(www.vknews.com) : ಪ್ರತಿ ವರ್ಷ ಮೇ ತಿಂಗಳ ಮೊದಲನೇ ಮಂಗಳವಾರದಂದು ವಿಶ್ವ ಅಸ್ತಮಾ ದಿನ ಎಂದು ಆಚರಿಸಲಾಗುತ್ತಿದೆ. ವಿಶ್ವದಾದ್ಯಂತ ಅಸ್ತಮಾ ರೋಗದ ಬಗೆಗಿನ ಅಪನಂಬಿಕೆಗಳನ್ನು ಹೋಗಲಾಡಿಸಿ, ರೋಗದ ಬಗ್ಗೆ ಜಾಗೃತಿ ಮೂಡಿಸಿ, ರೋಗಿಗಳಿಗೆ ಆತ್ಮಸೈರ್ಯವನ್ನು ನೀಡುವ ಸದುದ್ದೇಶ ಈ ಆಚರಣೆಯ ಹಿಂದೆ ಇದೆ. ಅಸ್ತಮಾ ರೋಗವು ಶ್ವಾಸಕೋಶಗಳಿಗೆ ಸಂಬಂಧಿಸಿದ ದೀರ್ಘಕಾಲಿಕ ರೋಗವಾಗಿದ್ದು, ಮುಖ್ಯವಾಗಿ ರೋಗಿಯ ಉಸಿರಾಟದ ಪ್ರಕ್ರಿಯೆ ಮೇಲೆ ತೊಂದರೆಯನ್ನು ಉಂಟುಮಾಡುತ್ತದೆ. ರೋಗದ ತೀವ್ರತೆ ಮತ್ತು ಕೆರಳುವಿಕೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದ್ದು, ಅಸ್ತಮಾ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲಾಗದಿದ್ದರೂ, ನಿರಂತರವಾದ ಚಿಕಿತ್ಸೆ, ಸೂಕ್ತ ವೈದ್ಯಕೀಯ ಮಾರ್ಗದರ್ಶನ ಮತ್ತು ಜೀವನ ಶೈಲಿಯನ್ನು ಮಾರ್ಪಾಡು ಮಾಡಿ ರೋಗವನ್ನು ಖಂಡಿತವಾಗಿಯೂ ನಿಯಂತ್ರಣವಾಗಿಟ್ಟುಕೊಂಡು, ಜೀವನವನ್ನು ಇತರ ಎಲ್ಲರಂತೆ ಸಂಪೂರ್ಣವಾಗಿ ಆನಂದಿಸುವ ಎಲ್ಲಾ ಸಾಧ್ಯತೆಗಳೂ ಇದೆ. 1998ರಲ್ಲಿ ಆರಂಭವಾದ ಈ ವಿಶ್ವ ಅಸ್ತಮಾ ದಿನಾಚರಣೆಯನ್ನು ಪ್ರತಿ ವರ್ಷ ನಡೆಸಲಾಗುತ್ತದೆ. ಬಾ
ರ್ಸಿಲೋನಾದಲ್ಲಿ ನಡೆದ ಮೊದಲ “ವಿಶ್ವ ಅಸ್ತಮಾ ಸಮಾವೇಶ”ದ ಸವಿ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. “ಮಕ್ಕಳಿಗೆ ಉಸಿರಾಡಲು ನೆರವಾಗಿ” ಎಂಬ ಧ್ಯೇಯ ವಾಕ್ಯದೊಂದಿಗೆ 1998ರಲ್ಲಿ ಆರಂಭವಾದ ಈ ಆಚರಣೆ, 2007ರಿಂದ 2015ರ ವರೆಗೆ “ನೀವು ನಿಮ್ಮ ಅಸ್ತಮಾವನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು” ಎಂಬ ತಿರುಳಿನೊಂದಿಗೆ ಆಚರಿಸಲಾಯಿತು. 2016ರ ದಿನಾಚರಣೆಯ ಧ್ಯೇಯ ವಾಕ್ಯ “ಅಸ್ತಮಾ ರೋಗದ ಹೊರೆಯನ್ನು ಕಡಿಮೆ ಮಾಡಿ” ಎಂಬುದಾಗಿದೆ. 2019ರ ವಿಶ್ವ ಅಸ್ತಮಾ ದಿನಾಚರಣೆಯ ಧ್ಯೇಯ ವಾಕ್ಯ “ಅಸ್ತಮಾ ನಿಲ್ಲಲಿ” ಎಂಬುದಾಗಿದೆ. 2020ರ ಆಚರಣೆಯ ಧ್ಯೇಯ ವಾಕ್ಯ “ಅಸ್ತಮಾ ಸಾವು ನಿಯಂತ್ರಿಸಿ” ಎಂಬುದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ 2010ರಲ್ಲಿ ಸುಮಾರು 300 ಮಿಲಿಯನ್ ಮಂದಿ ಈ ಅಸ್ತಮಾದಿಂದ ಬಳಲುತ್ತಿದ್ದು, ಸರಿ ಸುಮಾರು 2,50,000 ಮಂದಿ ವರ್ಷವೊಂದರಲ್ಲಿ ಸಾವನ್ನಪ್ಪುತ್ತಾರೆ ಎಂದು ತಿಳಿದು ಬಂದಿದೆ. ಈ ಕಾರಣದಿಂದಲೇ ಇಡೀ ಮೇ ತಿಂಗಳಲ್ಲಿ ಅಸ್ತಮಾ ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಿ, ಅಸ್ತಮಾ ರೋಗವನ್ನು ತಡೆಗಟ್ಟುವ ಮತ್ತು ಹತೋಟಿಯಲ್ಲಿಡುವ ವಿವಿಧ ಶಿಬಿರಗಳನ್ನು ಏರ್ಪಡಿಸಿ, ಜನರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಮೇ ತಿಂಗಳನ್ನು “ಅಸ್ತಮಾ ತಿಳುವಳಿಕೆ ತಿಂಗಳು” ಎಂದು ಆಚರಿಸಲಾಗುತ್ತಿದೆ.
ಏನಿದು ಅಸ್ತಮಾ ಖಾಯಿಲೆ?
ಅಸ್ತಮಾ ಎನ್ನುವುದು ಶ್ವಾಸಕೋಶಗಳಿಗೆ ಸಂಬಂಧಿಸಿದ ದೀರ್ಘಕಾಲಿಕ ಖಾಯಿಲೆಯಾಗಿದೆ. ಶ್ವಾಸಕೋಶಗಳು (Lungs) ನಮ್ಮ ದೇಹದ ಅತ್ಯಂತ ಕ್ರಿಯಾತ್ಮಕವಾದ ಅಂಗವಾಗಿದ್ದು ದೇಹದ ಎಲ್ಲಾ ಜೀವಕೋಶಗಳಿಗೆ ಅತೀ ಅಗತ್ಯವಾದ ‘ಅಕ್ಸಿಜನ್’ (ಆಮ್ಲಜನಕ)ನ ಪೂರೈಕೆಯನ್ನು ಮಾಡುವ ಗುರುತರವಾದ ಜವಬ್ದಾರಿಯನ್ನು ಹೊಂದಿರುತ್ತದೆ. ನಾವು ಮೂಗಿನ ಮೂಲಕ ಒಳಗೆಳೆದುಕೊಂಡ ಗಾಳಿ ಶ್ವಾಸನಾಳಗಳು ಅಥವಾ ಶ್ವಾಸಮಾರ್ಗಗಳ ಮೂಲಕ ಶ್ವಾಸಕೋಶಕ್ಕೆ ತಲುಪುತ್ತದೆ. ಶ್ವಾಸಕೋಶಗಳಲ್ಲಿರುವ ಚಿಕ್ಕ ಚಿಕ್ಕ ಗಾಳಿಚೀಲಗಳ ಮುಖಾಂತರ ನಾವು ಸೇವಿಸಿದ ಗಾಳಿಯಲ್ಲಿನ ಆಮ್ಲಜನಕ ಶ್ವಾಸಕೋಶದ ಒಳಗಿರುವ ರಕ್ತನಾಳಗಳ ಒಳಗೆ ಸೇರಿಕೊಂಡು ದೇಹದ ಇತರ ಎಲ್ಲಾ ಅಂಗಾಂಗಗಳಿಗೆ, ಜೀವಕೋಶಗಳಿಗೆ ರಕ್ತದ ಮುಖಾಂತರ ಆಮ್ಲಜನಕದ ಪೂರೈಕೆಯಾಗುತ್ತಲಿರುತ್ತದೆ. ಈ ಆಮ್ಲಜನಕದ ಪೂರೈಕೆಯಲ್ಲಿ ಸ್ವಲ್ಪವಾದರೂ ವ್ಯತ್ಯಾಸವಾದಲ್ಲಿ ಉಸಿರಾಟದ ತೊಂದರೆ ಉಂಟಾಗಿ ಮನುಷ್ಯನಿಗೆ ಚಡಪಡಿಕೆ ಉಂಟಾಗುತ್ತದೆ. ಅಸ್ತಮಾ ಎನ್ನುವ ರೋಗ ಮುಖ್ಯವಾಗಿ ಈ ಶ್ವಾಸನಾಳಗಳಿಗೆ ಮತ್ತು ಶ್ವಾಸಕೋಶದ ಚಿಕ್ಕಚಿಕ್ಕ ಗಾಳಿಚೀಲಗಳಿಗೆ ಸಂಬಂಧಿಸಿದ ದೀರ್ಘಕಾಲಿಕ ರೋಗವಾಗಿದ್ದು ಸುದೀರ್ಘ ಕಾಲದ ಚಿಕಿತ್ಸೆ ಮತ್ತು ನಿರಂತರವಾದ ಆರೈಕೆ ಅತೀ ಅವಶ್ಯಕ.
ಜಾಗತಿಕವಾಗಿ ಸರಿ ಸುಮಾರು 200 ದಶ ಲಕ್ಷ ಜನರು ಅಸ್ತಮಾ ರೋಗದಿಂದ ಬಳಲುತ್ತಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸುತ್ತದೆ. ಮತ್ತು ವರ್ಷ ಒಂದರಲ್ಲಿ ಸುಮಾರು 0.2 ದಶಲಕ್ಷ ಜನರು ಅಸ್ತಮಾದಿಂದ ಮರಣ ಹೊಂದುತ್ತಾರೆ. ಭಾರತ ದೇಶದಲ್ಲಿ ಸುಮರು 15ದಶಲಕ್ಷ ಮಂದಿ ಅಸ್ತಮಾ ರೋಗಿಗಳು ಇದ್ದಾರೆ ಎಂದು ತಿಳಿದು ಬಂದಿದೆ. ವಾತಾವರಣದ ಕಾರಣಗಳು ಮತ್ತು ವಂಶವಾಹಿನಿ ಕಾರಣಗಳು ಸಂಯುಕ್ತವಾಗಿ ಅಸ್ತಮಾ ರೋಗಕ್ಕೆ ಕಾರಣವಾಗಿದೆ. ಪರಿಸರ ಮತ್ತು ಜೈವಿಕ ಕಾರಣದಿಂದಾಗಿ ಅಸ್ತಮಾ ರೋಗಿಗಳ ಶ್ವಾಸ ಮಾರ್ಗವೂ ಉರಿಯೂತದಿಂದ ಕೂಡಿರುತ್ತದೆ. ರೋಗಿಯು ತನಗೆ ಬಹಳ ಸಂವೇಧನಾ ಕಾರಕವಾಗಿರುವ ಅಲರ್ಜಿಕಾರಕ ವಸ್ತುಗಳನ್ನು ಶ್ವಾಸೋಛ್ಛಾಸ ಮಾಡಿದಾಗ ಉರಿಯೂತವನ್ನು ಮತ್ತಷ್ಟು ಕೆರಳಿಸುತ್ತದೆ. ಹೀಗಾದಾಗ ಶ್ವಾಸಮಾರ್ಗಗಳ ಉರಿಯೂತವು ಶ್ವಾಸÀಮಾರ್ಗದ ವಾಯು ಸಂಚಲನಕ್ಕೆ ಸಂಚಕಾರ ಮಾಡಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಶೀತ ಗಾಳಿ, ವೈರಾಣುಗಳು ಅಲರ್ಜಿ ಕಾರಕ ವಸ್ತುಗಳಾದ ಧೂಳು, ಮರಳು, ನಾರು ಅಥವಾ ಇನ್ನಾವುದೇ ಕಾರಣಗಳು ಶ್ವಾಸಮಾರ್ಗದ ಉರಿಯೂತವನ್ನು ಹೆಚ್ಚಾಗಿಸಿ ಅಸ್ತಮಾ ರೋಗ ಉಲ್ಬಣಿಸುವಂತೆ ಮಾಡುತ್ತದೆ.
ಅಸ್ತಮಾ ರೋಗದ ಲಕ್ಷಣಗಳು
1. ಉಬ್ಬಸ ಅಥವಾ ಉಸಿರಾಡುವ ಸಮಯದಲ್ಲಿ ಗೊರ ಗೊರ ಸದ್ದುಕೇಳಿಸುವುದು ಅಥವಾ ಉಸಿರಾಡುವಾಗ ಸಿಳ್ಳೆ ಹಾಕಿದಂತೆ ಸದ್ದು ಬರುವುದು. 2. ಎದೆ ಬಿಗಿಹಿಡಿತ, ಉಸಿರು ಕಿರಿದಾಗುವುದು, ಉಸಿರಾಡಲು ಕಷ್ಟವಾಗುವುದು 3. ವಿಪರೀತವಾದ ದೀರ್ಘಕಾಲಿಕ ಕೆಮ್ಮು 4. ವಿಪರೀತ ಮತ್ತು ನಿರಂತರ ಕೆಮ್ಮಿನಿಂದಾಗಿ ನಿದ್ರಾಹೀನತೆ, ಅಶಕ್ತಿ ಮತ್ತು ಅಸಹನೆ ನಿರುತ್ಸಾಹ… ಆಟೋಟ ಮತ್ತು ಇತರ ಚಟುವಟಿಕೆಗಳಿಂದ ದೂರ ಇರುವುದು ಇತ್ಯಾದಿ.
ಅಸ್ತಮಾ ಅಘಾತ
ಅಸ್ತಮಾ ರೋಗದಿಂದ ಬಳಲುತ್ತಿರುವವರು ದೈನಂದಿನ ಚಟುವಟಿಕೆಗಳನ್ನು ಅತಿಯಾಗಿ ಕಾಳಜಿ ವಹಿಸಬೇಕಾಗುತ್ತದೆ. ಅಲರ್ಜಿ ಕಾರಕ ವಸ್ತುಗಳಿಗೆ ಒಡ್ಡಿಕೊಂಡಾಗ ಅಸ್ತಮಾ ಕೆರಳುತ್ತದೆ. ಧೂಳಿನ ಕಣಗಳು, ಪರಾಗದ ಕಣಗಳು, ಸಾಕುಪ್ರಾಣಿಗಳ ರೋಮಗಳು, ಹುರುಪೆಗಳು ಇತ್ಯಾದಿಗಳು ಹೆಚ್ಚಾಗಿ ಅಸ್ತಮಾ ಅಲರ್ಜಿಕಾರಕ ವಸ್ತಗಳಾಗಿರುತ್ತದೆ. ಕೆಲವೊಮ್ಮೆ ಅಲರ್ಜಿಕಾರಕ ವಸ್ತುಗಳಲ್ಲದೆ ಶೀತಗಾಳಿ/ತಂಪುಗಾಳಿ, ವಾಯುಮಾಲಿನ್ಯ, ಹೊಗೆ ವಿಪರೀತ ಒತ್ತಡ ಶೀತ ಪದಾರ್ಥ ಸೇವನೆ ಅಜೀರ್ಣವಾದಾಗ ಆಹಾರದಲ್ಲಿ ವಿಷಬೆರಕೆ ಆದಾಗ ಕಲಬೆರಕೆ ಆದಾಗ ಕೂಡಾ ಅಸ್ತಮಾ ರೋಗ ಕೆರಳುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ದೈಹಿಕ ವ್ಯಾಯಾಮದ ಬಳಿಕವೂ ಅಸ್ತಮಾ ಅಘಾತ ಉಂಟಾಗಬಹುದು. ಈ ರೀತಿ ಅಸ್ತಮಾ ಕೆರಳಿದಾಗ ಶ್ವಾಸ ಮಾರ್ಗದ ಸುತ್ತಲಿರುವ ಸ್ನಾಯುಗಳು ಬಿಗಿಯಾಗಿ ಸೆಟೆದು ನಿಲ್ಲುತ್ತದೆ. ಶ್ವಾಸ ಮಾರ್ಗದ ಸುತ್ತಳತೆ ಕಡಿಮೆಯಾಗಿ ಗಾಳಿಯ ಸಂಚಲನೆ ಕುಂಠಿತವಾಗಬಹುದು. ಅದೇ ರೀತಿ ಶ್ವಾಸ ಮಾರ್ಗದೊಳಗಿನ ಒಳಪದರ ಊದಿಕೊಂಡು ಉರಿಯೂತ ಉಲ್ಬಣಿಸುತ್ತದೆ ಮತ್ತು ಶ್ವಾಸ ಮಾರ್ಗದಲ್ಲಿ ಲೊಳೆಯ ಉತ್ಪನ್ನ ಜಾಸ್ತಿಯಾಗಿ ಗಾಳಿಯ ಸಂಚಾರಕ್ಕೆ ಮತ್ತಷ್ಟು ಸಂಚಕಾರ ತರುತ್ತದೆ. ಹೀಗೆ ಗಾಳಿಯ ಸಂಚಾರವಿಲ್ಲದಾಗ ಆಮ್ಲಜನಕದ ಕೊರತೆಯಾಗಿ ರಕ್ತಕ್ಕೆ ಮತ್ತು ದೇಹದ ಇನ್ನಿತರ ತುರ್ತು ಮತ್ತು ಅನಿವಾರ್ಯ ಅಂಗಾಂಗಗಳಾದ ಮೆದುಳು ಕಿಡ್ನಿಗಳಿಗೆ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿ ಮಾರಣಾಂತಿಕವಾಗಿ ಪರಿಣಮಿಸಲೂಬಹುದು.
ಅಸ್ತಮಾ ರೋಗಕ್ಕೆ ಪರಿಹಾರ ಅಥವಾ ಸಂಪೂರ್ಣ ಚಿಕಿತ್ಸೆ ಇಲ್ಲವಾದ ಕಾರಣದಿಂದ ಪರಿಣಾಮಕಾರಿ ಚಿಕಿತ್ಸೆ ಮತ್ತು ನಿಯಂತ್ರಣದ ಮುಖಾಂತರ ಅಸ್ತಮಾದ ರೋಗದ ಲಕ್ಷಣಗಳನ್ನು ನಿಯಂತ್ರಿಸಬೇಕು. ವೈದ್ಯರ ಸಲಹೆಯಂತೆ ಸೂಕ್ತ ಕಾಲದಲ್ಲಿ ಸರಿಯಾದ ಔಷಧಿ ಸೇವಿಸುತ್ತಾ ಅಸ್ತಮಾ ಕೆರಳಿಸುವ ವಸ್ತುಗಳಿಂದ ದೂರವಿರುವುದರಲ್ಲಿಯೇ ಜಾಣತನ ಅಡಗಿದೆ.
ಅಸ್ತಮಾ ಪತ್ತೆ ಹಚ್ಚುವುದು ಹೇಗೆ ?
ಶ್ವಾಸಕೋಶದ ಸಂಬಂಧಿ ರೋಗಿಗಳು ಇರುವವರಿಗೆ “ಸ್ಪೈರೋ ಮೆಟ್ರಿ ಎಂಬ ವಿಶಿಷ್ಟ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ರೋಗಿಗಳು ದೀರ್ಘ ಉಸಿರುಗಳನ್ನು ಎಳೆದುಕೊಂಡು ಪರೀಕ್ಷೆ ಯಂತ್ರದ ಸೆನ್ಸಾರ್ ಪದರದ ಮೇಲೆ ಉಸಿರನ್ನು ಬಿಡಬೇಕು. ಈ ರೀತಿಯಿಂದ ರೋಗಿಗಳು ಉಸಿರನ್ನು ಒಳಗೆ ತೆಗೆದುಕೊಳ್ಳುವ ಮತ್ತು ಹೊರಗೆ ಬಿಡುವ ಪ್ರಮಾಣವನ್ನು ಮಾಪನ ಮಾಡಲಾಗುತ್ತದೆ. ಈ ಪರೀಕ್ಷೆಯಿಂದ ರೋಗಿಯೊಬ್ಬನ ಶ್ವಾಸಕೋಶದಿಂದ ಎಷ್ಟು ಪ್ರಮಾಣದ ಗಾಳಿಯನ್ನು ಸರಬರಾಜು ಮಾಡಲಾಗುತ್ತದೆ ಎಂಬುದನ್ನು ಮಾಪನ ಮಾಡಲಾಗುತ್ತದೆ. ಅಸ್ತಮಾ ಮತ್ತು ಇನ್ನಿತರ ಯಾವುದೇ ಶ್ವಾಸಕೋಶ ಸಂಬಂಧಿ ರೋಗಗಳಿರುವವರಿಗೆ ಸ್ಪೈರೋಮೆಟ್ರಿ ಪರೀಕ್ಷೆಯ ಮುಖಾಂತರ ರೋಗದ ತೀವ್ರತೆ ಮತ್ತು ಚಿಕಿತ್ಸೆಯ ಸ್ಪಂದನ ಹಾಗೂ ಪ್ರಗತಿಯನ್ನು ಅಂದಾಜಿಸಲಾಗುತ್ತದೆ. ಈ ಪರೀಕ್ಷೆಯು ಫಲಿತಾಂಶಕ್ಕೆ ಅನುಗುಣವಾಗಿ ಅಸ್ತಮಾದ ತೀವ್ರತೆಯನ್ನು ನಿರ್ಧರಿಸಿ ಚಿಕಿತ್ಸೆ ಮತ್ತು ಔಷಧಿಯ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಅದೇ ರೀತಿ ಅಲರ್ಜಿ ಪರೀಕ್ಷೆಯನ್ನು ನಡೆಸಿ ರೋಗಿಗಳು ಯಾವ ವಸ್ತುಗಳಿಗೆಲ್ಲಾ ಅಲರ್ಜಿಗೊಳಗಾಗುತ್ತಾರೆ ಎಂಬುದನ್ನು ತಿಳಿಯಲಾಗುತ್ತದೆ.
ಅಸ್ತಮಾ ರೋಗಕ್ಕೆ ಕಾರಣವಾಗುವ ಅಲರ್ಜಿಕಾರಕ ವಸ್ತುಗಳನ್ನು ಗುರುತಿಸಿ ಅಂತಹಾ ವಸ್ತುಗಳನ್ನು ಸೇವಿಸದಂತೆ ಅಥವಾ ವಸ್ತ್ತುಗಳಿಗೆ ಎದುರಾಗದಂತೆ ಸೂಕ್ತ ಎಚ್ಚರವನ್ನು ವಹಿಸಲಾಗುತ್ತದೆ. ಅದೇ ರೀತಿ ಎದೆಗೂಡಿನ ಎಕ್ಸರೇ, ಮೂಗಿನ ಎಲುಬಿನ ಕ್ಷ ಕಿರಣ, ದೇಹದ ರಕ್ತದಲ್ಲಿನ ಅಲರ್ಜಿಯ ಪ್ರಮಾಣ (Ig.E) ಮುಂತಾದ ಪರೀಕ್ಷೆಯ ಮುಖಾಂತರ ರೋಗಿಯನ್ನು ಕುಲಂಕುಷವಾಗಿ ಅಭ್ಯಸಿಸಿದ ಬಳಿಕವೇ ಚಿಕಿತ್ಸೆಯನ್ನು ಆರಂಭಿಸಲಾಗುತ್ತದೆ. ಒಂದು ವೇಳೆ ರೋಗಿಯು ಯಾವುದಾದರೂ ವಸ್ತುಗಳಿಗೆ ಅಲರ್ಜಿ ಹೊಂದಿದ್ದಾನೆ ಎಂಬುದು ಪರೀಕ್ಷೆಗಳಿಂದ ಸಾಬಿತಾದಲ್ಲಿ ಅಂತಹ ವಸ್ತುಗಳು ಪುನಃ ಆ ವ್ಯಕ್ತಿಗೆ ಅಸ್ತಮಾ ರೋಗವನ್ನು ಕೆರಳಿಸುವ ಸಾಧ್ಯತೆ ಅಧಿಕವಾಗಿರುತ್ತದೆ. ಈ ನಿಟ್ಟಿನಲ್ಲಿ ಸೂಕ್ತವಾದ ಪರೀಕ್ಷೆ ಮತ್ತು ಎಚ್ಚರಿಕೆಗಳನ್ನು ವಹಿಸುವುದರಿಂದ ಅಸ್ತಮಾ ಕೆರಳುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.
ಚಿಕಿತ್ಸೆ ಹೇಗೆ?
ಅಸ್ತಮಾ ಎನ್ನುವುದು ದೀರ್ಘಕಾಲಿಕ ಖಾಯಿಲೆಯಾಗಿದ್ದು ಸಂಪೂರ್ಣವಾಗಿ ರೋಗವನ್ನು ಗುಣಪಡಿಸುವುದು ಸಾಧ್ಯವಿಲ್ಲದ ಮಾತು. ಆದರೆ ಪರಿಣಾಮಕಾರಿಯಾದ ಚಿಕಿತ್ಸೆ ಮತ್ತು ಸೂಕ್ತ ಮಾರ್ಗದರ್ಶನದ ಮೂಲಕ ರೋಗದ ಲಕ್ಷಣಗಳನ್ನು ನಿಯಂತ್ರಿಸಬಹುದು. ವೈದ್ಯರು ಸೂಚಿಸಿದ ಔಷಧಿಗಳನ್ನು ಸೂಕ್ತ ಪ್ರಮಾಣದಲ್ಲಿ ಸಕಾಲದಲ್ಲಿ ಸೇವಿಸಬೇಕು. ಮತ್ತು ಅಸ್ತಮಾದ ಲಕ್ಷಣಗಳನ್ನು ಉದ್ರೇಕಿಸುವ ಅಂಶಗಳಿಂದ ದೂರವಿರುವುದು ಒಳಿತು. ಅಲರ್ಜಿಕಾರಕ ಅಂಶಗಳನ್ನು ಆದಷ್ಟು ತಪ್ಪಿಸಿಕೊಳ್ಳಬೇಕು. ಸಾಮಾನ್ಯವಾಗಿ ಅಸ್ತಮಾ ಚಿಕಿತ್ಸೆಯಲ್ಲಿ ಎರಡು ಬಗೆಯ ಮೂಲ ಔಷಧಗಳನ್ನು ಬಳಸಲಾಗುತ್ತದೆ.
1. ಅಸ್ತಮಾ ಅಘಾತವನ್ನು ತಡೆಯುವ ನಿಯಂತ್ರಣ ಔಷಧಿಗಳು : ಈ ರೀತಿಯ ಔಷಧಿಗಳು ಅಸ್ತಮಾ ರೋಗ ಲಕ್ಷಣಗಳನ್ನು ಪರಿಣಾಮಕಾರಿಯಗಿ ನಿಯಂತ್ರ್ರಿಸುತ್ತದೆ. ಮತ್ತು ಅಸ್ತಮಾ ರೋಗಕ್ಕೆ ಕಾರಣವಾಗಿರುವ ಉರಿಯೂತದಂತಹಾ ತೊಂದರೆಗಳು ಮರುಕಳಿಸದಂತೆ ಮತ್ತು ನಿರಂತರವಾಗಿರದಂತೆ ನಿಯಂತ್ರಿಸುತ್ತದೆ. ಆದರೆ ಅಸ್ತಮಾ ರೋಗದ ಸಂಪೂರ್ಣ ನಿಯಂತ್ರಣಕ್ಕಾಗಿ ರೋಗಿಗಳು ಈ ಔಷಧಿಗಳನ್ನು ಪ್ರತೀ ದಿನ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ರೋಗಿಗಳು ಸಹಜ ಸ್ಥಿತಿಯಲ್ಲಿರುವ ಸಮಯದಲ್ಲಿಯೂ ಈ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸೇದಬಹುದಾದ ಅಥವಾ ಶ್ವಾಸದ ಮುಖಾಂತರ ಒಳಗೆಳೆದುಕೊಳ್ಳಬಹುದಾದ ಸಿರಾಯ್ಡ್ಗಳು ಬಹಳ ಪರಿಣಾಮಕಾರಿಯಾದ ಮತ್ತು ದೀರ್ಘಕಾಲಿಕ ಅಸ್ತಮಾ ನಿಯಂತ್ರಣಕ್ಕಾಗಿ ಬಳಸುವ ಔಷಧಿಯಾಗಿರುತ್ತದೆ. ಈ ರೀತಿ ಔಷಧಿಯ ಬಳಕೆಯಿಂದ ಅಸ್ತಮಾ ರೋಗದ ಲಕ್ಷಣವು ಕಡಿಮೆಯಾಗಿ ಆರೋಗ್ಯ ವೃದ್ಧಿಯಾಗುತ್ತದೆ. ಅಸ್ತಮಾ ತೀವ್ರ ಅಘಾತದ ಪ್ರಮಾಣ ಕಡಿಮೆಯಾಗಿ ಕ್ಷಿÀ್ಲಪ್ರ ಉಪಶಮನಕಾರಿ ಔಷಧಿಗಳ ಬಳಕೆ ಕೂಡಾ ಕಡಿಮೆಯಾಗುತ್ತದೆ. ಒಟ್ಟಿನಲ್ಲಿ ಈ ರೀತಿಯ ಔಷಧಿಗಳು ಹೆಚ್ಚು ಅಸ್ತಮಾ ರೋಗವನ್ನು ತಡೆಗಟ್ಟುವಲ್ಲಿ ಮತ್ತು ರೋಗ ಉಲ್ಬಣಗೊಳ್ಳದಂತೆ ತಡೆಯುವ ಕೆಲಸವನ್ನು ಪರಿಣಾಮಕಾರಿಯಾಗಿ ನಡೆಸುತ್ತದೆ.
2. ಕ್ಷಿಪ್ರ ಉಪಶಮನಕಾರಿ ಔಷಧಿಗಳು : ಸಾಮಾನ್ಯವಾಗಿ ಅಸ್ತಮಾ ಅಘಾತದ ಸಂದರ್ಭದ ಈ ಕ್ಷಿಪ್ರ ಉಪಶಮನಕಾರಿ ಔಷಧಿಗಳನ್ನು ಬಳಸಲಾಗುತ್ತದೆ. ಈ ಔಷಧಿಗಳು ಜೀವ ಸಂರಕ್ಷಣಾ ಔಷಧಿಗಳಾಗಿದ್ದು ಅಸ್ತಮಾ ಕೆರಳಿದ ತಕ್ಷಣ ಉಪಶಮನ ದೊರಕಲು ತೆಗೆದುಕೊಳ್ಳಬೇಕಾಗುತ್ತದೆ. ಈ ಜೀವ ರಕ್ಷಕ ಔಷಧಿಗಳು ಶ್ವಾಸನಾಳಗಳನ್ನು ಹಿಗ್ಗಿಸಿ ಗಾಳಿಯ ಚಲನೆಯನ್ನು ಹೆಚ್ಚಿಸಿ ರೋಗದ ಲಕ್ಷಣಗಳನ್ನು ಕುಗ್ಗಿಸಿ ತ್ವರಿತ ಆರಾಮ ನೀಡುತ್ತದೆ. ಈ ರೀತಿಯ ಕ್ಷಿಪ್ರ ಉಪಶಮನಕಾರಿ ಔಷಧಿಗಳನ್ನು ನಿಯಂತ್ರಕ ಔಷಧಿಗಳ ಬದಲಾಗಿ ತೆಗೆದುಕೊಳ್ಳಬಾರದು. ನಿಮ್ಮ ಔಷಧಿಗಳ ಬಗ್ಗೆ ಯಾವುದೇ ಸಂದೇಹವಿದ್ದಲ್ಲಿ ತಜ್ಞ ವೈದ್ಯರ ಬಳಿ ಸೂಕ್ತ ಮಾರ್ಗದರ್ಶನ ತೆಗೆದುಕೊಂಡಲ್ಲಿ ಉತ್ತಮ. ನೆನಪಿರಲಿ ಪ್ರತಿಯೊಬ್ಬ ಅಸ್ತಮಾ ರೋಗಿಯು ತನ್ನ ಬಳಿ ಈ ಕ್ಷಿಪ್ರ ಉಪಶಮನ ಔಷಧಿಗಳನ್ನು ಇಟ್ಟುಕೊಳ್ಳುವುದು ಅತೀ ಅವಶ್ಯಕ. ಇಲ್ಲವಾದಲ್ಲಿ ಅಪಾಯ ಕಟ್ಟಿಟ ಬುತ್ತಿ.
ತಡೆಗಟ್ಟುವುದು ಹೇಗೆ ?
ಅಸ್ತಮಾ ರೋಗಕ್ಕೆ ಸಂಪೂರ್ಣ ಪರಿಹಾರವಿಲ್ಲದ ಕಾರಣ ತಡೆಗಟ್ಟುವ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ವ್ಯಕ್ತಿಯು ಯಾವ ಕಾರಣಕ್ಕಾಗಿ ಅಸ್ತಮಾರೋಗಕ್ಕೆ ತುತ್ತಾಗುತ್ತಾನೆ ಎಂಬುದನ್ನು ಅರಿತು ಅಲರ್ಜಿ ಕಾರಕ ವಸ್ತುಗಳನ್ನು ವ್ಯಕ್ತಿಯ ಸಂಪರ್ಕಕ್ಕೆ ಬರದಂತೆ ಎಚ್ಚರ ವಹಿಸಬೇಕು. ಉದಾ: ಧೂಳು, ಧೂಮಪಾನದ ಹೊಗೆ, ಆಸ್ಪ್ಪರೀನ್ ಮುಂತಾದ ನೋವು ನಿವಾರಕ ಔಷಧಿಗಳು, ಸಾಕು ಪ್ರಾಣಿಗಳ ರೋಮ, ಅಲರ್ಜಿಕಾರಕ ಆಹಾರ ಪದಾರ್ಥಗಳು. ಚಾಕಲೇಟು ಇತ್ಯಾದಿ. ಜೀವನ ಶೈಲಿಯ ಪರಿವರ್ತನೆಗೆ ಹೆಚ್ಚಿನ ಒತ್ತು ನೀಡಿ ವಾತವರಣದಲ್ಲಿನ ಅಲರ್ಜಿಕಾÀರಕ ವಸ್ತುಗಳು ಅಥವಾ ರಾಸಾಯನಿಕಗಳ ಸಂಪರ್ಕಕ್ಕೆ ಬರದಂತೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ.
ಕೋವಿಡ್-19 ಮತ್ತು ಅಸ್ತಮಾ -ಹತ್ತು ಪ್ರಶ್ನೆಗಳು
1) ಅಸ್ತಮಾ ರೋಗ ಇರುವವರಿಗೆ ಕೋವಿಡ್-19 ಬರುವ ಸಾಧ್ಯತೆ ಹೆಚ್ಚು ಇದೆಯಾ?
ಕೋವಿಡ್-19 ವೈರಾಣು ಸೋಂಕು ನೇರವಾಗಿ ಶ್ವಾಸಕೋಶಕ್ಕೆ ದಾಳಿ ಮಾಡುವ ಕಾರಣದಿಂದಾಗಿ ಅಸ್ತಮಾ ಅಥವಾ ಇನ್ನಾವುದೇ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗ ಇರುವವರು ಹೆಚ್ಚಿನ ಜಾಗರೂಕತೆ ಮಾಡಬೇಕಾಗುತ್ತದೆ. ಅಸ್ತಮಾ ಇರುವವರಿಗೆ ಕೋವಿಡ್-19 ರೋಗ ಜಾಸ್ತಿ ಜಾಸ್ತಿ ಕಾಡುತ್ತದೆ ಎಂಬ ವಿಚಾರಕ್ಕೆ ಯಾವುದೇ ಪೂರಕ ದಾಖಲೆ ಇಲ್ಲ. ಆದರೂ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶಕ್ಕಿಂತ ಅಸ್ತಮಾ ಬಾಧಿತ ವ್ಯಕ್ತಿಯ ಶ್ವಾಸಕೋಶ ದುರ್ಬಲವಾಗಿರುತ್ತದೆ. ಈ ಕಾರಣದಿಂದ ಅಸ್ತಮಾ ಬಾಧಿತರು ಹೆಚ್ಚು ಕೋವಿಡ್-19 ರೋಗಕ್ಕೆ ತೆರೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಅಂದಾಜಿಸಲಾಗಿದೆ. COPD ಎಂಬ ಶ್ವಾಸಕೋಶಕ್ಕೆ ಸಂಬಂಧಿಸಿದ ದೀರ್ಘಕಾಲಿಕ ಕಾಯಿಲೆ ಇರುವವರು ಮತ್ತು ಅಸ್ತಮಾ ರೋಗಿಗಳಿಗೆ ಕೋವಿಡ್-19 ರೋಗ ತಗಲಿದರೆ ಅವರನ್ನು ಹೆಚ್ಚಿನ ಸಂದರ್ಭಗಳಲ್ಲಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ದಾಖಲು ಮಾಡಿ ಚಿಕಿತ್ಸೆ ನೀಡಬೇಕಾದ ಸನ್ನಿವೇಶ ಉಂಟಾಗಬಹುದು. ಆದರೆ ಸಾವಿನ ಅನುಪಾತ ಇತರರಷ್ಟೆ ಇದೆ ಎಂದೂ ಅಂಕಿ ಅಂಶಗಳು ತಿಳಿಸಿದೆ.
2) ಅಸ್ತಮಾ ಮತ್ತು ಇತರ ಶ್ವಾಸಕೋಶ ಸಂಬಂಧ ರೋಗ ಇರುವವರು ಯಾವ ಮುನ್ನೆಚ್ಚರಿಕೆ ವಹಿಸಬೇಕು?
ಇತರ ಎಲ್ಲಾ ಸಾಮಾನ್ಯ ಜನರು ವಹಿಸುವಂತಹ ಮುನ್ನೆಚ್ಚರಿಕೆಗಳಾದ ಮುಖಕವಚ ಧರಿಸುವಿಕೆ, ಸಾಮಾಜಿಕ ಅಂತರ ಇಟ್ಟುಕೊಳ್ಳುವುದು, ಸೋಪಿನ ದ್ರಾವಣದಿಂದ ಗಂಟೆÀಗೊಮ್ಮೆ ಕೈ ತೊಳೆದುಕೊಳ್ಳುವುದು, ಮುಖ, ಕಣ್ಣು, ಮೂಗು, ಬಾಯಿಯನ್ನು ಮುಟ್ಟದಿರುವುದು ಮುಂತಾದ ಎಲ್ಲಾ ಜಾಗರೂಕತೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು. ಅಸ್ತಮಾಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ಸೂಕ್ತ ನಿಗಾ ವಹಿಸುವುದು ಅಸ್ತಮಾ ಔಷಧಿಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳಲೇಬೇಕು. ಸಾಮಾನ್ಯ ಪ್ಲೂ ರೋಗಕ್ಕೆ ನೀಡಬಹುದಾದ ಲಸಿಕೆಗಳನ್ನು ತೆಗೆದುಕೊಳ್ಳದಿದ್ದಲ್ಲಿ ಅದನ್ನು ತೆಗೆದುಕೊಳ್ಳುವುದು ಸೂಕ್ತ. ಯಾವುದೇ ಕಾರಣಕ್ಕೂ ಅಸ್ತಮಾವನ್ನು ಉಲ್ಭಣಿಸುವ ಆಹಾರ ಅಥವಾ ಇತರ ಕಾರಣಗಳನ್ನು ತಪ್ಪಿಸುವ ಮೂಲಕ ಶ್ವಾಸಕೋಶಗಳು ಆರೋಗ್ಯಪೂರ್ಣವಾಗಿರುವಂತೆ ನೋಡಿಕೊಳ್ಳಬೇಕು.
3) ಮೂಗಿನ ಮುಖಾಂತರ ಬಳಸುವ ಸ್ಟೀರಾಯ್ಡು ಸ್ಪ್ರೇ ಬಳಸಬಹುದು?
ಯಾವುದೇ ಕಾರಣಕ್ಕೂ ಇದನ್ನು ನಿಲ್ಲಿಸಬಾರದು. ಇದರಿಂದ ಯಾವುದೇ ರೀತಿಯ ಕಿರುಹನಿಗಳು ವಾತಾವರಣಕ್ಕೆ ಬಿಡುಗಡೆಯಾಗದು. ಬಳಸಿದ ಬಳಿಕ ಸ್ಪ್ರೇ ಮಾಡುವ ಸಾಧನದ ತುದಿಯನ್ನು ಚೆನ್ನಾಗಿ ಒರೆಸಬೇಕು. ಹೀಗೆ ಒರೆಸಿದ ಬಟ್ಟೆ ಅಥವಾ ಕಾಗದವನ್ನು ಮರು ಬಳಕೆ ಮಾಡಬೇಡಿ. ತಕ್ಷಣವೇ ವಿಸರ್ಜಿಸಿ. ಆ ಬಳಿಕ 20 ಸೆಕೆಂಡುಗಳ ಕಾಲ ಸೋಪಿನಿಂದ ಕೈತೊಳೆಯಿರಿ. ಯಾವುದೇ ಕಾರಣಕ್ಕೂ ಈ ಸಾಧನವನ್ನು ಇತರರ ಜೊತೆ ಹಂಚಿಕೊಳ್ಳಬೇಡಿ.
4) ಆಂಟಿಹಿಸ್ಟಮೈನ್ ಬಳಕೆಯಿಂದ ದೇಹದ ರಕ್ಷಣಾ ವ್ಯವಸ್ಥೆ ಕುಂಠಿತಗೊಳ್ಳಬಹುದೇ?
ಆಂಟಿಹಿಸ್ಟಮೈನ್ ಬಳಕೆಯಿಂದ ರಕ್ಷಣಾ ಶಕ್ತಿ ಕುಂದುವುದಿಲ್ಲ. ಅತೀ ಅಗತ್ಯವಿದ್ದಲ್ಲಿ ಅವುಗಳನ್ನು ಬಳಸಬಹುದಾಗಿದೆ.
5) ಅಸ್ತಮಾ ಔಷಧಿಯನ್ನು ಹೆಚ್ಚು ಸಂಗ್ರಹ ಮಾಡಿ ಇಡಬೇಕಾದ ಅವಶ್ಯತೆ ಇದೆಯಾ?
ಕರೋನಾ ರೋಗದ ಸಂದರ್ಭದಲ್ಲಿ ಕನಿಷ್ಟ ಒಂದು ತಿಂಗಳಿಗೆ ಬೇಕಾದ ಔಷಧಿ ಸಂಗ್ರಹವಿರುವುದು ಸೂಕ್ತ. ಅದಕ್ಕಿಂತ ಜಾಸ್ತಿ ಸಂಗ್ರಹ ಮಾಡಬೇಕಾದ ಅನಿವಾರ್ಯತೆ ಇಲ್ಲ. ಜೀವರಕ್ಷಕ ಔಷಧಿಗಳು ಎಲ್ಲ ಸಂದರ್ಭಗಳಲ್ಲಿ ದೊರಕುತ್ತದೆ.
6) ಅಸ್ತಮಾ ರೋಗಿಗಳು ಬಳಸುವ ಸ್ಟಿರಾಯ್ಡುಯುಕ್ತ ನೇಸಲ್ಸ್ಪ್ರೇ ಬಳಕೆಯಿಂದ ರಕ್ಷಣಾ ಶಕ್ತಿ ಕುಂದಿ, ಕೋವಿಡ್-19 ಬರುವ ಸಾಧ್ಯತೆ ಇದೆಯಾ?
ಅಸ್ತಮಾ ರೋಗಕ್ಕೆ ಬಳಸುವ ನೇಸಲ್ ಸ್ಪ್ರೇಯಲ್ಲಿ ಸ್ಟೀರಾಯ್ಡು ಕನಿಷ್ಟ ಪ್ರಮಾಣದಲ್ಲಿ ಇರುತ್ತದೆ. ಇದರಿಂದ ದೇಹದ ರಕ್ಷಣಾ ವ್ಯವಸ್ಥೆ ಕುಂದುವುದಿಲ್ಲ. ಯಾವುದೇ ಕಾರಣಕ್ಕೂ ಈ ಔಷಧಿ ನಿಲ್ಲಿಸಬೇಡಿ. ನಿಮ್ಮ ದೈನಂದಿನ ಅಸ್ತಮಾ ಸಂಬಂಧಿತ ಎಲ್ಲಾ ಔಷಧಿಗಳನ್ನು ವೈದ್ಯರ ಸೂಚನೆ ಇಲ್ಲದೆ ನಿಲ್ಲಿಸಬೇಡಿ. ಅಸ್ತಮಾ ನಿಯಂತ್ರಣದಲ್ಲಿಡಬೇಕಾದ ಎಲ್ಲಾ ಔಷಧಿಗಳನ್ನು ಚಾಚೂ ತಪ್ಪದೆ ಬಳಸತಕ್ಕದ್ದು.
7) ಅಸ್ತಮಾ ರೋಗಿಗಳು ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವ ಸಂದರ್ಭದಲ್ಲಿ ಶೀತ ಜ್ವರ ಕಂಡುಬಂದಲ್ಲಿ ಏನು ಮಾಡಬೇಕು?
ಇಂತಹಾ ಸಂದರ್ಭಗಳಲಿ ತಕ್ಷಣವೇ ವೈದ್ಯರನ್ನು ಕಾಣಬೇಕು. ಸ್ವಂತ ಔಷಧಿಗಾರಿಕೆ ಮಾಡಬೇಡಿ ವೈದ್ಯರ ಸಲಹೆ, ಸೂಚನೆ ಮೇರೆಗೆ ಔಷಧಿ ತೆಗೆದುಕೊಳ್ಳತಕ್ಕದ್ದು.
8) ನ್ಯೂಮೋನಿಯಾ ಲಸಿಕೆ ಹಾಕಿದ ಮೇಲೆಯೂ ಅಸ್ತಮಾ ರೋಗಿಗಳಿಗೆ ಕೋವಿಡ್-19 ಬರಬಹುದೇ?
ಖಂಡಿತವಾಗಿಯೂ ಬರುವ ಸಾಧÀ್ಯತೆ ಇದೆ. ಕೋವಿಡ್-19 ರೋಗಕ್ಕೆ ಲಸಿಕೆ ಇರುವುದಿಲ್ಲ. ಬ್ಯಾಕ್ಟಿರಿಯಾದಿಂದ, ನ್ಯೂಮೋನಿಯಾ ಬರದಂತೆ ನ್ಯೂಮೋರಾಕಲ್ ಲಸಿಕೆ ಹಾಕಲಾಗುತ್ತದೆ. ಇದರಿಂದ ಬ್ಯಾಕ್ಟೀರಿಯಾ ಸಂಬಂಧಿತ ನ್ಯೂಮೋನಿಯಾ ರೋಗ ಬರುವುದಿಲ್ಲ. ಈ ಕಾರಣದಿಂದ ಸೂಕ್ತ ಮುನ್ನೆಚ್ಚರಿಕೆ ವಹಿಸಲೇಬೇಕು.
9) ಅಸ್ತಮಾ ರೋಗಿಗಳು ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವ ಸಂದರ್ಭದಲ್ಲಿ ಪಲ್ಸ್ ಆಕ್ಸಿಮೀಟರ್ ಬಳಸಬಹುದೇ?
ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ಪತ್ತೆಹಚ್ಚುವ ಸಾಧನಕ್ಕೆ ಪಲ್ಸ್ ಆಕ್ಸಿಮೀಟರ್ ಎನ್ನಲಾಗುತ್ತದೆ. 92 ರಿಂದ 100 ಶೇಕಡಾ ಆಕ್ಸಿಜನ್ ಪ್ರಮಾಣ ಇದ್ದರೆ ನಾರ್ಮಲ್ ಎನ್ನಲಾಗುತ್ತದೆ. 90ಕ್ಕಿಂತ ಕಡಿಮೆ ಇದ್ದಲ್ಲಿ ವೈದ್ಯರ ಸಲಹೆ ಅಗತ್ಯ. ಯಾಂತ್ರಿಕವಾಗಿ ಆಮ್ಲಜನಕ ಪ್ರಮಾಣ ಪತ್ತೆಹಚ್ಚುವ ಯಂತ್ರಗಳು ನಿಖರವಾದ ಮಾಹಿತಿ ನೀಡುವುದಿಲ್ಲ. ಈ ಕಾರಣದಿಂದ ಇದರ ಬಳಕೆ ಸೂಕ್ತವಲ್ಲ. ಇನ್ನೂ ಕೋವಿಡ್-19 ರೋಗದಲ್ಲಿ ಆಮ್ಲಜನಕ ಪ್ರಮಾಣ ಬೇಗನೆ ಕುಸಿಯುತ್ತದೆ. ಈ ಕಾರಣದಿಂದ ಅಸ್ತಮಾ ರೋಗಿಗಳು ಈ ಯಂತ್ರ ಬಳಸಿ ತಪ್ಪು ಮಾಹಿತಿ ಪಡೆದು, ನಿಶ್ಚಿಂತೆಯಾಗಿರುವುದು ಸೂಕ್ತವಲ್ಲದ ಕಾರಣ, ಈ ಯಂತ್ರದ ಬಳಕೆ ಮನೆಯಲ್ಲಿ ಸೂಕ್ತವಲ್ಲ ಎನ್ನಲಾಗಿದೆ.
10) ಅಸ್ತಮಾ ಇರುವವರು ಯಾವ ರೀತಿಯ ಆಹಾರ ಪದಾರ್ಥ ಸೇವನೆ ಮಾಡಬೇಕು?
ಜಾಸ್ತಿ ಸಿದ್ಧ ಆಹಾರ ಮತ್ತು ರಾಸಾಯನಿಕಯುಕ್ತ ರೆಡಿಮೇಡ್ ಆಹಾರ ಬಳಸುವುದರಿಂದ ಅಸ್ತಮಾ ರೋಗಿಗಳಿಗೆ ತೊಂದರೆ ಜಾಸ್ತಿಯಾಗಬಹುದು. ಹೆಚ್ಚು ಹೆಚ್ಚು ಹಸಿ ತರಕಾರಿ ಮತ್ತು ಹಣ್ಣುಹಂಪಲುಯುಕ್ತ ಆಹಾರಸೇವನೆ ಒಳ್ಳೆಯದು. ಜಾಸ್ತಿ ವಿಟಮಿನ್-ಡಿ ಇರುವ, ಹಾಲು, ಮೊಟ್ಟೆ ತೆಗೆದುಕೊಳ್ಳಬೇಕು. ಅದೇ ರೀತಿ ವಿಟಮಿನ್ ಎ ಇರುವ ಕ್ಯಾರೆಟ್, ಗೆಣಸು, ಬ್ರೊಕೋಲಿ, ಹಸಿರು ತರಕಾರಿಗಳಾದ ಬಸಳೆ, ಹರಿವೆ ಹೆಚ್ಚು ತಿನ್ನಬಹುದಾಗಿದೆ. ಏಪಲ್ ಮತ್ತು ಬಾಳೆ ಹಣ್ಣಿನಲ್ಲಿ ಹೆಚ್ಚಿನ ಆಂಟಿಆಕ್ಸಿಡೆಂಟ್ ಮತ್ತು ಮೆಗ್ನಿಸಿಯಂ ಇರುವ ಕಾರಣ ಶ್ವಾಸಕೋಶದ ಕಾರ್ಯಕ್ಷಮತೆ ಹೆಚ್ಚಿಸಿ ಅಸ್ತಮಾ ಬರದಂತೆ ಮಾಡುತ್ತದೆ ಎನ್ನಲಾಗಿದೆ. ಕರಿದ ತಿಂಡಿಗಳು, ಇಂಗಾಲಯುಕ್ತ ಪೇಯ, ಬೀನ್ಸ್, ಕ್ಯಾಬೇಜ್, ನೀರುಳ್ಳಿ ಬಳಕೆ ಕಡಿಮೆ ಮಾಡಬೇಕು. ಆಹಾರವನ್ನು ಶೇಖರಣೆ ಮಾಡಲು ಪೂರಕವಾಗಿ ಬಳಸುವ ಆಹಾರ ಕೆಡದಂತೆ ಬಳಸುವ ರಾಸಾಯನಿಕಗಳು ಇರುವ ಆಹಾರಗಳನ್ನು ಸೇವನೆ ಮಾಡಲೇಬಾರದು.
ಮುಕ್ತಾಯದ ಮುನ್ನ
– ಡಾ|| ಮುರಲೀ ಮೋಹನ್ ಚೂಂತಾರು
ಅಸ್ತಮಾ ರೋಗ ಬಹಳ ಹಳೆಯ ರೋಗವಾಗಿದ್ದು ಪುರಾತನ ಈಜಿಪ್ಟ್ ಇತಿಹಾಸದಲ್ಲಿ 500 BC ಯ ಸಮಯದಲ್ಲಿಯೂ ದಾಖಲಾದ ಬಗ್ಗೆ ವಿವರಗಳು ಇದೆ. ಆ ಕಾಲದಲ್ಲಿ “ಕೈಪಿ” ಎಂಬ ರಾಸಾಯನಿಕ ಮಿಶ್ರಿತ ನೀರಿನ ಮುಖಾಂತರ ಚಿಕಿತ್ಸೆ ನೀಡಿದ ದಾಖಲೆಗಳು ಇದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಅಥವಾ ಶೀತ ಹವೆಯಲ್ಲಿ ರಕ್ತನಾಳಗಳು ಸಂಕುಚಿತಗೊಂಡು ಶ್ವಾಸಕೋಶ ಸಂಬಂಧಿ ಹೆಚ್ಚಿನ ರೋಗಗಳು ಉಲ್ಬಣಗೊಳ್ಳುವುದು ಸಹಜ. ಅಸ್ತಮಾ ರೋಗ ಕೂಡಾ ಇದಕ್ಕೆ ಹೊರತಾಗಿಲ್ಲ. ಸಂಪೂರ್ಣವಾದ ಪರಿಹಾರ ಈ ರೋಗಕ್ಕೆ ಇಲ್ಲದಿದ್ದರೂ ಸೂಕ್ತ ಔಷಧಿಗಳನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಂಡಲ್ಲಿ ಅಸ್ತಮಾ ರೋಗ ಉಲ್ಬಣವಾಗದಂತೆ ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಿದೆ. ಕಾಲಕಾಲಕ್ಕೆ ವೈದ್ಯರನ್ನು ಕಂಡು ರೋಗದ ಲಕ್ಷಣಗಳು ಮರುಕಳಿಸದಂತೆ ಎಚ್ಚರ ವಹಿಸಿದಲ್ಲಿ ಅಸ್ತಮಾ ರೋಗ ನಮ್ಮ ದೈನಂದಿನ ಚಟುವಟಿಕೆಗಳಿಗೆ ಯಾವುದೇ ತೊಡಕಾಗದಂತೆ ಮಾಡಬಹುದು. ಅಸ್ತಮಾ ರೋಗದ ಸೂಕ್ತ ನಿರ್ವಹಣೆಯಲ್ಲಿ ರೋಗದ ಚಿಕಿತ್ಸೆಗಿಂತ ರೋಗ ತಡೆಗಟ್ಟುವ ಪ್ರಕ್ರಿಯೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ.
ಡಾ|| ಮುರಲೀ ಮೋಹನ್ ಚೂಂತಾರು ಸುರಕ್ಷಾದಂತ ಚಿಕಿತ್ಸಾಲಯ, ಹೊಸಂಗಡಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.