ಸಮಾಜ-ಕುಟುಂಬದ ನೆಮ್ಮದಿಗೆ ಮದ್ಯದಂಗಡಿಗಳನ್ನು ಶಾಶ್ವತವಾಗಿ ಮುಚ್ಚಿಬಿಡಿ : ಸಿ.ಎಂ.ಗೆ ಪ್ರೆಸ್ ರಾಜಣ್ಣ ಮನವಿ

ತುಮಕೂರು (www.vknews.com) : ಕೊರೊನಾ ಲಾಕ್ ಡೌನ್ ಕಾರಣದಿಂದ ಮುಚ್ಚಲ್ಪಟ್ಟಿರುವ ಮದ್ಯದ ಅಂಗಡಿಗಳನ್ನು ಹಾಗೆಯೇ ಶಾಶ್ವತವಾಗಿ ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತುಮಕೂರು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಹಾಗೂ ಮಾಜಿ ಕಾರ್ಪೊರೇಟರ್ ಪ್ರೆಸ್ ರಾಜಣ್ಣ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಇಡೀ ದೇಶ ಹಾಗೂ ವಿಶ್ವವು ಹಿಂದೆಂದೂ ಕಂಡರಿಯದ ಕೊರೊನಾ ವೈರಸ್ ಸೋಂಕಿನ ಭೀತಿಯಿಂದ ಪ್ರಸ್ತುತ ತತ್ತರಿಸುತ್ತಿದೆ. ಬಹುದೊಡ್ಡ ಪ್ರಮಾಣದಲ್ಲಿ ಸಾವು-ನೋವು ಸಂಭವಿಸುತ್ತಿದೆ. ಸೋಂಕು ಹರಡುವುದನ್ನು ತಡೆಗಟ್ಟಲು ಇಡೀ ದೇಶದಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಅದೇ ರೀತಿ ಕರ್ನಾಟಕ ರಾಜ್ಯದಲ್ಲೂ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಕಾರಣದಿಂದ ಮದ್ಯದ ಅಂಗಡಿಗಳು ಮುಚ್ಚಲ್ಪಟ್ಟಿವೆ. ಇದರಿಂದ ಸಮಾಜ ಹಾಗೂ ಸಂಸಾರಗಳ ಮೇಲೆ ಭಾರಿ ಒಳ್ಳೆಯ ಪರಿಣಾಮ ಉಂಟಾಗಿದೆ. ಮದ್ಯ ವ್ಯಸನಿಗಳ ಹಾವಳಿಗೆ ಬ್ರೇಕ್ ಬಿದ್ದಿದೆ. ಅಂಥವರು ಕುಟುಂಬಗಳು ದಿನವೂ ಪಡುತ್ತಿದ್ದ ಸಂಕಟಗಳಿಗೆ ತಾನಾಗಿಯೇ ಪರಿಹಾರ ದೊರೆತಿದೆ. ಕಷ್ಟಪಟ್ಟು ದುಡಿದ ಹಣವನ್ನು ಮದ್ಯಪಾನಕ್ಕೆ ವೆಚ್ಚಮಾಡಿ, ತಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುವುದರೊಂದಿಗೆ, ತಮ್ಮ ಕುಟುಂಬವನ್ನು ಬೀದಿಗೆ ತಳ್ಳುತ್ತಿದ್ದ ವ್ಯಸನಿಗಳು ಈಗ ಅನಿವಾರ್ಯವಾಗಿ ಮದ್ಯ ಸೇವನೆ ಬಿಡುವಂತಾಗಿದೆ. ಇದರಿಂದ ಎಲ್ಲೋ ಬೆರಳೆಣಿಕೆಯ ಪ್ರಕರಣಗಳನ್ನು ಬಿಟ್ಟರೆ, ಉಳಿದಂತೆ ಮದ್ಯವ್ಯಸನಿಗಳ ಕುಟುಂಬಕ್ಕಷ್ಟೇ ಅಲ್ಲದೆ ಇಡೀ ಸಮಾಜಕ್ಕೆ ಒಳ್ಳೆಯದಾಗುತ್ತಿದೆ. ಸಮಾಜದಲ್ಲಿ ಮದ್ಯಪಾನಿಗಳ ಹಾವಳಿ ತಪ್ಪಿದೆ. ಕುಡುಕರಿಂದ ಕುಟುಂಬದ ಒಳಗೆ ಹಾಗೂ ಹೊರಗೆ ಆಗುತ್ತಿದ್ದ ಕಲಹಗಳು ನಿಂತಿವೆ. ಕುಡಿದ ಅಮಲಿನಲ್ಲಿ ಎಸಗುತ್ತಿದ್ದ ಅಪರಾಧ ಪ್ರಕರಣಗಳು ಸ್ಥಗಿತವಾಗಿವೆ. ಕುಡಿದು ವಾಹನ ಚಾಲನೆ ಮಾಡುವುದು ಅಸಾಧ್ಯವಾಗಿದೆ. ಇವೆಲ್ಲದರ ಜೊತೆಗೆ ಕುಡಿತ ಬಿಟ್ಟವರ ಆರೋಗ್ಯವೂ ಸುಧಾರಿಸುತ್ತದೆ ಎಂದು ಅವರು ಮನವಿ ಪತ್ರದಲ್ಲಿ ವಿವರಿಸಿದ್ದಾರೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಕಳೆದ 8 ವರ್ಷಗಳಿಂದ ತುಮಕೂರು ಜಿಲ್ಲೆಯಲಿ “ಜಿಲ್ಲಾ ಜನಜಾಗೃತಿ ವೇದಿಕೆ”ಯ ಮೂಲಕ “ಮದ್ಯ ವರ್ಜನ ಶಿಬಿರ”ಗಳನ್ನು ನಾವು ನಡೆಸುತ್ತಿದ್ದು, ಅದರಲ್ಲಿ ಯಶಸ್ಸನ್ನು ಕಂಡಿದ್ದೇವೆ. ಪ್ರತಿ ಶಿಬಿರದಲ್ಲೂ 100 ರಿಂದ 120 ಜನರು ಭಾಗವಹಿಸಿದ್ದು, ಈವರಗೆ ಇಂತಹ 30 ಕ್ಕೂ ಅಧಿಕ ಶಿಬಿರಗಳನ್ನು ನಡೆಸಿದ್ದು, ಸಾವಿರಾರು ಜನರು ಇದರ ಪ್ರಯೋಜನ ಪಡೆದು, ಮದ್ಯ ವ್ಯಸನದಿಂದ ಮುಕ್ತರಾಗಿದ್ದಾರೆ. ಆದರೆ ಈಗ ಕೊರೊನಾ ಲಾಕ್ ಡೌನ್ ನಿಂದಾಗಿ ಎಲ್ಲ ಮದ್ಯದಂಗಡಿಗಳು ಮುಚ್ಚಲ್ಪಟ್ಟಿರುವುದರಿಂದ ಏಕಕಾಲದಲ್ಲಿ ಲಕ್ಷಾಂತರ ಮದ್ಯ ವ್ಯಸನಿಗಳು ಮದ್ಯವನ್ನು ಅನಿವಾರ್ಯವಾಗಿ ಬಿಡುವಂತಾಗಿದೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಪ್ರೆಸ್ ರಾಜಣ್ಣ ಹೇಳಿದ್ದಾರೆ.

ಆದ್ದರಿಂದ ಲಾಕ್ ಡೌನ್ ಮುಕ್ತಾಯದ ಬಳಿಕವೂ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ಕೊಡಬೇಡಿ. ಮದ್ಯದಂಗಡಿಗಳನ್ನು ಶಾಶ್ವತವಾಗಿ ಮುಚ್ಚುವ ದಿಟ್ಟ ನಿರ್ಧಾರವನ್ನು ಘೋಷಿಸಿ, ಒಟ್ಟಾರೆ ಸಮಾಜದ ಹಿತವನ್ನು ಕಾಪಾಡಬೇಕೆಂದು ಮುಖ್ಯಮಂತ್ರಿಗಳಿಗೆ ಪ್ರೆಸ್ ರಾಜಣ್ಣ ಕಳಕಳಿಯಿಂದ ಮನವಿ ಮಾಡಿಕೊಂಡಿದ್ದಾರೆ.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...