
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಅವರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ರಝಾಕ್ ಅವರ ಅಣ್ಣ ಮೊಯಿದಿನಬ್ಬ ಯಾನೆ ಕುಂಞÂಮೋನು ಹಾಗೂ ಅವರ ಸಂಬಂಧಿ ಮಸೀದಿ ಮಾಜಿ ಅಧ್ಯಕ್ಷ ಅಬೂಬಕ್ಕರ್ ತೋಟ ಎಂಬಿಬ್ಬರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಒಟ್ಟು ಸಂಖ್ಯೆ ಐದಕ್ಕೇರಿದಂತಾಗಿದೆ. ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪ್ರಕರಣದಲ್ಲಿ ನೇರ ಭಾಗಿಗಳಾಗಿದ್ದ ಮೂರು ಮಂದಿ ಆರೋಪಿಗಳೆನ್ನಲಾದ ಕುಕ್ಕಾಜೆ ನಿವಾಸಿಗಳಾದ ಬಶೀರ್, ಕಬೀರ್ ಹಾಗೂ ತನ್ವೀರ್ ಎಂಬವರನ್ನು ಪೊಲೀಸರು ಮೊನ್ನೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಬಂಧಿತ ಮೂವರು ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಮತ್ತೆ ಇಬ್ಬರನ್ನು ಪ್ರಕರಣಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ. ಪ್ರಕರಣದಲ್ಲಿ ಒಟ್ಟು 17 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದ್ದು, ಉಳಿದ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ನ 30 ರಂದು ರಾತ್ರಿ ಮಂಚಿ ಕಟ್ಟೆಯ ಬಳಿ ಇರುವ ಶಾಫಿ ಕ್ಲಿನಿಕಿಗೆ ರಝಾಕ್ ಔಷಧಿಗೆ ಬಂದಿದ್ದ ವೇಳೆ ಬೆನ್ನತ್ತಿ ಬಂದಿದ್ದ ಆರೋಪಿಗಳು ಕ್ಲಿನಿಕಿಗೆ ನುಗ್ಗಿ ದೊಣ್ಣೆ ಮತ್ತಿತರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು. ಈ ಬಗ್ಗೆ ರಝಾಕ್ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 123/19 ಕಲಂ 307, 324, 109 ಡಿ/ತಿ 149 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ಇದೀಗ ಘಟನೆಯಲ್ಲಿ ನೇರ ಭಾಗಿಗಳಾದ ಮೂವರು ಸೇರಿದಂತೆ ಒಟ್ಟು ಐದು ಮಂದಿಯನ್ನು ಬಂಧಿಸಿದಂತಾಗಿದೆ.