ಮನುಷ್ಯನಂತೆ ಕನಸು ಕಾಣುವ ಕುದುರೆ! : (ಪ್ರಾಣಿ ಜಗತ್ತು – 19)

(www.vknews.com) : ಸಾಕುಮೃಗಗಳ ಪೈಕಿ ಬಹಳ ಘನತೆ, ಹೆಮ್ಮೆ ಮತ್ತು ಗೌರವವಿರುವ ಒಂದು ಆಡಂಬರ ಪ್ರಾಣಿಯಾಗಿದೆ ಕುದುರೆ.

▪ ಪವಿತ್ರ ಕುರ್‌ಆನಿನಲ್ಲಿ ಈ ಪ್ರಾಣಿಯ ಬಗ್ಗೆ ಹಲವಾರು ಕಡೆ ಉಲ್ಲೇಖವಿದೆ. ಅಲ್ಲದೆ ಅಲ್ಲಾಹನು ಇದರ ಹೆಸರೇಳಿ ಆಣೆ ಹಾಕಿದ ಅಧ್ಯಾಯ (ಸೂರಃ) ಕೂಡ ಪವಿತ್ರ ಕುರ್‌ಆನಿನಲ್ಲಿದೆ. ಮಾತ್ರವಲ್ಲ ಈ ಮೃಗದ ಮಹತ್ವವನ್ನು ಎತ್ತಿ ಹೇಳಿ ಡಝನುಗಟ್ಟಳೆ ಸಹೀಹಾದ ಪ್ರವಾದಿ ಹದೀಸುಗಳು ವರದಿಯಾಗಿದೆ. ಒಟ್ಟಿನಲ್ಲಿ ಕುದುರೆಯನ್ನು ಇತರ ಮೃಗಗಳಿಗೆ ಹೋಲಿಸಿದರೆ ಕುದುರೆಗಿರುವ ಸ್ಥಾನಮಾನ, ಘನತೆ ಮತ್ತು ಗೌರವ ಇತರ ಮೃಗಗಳಿಗೆ ಇಲ್ಲ.

▪ ಮನುಷ್ಯನನ್ನು ಹೊರತುಪಡಿಸಿ ಪ್ರಾಣಿಗಳಲ್ಲಿ ಇಷ್ಟೊಂದು ಚೆಲುವಾದ ಸುಂದರ ಜೀವಿ ಬೇರೊಂದಿಲ್ಲ ಎಂದು ಹಿಜ್‌ರಾ ಏಳನೆಯ ಶತಮಾನದ ಪ್ರಸಿದ್ಧ ಪಂಡಿತ ಇಮಾಮ್ ಖಝ್‌ವೀನಿಯವರು ಅಭಿಪ್ರಾಯ ಪಟ್ಟಿದ್ದಾರೆ.

▪ ಗಂಡು ಹೆಣ್ಣು ಪರಸ್ಪರ ನಾಲ್ಕು ವರ್ಷ ಪ್ರಾಯವಾಗುವಾಗಲೇ ಲೈಂಗಿಕ ಚಟುವಟಿಕೆಯಲ್ಲಿ ತೊಡಗುತ್ತದೆ. ಗರ್ಭಧಾರಣೆಯಾಗಿ ಹನ್ನೊಂದು – ಹನ್ನೆರಡು ತಿಂಗಳಾಗುವಾಗ ಮರಿ ಹಾಕುತ್ತದೆ. ಬರೇ ಒಂದೇ ಒಂದು ಮರಿ ಮಾತ್ರ.

▪ ಕುದುರೆಯು ಸುಮಾರು ನಲುವತ್ತರಿಂದ ಐವತ್ತು ವರ್ಷಗಳ ತನಕ ಬದುಕುತ್ತದೆ. ಕೆಲವೊಂದು ಕುದುರೆಗಳು ಸುಮಾರು ತೊಂಬತ್ತು ವರ್ಷಗಳ ತನಕವೂ ಬದುಕುವುದಿದೆ.

▪ ಕುದುರೆಗೆ ಆಯಾಸ, ದಣಿವು, ನಿತ್ರಾಣ, ಬಳಲಿಕೆ ಎಂಬುದು ಇಲ್ಲವೇ ಇಲ್ಲ. ಯಾವಾಗಲೂ ಬಹಳ ಉತ್ಸಾಹ, ಹುರುಪು ಮತ್ತು ಹುಮ್ಮಸ್ಸಿನಲ್ಲೇ ಇರುತ್ತದೆ. ಎಷ್ಟೋ ಗಂಟೆಗಟ್ಟಲೆ ನೂರಾರು ಕಿಲೋಮೀಟರ್ ಓಡಿದರೂ ಇದಕ್ಕೆ ಯಾವುದೇ ಆಯಾಸವಾಗುವುದಿಲ್ಲ. ಹೃದಯ ಬಡಿತದಲ್ಲೂ ಯಾವುದೇ ಬದಲಾವಣೆಯಾಗುವುದಿಲ್ಲ. ಮಾತ್ರವಲ್ಲ ಈ ಉತ್ಸಾಹಿ ಪ್ರಾಣಿ ಯಾವಾಗಲೂ ನಿಂತುಕೊಂಡೇ ಇರುತ್ತದೆ. ಕುಳಿತು ಕೊಳ್ಳುವುದು ಮತ್ತು ಮಲಗುವುದು ಎಂಬ ಅಭ್ಯಾಸವೇ ಇದಕ್ಕಿಲ್ಲ. ಕೆಲವು ಅಪೂರ್ವ ಸಂದರ್ಭಗಳಲ್ಲಿ ಮಾತ್ರ ಮಲಗುತ್ತದೆ. ಅದೂ ಬಹಳ ವಿರಳ. ಮಲಗಿದರೆ ಶಾರೀರಿಕವಾಗಿ ಏನೋ ತೊಂದರೆಯಿದೆಯೆಂದು ಎಣಿಸಲಾಗುತ್ತದೆ. ಹಾಗೆಯೇ ಇದಕ್ಕೆ ನಿದ್ರೆ ಎಂಬುದು ಬಹಳ ಕಡಿಮೆ. ಒಂದು ದಿನದಲ್ಲಿ ಸುಮಾರು ಒಂದೆರಡು ಗಂಟೆಗಳ ನಿದ್ರೆ ಸಾಕು. ಗಮನಾರ್ಹವೆಂದರೆ, ನಿದ್ರೆ ಮಾಡುವುದು ಕೂಡ ಮಲಗಿಯಲ್ಲ. ಅದೂ ಕೂಡ ನಿಂತುಕೊಂಡೇ ಆಗಿರುತ್ತದೆ. ಕೆಲವೊಮ್ಮೆ ಮಾತ್ರ ಗೋಡೆ, ಮರ ಇತ್ಯಾದಿಗಳಿಗೆ ಒರಗಿಯಾಗಿರುತ್ತದೆ ನಿದ್ದೆ. ಅದೂ ಬಹಳ ಅಪರೂಪ.

▪ ಈ ಪ್ರಾಣಿಯನ್ನು ಪ್ರಪ್ರಥಮವಾಗಿ ಈ ಜಗತ್ತಿನಲ್ಲಿ ಸವಾರಿಗೆ ಬಳಸಿದ್ದು ಹಝ್ರತ್ ಇಸ್ಮಾಯೀಲ್ (ಅ) ಆಗಿತ್ತೆಂದು ಇತಿಹಾಸ ಗ್ರಂಥಗಳು ಹೇಳುತ್ತದೆ. ಅದಕ್ಕಿಂತ ಮೊದಲು ಇದು ಕಾಡಿನಲ್ಲಿ ವನ್ಯ ಜೀವಿಯಾಗಿತ್ತು. ಮಾತ್ರವಲ್ಲ ಕಾಡಿನಲ್ಲಿ ಸಿಂಹ ಹುಲಿಗಳಂತಹಾ ಕ್ರೂರ ಮೃಗಗಳೂ ಕೂಡ ಈ ಕುದುರೆಯನ್ನು ಕಂಡರೆ ಹೆದರಿ ಓಡಿ ಹೋಗುತ್ತಿತ್ತು.

▪ ಹಝ್ರತ್ ನೂಹ್ (ಅ) ರವರ ಕಾಲದಲ್ಲಿ ಉಂಟಾದ ನೆರೆಪ್ರವಾಹದಲ್ಲಿ ಸಂಪೂರ್ಣವಾಗಿ ದ್ವಂಸವಾದ ಪವಿತ್ರ ಕ‌ಅಬಾಲಯವನ್ನು ಪುನರ್ನಿರ್ಮಾಣ ಮಾಡಲು ತಂದೆಯಾದ ಖಲೀಲುಲ್ಲಾಹಿ ಹಝ್ರತ್ ಇಬ್ರಾಹಿಮ್ (ಅ) ಮತ್ತು ಪುತ್ರನಾದ ಹಝ್ರತ್ ಇಸ್ಮಾಯೀಲ್ (ಅ) ರವರಿಗೆ ಅಲ್ಲಾಹನಿಂದ ಅಪ್ಪಣೆ ದೊರೆಯಿತು. ನಂತರ ಹಝ್ರತ್ ಇಸ್ಮಾಯೀಲ್ (ಅ) ರವರಲ್ಲಿ ಮಕ್ಕಾ ಪಟ್ಟಣದ ಹತ್ತಿರದ ಒಂದು ಬೆಟ್ಟ ಪ್ರದೇಶ ಸ್ಥಳವಾದ ಅಜ್‌ಯಾದ್ ಎಂಬಲ್ಲಿಗೆ ಹೋಗಿ ಅಲ್ಲಿ ಅಲ್ಲಾಹನು ಸಂದೇಶವಾಗಿ ಕಲಿಸಿಕೊಟ್ಟ ಪ್ರಾರ್ಥನೆಯನ್ನು ಪ್ರಾರ್ಥಿಸಲು, (ದುಆ ಮಾಡಲು) ಹಾಗೆಯೇ ಆ ಪ್ರಾರ್ಥನೆಯನ್ನು ಪ್ರಾರ್ಥಿಸಿದರೆ ನಿಮ್ಮನ್ನು ಹುಡುಕಿ ನಾನು ಈ ತನಕ ಅಡಗಿಸಿಟ್ಟ ಒಂದು ನಿಧಿ ನಿಮ್ಮನ್ನು ಹುಡುಕಿ ಬರಲಿದೆಯೆಂದು ಅಲ್ಲಾಹನು ತಿಳಿಸಿದನು.

▪ ನಂತರ ಆ ಹೇಳಲ್ಪಟ್ಟ ಅಜ್‌ಯಾದ್ ಎಂಬ ಜಾಗ ತಲುಪಿ ಕಲಿಸಿಕೊಟ್ಟ ಪ್ರಾರ್ಥನೆಯನ್ನು ಪ್ರಾರ್ಥಿಸಿದಾಗ ಹತ್ತಿರದ ಕಾಡುಗಳಿಂದ ಆ ಶಬ್ದ ಕೇಳಿದ ವನ್ಯಮೃಗವಾಗಿದ್ದ ಎಲ್ಲಾ ಕುದುರೆಗಳು ಅವರತ್ತ ಓಡಿ ಬಂದು ಸಂಪೂರ್ಣವಾಗಿ ವಿಧೇಯವಾಯಿತು. ನಂತರ ಅವರು ತನಗೆ ಒಂದು ವಾಹನವೆಂಬಂತೆ ಅದರ ಬೆನ್ನ ಮೇಲೆ ಕುಳಿತು ಸಂಚಾರ ಮತ್ತು ಸವಾರಿ ಮಾಡಲು ಆರಂಭಿಸಿದರು. ಅವರು ಕುಳಿತ ಬರಕತಿನಿಂದ ಆ ಬಳಿಕ ಈ ಕ್ರೂರ ಮೃಗ ಮನುಷ್ಯನಿಗೆ ಅಧೀನ ಮೃಗವಾಗಿ ಮಾರ್ಪಟ್ಟಿತು.

▪ “ನೀವು ಕುದುರೆ ಸವಾರಿ ಮಾಡಿರಿ. ಯಾಕೆಂದರೆ ಅದು ನಿಮ್ಮ ಪಿತ ಹಝ್ರತ್ ಇಸ್ಮಾಯೀಲ್ (ಅ) ರವರಿಂದ ಪಿತ್ರಾರ್ಜಿತವಾಗಿ ದೊರೆತದ್ದಾಗಿದೆ” ಎಂಬ ಪ್ರವಾದಿ ಮುಹಮ್ಮದ್ (ಸ) ರು ಹೇಳಿದ ಪವಿತ್ರ ಹದೀಸ್ ಈ ಘಟನೆಯ ವಾಸ್ತವಿಕತೆಯನ್ನು ಮತ್ತೂ ದೃಢೀಕರಿಸುತ್ತದೆ. ಅದರ ನಂತರ ಹಝ್ರತ್ ಸುಲೈಮಾನ್ (ಅ) ರವರು ಕೂಡ ಸಂಚಾರ ಮಾಡಲು ಕುದುರೆಯನ್ನು ಬಳಸಿದ್ದರು. ಮಾತ್ರವಲ್ಲ ಅವರ ರಾಜ ದರ್ಬಾರಿನಲ್ಲಿ ತನ್ನ ತಂದೆಯಾದ ಹಝ್ರತ್ ದಾವೂದ್ (ಅ) ರವರಿಂದ ಪಿತ್ರಾರ್ಜಿತವಾಗಿ ದೊರೆತ ಸುಮಾರು ಇಪ್ಪತ್ತು ಸಾವಿರಕ್ಕಿಂತಲೂ ಹೆಚ್ಚು ಆಡಂಬರ ಕುದುರೆಗಳಿದ್ದವು. ಚಕ್ರವರ್ತಿಯಾಗಿದ್ದ ಹಝ್ರತ್ ಸುಲೈಮಾನ್ (ಅ) ರಿಗೆ ಕುದುರೆಯಲ್ಲಿ ಎಲ್ಲಿಲ್ಲದ ಪ್ರೀತಿಯಾಗಿತ್ತು. ಕುದುರೆಯ ಬೆನ್ನು , ಹಣೆಯನ್ನು ಸವರುವುದು, ಅದರಲ್ಲಿ ಕುಳಿತು ಯುದ್ಧ ಮಾಡುವುದು, ಅದನ್ನು ಪರಿಪಾಲನೆ ಮಾಡುವುದು ಇತ್ಯಾದಿ ವಿಷಯಗಳಲ್ಲಿ ಅವರಿಗೆ ಬಹಳ ಆಸಕ್ತಿಯಾಗಿತ್ತು.

▪ ಒಂದು ದಿನ ಸಾಯಂಕಾಲ ತನ್ನ ರಾಜ ದರ್ಬಾರಿನ ಎದುರಿನ ಅಂಗಳದಲ್ಲಿ ಈ ಸಾವಿರಾರು ಕುದುರೆಗಳ ಜಿಗಿಯುವಿಕೆ ಮತ್ತು ಅದರ ಇತರ ಸುಂದರ ಚಲನವಲನಗಳನ್ನು ಕಂಡು ಅಲ್ಲೇ ಮಂಕಾಗಿ ಅವರಿಗೆ ಅಸರು ನಮಾಝ್ ಮಾಡಲು ನೆನಪಿಲ್ಲದೆ ಮರೆತು ಖಲಾ ಆಯಿತು. ಅಲ್ಲಾಹನ ಸ್ಮರಣೆಗೆ ಅಥವಾ ನಮಾಝ್‌ ಖಲಾ ಆಗಲು ಅಡ್ಡಿಯಾದ ಈ ಕುದುರೆಗಳಲ್ಲಿ ಕುಪಿತರಾಗಿ ನಂತರ ಅವುಗಳನ್ನೆಲ್ಲಾ ದ್ಸಬಹ್ ಮಾಡಿ ದಾನಮಾಡಿದರೆಂದು ಪವಿತ್ರ ಕುರ್‌ಆನಿನ “ಅಲ್ ಸ್ವಾದ್” ಅದ್ಯಾಯದಲ್ಲಿ ಈ ವಿಷಯವಾಗಿ ಬಂದ ಮೂವತ್ತ ಒಂದನೇ ಸೂಕ್ತದ ತಫ್‌ಸೀರಿನಲ್ಲಿ ಹಲವಾರು ವ್ಯಾಖ್ಯಾನಗಾರರು ಅಭಿಪ್ರಾಯ ಪಟ್ಟಿದ್ದಾರೆ.

▪ ಕುದುರೆ ಎರಡು ತರ. ಒಂದು ಬಹಳ ಬೆಲೆಬಾಳುವ ಆಡಂಬರ ಕುದುರೆ. ಅರೇಬಿಯನ್ ಕುದುರೆ (ARABIAN HORSE) ಎಂದು ಕರೆಯಲ್ಪಡುವ ಈ ಜಾತಿಯ ಕುದುರೆಯಲ್ಲಾಗಿರುತ್ತದೆ ರಾಜ, ಅರಸ ಅಂತೆಯೇ ಉನ್ನತ ಮನೆತನದವರು ಸಂಚಾರ ಮಾಡುತ್ತಿರುವುದು. ಪ್ರಾಚೀನ ಕಾಲದಲ್ಲಿ ನಡೆದ ಯುದ್ದದಲ್ಲೂ ಇದೇ ಕುದುರೆಯ ಅಂತೆಯೇ ಇಂದು ಅರಬೀ ರಾಷ್ಟ್ರದ ಅಧಿಕಾರಿಗಳ ರಾಜ ದರ್ಬಾರಿನಲ್ಲಿ ಅಂತೆಯೇ ಇತರ ರಾಷ್ಟ್ರದ ಅಧಿಕಾರಿ ವರ್ಗದಲ್ಲಿ ಕಾಣಲ್ಪಡುವ ಕುದುರೆಯೂ ಇದೇ ಆಗಿದೆ.

▪ ಮತ್ತೊಂದು ಚಾಕರಿ ಕುದುರೆ. (WORKHORSE) ಈ ಜಾತಿಯ ಕುದುರೆಯಾಗಿರುತ್ತದೆ ಇಂದು ನಮ್ಮ ದೇಶದ ಅಂತೆಯೇ ಇತರ ಕೆಲವು ದೇಶಗಳ ಕೆಲವು ಪುರಾತನ ಪಟ್ಟಣಗಳಲ್ಲಿ ಸರಂಜಾಮು ಸಾಗಿಸಲು ಅಂತೆಯೇ ಯಾತ್ರಿಕರನ್ನು ಕೊಂಡೊಯ್ಯಲು ವಾಹನದಂತೆ ಬಳಸುತ್ತಿರುವುದು. ಈ ಚಾಕರಿ ಕುದುರೆಗೆ ಅರೇಬಿಯನ್ ಕುದುರೆಯಂತೆ ಓಡುವ ತಾಕತ್ತು ಇಲ್ಲ. ಆದರೆ ಸರಂಜಾಮು ಸಾಗಾಟದಲ್ಲಿ ಇದುವೇ ಮೇಲುಗೈ.

▪ ಒಳ್ಳೆಯ ತರಬೇತಿ ದೊರೆತ ಅರೇಬಿಯನ್ ಕುದುರೆಗಳು ಅದರ ಮಾಲಿಕ ಅದರ ಮೇಲೆ ಸವಾರಿ ಮಾಡುತ್ತಿರುವ ವೇಳೆ ಯಾವತ್ತೂ ಅದು ಮಾಲಿಕನಿಗೆ ತೊಂದರೆ ಆಗುವುದರಿಂದ ಮಲ ಮೂತ್ರ ವಿಸರ್ಜನೆ ಮಾಡದು. ತನ್ನ ಮಾಲಿಕ ತನ್ನ ಬೆನ್ನಿನಿಂದ ಇಳಿಯುವ ತನಕ ಕಾಯುತ್ತದೆ. ಮಾತ್ರವಲ್ಲ ತನ್ನ ಯಜಮಾನನಲ್ಲದ ಬೇರೆ ಯಾವೊಬ್ಬನನ್ನೂ ತನ್ನ ಬೆನ್ನ ಮೇಲೆ ಕೂರಲು ಅನುಮತಿ ಕೂಡ ನೀಡದು. ಅಂತೆಯೇ ತನ್ನ ಯಜಮಾನನಲ್ಲಿ ಯಾವಾಗಲೂ ಬಹಳ ಗೌರವ ಮತ್ತು ಪ್ರೀತಿಯಿಂದ ವರ್ತಿಸುತ್ತದೆ.

▪ ಕುದುರೆಯು ಯಾವತ್ತೂ ಬೇರೆ ಕುದುರೆಯೊಂದು ತಿಂದು ಬಾಕಿ ಬಿಟ್ಟ ಪಾತ್ರೆಗೆ ಬಾಯಿ ಹಾಕದು. ಇನ್ನೊಂದು ಕುದುರೆ ತಿನ್ನುತ್ತಿರುವ ಪಾತ್ರೆಯತ್ತ ತಿರುಗಿ ನೋಡದು. ಆ ವಿಷಯದಲ್ಲಿ ತನ್ನ ಘನತೆ ಮತ್ತು ವರ್ಚಸ್ಸಿಗೆ ಕೊರತೆ ಬಾರದಂತೆ ಸದಾ ಕಾಪಾಡುತ್ತದೆ.

▪ ಈ ಮೃಗದ ಕೆಲವು ಅದ್ಭುತ ವಿಸ್ಮಯಗಳನ್ನು ಗತಕಾಲದ ಉಲಮಾಗಳು ಅವರವರ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಮನುಷ್ಯನಂತೆ ಇದು ನಿದ್ದೆಯಲ್ಲಿ ಕನಸು ಕಾಣುತ್ತದೆ ಎಂದು ಹಿಜ್‌ರಾ ಎರಡನೇ ಶತಮಾನದ ಖ್ಯಾತ ಪಂಡಿತ, ಚಿಂತಕ ಅಂತೆಯೇ ಸರಿಸಾಟಿಯಿಲ್ಲದ ಬರಹಗಾರ ಅಮ್‌ರ್ ಬಿನ್ ಅಲ್ ಬಹ್‌ರ್ ಅಲ್ ಜಾಹಿಳ್ ಹೇಳಿದ್ದಾರೆ. ಹಾಗೆಯೇ ಇದರ ಬೇರೊಂದು ವಿಷೇಶತೆಯೆಂದರೆ, ತೋಳ ನಡೆದ ಅಂದರೆ ತೋಳದ ಪಾದಸ್ಪರ್ಶವಾದ ಸ್ಥಳವನ್ನು ಇದರ ಪಾದ ಸ್ಪರ್ಶವಾದ ಕೂಡಲೇ ಕಾಲಿಗೆ ನಡುಕ ಉಂಟಾಗಿ ಕೂಡಲೇ ನಡೆಯಲಾಗದೆ ಮರಗಟ್ಟಿ ಹೋಗುತ್ತದೆ. ಮಾತ್ರವಲ್ಲ ಇದರ ಶರೀರದಿಂದ ಯಥೇಚ್ಛವಾಗಿ ಹೊಗೆ ಹೊರಬರುತ್ತದೆ. ಸುಬ್‌ಹಾನಲ್ಲಾಹ್.! ಇದೆಂತಹಾ ನಾವರಿಯದ ಅಚ್ಚರಿ ಮತ್ತು ವಿಸ್ಮಯಗಳು…?

▪ ಇದರ ಬೇರೊಂದು ವಿಷೇಶತೆಯೆಂದರೆ, ಒಂದು ಹಟ್ಟಿಯಲ್ಲಿ ಹಲವಾರು ತಾಯಿ ಕುದುರೆಗಳು ಮತ್ತು ಅವುಗಳ ಮರಿಗಳಿದ್ದು ಅಕಸ್ಮಾತ್ ಒಂದು ತಾಯಿ ಕುದುರೆ ಸತ್ತು ಹೋದರೆ ಅಥವಾ ಕಾಣೆಯಾದರೆ ಈ ಅನಾಥ ಮರಿಗೆ ಅಲ್ಲಿರುವ ಇತರ ಯಾವುದಾದರೊಂದು ತಾಯಿಯು ಮೊಲೆಯುಣಿಸುತ್ತದೆ. ಈವೊಂದು ಸಾಮರಸ್ಯ ಮನೋಭಾವ ಇತರ ಪ್ರಾಣಿಗಳಲ್ಲಿ ಬಹಳ ವಿರಳ.

▪ “ಒಂಟೆ ಮನೆಗೆ ಗೌರವವೂ ಆಡು ಬರಕತೂ ಕುದುರೆ ಐಶ್ವರ್ಯವೂ ಆಗಿದೆ” ಎಂದು ಪ್ರವಾದಿ ಮುಹಮ್ಮದ್ (ಸ) ಹೇಳಿರುತ್ತಾರೆ.

▪ ಕುದುರೆ ತನ್ನ ಒಡೆತನದಲ್ಲಿ ತನ್ನ ಮನೆಯ ಹಟ್ಟಿಯಲ್ಲಿರುವುದು ಆ ಮನೆಗೆ ಅಲಂಕಾರವಾಗಿದೆ ಎಂದು ಪವಿತ್ರ ಇಸ್ಲಾಂ ಹೇಳುತ್ತದೆ. ಪವಿತ್ರ ಖುರ್‌ಆನಿನ ಅಲ್‌ನಹ್‌ಲ್ ಎಂಬ ಅಧ್ಯಾಯದಲ್ಲಿ “ಕುದುರೆ ನಿಮಗೆ ಸಂಚಾರ ಮಾಡಲು ಮತ್ತು ಅಲಂಕಾರ ವಸ್ತುವಾಗಿ ಅಲ್ಲಾಹನು ಸೃಷ್ಟಿಸಿದ್ದಾನೆ” ಎಂಬ ಸೂಕ್ತ ಇದರ ಮಹತ್ವವನ್ನು ಎತ್ತಿ ತೋರಿಸುತ್ತದೆ. ಇಸ್ಲಾಮಿನ ಮೂರನೇ ಖಲೀಫಾ ಹಝ್ರತ್ ಉಸ್ಮಾನ್ (ರ) ರವರ ಅಧೀನದಲ್ಲಿದ್ದ ಒಂದು ಕುದುರೆಯನ್ನು ಸಹಾಬಿಗಳಲ್ಲಿ ಶ್ರೀಮಂತ ವ್ಯಕ್ತಿಯಾಗಿದ್ದ ಸಹಾಬೀಶ್ರೇಷ್ಠ ಹಝ್ರತ್ ಅಬ್ದುಲ್‌ ರಹ್ಮಾನ್ ಬಿನ್ ಅವ್‌ಫ್ (ರ) ರವರು ಅಂದಿನ ನಲುವತ್ತು ಸಾವಿರ ರೂಪಾಯಿಗೆ ಖರೀದಿ ಮಾಡಿದ್ದರು.! ಅಂದು ಅರಬಿಗಳಾದ ಆ ಸಹಾಬಿಗಳಿಗೆ ಕುದುರೆಯಲ್ಲಿದ್ದ ಗೌರವ ಮತ್ತು ಪ್ರೀತಿಯ ಛಾಯೆ ನಾವಿಂದು ಇಂದಿನ ಅರಬಿ ವಂಶಜರಲ್ಲಿ ಕಾಣುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಕುದುರೆಗೆ ಇಂದೂ ಲಕ್ಷಾಂತರ ರೂಪಾಯಿ ಬೆಲೆಯಿದೆ ಎಂದು ಓದುಗರು ಸಾಂದರ್ಭಿಕವಾಗಿ ತಿಳಿಯಬೇಕಾಗಿದೆ.

▪ ಮನುಷ್ಯ ಪಿತಾ ಹಝ್ರತ್ ಅದಮ್ (ಅ) ರವರನ್ನು ಸೃಷ್ಟಿಸುವುದಕ್ಕಿಂತ ಮೊದಲೇ ಇತರ ಎಲ್ಲಾ ವಸ್ತುಗಳನ್ನು ಸೃಷ್ಟಿಸಲಾಗಿತ್ತು. ಕುದುರೆಯನ್ನು ಅವರ ಸೃಷ್ಟಿಗೆ ಎರಡು ದಿನ ಮೊದಲು ಸೃಷ್ಟಿಸಿದ್ದೆಂದು ಕೆಲವು ಚರಿತ್ರೆ ಗ್ರಂಥಗಳಲ್ಲಿ ಕಂಡುಬರುತ್ತದೆ. ಆದಮ್ (ಅ) ರನ್ನು ಸೃಷ್ಟಿಸಿದ ನಂತರ ಅವರ ಎದುರಿನಲ್ಲಿ ಪ್ರಪಂಚದಲ್ಲಿ ಅಂತ್ಯ ದಿನದ ವರೆಗೆ ಉತ್ಪಾದನೆಯಾಗುವ ಎಲ್ಲಾ ಜೀವವಿರುವ ಅಂತೆಯೇ ಎಲ್ಲಾ ಜಡ ವಸ್ತುಗಳನ್ನು ಪ್ರದರ್ಶಿಸಿ ಇದರಲ್ಲಿ ನಿಮಗೆ ಬಹಳ ಇಷ್ಟವಾದದ್ದು ಅಂದರೆ ನಿಮಗೆ ಬಹಳ ಮೆಚ್ಚುಗೆ ಆದದ್ದು ಯಾವುದೆಂದು ಕೇಳಿದಾಗ ಕುದುರೆಗೆ ಸನ್ನೆ ಮಾಡಿದ್ದರೆಂದು ಇತಿಹಾಸ ಗ್ರಂಥಗಳಲ್ಲಿ ಉಲಮಾಗಳು ಉಲ್ಲೇಖಿಸಿದ್ದಾರೆ ಎಂದಾದರೆ ಕುದುರೆಗಿರುವ ಸ್ಥಾನಮಾನ ಎಷ್ಟೆಂದು ಊಹಿಸಬಹುದು.

▪ “ನೀವು ನಿಮ್ಮ ಮಕ್ಕಳಿಗೆ ಈಜುವಿದ್ಯೆ, ಬಿಲ್ಲುವಿದ್ಯೆ, ಅಂತೆಯೇ ಕುದರೆ ಸವಾರಿಯನ್ನು ಅವರ ಪುಟ್ಟ ವಯಸ್ಸಿನಲ್ಲೇ ಕಲಿಸಿ ಅಭ್ಯಾಸ ಮಾಡಿಕೊಡಿ ಎಂದು ಹಝ್ರತ್ ಉಮರ್ (ರ) ಹೇಳಿದ ಮಾತು ಕುದುರೆ ಸವಾರಿಗಿರುವ ಮಹತ್ವವನ್ನು ಎತ್ತಿ ತೋರಿಸುತ್ತದೆ.

– ಮುಂದುವರಿಯುವುದು

ಪ್ರಾಣಿ ಜಗತ್ತು ಹಿಂದಿನ ಭಾಗಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ …

✒ ಯೂಸುಫ್ ನಬ್‌ಹಾನಿ ಕುಕ್ಕಾಜೆ.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...