“ಅಕ್ಕರೆಯ ಅದುಮಿಟ್ಟ ತ್ಯಾಗದ ದೊರೆ ಅಪ್ಪಾ”…(ಲೇಖನ)

ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಬೆಂಗಳೂರಿನ ಒಂದು ಸಂಜೆಯ ಸಮಯ, ಕೆಲವರು ಕೆಲಸ ಮುಗಿಸಿ ತಮ್ಮ ಮನೆ ಕಡೆಗೆ ಅವಸರದ ಹೆಜ್ಜೆ ಇಡುತ್ತಿದ್ದರೆ ಇನ್ನು ಕೆಲವರು ಜೀವನದ ಭಾರವನ್ನು ಹೊತ್ತು ಇನ್ನೂ ಅಲೆದಾಡುತ್ತಿದ್ದರು.

ಕೊರೋನ ಜನರ ಮನಸ್ಸಿನಲ್ಲಿ ಭಯ ಸೃಷ್ಟಿಸಿರುವುದರಿಂದ ವ್ಯಾಪಾರ ಇಲ್ಲದೆ ನಾನೂ ಅಂಗಡಿಯಲ್ಲಿ ಸುಮ್ಮನೇ ಕುಳಿತಿದ್ದೆ. ತಟ್ಟನೇ ಒಬ್ಬರು ಅಂಗಡಿ ಮುಂದೆ ಪ್ರತ್ಯಕ್ಷವಾದರು. ಬಂದವರೇ ಅಂದಾಜು 50-55 ವರ್ಷ ಪ್ರಾಯ ಇರುವಂತೆ ಕಾಣುತ್ತಿತ್ತು ಜೊತೆಗೆ ಒಂದು ಹಳೇ ಬಟ್ಟೆ ತೊಟ್ಟಿದ್ದರು. ಮುಖದಲ್ಲಿ ಅದೇನೋ ಭಯ, ಕಷ್ಟ ಎಲ್ಲವೂ ತುಂಬಿಕೊಂಡಂತೆ ಕಾಣುತ್ತಿತ್ತು.

ಕಾಣಲು ನನ್ನ ತಂದೆಯ ವಯಸ್ಸಿದ್ದರೂ ನಿರಾಸೆಯ ಧನಿಯಲ್ಲಿ “ಒಮ್ಮೆ ತಮ್ಮ ಮೊಬೈಲ್ ಫೋನ್ ಕೊಡ್ತೀರಾ?! ಮನೆಗೆ ಫೋನ್ ಮಾಡಬೇಕಿತ್ತು; ನನ್ನ ಮೊಬೈಲ್ ಕಳ್ಳತನವಾಗಿದೆ” ಎಂದು ಬಹಳ ವಿನಯದಿಂದ ತಗ್ಗು ಧ್ವನಿಯಲ್ಲಿ ಕೇಳಿದರು. ಬಹುಷ ಕಳ್ಳತನದ ಅನುಭವ ಆಗಿರುವುದರಿಂದ ಆಗಿರಬಹುದೇನೋ ಮುಖದಲ್ಲಿ ನಿರಾಸೆ ತುಂಬಿರುವಂತಹದ್ದು. ನಾನೂ ಬೆಂಗಳೂರಿನಲ್ಲಿ ಕಳ್ಳರ ಉಪಟಳದ ಬಗ್ಗೆ ಬಲ್ಲವನಾಗಿದ್ದೆ.
ನಮ್ಮ ಅಂಗಡಿಯ ದಾರಿಯಲ್ಲೇ ಸದಾ ಸಂಚರಿಸುವ ವ್ಯಕ್ತಿ ಆಗಿದ್ದರೂ ಪರಿಚಯ ಇಲ್ಲದವರಾಗಿದ್ದರಿಂದ ಒಲ್ಲದ ಮನಸ್ಸಿನಿಂದ ಮೊಬೈಲ್ ಫೋನ್ ನೀಡಿದೆ. ಆಗ ತಮ್ಮಲ್ಲಿದ್ದ ಪೋಕೆಟ್ ಪುಸ್ತಕ ನೀಡಿ ಒಂದು ಮೊಬೈಲ್ ನಂಬರ್ ಸೂಚಿಸಿ ಫೋನಾಯಿಸಿ ಕೊಡುವಂತೆ ಹೇಳಿದರು. ಆ ಕಡೆಯಿಂದ ಫೋನ್ ರಿಸೀವ್ ಆಗುತ್ತಿದ್ದಂತೆ ಅವರ ಮುಖ, ಹಾವಭಾವ ಬದಲಾಗುತ್ತಿತ್ತು.

ಫೋನ್ ಎತ್ತಿದ ಮಗಳಲ್ಲಿ ಮಾತನಾಡುತ್ತಾ “ಇಲ್ಲಿ ಕೊರೋನ ವಿಪರೀತವಾಗಿ ಹಬ್ಬುತ್ತಿದೆ. ಆ ಕಡೆ ಬರೋಕೆ ಸಾಧ್ಯವಾಗದೇ ಇರಬಹುದು, ನನ್ನ ಮೊಬೈಲ್ ಕಳೆದುಕೊಂಡಿದೆ, ಏನೂ ಹೆದರಬೇಡಿ, ನಾನು ಚೆನ್ನಾಗಿದ್ದೇನೆ, ನೀನು ಅಮ್ಮ ಸಂತೋಷವಾಗಿರಿ, ಜಾಗೃತೆಯಿಂದಿರಿ, ಬೇಸರ ಪಡಬೇಡಮ್ಮ” ಎಂದು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿ ಆ ಕಡೆಯಿಂದ ಏನನ್ನೂ ಕೇಳಿಸಿಕೊಳ್ಳಲು ತಯಾರಾಗದೆ ಮೊಬೈಲ್ ಫೋನ್ ನನ್ನ ಕೈಗಿತ್ತರು. ಕಂಗಳಲ್ಲಿ ಈಗಲೂ ಆಗಲೋ ಹರಿದುಬಿಡಲು ಪೈಪೋಟಿ ನಡೆಸುತ್ತಿದ್ದ ಕಣ್ಣ ಹನಿಗಳನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದರು. ಸಾಧ್ಯವಾಗುತ್ತಿದ್ದರೆ ಒಮ್ಮೆ ಜೋರಾಗಿ ಅತ್ತುಬಿಡುತ್ತಿದ್ದೆ ಎಂದು ಅವರ ಮುಖದ ಭಾವ ಮೌನವಾಗಿಯೇ ಹೇಳುತ್ತಿತ್ತು.

ಮೊಬೈಲ್ ಫೋನ್ ನನ್ನ ಕೈಗಿತ್ತವರೇ “ತುಂಬಾ ಸಂತೋಷ ಆಯಿತು ರೀ ; ಮನೆಯಲ್ಲಿ ಹೆದರಿಕೊಂಡಿರುತ್ತಾರೆ, ಅದಕ್ಕೆ ಫೋನ್ ಮಾಡಿದೆ, ತುಂಬಾ ಧನ್ಯವಾದಗಳು” ಎಂದು ಹೇಳುತ್ತಲೇ ಅವಸರದಲ್ಲಿ ಸಾಗುತ್ತಿದ್ದ ಹೆಜ್ಜೆಗಳ ಜೊತೆ ಮಾಯವಾದರು. ಇನ್ನೂ ಹಲವು ಬಾರಿ ಅವರನ್ನು ಕಂಡಿರುವೆ ಆದರೂ… ಮನಸನ್ನು ಕಲ್ಲು ಮಾಡಿ ದುಃಖಕ್ಕೆ ನಗುವಿನ ಲೇಪನ ಮಾಡಿ, ಮಾತಿಗೆ ಸಂತೋಷದ ಬಣ್ಣ ಹಚ್ಚಿ ತಿರುಗುತ್ತಿದ್ದರು.

ಕೆಲವು ಜೀವಗಳೇ ಹಾಗೆ, ತಮ್ಮವರ ಬಗ್ಗೆ ಚಿಂತಿಸುತ್ತಾ ತಮ್ಮನ್ನು ತಮ್ಮವರಿಗೆ ಅರ್ಪಿಸಿ ಬಿಡುತ್ತಾರೆ. ಅಪ್ಪ ಹೊರದೇಶಲ್ಲಿ ಅಥವಾ ಹೊರ ರಾಜ್ಯದಲ್ಲಿ ದುಡಿಯುತ್ತಿದ್ದಾರೆ ಎಂದು ಗತ್ತಿನಿಂದ ನುಡಿಯುವವರಿದ್ದಾರೆ. ಶಕ್ತಿ ಇದ್ದರೂ ದುಡಿಯದೆ ತಂದೆಯ ಹಣದಲ್ಲೇ ದುಂದುವೆಚ್ಚ ಮಾಡುತ್ತಾ ಶ್ರಮದ ಬೆಲೆ ಅರಿಯದೆ ಅಲೆದಾಡುತ್ತಾ ಸಮಯ ಕಳೆಯುತ್ತಿರುತ್ತಾರೆ.

ಅಪ್ಪ ಎಂಬ ಜೀವವೇ ಹಾಗೆ, ಕಷ್ಟ ಬಂಡಿಯೇರಿ ಬಂದು ತನ್ನ ದೇಹದ ಮೇಲೆ ಸವಾರಿ ಮಾಡಿದರೂ ಅಳಲಾಗದೆ, ನಗಲಾಗದೆ ಎಲ್ಲವನ್ನೂ ಮನಸಲ್ಲಿ ಹುದುಗಿಸಿಕೊಂಡು ಜೀವಿಸುತ್ತಾರೆ.
ಅಮ್ಮ ಹೇಗೆ ಮನೆಯಲ್ಲಿ ಕೂಲಿಯಿಲ್ಲದೇ ದುಡಿಯುತ್ತಾಳೋ, ಅಪ್ಪನೂ ಹಾಗೆ!!
ಕೂಲಿ ಪಡೆದು ದುಡಿದು ತನ್ನವರಿಗಾಗಿಯೇ ವ್ಯಯಿಸುತ್ತಾನೆ. ಆದರೂ ತಮ್ಮವರನ್ನು ತೃಪ್ತಪಡಿಸುವಲ್ಲಿ ಸೋತು ಹೋಗಿರುತ್ತಾನೆ.
ತಂದೆ ತಮ್ಮವರ ಬಗ್ಗೆ ಎಷ್ಟು ಚಿಂತಿಸುತ್ತಾನೆ ಎಂದರೆ, ಒಂದು ಹೊತ್ತು ಹೊಟ್ಟೆ ತುಂಬಾ ತಿನ್ನಬೇಕಾದರೆ ಹಲವು ಬಾರಿ ಯೋಚಿಸುತ್ತಾನೆ. ಆ ಹಣದಿಂದ ತಮ್ಮವರಿಗೆ ಏನನ್ನಾದರೂ ಕೊಂಡುಕೊಳ್ಳಲು ನಿರ್ಧರಿಸುತ್ತಾನೆ. ತಂದೆಯ ಪ್ರೀತಿಯು ತಾಯಿಯ ಪ್ರೀತಿಗಿಂತ ಭಿನ್ನವಾಗಿಲ್ಲ, ನಾವು ಯೋಚಿಸುವ ರೀತಿ ಭಿನ್ನವಾಗಿದೆ ಅಷ್ಟೇ.

ಸಮಸ್ಯೆಗಳ ಸಂಕೋಲೆಗಳು ತನ್ನ ಸುತ್ತ ಸಮುದ್ರದ ಅಲೆಯಂತೆ ತುಂಬಿಕೊಂಡಿದ್ದರೂ, ತನ್ನವರಿಗಾಗಿ ತನ್ನ ಮನೆ ಮಕ್ಕಳಿಗಾಗಿ ಆ ಸಂಕೋಲೆಗಳನ್ನು ತಾನೇ ಒಡೆಯುತ್ತಾ ನಮಗಾಗಿ ಸುಗಮಹಾದಿಯ ಕಾಯ್ದಿರಿಸಿ ತನ್ನವರಿಗಾಗಿ ತನ್ನತನವನ್ನೇ ಅಡವಿಟ್ಟ ನಿರ್ಜೀವ ವಸ್ತುವಂತೆ ಜೀವಿಸುವ ತಂದೆಯೆಂಬ ಜೀವ ಇನ್ನೂ ಹಿಂದೆಯೇ ಉಳಿದು ಬಿಡದಿರಲಿ.

✍️ಶಾಕಿರ್ ಕಜೆ

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...