯೋಜನೆಯಡಿ 147 ಸದಸ್ಯರಿಗೆ 225.71 ಲಕ್ಷ ಕೃಷಿ ಸಾಲ ಮತ್ತು ಸ್ವಂತ ಬಂಡವಾಳದಲ್ಲಿ 71 ಸದಸ್ಯರಿಗೆ 77.52 ಲಕ್ಷ ಕೃಷಿ ಸಾಲ ಹಾಗೂ 230 ಸದಸ್ಯರಿಗೆ 412.73 ಲಕ್ಷ ಕೃಷಿಯೇತರ ಸಾಲ ಸೇರಿದಂತೆ ಒಟ್ಟು 490.25 ಲಕ್ಷ ಸಾಲ ವಿತರಿಸಿದೆ ಎಂದರು.

 

ಪ್ರಸ್ತುತ ಹೈನುಗಾರಿಕೆ ಯೋಜನೆಯಲ್ಲಿ 74 ಸದಸ್ಯರ ಸಾಲ ಹೊರಬಾಕಿ 94.67 ಲಕ್ಷ ಮತ್ತು ಕೋಳಿ ಸಾಕಾಣಿಕೆ ಯೋಜನೆಯಲ್ಲಿ 30 ಸದಸ್ಯರ ಸಾಲಹೊರಬಾಕಿ 84.71 ಲಕ್ಷ ಸಾಲ ಇದೆ. ಎಂದ ಅವರು 2019ರ ಎಪ್ರಿಲ್ ಅಂತ್ಯದಿಂದ 2019ರ ಸೆ. ಅಂತ್ಯದವರೆಗೆ 692.86 ಲಕ್ಷ ಠೇವಣಿ ಸಂಗ್ರಹಿಸಿ 126 ಸದಸ್ಯರಿಗೆ 172.95 ಲಕ್ಷ ಸಾಲ ವಿತರಿಸಿದೆ ಎಂದರು.

 

ಸಾಲ ವಸೂಲಾತಿ

 

2018-19 ನೇ ಸಾಲಿನಲ್ಲಿ 584.75 ಲಕ್ಷ ವಸೂಲಿ ತಗಾದೆ ಹೊಂದಿದ್ದು ಆ ಪೈಕಿ ರೂ. 442.72 ಲಕ್ಷ ವಸೂಲಿ ಮಾಡಿ ಶೇಕಡಾ 75.71% ವಸೂಲಿ ಸಾಧನೆ ಮಾಡಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಲ ವಸೂಲಾತಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಕಳೆದ 5 ವರ್ಷಗಳಲ್ಲಿ ಬ್ಯಾಂಕಿನ ವಸೂಲಿ ಸಾಧನೆ ಮಾಡಿದ್ದು, 2014-15ನೇ ಸಾಲಿನಲ್ಲಿ 79.79%, 2015-16ನೇ ಸಾಲಿನಲ್ಲಿ 85.61%, 2016-17ನೇ ಸಾಲಿನಲ್ಲಿ 79.08%, 2017-18ನೇ ಸಾಲಿನಲ್ಲಿ 84.62%, 2018-19ನೇ ಸಾಲಿನಲ್ಲಿ 75.71% ಶೇಕಡಾ ವಸೂಲಾತಿ ಸಾಧನೆ ಮಾಡಿದೆ ಎಂದು ಸುದರ್ಶನ್ ಜೈನ್ ತಿಳಿಸಿದರು.

 

ಪ್ರಶಸ್ತಿ

 

ಬ್ಯಾಂಕ್ ವ್ಯವಹಾರ ಸಂಪೂರ್ಣ ಗಣಕೀಕರಣಗೊಂಡಿದ್ದು ಸದಸ್ಯರಿಗೆ ಕಂಪ್ಯೂಟರೀಕೃತ ರಶೀದಿಗಳನ್ನು ನೀಡಲಾಗುತ್ತಿದೆ. ಈ ಕಾರಣದಿಂದ ವರ್ಷಾಂತ್ಯ ಲೆಕ್ಕವನ್ನು ನಿಗದಿತ ಮಾರ್ಚ್ ಅಂತ್ಯದೊಳಗೆ ಕೊನೆಗೊಳಿಸಲಾಗುತ್ತಿದೆ.

 

ಶೇ. 6.4 ಮತ್ತು 3 ಬಡ್ಡಿ ರಿಯಾಯಿತಿ ದರದಲ್ಲಿ ಪಡೆದ ಸಾಲದ ಕಂತನ್ನು ಬ್ಯಾಂಕಿನ ಸದಸ್ಯರು ಸಕಾಲದಲ್ಲಿ ಮರು ಪಾವತಿಸಿರುವುದರಿಂದ 2018-19ರ ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿ ಉತ್ತಮ ಬ್ಯಾಂಕ್ ಆಗಿದ್ದು, ನಮ್ಮ ಬ್ಯಾಂಕ್ ದ.ಕ. ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದ ಜೈನ್ ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ ಬೆಂಗಳೂರು ಇದರ ಮಹಾಸಭೆಯಲ್ಲಿ ದ.ಕ. ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದರು. ಪ್ರಶಸ್ತಿ ಹಾಗೂ ವಸೂಲಾತಿಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಲು ಸಹಕರಿಸಿದ ಸಾಲಗಾರ ರೈತ ಸದಸ್ಯರಿಗೆ ಇದೇ ವೇಳೆ ಅವರು ಅಭಿನಂದನೆ ಸಲ್ಲಿಸಿದರು. ಸದಸ್ಯ ರೈತರು ಮುಂದೆಯೂ ತಮ್ಮ ಸಾಲದ ಕಂತುಗಳನ್ನು ಸಕಾಲದಲ್ಲಿ ಬ್ಯಾಂಕಿಗೆ ಮರುಪಾವತಿಸಿ, ಈ ಬ್ಯಾಂಕ್ ಇನ್ನೂ ಉತ್ತಮ ಸ್ಥಿತಿಗೆ ತಲುಪುವಂತೆ ಮಾಡಲು ಸಹಕರಿಸಬೇಕಾಗಿ ಆಡಳಿತ ಮಂಡಳಿಯ ಪರವಾಗಿ ಸುದರ್ಶನ್ ಜೈನ್ ವಿನಂತಿಸಿದರು.

 

ಬ್ಯಾಂಕಿಂಗ್ ವಿಭಾಗ

 

ದೀರ್ಘಾವಧಿ ಸಾಲ ವಿತರಣೆ ಅಲ್ಲದೆ ಇತ್ತೀಚೆಗೆ ಆರಂಭಗೊಂಡ ಬ್ಯಾಂಕಿಂಗ್ ವಿಭಾಗದಲ್ಲಿ ನಿಶ್ಚಿತ ಠೇವಣಿ, ಉಳಿತಾಯ ಠೇವಣಿ, ಮತ್ತು ನಿತ್ಯ ಭೂ ನಿಧಿ ಠೇವಣಿಗಳನ್ನು ಸಂಗ್ರಹಿಸುವ ಮೂಲಕ ರೈತ ಸದಸ್ಯರಲ್ಲಿ ಉಳಿತಾಯ ಮನೋಭಾವನೆಯನ್ನು ಪ್ರೇರೇಪಿಸಿ, ಈ ವ್ಯವಹಾರದಲ್ಲಿ ಈವರೆಗೆ 30 ಕೋಟಿ ರೂಪಾಯಿಗೂ ಮಿಕ್ಕಿ ಸಾಲ ನೀಡಿರುತ್ತದೆ. ಅಲ್ಲದೆ 2018-19ನೇ ಸಾಲಿನ ಅಂತ್ಯಕ್ಕೆ ಈ ಯೋಜನೆಯಲ್ಲಿ ಸಂಗ್ರಹಿಸಿದ ಠೇವಣಿ ಹೊರಬಾಕಿ ಮೊತ್ತ 16.37 ಕೋಟಿ ರೂಪಾಯಿ ಇದ್ದು, ವರ್ಷಾಂತ್ಯಕ್ಕೆ ಠೇವಣಿ ಯೋಜನೆಯಲ್ಲಿ ಸದಸ್ಯರಿಂದ ಬರಬೇಕಾದ ಸಾಲ ಹೊರಬಾಕಿ ಮೊಬಲಗು 13.56 ಕೋಟಿ ಆಗಿರುತ್ತದೆ. ಅಲ್ಲದೆ ಮುಂದಿನ ವರ್ಷಗಳಲ್ಲಿ ಅಧಿಕ ಪ್ರಮಾಣದಲ್ಲಿ ಠೇವಣಿ ಸಂಗ್ರಹಿಸಿ ರೈತ ಸದಸ್ಯರಿಗೆ ವಿವಿಧ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಸುದರ್ಶನ್ ಜೈನ್ ಹೇಳಿದರು.

 

ಆಡಳಿತ ಮಂಡಳಿ

 

ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ 12 ಜನ ಚುನಾಯಿತ ಸದಸ್ಯರಿದ್ದು, ಸುದರ್ಶನ್ ಜೈನ್ ಅಧ್ಯಕ್ಷರಾಗಿ ಮತ್ತು ಸಂಜೀವ ಪೂಜಾರಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವರದಿ ಸಾಲಿನಲ್ಲಿ 12 ಆಡಳಿತ ಮಂಡಳಿ ಸಭೆಗಳು, 12 ಸಾಲ ಸಮಿತಿ ಸಭೆಗಳು ಜರುಗಿದ್ದು, ಬ್ಯಾಂಕಿನ ಚಟುವಟಿಕೆಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

 

ಸ್ವಂತ ಕಟ್ಟಡ

 

ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ಸರಕಾರದಿಂದ ಮಂಜೂರಾದ 0.10 ಎಕ್ರೆ ಜಾಗದಲ್ಲಿ 74.42 ಲಕ್ಷ ರೂಪಾಯಿ ಮೊಬಲಗಿನ ಕಛೇರಿ ಕಟ್ಟಡ ಹೊಂದಿದ್ದು, ಪ್ರಸ್ತುತ ಈ ಕಟ್ಟಡದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಬಿ.ಸಿ.ರೋಡ್ ಶಾಖೆ, ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಹಾಗೂ ಸುದ್ದಿ ಸರ್ವಿಸ್ ಸೆಂಟರ್ ಬಾಡಿಗೆಗೆ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಕಟ್ಟಡದ ಎರಡನೇ ಮಹಡಿಯಲ್ಲಿ ವಾಣಿಜ್ಯ ತೆರಿಗೆ ಇಲಾಖಾ ಕಚೇರಿಯು ಕಾರ್ಯನಿರ್ವಹಿಸುತ್ತದೆ ಎಂದು ಜೈನ್ ತಿಳಿಸಿದರು.

 

ಮುಂದಿನ ಕಾರ್ಯಯೋಜನೆ

 

2019-20ನೇ ಸಾಲಿನಲ್ಲಿ ಬ್ಯಾಂಕ್ ತನ್ನ ಕಾರ್ಯಕ್ಷೇತ್ರಗಳ ಎಲ್ಲಾ ಗ್ರಾಮಗಳ ರೈತರನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನಾಗಿ ನೋಂದಾಯಿಸಿ, ಸರಕಾರ ಘೋಷಿಸಿದ 3% ಬಡ್ಡಿದರದ ಕೃಷಿ ಆಧಾರಿತ ಸಾಲಗಳಾದ ನೀರಾವರಿ, ತೋಟಗಾರಿಕಾ ಯೋಜನೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕೃಷಿ ಯಾಂತ್ರೀಕರಣ, ಗೊಬ್ಬರ ಅನಿಲ ಸ್ಥಾವರ, ಅಡಿಕೆ ಉತ್ಪನ್ನಗಳ ಸಂಗ್ರಹಣೆ, ಅಡಿಕೆ ಪುನರ್‍ನಾಟಿ, ಅಡಿಕೆ ಒಣಗಿಸುವ ಕಣ ಮತ್ತು ಗ್ರಾಮೀಣ ಗೃಹ ನಿರ್ಮಾಣ, ಕೃಷಿಯೇತರ ಸಾಲ ಯೋಜನೆಗಳಲ್ಲಿ ಸಾಲ ಹಾಗೂ ಚಿನ್ನಾಭರಣ ಈಡಿನ ಮೇಲೆ ಸಾಲ, ಜೊತೆಗೆ ಇತರ ಎಲ್ಲಾ ಯೋಜನೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡುವ ಮುಖಾಂತರ ಸದಸ್ಯರ ಕೃಷಿ ಅಭಿವೃದ್ಧಿಗೆ ಶ್ರಮಿಸಲಾಗುವುದು. ಅಭಿವೃದ್ಧಿಗೆ ಪೂರಕವಾಗಿ ತರಬೇತಿ ಮಾಹಿತಿ ಶಿಬಿರಗಳನ್ನು ನೀಡಲಾಗುವುದು ಎಂದ ಸುದರ್ಶನ್ ಜೈನ್ ಕೃಷಿಕರ ವಿವಿಧ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿ, ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. 2019-20 ನೇ ಸಾಲಿನಲ್ಲಿ 12 ಕೋಟಿ ರೂಪಾಯಿ ಸಾಲ ಹಂಚಿಕೆ ಗುರಿ ಇರಿಸಿಕೊಂಡು ಸಾಲ ವಿತರಣೆ ಗುರಿ ತಲುಪಲು ಪ್ರಯತ್ನಿಸಲಾಗುವುದು. ಬ್ಯಾಂಕಿನ ಕಾರ್ಯವ್ಯಾಪ್ತಿಯ ಮಾಣಿ ಶಾಖೆಯಲ್ಲಿ ಬ್ಯಾಂಕಿನ ಸದಸ್ಯರಿಂದ ಠೇವಣಿಗಳನ್ನು ಸಂಗ್ರಹಿಸಿ ಈ ಯೋಜನೆಯಲ್ಲಿ ಚಿನ್ನಾಭರಣ ಮೇಲಿನ ಸಾಲ ಹಾಗೂ ರೈತರ ಬೇಡಿಕೆಗೆ ಅನುಗುಣವಾಗಿ ವಿವಿಧ ಯೋಜನೆಗಳಲ್ಲಿ ಕೃಷಿಯೇತರ ಸಾಲಗಳನ್ನು ವಿತರಿಸಲಾಗುತ್ತಿದೆ. ಬ್ಯಾಂಕಿನ ಮೇಲ್ಭಾಗದಲ್ಲಿ ಸೋಲಾರ್ ಆಳವಡಿಸುವ ಮೂಲಕ ಬ್ಯಾಂಕ್‍ನ್ನು ಸಂಪೂರ್ಣ ಹವಾನಿಯಂತ್ರಿತ ಬ್ಯಾಂಕ್ ಆಗಿ ಪರಿವರ್ತಿಸಲಾಗುವುದು ಎಂದು ಸುದರ್ಶನ್ ಜೈನ್ ಸುದ್ದಿಗಾರರಿಗೆ ವಿವರಿಸಿದರು.

 

ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ಸಂಜೀವ ಪೂಜಾರಿ, ರಾಜ್ಯ ಬ್ಯಾಂಕ್ ಶಾಖಾಧಿಕಾರಿ ಬಿ.ಜೆ. ಸುರೇಶ್, ನಿರ್ದೇಶಕರುಗಳಾದ ಹೊನ್ನಪ್ಪ ನಾಯ್ಕ, ಮುರಳಿಧರ ಶೆಟ್ಟಿ, ಪರಮೇಶ್ವರ ಎಂ., ಚಂದ್ರಹಾಸ ಕರ್ಕೇರ, ಶಿವಪ್ಪ ಪೂಜಾರಿ, ಚಂದ್ರಶೇಖರ ಶೆಟ್ಟಿ, ರಾಜೇಶ್ ಕುಮಾರ್, ಪುಷ್ಪಾವತಿ, ಸುಜಾತ ರೈ, ಬ್ಯಾಂಕ್ ವ್ಯವಸ್ಥಾಪಕ ಶೇಖರ ಎಂ. ಉಪಸ್ಥಿತರಿದ್ದರು.

ಪ್ರಧಾನ ವರದಿಗಾರರು,
ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...