ಸಹಬಾಳ್ವೆಯಿಂದ ಕೌಟುಂಬಿಕ, ಸಾಮಾಜಿಕ ನೆಮ್ಮದಿ – ‘ಡಿವಿಜಿ ನೆನಪು-77’ರಲ್ಲಿ ಸ್ವಾಮಿ ಜಪಾನಂದಜಿ ನುಡಿ

ತುಮಕೂರು (ವಿಶ್ವ ಕನ್ನಡಿಗ ನ್ಯೂಸ್) : ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿ ಮನುಷ್ಯ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ, ಬಿಕ್ಕಟ್ಟುಗಳಿಗೆ ಸಹಬಾಳ್ವೆ ಎಂಬುದು ಪರಿಹಾರೋಪಾಯವಾಗಿದೆ. ಸಹಬಾಳ್ವೆಯನ್ನು ರೂಢಿಸಿಕೊಂಡರೆ ಆರೋಗ್ಯಪೂರ್ಣ ಮನಃಸ್ಥಿತಿ ಲಭಿಸಲಿದ್ದು, ಕೌಟುಂಬಿಕ ಹಾಗೂ ಸಾಮಾಜಿಕವಾಗಿ ನೆಮ್ಮದಿ ಹಾಗೂ ಉನ್ನತಿ ಸಾಧಿಸಬಹುದು ಎಂದು ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ಜಪಾನಂದಜಿ ಅಭಿಪ್ರಾಯಪಟ್ಟರು.

ತುಮಕೂರಿನ ಗಾಯತ್ರಿ ಸಮುದಾಯ ಭವನದಲ್ಲಿ ಸರಸ್ ಫೌಂಡೇಷನ್ ವತಿಯಿಂದ ಏರ್ಪಟ್ಟಿದ್ದ “ಡಿವಿಜಿ ನೆನಪು” ಉಪನ್ಯಾಸ ಮಾಲಿಕೆಯ 77 ನೇ ತಿಂಗಳಿನ ಕಾರ್ಯಕ್ರಮದಲ್ಲಿ “ಮಂಕುತಿಮ್ಮನ ಕಗ್ಗ’’ದ 432 ನೇ ಮುಕ್ತಕ “ಒಟ್ಟು ಬಾಳ್ವುದ ಕಲಿಯೋ- ಮಂಕುತಿಮ್ಮ’’ ಕುರಿತು ಅವರು ಮಾತನಾಡುತ್ತಿದ್ದರು.

ಅತಿಯಾದ ಸ್ವಾರ್ಥ ಮತ್ತು ತಾನೊಬ್ಬನೇ ಸರಿ; ಎಲ್ಲವೂ ತನಗೊಬ್ಬನಿಗೇ ಸೇರಿದ್ದೆಂಬ ಸಂಕುಚಿತ ಹಾಗೂ ರೋಗಗ್ರಸ್ಥ ಬುದ್ಧಿಯಿಂದ ಮನುಷ್ಯ ಇಂದು ಸಹಬಾಳ್ವೆಯನ್ನು ನಿರ್ಲಕ್ಷಿಸಿದ್ದಾನೆ. ಇದು ಮನುಷ್ಯನ ಬಹುಮುಖ ದುಷ್ಟತನಗಳಿಗೆ ಹಾಗೂ ಸಾಮಾಜಿಕ-ಕೌಟುಂಬಿಕ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ವಿಷಾದಿಸಿದರು.

ನಮ್ಮ ಹಿಂದಿನ ಪೀಳಿಗೆಯಲ್ಲಿ ಸಹಬಾಳ್ವೆ ಕಾಣಬಹುದಿತ್ತು. ಕಷ್ಟ-ಸುಖಗಳಿಗೆ ಒಬ್ಬರಿಗೊಬ್ಬರು ಸ್ಪಂದಿಸುವ ಅದ್ಭುತ ಗುಣ ಕಂಡುಬರುತ್ತಿತ್ತು. ಹೀಗಾಗಿ ಅವರು ನೆಮ್ಮದಿಯಿಂದಿದ್ದರು. ಆದರೆ ಇಂದು ನಮ್ಮ ಈಗಿನ ಪೀಳಿಗೆಯಲ್ಲಿ ಮಿತಿಮೀರಿದ ಸೌಲಭ್ಯಗಳಿದ್ದರೂ ಸಹಬಾಳ್ವೆ ಇಲ್ಲದ ಪರಿಣಾಮ ಮನುಷ್ಯನ ಮನಸ್ಸು ರೋಗಗ್ರಸ್ಥವಾಗುತ್ತಿದೆ. ಕುಟುಂಬಗಳು ಛಿದ್ರವಾಗುತ್ತಿವೆ. ಸಮಾಜದಲ್ಲಿ ಬಹುವಿಧ ಸಮಸ್ಯೆಗಳು ಉದ್ಭವಿಸುತ್ತಿವೆ. ಗ್ರಾಮ ಪಂಚಾಯಿತಿ ಮಟ್ಟದಿಂದ ದೆಹಲಿಯ ಪಾರ್ಲಿಮೆಂಟ್‍ವರೆಗೆ ಇದೇ ಅವಸ್ಥೆಯನ್ನು ಕಾಣಬಹುದು ಎಂದು ಅವರು ಉದಾಹರಣೆಗಳೊಂದಿಗೆ ವಿವರಿಸಿದರು.

ಇವೆಲ್ಲ ಸಮಸ್ಯೆಗಳಿಗೂ ಡಿವಿಜಿಯವರು ಕಗ್ಗದ ಈ ಮುಕ್ತಕದಲ್ಲಿ ಪರಿಹಾರ ಸೂಚಿಸಿದ್ದಾರೆ. ಮನುಷ್ಯನ ಮನಸ್ಸು ವಿಶಾಲವಾಗಬೇಕು. ಸಮಾಜದ ಹಿತದಲ್ಲೇ ವ್ಯಕ್ತಿ ಹಿತ ಅಡಗಿದೆ. ಆದಕಾರಣ ಸಹಬಾಳ್ವೆ ಇರಬೇಕೆಂದು ಡಿವಿಜಿ ಒತ್ತಿ ಹೇಳಿದ್ದು, ಈ ತತ್ವವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಸ್ವಾಮಿ ಜಪಾನಂದಜಿ ಹೇಳಿದರು.

ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಆಗಮಿಸಿದ್ದ ಇಸ್ರೋದ ನಿವೃತ್ತ ಹಿರಿಯ ತಂತ್ರಜ್ಞ ಅಶೋಕ್ ಕುಮಾರ್ ದಂಪತಿಗಳನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಸರಸ್ ಫೌಂಡೇಷನ್ ಅಧ್ಯಕ್ಷ ಆರ್.ವಿಶ್ವನಾಥನ್ ಸ್ವಾಗತಿಸಿದರು. ಉದ್ಯಮಿ ಆರ್.ಬಸವರಾಜಪ್ಪ ವಂದಿಸಿದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...