ವಿದ್ಯಾರ್ಥಿಗಳನ್ನು ಗುಂಪುಗೂಡಿಸಿ ಬಾಬ್ರಿ ಮಸೀದಿ ಗುಂಬಝ್ಗಳನ್ನು ಹೊಡೆದುರುಳಿಸುವ ಅಣುಕು ಪ್ರದರ್ಶನ ನಡೆಸಲಾಯಿತು
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಭಾನುವಾರ ರಾತ್ರಿ ನಡೆದ ಹೊನಲು ಬೆಳಕನ ಕ್ರೀಡೋತ್ಸವದಲ್ಲಿ ಅಯೋಧ್ಯೆಯ ಬಾಬರಿ ಮಸೀದಿಯ ಗುಂಬಝಗಳನ್ನು ವಿದ್ಯಾರ್ಥಿಗಳ ಕೈಯಿಂದ ಹೊಡೆದುರುಳಿಸುವ ಅಣುಕು ಪ್ರದರ್ಶನ ನಡೆಸಿದ್ದು, ಇದರ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ಭಾರೀ ಆಕ್ರೋಶ, ಆತಂಕ ವ್ಯಕ್ತವಾಗತೊಡಗಿದೆ.
ಬಾಬ್ರಿ ಮಸೀದಿಯ ಭಾವಚಿತ್ರವನ್ನು ಅಳವಡಿಸಲಾಗಿತ್ತು.
ಕಲ್ಲಡ್ಕ ಶಾಲೆಯ ಕ್ರೀಡೋತ್ಸವಗಳಲ್ಲಿ ಪ್ರತೀ ವರ್ಷವೂ ಇಂತಹ ವಿವಾದಾತ್ಮಕ ಪ್ರದರ್ಶಗಳನ್ನು ವಿದ್ಯಾರ್ಥಿಗಳ ನಡೆಸಲಾಗುತ್ತಿದ್ದು, ಇದಕ್ಕೆ ಜವಾಬ್ದಾರಿಯುತ ಜನಪ್ರತಿನಿಧಿಗಳು ಹಾಗೂ ಸರಕಾರಿ ಅಧಿಕಾರಿಗಳೂ ಕೂಡಾ ಮೂಕ ಪ್ರೇಕ್ಷಕರಾಗಿ ಸಾಕ್ಷಿಯಾಗುತ್ತಿದ್ದು, ಯಾವುದೇ ಕ್ರಮಕ್ಕೆ ಮುಂದಾಗದೆ ಇರುವುದಕ್ಕೆ ಕಾರಣವಾದರೂ ಏನು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಅಡ್ವಾಣಿ ರಥಯಾತ್ರೆಯ ಅಣುಕು ಪ್ರದರ್ಶನ ನಡೆಸಲಾಗಿತ್ತು.
ಅಯೋಧ್ಯಾ ವಿವಾದಕ್ಕೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಮಹತ್ವರ ತೀರ್ಪಿನ ಮೂಲಕ ಅಂತ್ಯ ಹಾಡಲು ಪ್ರಯತ್ನಿಸಿದೆ. ತೀರ್ಪಿನ ಬಗ್ಗೆ ಪರ-ವಿರೋಧ ಅಭಿಪ್ರಾಯಗಳಿದ್ದರೂ ದೇಶದ ಶಾಂತಿ-ಸೌಹಾರ್ದತೆ ಹಾಗೂ ಜಾತ್ಯಾತೀತತೆಯ ದೃಷ್ಟಿಯಿಂದ ಸರ್ವ ವಿಭಾಗದವರೂ ತೀರ್ಪನ್ನು ಒಪ್ಪಿಕೊಂಡು ಸುಮ್ಮನಾಗಿರುವ ಇಂತಹ ಸಂದರ್ಭದಲ್ಲೇ ಶಾಲೆಯೊಂದರ ಕಾರ್ಯಕ್ರಮದಲ್ಲಿ ನಿಷ್ಕಳಂಕ ಮನಸ್ಸಿನ ವಿದ್ಯಾರ್ಥಿಗಳ ಕೈಯಿಂದ ಕೋಮು ಪ್ರಚೋದನೆಯ ಕೃತ್ಯಗಳನ್ನು ನಡೆಸುವ ಮೂಲಕ ಶಾಲಾಡಳಿತ ಮಂಡಳಿ ಅದ್ಯಾವುದನ್ನು ಸಾಧಿಸಲು ಹೊರಟಿದೆ ಎಂಬುದೇ ನಾಗರಿಕ ಸಮಾಜದ ಪ್ರಶ್ನೆಯಾಗಿದೆ. ಅಲ್ಲದೆ ಕಾರ್ಯಕ್ರಮದಲ್ಲಿ ಅಯೋಧ್ಯಾ ಘಟನೆ ನಡೆಯುವುದಕ್ಕೆ ಮುಂಚೆ ಎಲ್ ಕೆ ಅಡ್ವಾಣಿ ನೇತೃತ್ವದಲ್ಲಿ ನಡೆದ ರಥ ಯಾತ್ರೆಯ ಅಣುಕು ಪ್ರದರ್ಶನ ಕೂಡಾ ನಡೆಸಲಾಗಿದ್ದು, ಒಟ್ಟಾರೆ ವಿದ್ಯಾರ್ಥಿಗಳನ್ನು ಮತ್ತೆ ಕೋಮು ಆಧಾರಿತವಾಗಿ ಪ್ರಚೋದಿಸುವ ಕೆಲಸ ಅಚ್ಚುಕಟ್ಟಾಗಿ ನಡೆದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ಕಾರ್ಯಕ್ರಮಗಳನ್ನು ಶಾಲಾ ವಿದ್ಯಾರ್ಥಿಗಳನ್ನು ಮಾಡಿಸಿರುವುದಕ್ಕೆ ದೇಶಪ್ರೇಮದ ಲೇಬಲ್ ಹಚ್ಚಲಾಗಿತ್ತಾದರೂ ಇಡೀ ಕಾರ್ಯಕ್ರಮದ ಮೈದಾನದ ಯಾವುದೇ ಮೂಲೆಯಲ್ಲೂ ಒಂದು ಸಣ್ಣ ತ್ರಿವರ್ಣ ಧ್ವಜವೂ ರಾರಾಜಿಸಿಲ್ಲ ಎಂಬುದೇ ಪ್ರಶ್ನಾರ್ಥಕವಾಗಿದೆ ಎಂದು ಸ್ಥಳೀಯರು ತಿಳಿಸುತ್ತಾರೆ. ಶಾಲೆಯಲ್ಲಿ ನಡೆದ ಈ ಎಲ್ಲಾ ಬೆಳವಣಿಗೆಗಳ ಚಿತ್ರ ಹಾಗೂ ವೀಡಿಯೋಗಳು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ನಾಗರಿಕ ಸಮಾಜ ಆಕ್ರೋಶ ವ್ಯಕ್ತಪಡಿಸುತ್ತಿದೆ.
ಈ ಹಿಂದೆ ಬಿ ರಮಾನಾಥ ರೈ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭ ಕೊಲ್ಲೂರು ದೇವಸ್ಥಾನದಿಂದ ಕಲ್ಲಡ್ಕ ಶ್ರೀರಾಮ ಶಾಲೆಗೆ ಮಾತ್ರ ಹಣದ ರೂಪದಲ್ಲಿ ಅನುದಾನ ಹರಿದು ಬರುತ್ತಿರುವುದನ್ನು ಸಾರ್ವಜನಿಕ ಆಕ್ಷೇಪದ ಬಳಿಕ ಸರಕಾರ ರದ್ದುಪಡಿಸಿತ್ತು. ಈ ಬಗ್ಗೆಯೂ ಕಳೆದ ಬಾರಿಯೊಮ್ಮೆ ಶಾಲಾ ಕ್ರೀಡೋತ್ಸವದಲ್ಲಿ ದೇವಸ್ಥಾನದ ಹಣ ರದ್ದು ಪಡಿಸಿರುವುದು ರೈ ಎಂಬ ಬಗ್ಗೆ ಬೊಟ್ಟು ಮಾಡಿ ಅಣುಕು ಪ್ರದರ್ಶನವನ್ನು ವಿದ್ಯಾರ್ಥಿಗಳಿಂದ ಮಾಡಿಸಲಾಗಿತ್ತು. ಇದೂ ಕೂಡಾ ವಿವಾದಕ್ಕೆ ಕಾರಣವಾಗಿತ್ತು. ಇಂತಹ ವಿವಾದಾತ್ಮಕ ಅಣುಕು ಪ್ರದರ್ಶನಗಳನ್ನೇ ಶಾಲಾ ವಿದ್ಯಾರ್ಥಿಗಳಿಂದ ಮಾಡಿಸುತ್ತಾ ಬರುತ್ತಿರುವ ಕಲ್ಲಡ್ಕ ಶಾಲಾಡಳಿತ ಮಂಡಳಿಯ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಇಲಾಖಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಪೊಲೀಸ್ ಅಧಿಕಾರಿಗಳೇ ಮೂಕ ಪ್ರೇಕ್ಷಕರು
ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ನಡೆದ ಕೋಮು ಪ್ರಚೋದಿತ ಅಣುಕು ಪ್ರದರ್ಶನ ನಡೆದಿರುವುದಕ್ಕೆ ಡಿಜಿಪಿ, ಎಸ್ಪಿ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳೇ ಮೂಕ ಪ್ರೇಕ್ಷಕರಾಗಿ ತೆರಳಿರುವುದು ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಕೋಮು ಪ್ರಚೋದಿತ ಘಟನೆಗಳಿಗೆ ತಡೆ ಹಾಕಬೇಕಾಗಿರುವ ಕಾನೂನು ಸುವ್ಯವಸ್ಥೆ ರಕ್ಷಕರೇ ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದು ಜನ ಪ್ರಶ್ನೆ ಮಾಡುವಂತಾಗಿದೆ.
ಪ್ರಧಾನ ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.