(www.vknews.com) : ಧೂಮಪಾನ ಎನ್ನುವುದು ಮನುಕುಲಕ್ಕೆ ಅಂಟಿಕೊಂಡ ಬಹುದೊಡ್ಡ ಮಹಾಮಾರಿ ಎಂದರೆ ತಪ್ಪಾಗಲಾರದು. ವಾರ್ಷಿಕವಾಗಿ ವಿಶ್ವದಾದ್ಯಂತ ಸುಮಾರು 8 ಮಿಲಿಯನ್ ಮಂದಿ ನೇರ ಧೂಮಪಾನದಿಂದಾಗಿ ಸಾವನ್ನಪ್ಪಿದರೆ ಉಳಿದ 1 ಮಿಲಿಯನ್ ಮಂದಿ ಪರೋಕ್ಷ ಧೂಮಪಾನದಿಂದ ಸಾವನ್ನಪ್ಪುತ್ತಾರೆ. ಧೂಮಪಾನ ಮಾಡುವುದರಿಂದ ನೇರವಾಗಿ ಶ್ವಾಸಕೋಶಗಳಿಗೆ ಹಾನಿಯಾಗಿ, ಶ್ವಾಸಕೋಶದಲ್ಲಿ ಸೋಂಕು ಉಂಟಾಗುವ ಸಾಧÀ್ಯತೆ ಮತ್ತು ಇತರ ಶ್ವಾಸಕೋಶ ಸಂಬಂಧಿ ರೋಗಗಳಿಗೆ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ. ವಿಶ್ವಸಂಸ್ಥೆಯ ಸಮುದಾಯ ಆರೋಗ್ಯ ತಜ್ಞರ ಏಪ್ರಿಲ್ -2020ರ ಅಧ್ಯಯನದ ವರದಿಯ ಪ್ರಕಾರ ಧೂಮಪಾನಿಗಳು ಇತರ ವ್ಯಕ್ತಿಗಳಿಗಿಂತ ಹೆಚ್ಚು ತೀವ್ರತರವಾದ ಕೋವಿಡ್-19 ರೋಗದಿಂದ ಬಳಲುತ್ತಾರೆ ಎಂದು ತಿಳಿದು ಬಂದಿದೆ. ಧೂಮಪಾನ ಮಾಡುವುದರಿಂದ ACE-2 ಎಂಬ ವಾಹಕ ಪ್ರೊಟೀನ್ನ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
ಈ ವಾಹಕ ಪ್ರೊಟೀನ್ ಕೋವಿಡ್-19 ರೋಗ ಉಂಟುಮಾಡುವ SARS-Cov-2 ವೈರಾಣುಗಳು ಶ್ವಾಸಕೋಶದ ಒಳಗಿನ ಗಾಳಿ ಚೀಲಗಳ ಜೀವಕೋಶಗಳಿಗೆ ಸೇರಿಕೊಳ್ಳಲು ಸಹಾಯ ಮಾಡುತ್ತದೆ ಎನ್ನಲಾಗಿದೆ. ಈ ತಂಡದ ಅಧ್ಯಯನದ ಪ್ರಕಾರ ಧೂಮಪಾನಿಗಳಲ್ಲಿ ಇತರ ಧೂಮಪಾನ ಮಾಡದ ವ್ಯಕ್ತಿಗಳಿಗಿಂತ 30 ರಿಂದ 55 ಶೇಕಡಾ ಜಾಸ್ತಿ ACE-2 ಪ್ರೊಟೀನ್ ವಾಹಕ ಕಂಡು ಬರುತ್ತದೆ ಎಂದು ತಿಳಿದು ಬಂದಿದೆ. ಆದರೆ ಈ ವ್ಯತ್ಯಾಸ ತಾತ್ಕಾಲಿಕವಾಗಿರುತ್ತದೆ ಮತ್ತು ಧೂಮಪಾನ ನಿಲ್ಲಿಸಿದ ಒಂದೇ ವಾರದಲ್ಲಿ ACE-2 ವಾಹಕ ಪ್ರೊಟೀನ್ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ತಿಳಿದು ಬಂದಿದೆ. ಈ ಕಾರಣದಿಂದ ನೀವು ಕೋವಿಡ್-19 ರೋಗದ ತೀವ್ರತೆಯನ್ನು ತಗ್ಗಿಸಬೇಕೆಂಬ ಆಸೆ ಹೊಂದಿದ್ದರೆ ತಕ್ಷಣವೇ ಧೂಮಪಾನಕ್ಕೆ ತಿಲಾಂಜಲಿ ಇಡಲೇ ಬೇಕು.
ಶ್ವಾಸಕೋಶದ ಗಾಳಿ ಚೀಲದ ಒಳಪದರದಲ್ಲಿನ ಮ್ಯುಖಸ್ ದ್ರವವನ್ನು ಉತ್ಪಾದಿಸುವ ಗೊಬ್ಲೆಟ್ ಜೀವಕೋಶಗಳಿಂದ ಈ ACE-2 ವಾಹಕ ಪ್ರೊಟೀನ್ ಉತ್ಪಾದನೆ ಆಗುತ್ತದೆ ಎಂದು ತಿಳಿದುಬಂದಿದೆ. ಗೊಬ್ಲೆಟ್ ಜೀವಕೋಶಗಳಿಂದ ಉತ್ಪತ್ತಿಯಾದ ಮ್ಯುಖಸ್ ದ್ರವವು ನಾವು ಒಳಗೆಳೆದುಕೊಂಡ ಗಾಳಿಯ ಜೊತೆ ಪ್ರಚೋದನಕಾರಿ ಕಣಗಳಿಂದ ಶ್ವಾಸಕೋಶಗಳನ್ನು ರಕ್ಷಿಸುತ್ತದೆ ಎಂದು ತಿಳಿದುಬಂದಿದೆ. ಧೂಮಪಾನಿಗಳು ತಾವು ಗಾಳಿಯ ಜೊತೆ ಧೂಮಪಾನದ ಹೊಗೆ ಒಳಗೆಳೆದುಕೊಂಡಾಗ, ಗೊಬ್ಲೆಟ್ ಜೀವಕೋಶಗಳು ಹೆಚ್ಚಿನ ಪ್ರಮಾಣದಲ್ಲಿ ಮ್ಯುಕಸ್ ಉತ್ಪಾದನೆ ಮಾಡುತ್ತದೆ ಮತ್ತು ACE-2 ಎಂಬ ಪ್ರೊಟೀನ್ವಾಹಕ ತೀವ್ರಗತಿಯಲ್ಲಿ ಏರುತ್ತದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಈ ACE-2 ಪ್ರಮಾಣ ಹೆಚ್ಚಿದ ಕಾರಣದಿಂದ ಅಂತಹ ವ್ಯಕ್ತಿಗಳಿಗೆ ಕೋವಿಡ್-19 ಸೋಂಕು ತಗಲಿದಾಗ ಬಹಳ ಬೇಗನೆ ವೈರಾಣುಗಳು ಶ್ವಾಸಕೋಶದ ಗಾಳಿ ಚೀಲದ ಒಳಪದರದ ಜೀವಕೋಶಗಳಿಗೆ ಸೇರಿಕೊಂಡು ಉಸಿರಾಟದ ಸಮಸ್ಯೆಗಳಿಗೆ ನೇರವಾಗಿ ಕಾರಣವಾಗುತ್ತದೆ.
ಇತ್ತೀಚೆಗೆ ಮಾರ್ಚ್ ತಿಂಗಳಲ್ಲಿ ಅಮೇರಿಕಾ ದೇಶದ ಸಾನ್ಫ್ರಾನ್ಸಿಸ್ಕೊ ನಗರದಲ್ಲಿ ನಡೆದ ಮೇಟಾ ಅನಾಲಿಸಿಸ್ ಅಧ್ಯಯನದ ಪ್ರಕಾರ 11,590 ಕೋವಿಡ್-19 ರೋಗಿಗಳಲ್ಲಿ ಧೂಮಪಾನ ಮಾಡಿದ ರೋಗಿಗಳಲ್ಲಿ ಇತರ ರೋಗಿಗಳಿಗಿಂತ ಹೆಚ್ಚು ತೀವ್ರವಾಗಿ ಕೋವಿಡ್-19 ರೋಗ ವರ್ತಿಸಿತ್ತು ಎಂದು ತಿಳಿದು ಬಂದಿದೆ. ಅದೇ ರೀತಿ ಧೂಮಪಾನಿಗಳಲ್ಲಿ ರೋಗ ಬಹಳ ಬೇಗನೆ ತೀವ್ರಗತಿಯನ್ನು ಪಡೆದು ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ. ಆದರೆ ಧೂಮಪಾನ ಮಾಡದ ಕೋವಿಡ್-19 ರೋಗಿಗಳಲ್ಲಿ ರೋಗ ಬಹಳ ನಿಧಾನವಾಗಿ ಮುಂದುವರೆದು, ಮಾರಣಾಂತಿಕವಾಗಲಿಲ್ಲ ಎಂದೂ ಅಧ್ಯಯನಗಳು ತಿಳಿಸಿದೆ. ಒಟ್ಟಿನಲ್ಲಿ ಧೂಮಪಾನ ಮಾಡುವವರು ಬಹಳ ಬೇಗ ಕೋವಿಡ್-19 ವೈರಾಣು ಸೋಂಕಿಗೆ ತುತ್ತಾಗುತ್ತಾರೆ ಮತ್ತು ರೋಗ ಬಂದ ಬಳಿಕ ಬಹಳ ಬೇಗ ರೋಗ ತೀವ್ರತೆ ಪಡೆದು ಮಾರಣಾಂತಿಕವಾದ ಎಲ್ಲಾ ಸಾಧ್ಯತೆಗಳು ಮುಕ್ತವಾಗಿದೆ ಎಂದೂ ತಿಳಿದುಬಂದಿದೆ.
ಧೂಮಪಾನದಿಂದ ಶ್ವಾಸಕೋಶಕ್ಕೆ ಉಂಟಾಗುವ ತೊಂದರೆಗಳು
1. ಧೂಮಪಾನದ ಹೊಗೆ ಮತ್ತು ರಾಸಾಯನಿಕಗಳಿಂದ ಶ್ವಾಸಕೋಶದ ಗಾಳಿ ಚೀಲದ ಒಳಪದರಕ್ಕೆ ಹಾನಿಯಾಗುತ್ತದೆ. 2. ಧೂಮಪಾನ ಮಾಡಿದಾಗ ಶ್ವಾಸಕೋಶಕ್ಕೆ ಹಾನಿಯಾಗಿ ದೇಹದ ರಕ್ಷಣಾ ವ್ಯವಸ್ಥೆ ಹದಗೆಡುತ್ತದೆ. ರಕ್ಷಣಾ ಸಾಮಥ್ರ್ಯ ಕುಂದುತ್ತದೆ. 3. ಧೂಮಪಾನದಿಂದ ಶ್ವಾಸಕೋಶದ ಒಳಪದರಕ್ಕೆ ಹಾನಿಯಾಗಿ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚು ಇರುತ್ತದೆ. 4. ಧೂಮಪಾನದಿಂದ ಶ್ವಾಸಕೋಶದ ಒಳಪದರ ಅತಿಯಾಗಿ ಕೆರಳಿಕೊಂಡು ಆಮ್ಲಜನಕದ ಪೂರೈಕೆಗೆ ತೊಂದರೆಯಾಗುತ್ತದೆ. 5. ಧೂಮಪಾನದಿಂದ ಶ್ವಾಸಕೋಶದ ಗಾಳಿಚೀಲದ ಒಳಪದರಕ್ಕೆ ಹಾನಿಯಾಗಿ ಮ್ಯುಖಸ್ ದ್ರವ್ಯ ಸ್ರವಿಸುವಿಕೆ ಹೆಚ್ಚಾಗಿ ಆಮ್ಲಜನಕದ ಪ್ರಸರಣಕ್ಕೆ ಹೆಚ್ಚಿನ ಹಾನಿ ಉಂಟಾಗುತ್ತದೆ. 6. ಧೂಮಪಾನ ಮಾಡುವುದರಿಂದ ಶ್ವಾಸಕೋಶದ ಒಳಗಿನ ಮತ್ತು ಗಂಟಲಿನ ಒಳಭಾಗದಲ್ಲಿನ ನಿರುಪದ್ರವಿ ಬ್ಯಾಕ್ಟೀರಿಯಾ ಮತ್ತು ವೈರಾಣುಗಳು ಕೂಡಾ ಹೆಚ್ಚು ಉಗ್ರವಾಗಿ ವರ್ತಿಸಿ ರೋಗಕ್ಕೆ ಕಾರಣವಾಗುತ್ತದೆ.
ಕೊನೆಮಾತು:
ಇತ್ತೀಚೆಗೆ ಕೆಲವೊಂದು ಬ್ರಿಟಿಷ್ ಮತ್ತು ಸೌದಿ ಅರೇಬಿಯಾದ ಅಧ್ಯಯನದ ವರದಿಗಳ ಪ್ರಕಾರ ಧೂಮಪಾನ ಮತ್ತು ರಕ್ತದಲ್ಲಿನ ಹೆಚ್ಚಿರುವ ನಿಕೋಟಿನ್ ಪ್ರಮಾಣದ ಕಾರಣದಿಂದ ಧೂಮಪಾನಿಗಳಿಗೆ ಕೋವಿಡ್-19 ರೋಗ ಬರುವುದಿಲ್ಲ ಎಂದು ಪ್ರತಿಪಾದಿಸಲಾಗಿತ್ತು. ಆದರೆ ವಿಶ್ವಸಂಸ್ಥೆ ಈ ವಿಚಾರವನ್ನು ಸಾರಾಸಗಟಾಗಿ ತಿರಸ್ಕರಿಸಿ ಆ ವರದಿಗಳಿಗೆ ಯಾವುದೇ ವೈಜ್ಞಾನಿಕ ತಳಹದಿ ಮುಂದೆ ಪುರಾವೆ ಇಲ್ಲ ಎಂದು ತಿಳಿಸಿದೆ. ಅವರ ಅಧ್ಯಯನದ ಪ್ರಕಾರ ನಿಕೋಟಿನ್, ಕೋವಿಡ್-19 ಉಂಟುಮಾಡುವ ವೈರಾಣುವನ್ನು ಜೀವಕೋಶಗಳಿಗೆ ಸೇರದಂತೆ ತಡೆಯುತ್ತದೆ ಎಂದು ಪ್ರತಿಪಾದಿಸಲಾಗಿತ್ತು. ಒಟ್ಟಿನಲ್ಲಿ ಜಗತ್ತಿನ ಹೆಚ್ಚಿನ ಎಲ್ಲಾ ವಿಜ್ಞಾನಿಗಳ ಒಮ್ಮತದ ನಿಲುವು ಏನೆಂದರೆ ಧೂಮಪಾನಿಗಳಲ್ಲಿ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಹೆಚ್ಚು ಇರುತ್ತದೆ ಮತ್ತು ಶ್ವಾಸಕೋಶದ ಸಾಮಥ್ರ್ಯ ಕುಂಠಿತವಾಗಿರುತ್ತದೆ. ಧೂಮಪಾನಿಗಳಲ್ಲಿ ದೀರ್ಘಕಾಲಿಕ ಉಸಿರಾಟ ತಡೆಗಟ್ಟುವ ಶ್ವಾಸಕೋಶದ ಕಾಯಿಲೆಗಳು (Co Po) ಹೆಚ್ಚು ಕಂಡು ಬರುತ್ತದೆ.
– ಡಾ|| ಮುರಲೀ ಮೋಹನ್ ಚೂಂತಾರು
ಧೂಮಪಾನಿಗಳ ರಕ್ಷಣಾ ವ್ಯವಸ್ಥೆ ಹದಗೆಟ್ಟಿರುತ್ತದೆ ಮತ್ತು ಬಹಳ ಬೇಗನೆ ಸೋಂಕಿಗೆ ತುತ್ತಾಗುತ್ತಾರೆ. ಈ ಎಲ್ಲಾ ಕಾರಣಗಳಿಂದ ಧೂಮಪಾನಿಗಳು ಇತರ ಆರೋಗ್ಯವಂತ ವ್ಯಕ್ತಿಗಳಿಗಿಂತ ಬಹಳ ಬೇಗನೆ ಕೋವಿಡ್-19 ರೋಗಕ್ಕೆ ತುತ್ತಾಗುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ ಮತ್ತು ರೋಗದ ತೀವ್ರತೆ ಇತರರಿಗಿಂತ ಹೆಚ್ಚು ಇರುತ್ತದೆ ಎಂದೂ ತಿಳಿಸಿದ್ದಾರೆ. ಅದೇನೇ ಇರಲಿ ಧೂಮಪಾನದಿಂದ ಕ್ಯಾನ್ಸರ್, ಹೃದಯದ ವೈಫಲ್ಯ, ರಕ್ತದೊತ್ತಡ, ಕಿನ್ನತೆ, ಬಂಜೆತನ ಮುಂತಾದ ಹತ್ತು ಹಲವು ರೋಗಗಳು ಬರುವ ಕಾರಣದಿಂದ ಈಗ ಸಮುದಾಯದಲ್ಲಿ ಕೋವಿಡ್-19 ರೋಗ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅದೇ ನೆಪವಾಗಿಟ್ಟುಕೊಂಡು ಧೂಮಪಾನವನ್ನು ತ್ಯಜಿಸಿದಲ್ಲಿ ಕೋವಿಡ್-19 ಅಲ್ಲದೆ, ಉಳಿದ ಎಲ್ಲಾ ರೋಗಗಳಿಂದಲೂ ಮುಕ್ತಿ ಪಡೆಯಬಹುದು ಎಂಬುದು ವೈದ್ಯರ ಒಮ್ಮತದ ಅಭಿಮತವಾಗಿದೆ.
– ಡಾ|| ಮುರಲೀಮೋಹನ ಚೂಂತಾರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.