ಆಸ್ತಿಯ ವಿಚಾರಕ್ಕೆ ಅಣ್ಣ-ತಮ್ಮಂದಿರ ನಡುವೆ ಗಲಾಟೆ : ಸಹೋದರನನ್ನು ಚೂರಿಯಿಂದ ಇರಿದು ಕೊಲೆ, ಆರೋಪಿ ಸೆರೆ

ಮುಸ್ತಫಾ ಕೊಲೆಯಾದ ವ್ಯಕ್ತಿ

ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಆಸ್ತಿಯ ವಿಚಾರಕ್ಕೆ ಅಣ್ಣ-ತಮ್ಮಂದಿರ ನಡುವೆ ಗಲಾಟೆ ನಡೆದು ಸಹೋದರನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ನಗರದ ಬೆಂಗ್ರೆಯ ಕಸಬಾ ಬೆಂಗ್ರೆ ಕಿಲೇರಿಯ ಮಸೀದಿ ಸಮೀಪ ಗುರುವಾರ ತಡರಾತ್ರಿ ನಡೆದಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗ್ರೆ ನಿವಾಸಿ ಮುಸ್ತಫಾ ಕೊಲೆಯಾದ ವ್ಯಕ್ತಿ. ಮುಸ್ತಫಾನ ಸಹೋದರ ರೈಜು ಯಾನೆ ಅಬ್ದುಲ್ ರಹಮಾನ್ ಬಂಧಿತ ಆರೋಪಿ.

ಸಹೋದರರಾದ ಮುಸ್ತಫಾ ಹಾಗೂ ರೈಜು ಮೀನುಗಾರಿಕಾ ಕಾರ್ಮಿಕರು. ಆಸ್ತಿ ಮತ್ತು ಮನೆ ವಿಚಾರಕ್ಕೆ ಇವರ ಮನೆಯಲ್ಲಿ ಯಾವಾಗಲೂ ಗಲಾಟೆ ನಡೆಯುತ್ತಿತ್ತು. ಅಲ್ಲದೆ, ತಾಯಿ ಹಾಗೂ ತಂಗಿಗೆ ಮನೆಯ ವಿಚಾರದಲ್ಲಿ ರೈಜು ಹಿಂಸೆ ನೀಡುತ್ತಿದ್ದ ಎಂದು
ಆರೋಪಿಸಲಾಗಿದೆ.

ರೈಜು ಯಾನೆ ಅಬ್ದುಲ್ ರಹಮಾನ್ ಬಂಧಿತ ಆರೋಪಿ.

ಗುರುವಾರ ತಡರಾತ್ರಿ 11:30ರ ಸುಮಾರಿಗೆ ಮತ್ತೆ ಮನೆಯ ವಿಚಾರಕ್ಕೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ತಾಯಿ ಹಾಗೂ ಬಾವ ಗಲಾಟೆ ಬಿಡಿಸಲು ಪ್ರಯತ್ನಿಸಿದ್ದಾರೆ. ಆದರೆ ಆರೋಪಿ ರೈಜು ಚೂರಿಯಿಂದ ಮುಸ್ತಾಫನಿಗೆ ಇರಿದು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಗಂಭೀರವಾಗಿ ಗಾಯಗೊಂಡ ಮುಸ್ತಾಫನನ್ನು ಕೂಡಲೇ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶುಕ್ರವಾರ ನಸುಕಿನಜಾವ ಸುಮಾರು 2:30ರ ವೇಳೆ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...