ತುಮಕೂರು (www.vknews.com) : ಅಂಧರ ಎರಡು ಕುಟುಂಬಗಳು ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಆಹಾರಧಾನ್ಯವಿಲ್ಲದೆ ಸಂಕಷ್ಟದಲ್ಲಿವೆ ಎಂಬ ಸಂಗತಿ ಸಾಮಾಜಿಕ ಜಾಲತಾಣದ ಮೂಲಕ ಬೆಳಕಿಗೆ ಬಂದೊಡನೆ ಆ ಎರಡು ಕುಟುಂಬಗಳಿಗೆ ತುಮಕೂರು ನಗರದ ದಾನಿಯೊಬ್ಬರು ತಕ್ಷಣವೇ ಸ್ಪಂದಿಸಿ, ಒಂದು ತಿಂಗಳಿಗಾಗುವಷ್ಟು ಆಹಾರಧಾನ್ಯ ವಿತರಿಸಿ ಮಾನವೀಯತೆ ಪ್ರದರ್ಶಿಸಿರುವ ಪ್ರಸಂಗ ಸೋಮವಾರ ನಡೆದಿದೆ.
ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿ ಹರಿಕಥೆ, ಸಂಗೀತ ಕಾರ್ಯಕ್ರಮ ನೀಡಿ ಜೀವನ ಸಾಗಿಸುವ ಒಟ್ಟು 20 ಜನರಿರುವ ಎರಡು ಅಂಧರ ಕುಟುಂಬಗಳು ಸಂಕಷ್ಟದಲ್ಲಿವೆ. ದಾನಿಗಳು ನೆರವಾಗಬಹುದು ಎಂಬ ಮಾಹಿತಿಯೊಂದನ್ನು ಗುಬ್ಬಿಯ ಮಹಮದ್ ಇರ್ಫಾನ್ ಎಂಬುವವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪ್ರಕಟಿಸಿದ್ದರು. ಈ ಮಾಹಿತಿಯನ್ನು ತುಮಕೂರಿನ ಕಾಂಗ್ರೆಸ್ ಮುಖಂಡ ಹಾಗೂ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಮಹಮದ್ ಇಕ್ಬಾಲ್ ಅವರು ಗಮನಿಸಿ, ಸದರಿ ನೊಂದ ಕುಟುಂಬಗಳ ಮಾಹಿತಿ ಕಲೆಹಾಕಿದರು. ತುಮಕೂರಿನ ಮರಳೂರು ದಿಣ್ಣೆಯ ನಾಲ್ಕನೇ ಕ್ರಾಸ್ನಲ್ಲಿ ನರಸಯ್ಯ ಎಂಬುವವರ ಒಟ್ಟು 6 ಸದಸ್ಯರ ಕುಟುಂಬ ಮತ್ತು ಇಲ್ಲಿನ ಪೊಲೀಸ್ ಚೌಕಿ ಹಿಂಬದಿಯ ಭೋಜಮ್ಮ ಎಂಬುವವರ 11 ಸದಸ್ಯರ ಕುಟುಂಬ ಇರುವುದನ್ನು ಗುರುತಿಸಿದರು.
ಕುಟುಂಬದ ಎಲ್ಲರೂ ಅಂಧರಾಗಿದ್ದು, ಎಲ್ಲರೂ ಹರಿಕಥೆ ಹೇಳುವ ಮೂಲಕ ಜೀವನೋಪಾಯ ಮಾಡುತ್ತಿದ್ದು, ಪ್ರಸ್ತುತ ಕೊರೊನಾ ಲಾಕ್ ಡೌನ್ನಿಂದ ಸಂಕಷ್ಟದಲ್ಲಿದ್ದಾರೆಂಬುದು ತಿಳಿದುಬಂದಿತು. ಈ ಹಿನ್ನೆಲೆಯಲ್ಲಿ ಇಕ್ಬಾಲ್ ಅಹಮದ್ ಅವರು ತಕ್ಷಣವೇ ಸದರಿ ಎರಡೂ ಕುಟುಂಬಗಳಿಗೆ ಸೋಮವಾರ ಬೆಳಗ್ಗೆ ಒಂದು ತಿಂಗಳಿಗಾಗುವಷ್ಟು ಅಕ್ಕಿ ಮತ್ತು ಇತರೆ ದಿನಸಿ ಪದಾರ್ಥಗಳನ್ನು ವಿತರಣೆ ಮಾಡಿದರಲ್ಲದೆ, ಮುಂದಿನ ತಿಂಗಳು ಸಹಾ ಇದೇ ರೀತಿ ನೆರವಾಗುವ ಭರವಸೆ ನೀಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.