ಬೆಳಗಾವಿ ವಿಭಾಗದ 74 ಸಾವಿರ ಶಿಕ್ಷಕರಿಗೆ ಆನ್‍ಲೈನ್ ತರಬೇತಿ : ರಾಜ್ಯದಲ್ಲಿಯೇ ಶೂನ್ಯ ಬಜೆಟ್ ತರಬೇತಿ ಯೋಜನೆಯ ಯಶಸ್ವಿ ಮೊದಲ ಪ್ರಯೋಗ

ಧಾರವಾಡ (www.vknews.com) : ಕೊರೋನಾ ಕಂಟಕದಿಂದ ಕುಂಠಿತವಾಗಿರುವ ಶೈಕ್ಷಣಿಕ ಚಟುವಟಿಕೆಗಳನ್ನು ಮತ್ತೆ ಚುರುಕುಗೊಳಿಸಲು ವಾಯುವ್ಯ ಕರ್ನಾಟಕ ಭಾಗದ ತಮ್ಮ ಕಚೇರಿ ವ್ಯಾಪ್ತಿಯ 9 ಜಿಲ್ಲೆಗಳಲ್ಲಿ ಆನ್‍ಲೈನ್ ಮೂಲಕ ಒಟ್ಟು ಸುಮಾರು 74 ಸಾವಿರ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕ-ಶಿಕ್ಷಕಿಯರಿಗೆ ಬೋಧನಾ ಪುನಶ್ಚೇತನ ತರಬೇತಿಗಳನ್ನು ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ತಿಳಿಸಿದ್ದಾರೆ.

ಮಾಧ್ಯಮ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿರುವ ಅವರು, ಬೆಳಗಾವಿ ವಿಭಾಗದ 9 ಜಿಲ್ಲೆಗಳಲ್ಲಿರುವ ಒಟ್ಟು ಸುಮಾರು 56 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರಿಗೆ ಹಾಗೂ ವಿಭಾಗದ ಒಟ್ಟು ಸುಮಾರು 18 ಸಾವಿರ ಪ್ರೌಢ ಶಾಲಾ ಶಿಕ್ಷಕ-ಶಿಕ್ಷಕಿಯರಿಗೆ ಈ ಆನ್‍ಲೈನ್ ತರಬೇತಿಯನ್ನು ನೀಡಲಾಗಿದೆ. ಸರಕಾರಕ್ಕೆ ಯಾವುದೇ ವೆಚ್ಚ ಬಾರದಂತೆ ಶೂನ್ಯ ಬಜೆಟ್ ಯೋಜನೆಯ ಮೂಲಕ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ವಿಷಯವಾರು ಬಳಕೆ ಮಾಡಿಕೊಂಡು ಈ ಆನ್‍ಲೈನ್ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದು ರಾಜ್ಯದಲ್ಲಿಯೇ ಶೂನ್ಯ ಬಜೆಟ್ ತರಬೇತಿ ಯೋಜನೆಯ ಮೊದಲ ಪ್ರಾಯೋಗವಾಗಿದ್ದು ಸಂಪೂರ್ಣ ಯಶಸ್ಸನ್ನು ಕಂಡಿದೆ ಎಂದಿದ್ದಾರೆ.

ಗೂಗಲ್ ಮೀಟ್ ಆ್ಯಪ್ ಲಿಂಕ್ : ವಾಯವ್ಯ ಕರ್ನಾಟಕ ಭಾಗದ ವಿಜಯಪೂರ, ಬಾಗಲಕೋಟ, ಬೆಳಗಾವಿ, ಉತ್ತರಕನ್ನಡ, ಧಾರವಾಡ, ಹಾವೇರಿ, ಗದಗ, ಶಿರಸಿ ಹಾಗೂ ಚಿಕ್ಕೋಡಿ ಜಿಲ್ಲೆಗಳ ಡಯಟ್‍ಗಳು ‘ಗೂಗಲ್ ಮೀಟ್ ಆ್ಯಪ್ ಲಿಂಕ್’ ಬಳಕೆ ಮಾಡಿಕೊಂಡು ಈ ತರಬೇತಿಗಳನ್ನು ಅಚ್ಚುಕಟ್ಟಾಗಿ ನಡೆಸಲು ಸೂಚಿಸಲಾಗಿತ್ತು. ಈ ನಿಟ್ಟಿನಲ್ಲಿ ಆನ್‍ಲೈನ್‍ದÀಲ್ಲಿಯೇ ಪರಸ್ಪರ ಸಂಪರ್ಕ ಸಾಧಿಸುವ ಮೂಲಕ ಸಂಪನ್ಮೂಲ ವ್ಯಕ್ತಿಗಳು ಮತ್ತು ವಿಭಿನ್ನ ವಿಷಯ ತಜ್ಞರು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ. ಕಲಿಕೆಯ ವಿಷಯವಾಗಿ ಮೂಡಿರುವ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ 2020-21 ನೇ ಶೈಕ್ಷಣಿಕ ವರುಷದ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲೂ ಶಿಕ್ಷಕ-ಶಿಕ್ಷಕಿಯರನ್ನು ಸನ್ನದ್ಧಗೊಳಿಸುವುದು ಈ ಆನ್‍ಲೈನ್ ತರಬೇತಿ ಯೋಜನೆಯ ಪ್ರಮುಖ ಉದ್ದೇಶವಾಗಿತ್ತೆಂದು ಮೇಜರ್ ಹಿರೇಮಠ ಹೇಳಿದ್ದಾರೆ.

3 ವಿಧದ ತರಬೇತಿ : ವಾಯವ್ಯ ಕರ್ನಾಟಕ ಭಾಗದ ಎಲ್ಲ 9 ಜಿಲ್ಲೆಗಳಲ್ಲಿ 3 ವಿಧದ ತರಬೇತಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕ-ಶಿಕ್ಷಕಿಯರಿಗೆ ನೀಡಲಾಗಿದೆ. ಪ್ರಾಥಮಿಕ ಹಂತದಲ್ಲಿ 1 ರಿಂದ 3ನೇ ನಲಿ-ಕಲಿ ತರಗತಿಗಳ ಪರಿಸರ ವಿಷಯಗಳ ಕುರಿತು ಹಾಗೂ 4 ರಿಂದ 7 ನೇ ತರಗತಿಗಳ ವಿಷಯವಾರು ಕಠಿಣ ಸಂಗತಿಗಳಿಗೆ ಬೋಧನಾ ಮಾರ್ಗದರ್ಶನ ತರಬೇತಿ ನೀಡಲಾಗಿದೆ. ಪ್ರೌಢ ಶಾಲಾ ಹಂತದಲ್ಲಿ 8 ರಿಂದ 10ನೇ ತರಗತಿಗಳ ವಿಷಯವಾರು ತರಬೇತಿಯನ್ನೂ ಸಹ ಆಯೋಜಿಸಲಾಗಿದೆ. ವಿಶೇಷವಾಗಿ ಪ್ರಸಕ್ತ ಶೈಕ್ಷಣಿಕ ವರುಷದಲ್ಲಿ 8ನೇ ತರಗತಿಯ ಪರಿಷ್ಕøತಗೊಂಡ ಗಣಿತ ಮತ್ತು ವಿಜ್ಞಾನ ಪಠ್ಯಕ್ರಮದ ಕುರಿತು ಸುಲಭ ಬೋಧನಾ ಮಾರ್ಗದರ್ಶಿ ತರಬೇತಿಯನ್ನು ನೀಡಲಾಗಿದೆ. ಶಾಲಾ ಪರಿಸರ ಶುಚಿತ್ವ, ಶಾಲಾ ಕೊಠಡಿಗಳ ಸ್ಯಾನಿಟಾಯಿಜರ್ ಮಾಡುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತೂ ಸಹ ಮಾಹಿತಿ ಒದಗಿಸಲಾಗಿದೆ.

ತರಬೇತಿಯ ಪ್ರಯೋಜನ : ಬೆಳಗಾವಿ ವಿಭಾಗದ 9 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಜರುಗುತ್ತಿರುವ ಈ ಆನ್‍ಲೈನ್ ತರಬೇತಿಯ ಪ್ರಯೋಜನ ಅಧಿಕವಾಗಿದೆ. ಸರಕಾರದ ಬೊಕ್ಕಸಕ್ಕೆ ಯವುದೇ ವೆಚ್ಚ ಬರದಂತೆ ಶಿಕ್ಷಕರಿಗೆ ನೀಡಲಾಗುವ ತರಬೇತಿ ಮೊಬೈಲ್ ಸಂಪರ್ಕ ಜಾಲಬಂಧದಲ್ಲಿ ನಡೆಯುವುದರಿಂದ ವೇಳೆಯ ಉಳಿತಾಯವಾಗಿದೆ. ಶಿಕ್ಷಕ-ಶಿಕ್ಷಕಿಯರು ಶಾಲೆಯಿಂದ ಹೊರಬರದೇ ಅವರು ಇದ್ದ ಸ್ಥಳದಲ್ಲಿಯೇ ಅವರಿಗೆ ಬೋಧನಾ ಮಾರ್ಗದರ್ಶನ ಪ್ರಾಪ್ತವಾಗಿದೆ. ಜೊತೆಗೆ ತರಬೇತಿ ನಡೆಯುವ ಸ್ಥಳಕ್ಕೆ ಪ್ರಯಾಣಿಸುವ ಶ್ರಮ ಹಾಗೂ ಪ್ರಯಾಣದ ವೆಚ್ಚದ ಉಳಿತಾಯವಾಗಿದೆ.

ಒಟ್ಟಾರೆ ಕೊರೋನಾ ನಿಯಂತ್ರಣದ ಲಾಕ್‍ಡೌನ್ ಅವಧಿಯನ್ನು ಶಿಕ್ಷಕ-ಶಿಕ್ಷಕಿಯರು ತಮ್ಮ ಬೋಧನಾ ವಿಷಯಗಳ ಜ್ಞಾನ ಹೆಚ್ಚಿಸಿಕೊಳ್ಳಲು ಈ ಆನ್‍ಲೈನ್ ತರಬೇತಿಯಿಂದ ಸಾಧ್ಯವಾಗಿರುವುದು ಇಲಾಖೆಗೆ ಮತ್ತು ತಮಗೆ ವೈಯಕ್ತಿಕವಾಗಿ ಸಂತಸ ತಂದಿದೆ ಎಂದು ಮೇಜರ್ ಸಿದ್ದಲಿಂಗಯ್ಯ ಹಿರೇಮಠ ತಿಳಿಸಿದ್ದಾರೆ.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...