ಮುದ್ದೇಬಿಹಾಳ (www.vknews.com) : ಕೊರೊನಾ, ಲಾಕಡೌನ್ ಬಗ್ಗೆ ಜನಜಾಗೃತಿ ಮೂಡಿಸುವ ಮುದ್ದೇಬಿಹಾಳ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಭಿಯಾನ ರವಿವಾರ ಎರಡನೇ ದಿನದಲ್ಲಿ ಮುಂದುವರೆದಿದೆ. ಸಂಘದ ಪದಾಧಿಕಾರಿಗಳಾದ ಮುತ್ತು ವಡವಡಗಿ, ಶಿವಕುಮಾರ ಶಾರದಳ್ಳಿ, ಲಾಡ್ಲೇಮಶ್ಯಾಕ ನದಾಫ, ಚೇತನ್ ಕೆಂಧೂಳಿ, ಆಟೋ ಚಾಲಕ ಮುತ್ತು ಅವರು ಕೆಲವು ಬಡಾವಣೆಗಳಿಗೆ ತೆರಳಿ ಪರಸ್ಥಳದಿಂದ ಬಂದಿರುವವರ ಮಾಹಿತಿಯನ್ನು ಅಂಥಹ ಮನೆಗಳ ಅಕ್ಕಪಕ್ಕದವರು ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗೆ ಒದಗಿಸುವ ಮೂಲಕ ಶಂಕಿತರನ್ನು ಪತ್ತೇ ಹಚ್ಚುವ ಕಾರ್ಯಕ್ಕೆ ಸಹಕರಿಸಬೇಕು. ಲಾಕಡೌನ್ ಮುಗಿಯುವತನಕ ಮನೆಯಿಂದ ಯಾರೂ ಅನಗತ್ಯವಾಗಿ ಹೊರಗೆ ಬರಬಾರದು ಎಂದೆಲ್ಲ ತಿಳಿಹೇಳುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಖಕ್ಕೆ ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವ ಈ ತಂಡವು ಸಾಮಾಜಿಕ ಅಂತರದ ಮಹತ್ವವನ್ನು ಪ್ರಾಯೋಗಿಕವಾಗಿ ಸಾರಿಹೇಳುತ್ತಿದೆ.
ಫಲ ನೀಡುತ್ತಿರುವ ಪ್ರಚಾರ:
ಪತ್ರಕರ್ತರೇ ಖುದ್ದು ಜನಜಾಗೃತಿ ಪ್ರಚಾರಕ್ಕೆ ಇಳಿದು ಕೊರೊನಾದ ಅಪಾಯಕಾರಿ ಪರಿಸ್ಥಿತಿಯನ್ನು ಮೈಕ್ ಮೂಲಕ ಪ್ರಚಾರ ಮಾಡುತ್ತಿರುವುದನ್ನು ಹೆಚ್ಚು ಫಲ ನೀಡತೊಡಗಿದ್ದು ಗಂಭೀರವಾಗಿ ಪರಿಗಣಿಸಿರುವ ಸಾರ್ವಜನಿಕರು ತಮ್ಮ ಮನೆಗಳ ಅಕ್ಕಪಕ್ಕ ಬೇರೆ ಊರಿನಿಂದ ಬಂದಿರುವವರ ಮಾಹಿತಿಯನ್ನು ಆಶಾ ಕಾರ್ಯಕರ್ತೆಯರ ಮನೆಗಳಿಗೆ ತೆರಳಿ ನೀಡತೊಡಗಿದ್ದಾರೆ. ಪಿಲೇಕೆಮ್ಮನಗರ, ಇಂದಿನಾನಗರ, ಸಂಗಮೇಶ್ವರನಗರದಲ್ಲಿ ಇಂಥ ಘಟನೆಗಳು ನಡೆದಿವೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಬಳಿ ಬಂದು ತಾವೇ ಸಂಶಯಾಸ್ಪದ ಜನರ ಬಗ್ಗೆ ಮಾಹಿತಿ ನೀಡುತ್ತಿರುವುದು ನಮಗೆ ಹೆಚ್ಚು ಅನುಕೂಲ ಆಗುವಂತೆ ಮಾಡಿದೆ ಎಂದು ಪತ್ರಕರ್ತರ ಕಾರ್ಯವನ್ನು ಶ್ಲಾಘಿಸುತ್ತಿರುವುದು ಕೇಳಿಬರತೊಡಗಿದೆ.
ನಮಗೂ ಮಾಸ್ಕ, ಸ್ಯಾನಿಟೈಜರ್ ಕೊಡಿ:
ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ತಾಲೂಕಿನ ಖಾಸಗಿ ವೈದ್ಯರಿಗೆ ಮಾಸ್ಕ, ಸ್ಯಾನಿಟೈಜರ್ ಕೊಡುವುದಾಗಿ ಹೇಳಿದ್ದಾರೆ. ಇವುಗಳ ಅವಶ್ಯಕತೆ ಮನೆಮನೆಗೆ ತೆರಳಿ ಜನರೊಂದಿಗೆ ನೇರವಾಗಿ ಬೆರೆತು ಕೆಲಸ ಮಾಡುವ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗೆ ಹೆಚ್ಚಾಗಿದೆ. ಆರೋಗ್ಯ ಇಲಾಖೆಯಿಂದ ಇವುಗಳನ್ನು ಕೊಡುತ್ತಿದ್ದರೂ ಅವು ಸಾಕಾಗುತ್ತಿಲ್ಲ. ಶಾಸಕರು ಇವರಿಗೂ ಉಚಿತವಾಗಿ ಮಾಸ್ಕ್, ಸ್ಯಾನಿಟೈಜರ್ ವಿತರಿಸಿದರೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಸಾಧ್ಯವಾಗುತ್ತದೆ ಎನ್ನುವ ಮಾತು ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಯಿಂದ ಕೇಳಿಬರುತ್ತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.