(www.vknews.com) : ಭಾರತ ಲಾಕ್ ಡೌನ್ ಆಗುವ 2 ದಿನ ಮೊದಲು ಗುಜರಾತಿನ ರಾಜ್ ಕೋಟಿನಿಂದ ನಿಸ್ಸಾನ್ ಮೈಕ್ರಾ ಕಾರಲ್ಲಿ ಹೊರಟ ಪುತ್ತೂರಿನ ಇಬ್ಬರು ಯುವಕರು ಗುಜರಾತ್-ಮಹಾರಾಷ್ಟ್ರ ಗಡಿ ಪ್ರದೇಶ ಗುಜರಾತಿನ ವಲ್ಸಾಡ್ ಜಿಲ್ಲೆಯ ಅಂಬರ್’ಗಾವ್ ಭಿಲಾಡ್ ತಾಲೂಕಿನ ಆರ್.ಟಿ.ಓ. ಚೆಕ್ ಪೋಸ್ಟ್ ಬಳಿ ಸಿಲುಕಿಬಿದ್ದಿದ್ದಾರೆ. ಪುನಃ ರಾಜ್ ಕೋಟಿಗೆ ಹೋಗಲಾರದೇ ಈಕಡೆ ಪುತ್ತೂರಿಗೂ ಬರಲಾರದೇ ಕಳೆದ 21 ದಿವಸದಲ್ಲಿ ದಾರಿಬದಿ ಕಾರಿನಲ್ಲೇ ಕಾಲ ಕಳೆಯುವ ಹೀನಾಯ ಪರಿಸ್ಥಿತಿ ಎದುರಾಗಿದೆ.
ಲಾಕ್ ಡೌನ್ ಘೋಷಣೆಯಾಗುವ ಮೊದಲು ರಾಜ್ ಕೋಟಿಂದ ಕಾರಲ್ಲಿ ಹೊರಟ ಪುತ್ತೂರು ತಾಲೂಕು ಸಾಮೆತ್ತಡ್ಕದ ಆಶಿಕ್ ಹುಸೈನ್ ಹಾಗೂ ಅವರ ಸ್ನೇಹಿತ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಮೊಹಮ್ಮದ್ ತಾಕೀನ್ ಮರೀಲ್ ಸುಮಾರು 500 ಕಿ.ಮೀ.ಗೂ ಅಧಿಕ ಪ್ರಯಾಣಿಸಿದ ಬಳಿಕ ಲಾಕ್ ಡೌನಿನ ಅಡಕತ್ತರಿಗೆ ಸಿಲುಕಿ ಬಿದ್ದು ಚಡಪಡಿಸುತ್ತಿದ್ದಾರೆ.
ಆಶಿಕ್ ಹುಸೈನ್ ಅಡಕೆ ವ್ಯಾಪಾರದ ಉದ್ದೇಶದಿಂದ ಹಾಗೂ ರಾಜ್ ಕೋಟಲ್ಲಿ ಹೊಸ ಅಂಗಡಿ ತೆರೆಯುವ ಸಲುವಾಗಿ ಒಂದು ತಿಂಗಳ ಹಿಂದೆ ಸ್ನೇಹಿತನ ಜೊತೆ ತೆರಳಿದ್ದರು. ಆದರೆ ಇದೇ ಸಂದರ್ಭ ಕೊರೋನಾ ವೈರಸ್ ನ ಅಟ್ಟಹಾಸ ತಲೆದೋರಿದ್ದು ಭಾರತದಾದ್ಯಂತ ಕರ್ಫ್ಯೂ ವಿಧಿಸಲಾಯಿತು. ಕರ್ಫ್ಯೂ ನಂತರ ತರಾತುರಿಯಲ್ಲಿ ಅಲ್ಲಿಂದ ಊರಿಗೆ ಹೊರಟ ಈ ಯುವಕರು ಭಾರತ ಲಾಕ್ ಡೌನ್ ಮುನ್ಸೂಚನೆ ದೊರಕದ ಕಾರಣ ಗುಜರಾತ್-ಮಹಾರಾಷ್ಟ್ರ ಗಡಿಯಲ್ಲಿ ಯಾವ ಕಡೆಯೂ ಪ್ರಯಾಣಿಸಲಾಗದೇ ಸಿಲುಕಿಬಿದ್ದರು. ಆನಂತರ ಈತನಕ ಕಾರಿನಲ್ಲೇ ವಾಸ ಮಾಡುತ್ತಿರುವ ಇಬ್ಬರು ಯುವಕರ ಕರುಣಾಜನಕ ಕಥೆ ಹೇಳತೀರದು. ಸ್ನಾನ ಶೌಚಾಗೃಹಕ್ಕೆ ಹತ್ತಿರದ ಅಂಬರ್ ಹೋಟೆಲನವರಲ್ಲಿ ಮನವಿ ಮಾಡಿ ಅವಲಂಬಿಸಿರುವ ಯುವಕರು ಆ ರೆಸ್ಟೋರೆಂಟಲ್ಲಿ ಸ್ಥಳ ಇಲ್ಲದ ಕಾರಣ ಕಾರಿನಲ್ಲೇ ಮಲಗುವ ಪರಿಸ್ಥಿತಿ ಎದುರಾಗಿದೆ. ದಿನದ ಮೂರು ಹೊತ್ತು ಸ್ಥಳೀಯ ಸಮಾಜಸೇವಕರಾದ ಸಯ್ಯದ್ ಕಶ್ಯಪ್ ಎಂಬವರು ಆಹಾರ ನೀಡುತ್ತಿದ್ದಾರೆ. ತುರ್ತು ಅಗತ್ಯದ ಔಷಧಿಯೂ ವಿತರಿಸುತ್ತಾರೆ. ಯುವಕರು ಪುತ್ತೂರಿಗೆ ಬರಲು ಕೆಲವರನ್ನು ಸಂಪರ್ಕಿಸಿ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.
ನಮ್ಮ ಕರ್ನಾಟಕ ಸರಕಾರ, ದ.ಕ. ಜಿಲ್ಲಾಡಳಿತ ಈ ಬಗ್ಗೆ ಮಾನವೀಯತೆ ಮೆರೆದು ಆ ಯುವಕರನ್ನು ಊರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕಿದೆ. ಗುಜರಾತಿನ ವಲ್ಸಾಡ್ ಜಿಲ್ಲಾಡಳಿತವನ್ನು ಸಂಪರ್ಕಿಸಿ ಪುತ್ತೂರಿಗೆ ಕರೆಸಲು ಸರಕಾರಕ್ಕೆ ಜಿಲ್ಲಾಡಳಿತಕ್ಕೆ ಅಸಾಧ್ಯವಾದುದೇನಲ್ಲ. ಇಲ್ಲಿನ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನಸ್ಸಿದ್ದರೆ ಸ್ಪೆಷಲ್ ಕೇಸ್ ಅಂತ ಪರಿಗಣಿಸಿ ಕರೆತರಲು ಖಂಡಿತಾ ಸಾಧ್ಯವಿದೆ. ತಮಿಳುನಾಡಿನ ಮಧುರೈ ಎಸಿ ಯವರು (ಅಬಕಾರಿ) ಮಹಾರಾಷ್ಟ್ರದ ಟಸ್ಗಾಂವ್ ಗೆ ತೆರಳಲು ಇಬ್ಬರಿಗೆ ಏಪ್ರಿಲ್ 08ರಂದು ವಾಹನ ಪಾಸ್ ನೀಡಿದ್ದು ಪುರಾವೆಯಿದೆ. ಅವರು ಮಹಾರಾಷ್ಟ್ರ ತಲುಪಿದ್ದಾರೆ ಕೂಡಾ. ಇಟಲಿಯಿಂದ ಬೆಂಗಳೂರಿಗೆ ಬಂದು ಸಿಲುಕಿದ್ದ ಮಂಗಳೂರಿನ ಯುವತಿಯನ್ನು ಶಾಸಕರಾದ ಯು.ಟಿ.ಖಾದರ್ ಮಂಗಳೂರಿನ ಅವರ ಮನೆ ತಲುಪಿಸಿದ್ದನ್ನು ಕೂಡಾ ಇಲ್ಲಿ ಸ್ಮರಿಸಬಹುದು. ಇಂತಹ ಉದಾಹರಣೆಗಳು ಹಲವಾರು ಇದೆ. ನಮ್ಮ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೂಡಾ ಪುತ್ತೂರಿನ ಈ ಇಬ್ಬರು ಯುವಕರ ಸಮಸ್ಯೆಯನ್ನು ಅರಿತು ತಕ್ಷಣ ಸ್ಪಂದಿಸುವ ಅನಿವಾರ್ಯತೆ ಇದೆ.
✍ ರಶೀದ್ ವಿಟ್ಲ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.