ಉಳ್ಳಾಲ ದರ್ಗಾ ಮತ್ತು ವಾಸ್ತವ

(ವಿಶ್ವ ಕನ್ನಡಿಗ ನ್ಯೂಸ್) : ಗುರುವಾರ (28/11/2019) ಉಳ್ಳಾಲ ದರ್ಗಾ ಸಂದರ್ಶಿಸಿದ್ದೆ. ಎಂದಿನಂತೆ ಎಲ್ಲಾ ಕಾರ್ಯವು ಸಾಂಗವಾಗಿ ನಡೆಯುತ್ತಿದೆ. ತಾಜುಲ್ ಉಲಮಾ ಅವರ ಆಂಡ್ ನೇರ್ಚೆಯು ವಿಶಾಲ ವೇದಿಕೆಯಲ್ಲಿ ಗಂಭೀರವಾಗಿಯೇ ನಡೆಯುತ್ತಿತ್ತು. ದರ್ಗಾ ಝಿಯಾರತ್, ಸಾರ್ವಜನಿಕ ಸಂದರ್ಶನ, ಹರಕೆ, ಪ್ರಾರ್ಥನೆ, ನಮಾಝ್ ಯಾವುದಕ್ಕೂ ಕೊರತೆ ಇರಲಿಲ್ಲ. “ಉಳ್ಳಾಲ ದರ್ಗಾ ಸರಕಾರದ ವಶಕ್ಕೆ” ಎಂಬ ಅಘೋಷಿತ ಕಲ್ಪನೆ ಕೇವಲ ಸಾಮಾಜಿಕ ಜಾಲ ತಾಣದ ಪುಕ್ಕಟೆ ಅಪಪ್ರಚಾರವಷ್ಟೆ. ಮುಸ್ಲಿಮರ ಸಾರ್ವಜನಿಕ ಧಾರ್ಮಿಕ ಕೇಂದ್ರ ಅಂದಾಗ ಅದನ್ನು ಸರಕಾರದ ವಕ್ಫ್ ಸಮಿತಿಗೆ ನೋಂದಾಯಿಸಬೇಕಾದುದು ನಿಯಮ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುಮಾರು 800ಕ್ಕೂ ಅಧಿಕ ಧಾರ್ಮಿಕ ಕೇಂದ್ರಗಳು ವಕ್ಫ್ ಸಮಿತಿಯ ಅಧೀನದಲ್ಲಿದೆ. ಅದರಲ್ಲಿ ಉಳ್ಳಾಲ ಕೂಡಾ ಒಂದು.

ಇಂತಹ ಧಾರ್ಮಿಕ ಸ್ಥಳಗಳಲ್ಲಿ ವಿವಾದ, ಗೊಂದಲ, ಸಮಸ್ಯೆ ತಲೆದೋರಿದಾಗ ಅದನ್ನು ಆಯಾ ಆಡಳಿತ ಸಮಿತಿಗೆ ನಿವಾರಿಸಲು ಸಾಧ್ಯವಿಲ್ಲದೇ ಆದಾಗ ವಕ್ಫ್ ಸಮಿತಿ ಮಧ್ಯಸ್ಥಿಕೆ ವಹಿಸುವುದು ಸಾಮಾನ್ಯ. ನಮ್ಮ ಜಿಲ್ಲೆಯ ಹಲವಾರು ಮೊಹಲ್ಲಾಗಳಲ್ಲಿ ವಕ್ಫ್ ಆಡಳಿತಾಧಿಕಾರಿ ನೇಮಕವಾದುದು ನಿಮಗೆ ಗೊತ್ತೇ ಇದೆ. ಅದೇ ರೀತಿ ಉಳ್ಳಾಲದಲ್ಲೂ ಆಗಿದೆಯಷ್ಟೆ. ವಕ್ಫ್ ಆಡಳಿತಾಧಿಕಾರಿಯ ನೇಮಕ ಮಾಡಿ ವಕ್ಫ್ ಇಲಾಖೆಯು ಸಮಸ್ಯೆಗೆ ಪರಿಹಾರ ಕಂಡು ಹುಡುಕಲು ಪ್ರಯತ್ನಿಸುತ್ತಿದೆ. ಇದರಿಂದಾಗಿ ಉಳ್ಳಾಲ ದರ್ಗಾಕ್ಕೆ ಏನೂ ಆಗಲ್ಲ. ವಕ್ಫ್ ಇಲಾಖೆ ಇಲ್ಲಿನ ಹಣ ದೋಚಲ್ಲ. ಅಧಿಕಾರಕ್ಕಾಗಿ ಹಪಹಪಿಸಲ್ಲ. ಮೋಸ ಮಾಡಲ್ಲ. ದ್ರೋಹವೆಸಗಲ್ಲ. ಅನ್ಯಾಯವಾಗಲ್ಲ. ಎಲ್ಲವೂ ಕರಾರುವಕ್ಕಾಗಿರುತ್ತದೆ. ಗೊಂದಲ, ವಿವಾದ, ಸಮಸ್ಯೆ ಪರಿಹಾರವಾದ ಬಳಿಕ ವಕ್ಫ್ ಆಡಳಿತ ನಡೆಸಲ್ಲ. ದರ್ಗಾ ಆಡಳಿತಕ್ಕೇ ಬಿಟ್ಟು ಕೊಡುತ್ತದೆ. ಇಂತಹ ಉದಾಹರಣೆ ನೀವು ಕಾಜೂರು ದರ್ಗಾದಲ್ಲಿ ನೋಡಿರಬಹುದು. ಇತರ ಕೆಲವೊಂದು ಮಸೀದಿಗಳಲ್ಲೂ ಕಂಡಿರಬಹುದು.

ಆದ್ದರಿಂದ ಯಾರಿಗೂ ಯಾವುದೇ ಭಯ ಬೇಡ. ಅಲ್ಲಾಹನು ಅನೀತಿಗಳನ್ನು ಕ್ಷಮಿಸಲಾರ. ಯಾರೇ ಬರಲಿ, ಯಾರೇ ಹೋಗಲಿ ಸಯ್ಯದ್ ಮದನಿ ವಲಿಯುಲ್ಲಾಹಿ ನೆಲೆ ನಿಂತ ಪುಣ್ಯಭೂಮಿ ಉಳ್ಳಾಲ ಸದಾಕಾಲ ತನ್ನ ವೈಭವವನ್ನು ಮೆರೆಯುತ್ತಲೇ ಇರುತ್ತದೆ. ಸಂಶಯ ಬೇಡ.

-ರಶೀದ್ ವಿಟ್ಲ.
ಸದಸ್ಯರು, ದ.ಕ.ಜಿಲ್ಲಾ ವಕ್ಫ್ ಸಮಿತಿ.

 

ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...