ತುಮಕೂರು: ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಬೇರೆ ರಾಜ್ಯ/ ಜಿಲ್ಲೆ/ ತಾಲ್ಲೂಕುಗಳಿಂದ ಜಿಲ್ಲೆಗೆ ಬಂದು ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರಿಗೆ ಪ್ರಧಾನ ಮಂತ್ರಿಗಳ ಆತ್ಮ ನಿರ್ಭರ್ ಭಾರತ್ ಯೋಜನೆಯಡಿ 2020ರ ಮೇ ಹಾಗೂ ಜೂನ್ ಮಾಹೆಗಾಗಿ ಪಡಿತರ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರು ತಾವು ಕೆಲಸ ಮಾಡುತ್ತಿರುವ ಸ್ಥಳದ ಹತ್ತಿರದಲ್ಲಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಪಡಿತರ ಪಡೆಯುವ ವ್ಯವಸ್ಥೆ ಮಾಡಲಾಗಿದ್ದು, ಮೇ ಮಾಹೆಯ ಪಡಿತರ(ಪ್ರತಿ ಫಲಾನುಭವಿಗೆ 5 ಕೆ.ಜಿ. ಅಕ್ಕಿ)ವನ್ನು ಮೇ 26 ರಿಂದ 31ರವರೆಗೂ ವಿತರಿಸಲಾಗುವುದು. ಅದೇ ರೀತಿ ಜೂನ್ ಮಾಹೆಯ ಪಡಿತರ(5 ಕೆ.ಜಿ. ಅಕ್ಕಿ ಹಾಗೂ ಕೇಂದ್ರ ಸರ್ಕಾರದಿಂದ ನೀಡುವ ಕಡಲೆ ಕಾಳು)ವನ್ನು ಜೂನ್ 1 ರಿಂದ 10ರವರೆಗೆ ವಿತರಿಸಲಾಗುವುದು. ಮೇ ತಿಂಗಳಲ್ಲಿ ಆಹಾರಧಾನ್ಯವನ್ನು ಪಡೆಯದ ವಲಸೆ ಕಾರ್ಮಿಕ ಫಲಾನುಭವಿಗಳಿಗೆ ಜೂನ್ ತಿಂಗಳಲ್ಲಿ ಒಟ್ಟಿಗೆ 10 ಕೆ.ಜಿ. ಅಕ್ಕಿ ಮತ್ತು ಕೇಂದ್ರ ಸರ್ಕಾರದಿಂದ ಹಂಚಿಕೆಯಾಗುವ ಕಡಲೆ ಕಾಳನ್ನು ವಿತರಿಸಲಾಗುವುದು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ವಲಸೆ ಕಾರ್ಮಿಕರಿಂದ ಕೆಲಸ ಮಾಡಿಸಿಕೊಳ್ಳುತ್ತಿರುವ ಸಂಸ್ಥೆಗಳು ಉಚಿತ ಪಡಿತರ ವಿತರಣೆ ಬಗ್ಗೆ ವಲಸೆ ಕಾರ್ಮಿಕರಿಗೆ ಮಾಹಿತಿ ನೀಡಿ, ಈ ಸೌಲಭ್ಯ ಪಡೆಯುವಂತೆ ತಿಳಿಸತಕ್ಕದ್ದು. ಹೆಚ್ಚಿನ ವಿವರಗಳಿಗೆ ಆಯಾ ತಾಲ್ಲೂಕಿನ ತಹಶೀಲ್ದಾರ್ ಕಛೇರಿಯ ಆಹಾರ ಶಾಖೆಯನ್ನು ಸಂಪರ್ಕಿಸಬಹುದಾಗಿದೆ.
ಉಚಿತ ಪಡಿತರ ಸೌಲಭ್ಯ ಪಡೆಯುವ ವಲಸಿಗ ಫಲಾನುಭವಿಗಳು ಯಾವುದೇ ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರಬಾರದು. ಪ್ರತಿ ಫಲಾನುಭವಿಯು ಕಡ್ಡಾಯವಾಗಿ ಆಧಾರ್ ಕಾರ್ಡ್/ ಸಂಖ್ಯೆಯನ್ನು ಹೊಂದಿರಬೇಕು. ಸ್ವಂತ ಮನೆ ಹೊಂದಿರುವವರು ಮತ್ತು ಆದಾಯ ತೆರಿಗೆ ಪಾವತಿದಾರರು ಈ ಸೌಲಭ್ಯ ಪಡೆಯಲು ಅರ್ಹರಲ್ಲ.
ಪಡಿತರ ಪಡೆಯುವಾಗ ನ್ಯಾಯಬೆಲೆ ಅಂಗಡಿಯಲ್ಲಿ ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಒದಗಿಸಬೇಕು. ಫಲಾನುಭವಿ ಯಾವುದಾದರೂ ಒಂದು ಮೊಬೈಲ್ ಸಂಖ್ಯೆಯನ್ನು ನ್ಯಾಯಬೆಲೆ ಅಂಗಡಿಯವರಿಗೆ ನೀಡಿ ಓ.ಟಿ.ಪಿ ಮುಖಾಂತರ ಪಡಿತರವನ್ನು ಪಡೆಯಬಹುದಾಗಿದೆ.
ಸರ್ಕಾರದ ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರ ಹಿತರಕ್ಷಣೆಗೆ ಈ ಸೌಲಭ್ಯವನ್ನು ಒದಗಿಸಿದ್ದು, ಯಾರಾದರೂ ತಪ್ಪು ಮಾಹಿತಿ ನೀಡಿ ಈ ಸೌಲಭ್ಯ ಪಡೆದುಕೊಂಡಲ್ಲಿ ‘ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 52 ರಡಿ’ ಒಂದು ವರ್ಷದಿಂದ ಎರಡು ವರ್ಷದವರೆಗೆ ಜೈಲು ವಾಸದ ಜೊತೆಗೆ ದಂಡವನ್ನು ವಿಧಿಸಲಾಗುವುದು. ಅದೇ ರೀತಿ ಸ್ಥಳೀಯರೂ ಸಹ ಸುಳ್ಳು ಮಾಹಿತಿ ನೀಡಿ ಈ ಪಡಿತರ ಸೌಲಭ್ಯವನ್ನು ಪಡೆಯತಕ್ಕದ್ದಲ್ಲ ಎಂದು ಅವರು ತಿಳಿಸಿದ್ದಾರೆ.