ತುಮಕೂರು ಬೆಳಗುಂಬದಲ್ಲಿ ಕೂಲಿಕಾರ್ಮಿಕರಿಗೆ ದಿನಸಿ ವಿತರಣೆ

ತುಮಕೂರು (www.vknews.com) : ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಅತ್ತ ಸ್ವಗ್ರಾಮಕ್ಕೂ ತೆರಳಲಾರದೆ, ಇತ್ತ ಕೂಲಿ ಕೆಲಸವೂ ಇಲ್ಲದೆ ಸಂಕಷ್ಟಕ್ಕೀಡಾಗಿದ್ದ ಕೂಲಿ ಕಾರ್ಮಿಕರ ಕುಟುಂಬಕ್ಕೆ ತುಮಕೂರು ತಾಲ್ಲೂಕು ಆಡಳಿತವು ಸಕಾಲದಲ್ಲಿ ಸಹಾಯಹಸ್ತ ಚಾಚಿದೆ.

ತುಮಕೂರು ನಗರಕ್ಕೆ ಹೊಂದಿಕೊಂಡಂತೆಯೇ ಇರುವ ಬೆಳಗುಂಬ ಗ್ರಾಮವು ತುಮಕೂರು ತಾಲ್ಲೂಕಿಗೆ ಒಳಪಡುತ್ತದೆ. ರಾಯಚೂರು ಜಿಲ್ಲೆಗೆ ಸೇರಿದ ಸುಮಾರು 10 ಕುಟುಂಬಗಳ 12 ಜನರು ಕೂಲಿ ಕೆಲಸ ಅರಸುತ್ತ ಕಳೆದ 2- 3 ವರ್ಷಗಳ ಹಿಂದೆ ಬೆಳಗುಂಬ ಗ್ರಾಮಕ್ಕೆ ಬಂದು, ಇಲ್ಲೇ ಊರ ಹೊರಗೆ ಸಣ್ಣ ಗುಡಿಸಲುಗಳನ್ನು ಹಾಕಿಕೊಂಡು ಕೂಲಿ ಕೆಲಸ ಮಾಡುತ್ತ ಬದುಕುತ್ತಿದ್ದರು. ಇದ್ದಕ್ಕಿದ್ದಂತೆ ಕೊರೊನಾ ಮಹಾಮಾರಿ ಎರಗಿದ ಪರಿಣಾಮ, ಸರ್ಕಾರ ಲಾಕ್ ಡೌನ್ ಘೋಷಿಸಿದ ಬಳಿಕ ಈ ಕುಟುಂಬಗಳ ಸ್ಥಿತಿ ಅತಂತ್ರವಾಗಿದೆ. ಅತ್ತ ರಾಯಚೂರು ಜಿಲ್ಲೆಯ ಸ್ವಗ್ರಾಮಕ್ಕೂ ಹೋಗಲಾಗದೆ, ಇತ್ತ ಇಲ್ಲಿ ಕೂಲಿ ಕೆಲಸಗಳೂ ಇಲ್ಲದೆ ಈ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದವು. ಈ ಪರಿಸ್ಥಿತಿಯನ್ನು ಗಮನಿಸಿದ ಬೆಳಗುಂಬ ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಸ್.ವೆಂಕಟೇಶ್ ಈ ಬಗ್ಗೆ ತುಮಕೂರು ತಾಲ್ಲೂಕಿನ ತಹಸೀಲ್ದಾರ್ ಮೋಹನ್ ಕುಮಾರ್ ಮತ್ತು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು ಅವರ ಗಮನ ಸೆಳೆದರು.

ತಕ್ಷಣವೇ ಕಾರ್ಯಪ್ರವೃತ್ತರಾದ ತಹಸೀಲ್ದಾರ್ ಮೋಹನ್‍ಕುಮಾರ್ ಹಾಗೂ ನರಸಿಂಹರಾಜು ಅವರು ಏಪ್ರಿಲ್ 16 ರಂದು ಗ್ರಾ.ಪಂ. ಸದಸ್ಯ ಬಿ.ಎಸ್. ವೆಂಕಟೇಶ್, ಹೆಚ್ಚುವರಿ ಶಿರಸ್ತೇದಾರ್ ಜಯಪ್ರಕಾಶ್, ಗ್ರಾಮ ಲೆಕ್ಕಿಗರಾದ ಅಜಯ್ ಮತ್ತು ಮುರಳಿ ಅವರೊಂದಿಗೆ ಸ್ಥಳಕ್ಕೆ ತೆರಳಿ, ನೊಂದ ಕಾರ್ಮಿಕರ ಕುಟುಂಬಗಳಿಗೆ ಅಕ್ಕಿ ಸೇರಿದಂತೆ ಆಹಾರಧಾನ್ಯದ ಕಿಟ್ ವಿತರಿಸಿದರು.

ನಮ್ಮನ್ನು ಊರಿಗೆ ಕಳಿಸಿಕೊಡಿ

“ಪ್ರಸ್ತುತ ಈ ಕುಟುಂಬಗಳು ತಮ್ಮ ಸ್ವಗ್ರಾಮಕ್ಕೆ ತೆರಳಲು ತುದಿಗಾಲಿನಲ್ಲಿ ನಿಂತಿವೆ. ತಮ್ಮನ್ನು ಹೇಗಾದರೂ ಮಾಡಿ ಊರಿಗೆ ಕಳಿಸಿಕೊಡಿ ಎಂದು ಈ ಕಾರ್ಮಿಕರು ಬೇಡಿಕೊಳ್ಳುತ್ತಿದ್ದಾರೆ. ಇವರುಗಳು ತಂದಿದ್ದ ಒಂದು ಟಾಟಾ ಏಸ್ ವಾಹನವೂ ಇವರ ಬಳಿ ಉಳಿದಿದೆ. ಈ 12 ಜನರಲ್ಲಿ ಅರ್ಧದಷ್ಟು ಮಹಿಳಾ ಕಾರ್ಮಿಕರೇ ಇದ್ದಾರೆ. ಆದರೆ ಲಾಕ್ ಡೌನ್ ಕಾರಣದಿಂದ ಇವರುಗಳು ಸದ್ಯಕ್ಕೆ ಊರಿಗೆ ಹಿಂತಿರುಗಲು ಕಷ್ಟವಾಗಿದೆ” ಎಂದು ಗ್ರಾ.ಪಂ. ಸದಸ್ಯ ಬಿ.ಎಸ್.ವೆಂಕಟೇಶ್ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...