ಶಾಲಾ ಮಕ್ಕಳಿಗೆ ಟ್ರಾಫಿಕ್ ಅರಿವು ಮೂಡಿಸಲು ಮನವಿ

ತುಮಕೂರು (ವಿಶ್ವ ಕನ್ನಡಿಗ ನ್ಯೂಸ್) : ಸಂಚಾರ ಸುರಕ್ಷತೆ ದೃಷ್ಟಿಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತದಲ್ಲೇ ವಿದ್ಯಾರ್ಥಿಗಳಿಗೆ ಟ್ರಾಫಿಕ್ ನಿಯಮಾವಳಿಗಳ ಪಾಲನೆಯ ಬಗ್ಗೆ ಕಡ್ಡಾಯವಾಗಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕೆಂದು ಕೋರಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ತುಮಕೂರಿನ ಸಾರ್ವಜನಿಕ ಹೋರಾಟಗಾರ ಆರ್. ವಿಶ್ವನಾಥನ್ ಮನವಿ ಸಲ್ಲಿಸಿದ್ದಾರೆ

ಬದಲಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ನಗರಗಳಷ್ಟೇ ಅಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲೂ ಎಲ್ಲ ವಿಧದ ವಾಹನಗಳ ಉಪಯೋಗ ದಿನೇ ದಿನೇ ಅಧಿಕವಾಗುತ್ತಿದೆ. ಮನೆ-ಮನೆಗಳಲ್ಲೂ ದ್ವಿಚಕ್ರ ವಾಹನಗಳ ಬಳಕೆ ಸಹಜವಾಗುತ್ತಿದೆ. ಶಾಲಾ ವಾಹನಗಳು ಹಳ್ಳಿಹಳ್ಳಿಗಳನ್ನು ತಲುಪುತ್ತಿವೆ. ಅದೇ ರೀತಿ ಗ್ರಾಮಾಂತರ ಪ್ರದೇಶಗಳಿಂದ ಪಟ್ಟಣ, ನಗರ ಪ್ರದೇಶಗಳಿಗೆ ಶಾಲಾ ಕಾಲೇಜಿಗಾಗಿ ಬಸ್ ಇತ್ಯಾದಿ ವಾಹನಗಳಲ್ಲಿ ಬರುವ ವಿದ್ಯಾರ್ಥಿಗಳ ಸಂಖ್ಯೆ ದೊಡ್ಡದಾಗಿಯೇ ಇದೆ. ಪಟ್ಟಣ/ನಗರ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಶಾಲಾ ವಾಹನಗಳನ್ನು ಹೊರತುಪಡಿಸಿ, ಆಟೋರಿಕ್ಷಾ, ಖಾಸಗಿ ವಾಹನಗಳು, ದ್ವಿಚಕ್ರವಾಹನಗಳು ಹಾಗೂ ಸೈಕಲ್‍ಗಳನ್ನೂ ಅವಲಂಬಿಸುತ್ತಿರುತ್ತಾರೆ. ಖಾಸಗಿ/ಸರ್ಕಾರಿ ಶಾಲೆಗಳ ಆರಂಭ ಹಾಗೂ ಮುಕ್ತಾಯದ ಸಮಯದಲ್ಲಿ ಶಾಲೆಯ ಸುತ್ತಮುತ್ತ ವಿದ್ಯಾರ್ಥಿಗಳ ದೊಡ್ಡ ಗುಂಪೇ ಇರುತ್ತದೆ. ಗುಂಪುಗುಂಪಾಗಿ ರಸ್ತೆ ದಾಟುತ್ತಾರೆ. ಸೈಕಲ್/ದ್ವಿಚಕ್ರ ವಾಹನಗಳಲ್ಲಿ ತೆರಳುತ್ತಾರೆ. ಬಸ್‍ಗಳ ಮೆಟ್ಟಿಲುಗಳಲ್ಲಿ ಜೋತುಬಿದ್ದು ಸಂಚರಿಸುತ್ತಾರೆ. ಇವೆಲ್ಲ ಸಂದರ್ಭಗಳಲ್ಲೂ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಈ ಮುಗ್ಧ ವಿದ್ಯಾರ್ಥಿಗಳು ಟ್ರಾಫಿಕ್ ನಿಯಮಾವಳಿಗಳ ಸ್ಪಷ್ಟ ಅರಿವಿಲ್ಲದೆ, ಅಜಾಗ್ರತೆಯಿಂದ ಹಾಗೂ ಅಪಾಯಕಾರಿಯಾಗಿ ನಡೆದುಕೊಳ್ಳುವುದು ನಿಚ್ಚಳವಾಗಿ ಕಂಡುಬರುತ್ತಿದೆ. ಇದು ಆತಂಕವನ್ನುಂಟುಮಾಡುವುದಾಗಿದೆ ಎಂದು ಮನವಿ ಪತ್ರದಲ್ಲಿ ಅವರು ವಿವರಿಸಿದ್ದಾರೆ.

ಮುಗ್ಧ ಬಾಲಕ-ಬಾಲಕಿಯರ ಸುರಕ್ಷತೆಯ ದೃಷ್ಟಿಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತದಲ್ಲೇ ಟ್ರಾಫಿಕ್ ನಿಯಮಾವಳಿಗಳ ಪಾಲನೆಯ ಬಗ್ಗೆ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಅರಿವು ಮೂಡಿಸುವ ಬಗ್ಗೆ ಸಾಧ್ಯವಿರುವ ಎಲ್ಲ ಅಗತ್ಯ ಕ್ರಮಗಳನ್ನು ತ್ವರಿತವಾಗಿ ಜಾರಿಗೆ ತರಬೇಕು. ಪಠ್ಯಕ್ರಮದಲ್ಲೇ ಈ ವಿಷಯವನ್ನು ಅಳವಡಿಸುವ ಅಥವಾ ವಾರಕ್ಕೊಮ್ಮೆ ವಿಶೇಷವಾಗಿ ಒಂದು ತರಗತಿಯನ್ನು ಇದಕ್ಕಾಗಿ ಮೀಸಲಿಡುವ ಬಗ್ಗೆ ಆಲೋಚಿಸಬಹುದು. ಇದಕ್ಕೆ ಪೂರಕವಾಗಿ ಶಾಲಾ ಶಿಕ್ಷಕರಿಗೂ ಟ್ರಾಫಿಕ್ ನಿಯಮಾವಳಿಗಳ ಬಗ್ಗೆ ತರಬೇತಿ ನೀಡಬಹುದು. ಇದಕ್ಕಾಗಿ ಪೊಲೀಸ್ ಇಲಾಖೆಯ ಸಹಕಾರವನ್ನೂ ಪಡೆದುಕೊಳ್ಳಬಹುದು ಎಂದು ಆರ್.ವಿಶ್ವನಾಥನ್ ಸಲಹೆ ನೀಡಿದ್ದಾರೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸಕಾರಾತ್ಮಕವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಚಿವರಿಗೆ ವಿಶ್ವನಾಥನ್ ಮನವಿ ಮಾಡಿದ್ದಾರೆ.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...