وَمَنْ أَحْيَاهَا فَكَأَنَّمَا أَحْيَا النَّاسَ جَمِيعًا (ಅಲ್ ಮಾಇದಾ :32)
(www.vknews.com) : ಒಬ್ಬ ವ್ಯಕ್ತಿಯ ಜೀವವನ್ನು ಯಾರಾದರೂ ಉಳಿಸಿದರೆ ಅದು ಸಂಪೂರ್ಣ ಮನುಷ್ಯಕುಲದ ಜೀವವನ್ನು ಉಳಿಸಿರುವುದಕ್ಕೆ ಸಮಾನವಾಗಿದೆ.
ನಿನ್ನೆ ಮಧ್ಯಾಹ್ನದ ಸಮಯ 12 05 ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಿಂದ Kmcc ಸಂಸ್ಥೆ ಗೆ ಸೇರಿದ ಅ್ಯಂಬುಲೆನ್ಸು ಶರವೇಗದಲ್ಲಿ ಹೊರಡುತ್ತದೆ. ನಲವತ್ತು ದಿನ ಮಾತ್ರ ಪ್ರಾಯವಿರುವ ಮಗುವಿನ ದೇಹದ ಯಾವುದೋ ಮೂಲೆಯಲ್ಲಿ ನೇತಾಡುತ್ತಿರುವ ಪ್ರಾಣವನ್ನು ಉಳಿಸಿಕೊಳ್ಳಲು ಬೆಂಗಳೂರಿಗೆ ಧಾವಿಸುತ್ತದೆ. ಸುದ್ಧಿ ತಿಳಿದ ಜನ ಜಾಗ್ರತರಾಗುತ್ತಾರೆ.ಝೀರೋ ಟ್ರಾಫಿಕ್ ಕೂಡಾ ಸಿದ್ಧವಾಗುತ್ತದೆ ಅಸಂಖ್ಯಾತ ಮಂದಿ ದಿನದ ಕೆಲಸ ಬಿಟ್ಟು ಕಾರ್ಯನಿರತರಾಗುತ್ತಾರೆ.
ಮಂಗಳೂರಿನಿಂದ ಹೊರಟು ಬಿಸಿ.ರೋಡ್, ಕಲ್ಲಡ್ಕ, ಉಪ್ಪಿನಂಗಡಿ, ನೆಲ್ಯಾಡಿ, ಸಕಲೇಶಪುರ, ಹಾಸನ, ನೆಲಮಂಗಲ ಮಾರ್ಗವಾಗಿ ಬೆಂಗಳೂರಿಗೆ ಐದು ಗಂಟೆಯೊಳಗೆ ತಲುಪಬೇಕಾದ ಸಂದಿಗ್ಧ ಪರಿಸ್ಥಿತಿ. ಉಸಿರು ಬಿಗಿ ಹಿಡಿದು ಸಾಗಬೇಕಾದ ದೊಡ್ಡ ಸಾಹಸದ ಕೆಲಸ.ಆದರೂ ಎದೆಗುಂದದೆ ಮುಂದೆ ಬಂದು ಒಬ್ಬ ಸೈನಿಕನಂತೆ ನಿಂತು ಕೆಲಸವನ್ನು ಕರಾರುವಾಕ್ಕಾಗಿ ಮಾಡಿ ಮುಗಿಸಿದ. ಆತನೇ ನಿನ್ನೆಯ ದಿನದ ಹೀರೋ ಟ್ಯಾಕ್ಸಿ ಡ್ರೈವರ್ ಆಗಿದ್ದ ಹನೀಫ.
ಈ ಯುವಕ ಈ ಹಿಂದೆ ಹೃದಯ ಜೋಡಿಸುವ ಶಸ್ತ್ರಕ್ರಿಯೆ ಗಾಗಿ ಹತ್ತು ವರ್ಷ ವಯಸ್ಸಿನ ಬಾಲಕನನ್ನು ಬೆಂಗಳೂರಿನ ನಾರಾಯಾಣ ಆಸ್ಪತ್ರೆ ಯಿಂದ ಕ್ಯಾಲಿಕಟ್ ಮೆಟ್ರೋ ಆಸ್ಪತ್ರೆಗೆ ಕೇವಲ ನಾಲ್ಕು ಗಂಟೆಯೊಳಗೆ ತಲುಪಿಸಿದ ಕೀರ್ತಿಯೂ ಇದೆ.(ಆ ಮಗು ಈಗ ಆರೋಗ್ಯವಾಗಿದೆ.)
ಅತ್ಯಂತ ಕುತೂಹಲ ಕೆರಳಿಸಿದ ದಶ ಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮ ಕೂಡಾ ಈ ಡ್ರೈವರನ ಸಾಹಸ ದ ಮುಂದೆ ಮಂಕಾಗಿ ಹೋಯಿತು.ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಹೇಳುವುದಾದರೆ ನಿನ್ನೆ ಯ ದಿನ ಸಂಪುಟ ವಿಸ್ತರಣೆ ಯು ಜನರಿಗೆ ಆಸಕ್ತಿ ಇರುವ ಸಂಗತಿಯೇ ಆಗಿರಲಿಲ್ಲ. ಜನರಲ್ಲಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಚಾರ ಇದೇ ಸಾಹಸದ ವಿಷಯವೇ ಆಗಿತ್ತು.ಮಾದ್ಯಮ ಗಳಂತು ಪಬ್ಲಿಕ್ ಹೀರೋ ಆಗಿ ಡ್ರೈವರ್ ಹನೀಫ ನನ್ನು ಕೊಂಡಾಡಿತು.ಊರಿಗೆ ಊರೇ ಜಾತಿ ಮತ ಭೇದ ಗಳ ಮೀರಿ ಜೀವ ರಕ್ಷಣೆ ಯ ವಿಷಯದಲ್ಲಿ ಒಂದಾಗಿ ನಿಂತು ಪ್ರಾರ್ಥಿಸಿತು.ಯಾರಿಗೂ ಅದು ಯಾವ ಜಾತಿಯ ಮಗು? ಯಾರ ಮಗು ಎಂದು ಹೊಳೆಯಲೇ ಇಲ್ಲ.ನೆಲ ಮಂಗಲ ದ ನಂತರ ಸ್ವಲ್ಪ ಮಟ್ಟಿಗೆ ತೊಂದರೆಯಾದರೂ ಸಂಜೆ 4:15 ಆಗುವಷ್ಟರಲ್ಲಿ ಮಗು ಆಸ್ಪತ್ರೆ ಸೇರಿದೆ.
ಆ ಮಗು ಪ್ರಾಣವನ್ನು ಉಳಿಸಿಕೊಂಡು ಮರಳುತ್ತದೋ ಇಲ್ಲವೋ ಎಂಬುದರ ಕುರಿತು ಮಾಹಿತಿ ನಮ್ಮ ಯಾರ ಕೈಯಲ್ಲೂ ಇಲ್ಲ.ನಮ್ಮಲ್ಲಿ ಉಳಿದಿರುವುದು ಆ ಮಗುವನ್ನು ಉಳಿಸಿಕೊಡು ಅಲ್ಲಾಹನೇ ಎಂಬ ಪ್ರಾರ್ಥನೆ ಮಾತ್ರ.ಆದರೆ ಈ ಒಂದು ಹೃದಯ ವೈಶಾಲ್ಯತೆಯ ಅಧ್ಯಾಯ ಮಾತ್ರ ಕಾಲಕಾಲಕ್ಕೆ ಜೀವಂತವಾಗಿರುತ್ತದೆ.ಮಗುವನ್ನು ಹೊತ್ತೊಯ್ಯುತ್ತಿರುವ ಅ್ಯಂಬುಲೆನ್ಸ್ ಕಂಡ ಕೂಡಲೇ ರಸ್ತೆ ಯ ಇಕ್ಕೆಲಗಳಲ್ಲಿ ನಿಂತಿರುವ ಜನ ರಾಷ್ಟ್ರದ ಪ್ರಧಾನ ಮಂತ್ರಿ ಯ ವಾಹನಕ್ಕಿಂತ ಹೆಚ್ಚಿನ ಮಹತ್ವ ವನ್ನು ಕೊಟ್ಟರು.ಮುಂದೆ ಸಾಗಿದಾಗ ಕೈಗಳನ್ನು ಎತ್ತಿ ಹಾರೈಸಿ ಪ್ರಾರ್ಥನೆ ಮಾಡಿದರು.ಎಲ್ಲರ ಮನಗಳಲ್ಲೂ ಇದ್ದದ್ದು ಒಂದು ಹಸುಳೆಯ ಜೀವದ ಬಗ್ಗೆ ಕಾಳಜಿ ಮಾತ್ರ. ಈ ಸಾಹಸಕ್ಕೆ ಮುಂದಾದ ಹನೀಫ ನೆನ್ನುವ ತರುಣ ನನ್ನು ಜನ ತಲೆಯಮೇಲೆ ಹೊತ್ತು ಸನ್ಮಾನ ಮಾಡಿದರು.ಎಲ್ಲರ ಪ್ರೀತಿ ಗೆ ಆತ ಪಾತ್ರನಾದ. ಒಂದು ಮಗುವಿನ ಪ್ರಾಣ ವನ್ನು ಉಳಿಸುವ ಕಾರ್ಯದಲ್ಲಿ ತನ್ನ ಪ್ರಾಣ ಪಣಕ್ಕಿಟ್ಟು ಹೋರಾಡಿದ ಎಂಬ ಕಾರಣಕ್ಕೆ ಈ ಗೌರವ ಆತನಿಗೆ ಲಭಿಸಿತು.
ಕಲುಷಿತ ವಾತಾವರಣದಲ್ಲಿ ಇದು ಎಲ್ಲರಿಗೂ ಒಂದು ದೊಡ್ಡ ಪಾಠವಾಗಿದೆ.
ಜೀವವನ್ನು ಕೊಂದು ಮುಗಿಸಿ,ಆನಂದಿಸುವ ಮತ್ತು ಹೆಣಬೀಳಲಿ ಎಂದು ಬಯಸುವ ಹಾಗೇ ಹೆಣ ಬಿದ್ದ ಕಾರಣ ನಾಡು ಬಚವಾಯಿತು ಎಂದು ಸಂಭ್ರಮಿಸುವ ನರಾಧಮ ಕ್ಷುದ್ರ ಜೀವಿಗಳಿಗೆ ಮಾನವೀಯ ಮೌಲ್ಯಗಳ ಬೆಲೆಯನ್ನು ಕಲಿಸಿಕೊಡುವ ಉತ್ತಮ ಸಂಗತಿಯಾಗಿದೆ ಇಂತಹ ಅದ್ಭುತ ಘಟನೆಗಳು.
ಪ್ರಾಣ ಹಾನಿಯನ್ನು ಹಣೆಯಲ್ಲಿ ಕುಂಕುಮ ನಾಮಧಾರಿಯ ಮನಸ್ಸು ಒಪ್ಪುವುದಿಲ್ಲ. ತ್ಯಾಗದ ಸಂಕೇತವಾದ ಶಿಲುಬೆಯನ್ನು ಕೊರಳಿಗೆ ಕಟ್ಟಿದವನ ಹೃದಯ ಸಹಿಸುವುದಿಲ್ಲ.ಪರಿಶುದ್ಧವಾದ ನಮಾಜಿನ ಸಾಷ್ಟಾಂಗದ ಕುರುಹನ್ನು ಹಣೆಯಲ್ಲಿ ಹೊತ್ತವನ ಮನಸ್ಸೂ ಸಮ್ಮತಿಸುವುದಿಲ್ಲ.ಆದರೆ ರಕ್ತ ದಾಹಿಗಳು ಧರ್ಮಗಳ ಎಲ್ಲಾ ತತ್ವಗಳನ್ನು ಧ್ವಂಸ ಮಾಡುತ್ತಾ ಕೊಬ್ಬಿದ ಹಂದಿಯ ಕೂಟದಂತೆ ವರ್ತಿಸುತ್ತಿದ್ದಾರೆ.”ಗೋಲಿಮಾರೋ””ಒಂದೂ ಬೀಳಲಿಲ್ಲವಾ”ಎಂಬಂತಹ ರಾಕ್ಷಸ ಧ್ವನಿ ಯು ಸಮಾಜದ ಸುಂದರ ಕಲ್ಪನೆಗಳನ್ನು ನಾಶಮಾಡಲು ಮುಂದಾಗುತ್ತಿದೆ.
ಸುಳ್ಳುಗಳ ಮೂಲಕ ಸಾಮಾನ್ಯ ಮನುಷ್ಯನ ಮಿದುಳಿಗೆ ನಿರಂತರವಾಗಿ ದ್ವೇಷದ ಭ್ರಮೆಯನ್ನು ಹಬ್ಬಲಾಗುತ್ತದೆ.ಹಾಗೇ ಅಪ್ಪಟ ಸುಳ್ಳುಗಳ ಚರಿತ್ರೆಗಳನ್ನು ಬರೆದು,ಭಾಷಣ ಬಿಗಿದು ಮುಗ್ಧ ರನ್ನು ದಾರಿತಪ್ಪಿಸಿ ಸಮಾಜದಲ್ಲಿ ವಿಷ ತುಂಬಲಾಗುತ್ತದೆ.ಭಾರತದ ಅಹಿಂಸೆಯ ಮಹೋನ್ನತ ಅಧ್ಯಾಯ ವನ್ನು ತಿರುಚಿ ಇನ್ಯಾರಿಗೋ ಮಹಾತ್ಮ ಪಟ್ಟ ಕಟ್ಟಲು ಹವನಿಸಲಾಗುತ್ತಿದೆ. ಆದರೆ ಸತ್ಯ ಮೇವಾ ಜಯತೇ ಅನ್ನುವ ಕಲ್ಪನೆ ಸತ್ಯವೆಂದಾದರೆ ಒಂದು ದಿನ ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ.ಅದರ ದೊಡ್ಡ ಉದಾಹರಣೆ ಯಾಗಿದೆ ಜನರಲ್ಲಿ ಎದ್ದು ಕಾಣುವ ಮನುಷ್ಯತ್ವದ ಅದ್ಭುತವಾದ ಸ್ಪಂದನ.
ಒಂದು ಜೀವದ ರಕ್ಷಣೆ ಗಾಗಿ ಹಪಾಹಪಿಸುವ ಹೃದಯಗಳನ್ನು ಎಲ್ಲಾ ಕಾಲದಲ್ಲೂ ವಂಚಿಸಲಾಗದು.ಕಾಲಕಾಲದಲ್ಲಿ ಅದೆಷ್ಟೋ ರಕ್ತ ರಂಜಿತ ಅಧ್ಯಾಯಗಳು ಕಳೆದು ಹೋಗಿದೆ.ಆದರೆ ಕಡೆಗೆ ಗೆದ್ದದ್ದು ಸತ್ಯ ಮತ್ತು ಮಾನವೀಯತೆ ಮಾತ್ರವಾಗಿತ್ತು. ಅದು ಮುಂದೆಯೂ ನಡೆಯುತ್ತದೆ. ಮನುಷ್ಯ ಪ್ರಾಣದೊಂದಿಗೆ ಚೆಲ್ಲಾಟವಾಡುವ ವರ್ಗವು ಅರಿಯಬೇಕು, ಜೀವಗಳನ್ನು ಉಳಿಸಿಕೊಳ್ಳಲು ಪ್ರಾರ್ಥಿಸುವ ತಾಯಂದಿರ ನೋವಿನ ಅಗ್ನಿಯು ಜ್ವಾಲಾಮುಖಿ ಯಾಗಿ ಕೊಲೆಗಾರರ,ಸಮಾಜದ್ರೋಹಿಗಳ ಮೂಲವನ್ನೇ ಸುಟ್ಟು ಬೂದಿಮಾಡುವುದು. ಮತಾಂಧತೆಯ ವಿಷವು ಇನ್ನೂ ಹೃದಯದಿಂದ ಹೊರಟು ಹೋಗಿಲ್ಲವಾದರೆ ಸಮಯ ಮಾಡಿಕೊಂಡು ಒಂದು ಸುತ್ತು ಕ್ಯಾನ್ಸರ್ ಆಸ್ಪತ್ರೆಯ ಕಡೆ ಸುತ್ತಿ ಬರಲಿ. ಆಗ ಮನಸ್ಸಿಗೆ ತಗುಳಿದ ದ್ವೇಷದ ಕ್ಯಾನ್ಸರ್ ರೋಗ ಕರಗಿ ಹೋಗಬಹುದು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.