ಲಕ್ನೋ(ವಿಶ್ವಕನ್ನಡಿಗ ನ್ಯೂಸ್): ಸಫ್ಜರ್ ಜಂಗ್ ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಂದ ಜೀವನ್ಮರಣ ಹೋರಾಟ ನಡೆಸಿ ಕೊನೆಯುಸಿರೆಳೆದಿದ್ದ ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಮನೆಗೆ ಶನಿವಾರ ಸಂಜೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ಇಬ್ಬರು ಸಚಿವರು ಭೇಟಿ ನೀಡಲು ಆಗಮಿಸಿದ್ದ ವೇಳೆ ಉನ್ನಾವ್ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಲಕ್ನೋದಿಂದ 65 ಕಿಲೋ ಮೀಟರ್ ದೂರದಲ್ಲಿರುವ ಉನ್ನಾವ್ ಗ್ರಾಮಕ್ಕೆ ಭೇಟಿ ನೀಡುವಂತೆ ಸಿಎಂ ಯೋಗಿ ಸಚಿವರಾದ ಕಮಲ್ ರಾಣಿ ವರುಣ್ ಮತ್ತು ಸ್ವಾಮಿ ಪ್ರಸಾದ್ ಯಾದವ್ ಅವರಿಗೆ ಸೂಚನೆ ನೀಡಿದ್ದರು. ಉನ್ನಾವ್ ಸಂತ್ರಸ್ತೆ ಸಾವನ್ನಪ್ಪಿರುವ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆ. ಅಲ್ಲದೇ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಎಂ ಯೋಗಿ ಆದಿತ್ಯನಾಥ್ ಇಂದು ಬೆಳಗ್ಗೆ ಪ್ರತಿಕ್ರಿಯೆ ನೀಡಿದ್ದರು.
ಉನ್ನಾವ್ ಗ್ರಾಮಕ್ಕೆ ಸಚಿವರ ಕಾರು ಆಗಮಿಸುತ್ತಿದ್ದಂತೆಯೇ ಭಾರೀ ಸಂಖ್ಯೆಯಲ್ಲಿ ಒಗ್ಗೂಡಿದ ಗ್ರಾಮಸ್ಥರು..ಈಗ ಯಾಕೆ ಬಂದಿದ್ದೀರಿ ಎಂದು ಪ್ರಶ್ನಿಸಿ ಘೋಷಣೆ ಕೂಗಲು ಆರಂಭಿಸಿದ್ದರು. ಈ ವೇಳೆ ಪೊಲೀಸರು ಆಕ್ರೋಶಿತ ಗ್ರಾಮಸ್ಥರು ಕಾರನ್ನು ತಡೆಯದಂತೆ ಪ್ರಯತ್ನಿಸಿರುವುದಾಗಿ ವರದಿ ತಿಳಿಸಿದೆ.
ಕೊನೆಗೂ ಸಂತ್ರಸ್ತೆ ಮಹಿಳೆ ಮನೆಗೆ ಭೇಟಿ ನೀಡಿ ಮಾತನಾಡಿದ ಸಚಿವ ಮೌರ್ಯ ಅವರು, ಆರೋಪಿಗಳನ್ನು ಬಿಡುವ ಪ್ರಶ್ನೆಯೇ ಇಲ್ಲ. ಯಾವ ರೀತಿಯ ತನಿಖೆ ನಡೆಸಬೇಕೆಂದು ನೀವು ಬಯಸುತ್ತಿರೋ ಅದೇ ರೀತಿ ನಡೆಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ.