ರಕ್ಷಾ ಹೆಲ್ಪ್ ಲೈನ್ ಸಾರಥಿ ಅಬ್ದುಲ್ ರಜಾಕ್ ಉಜಿರೆ ಅವರ ಮನದಾಳದ ಮಾತು…

(www.vknews.com) : ಮಾರ್ಚ್ ತಿಂಗಳಲ್ಲಿ ಯು. ಎ . ಇ. ಯಾದ್ಯಂತ ಪ್ರಾರಂಭವಾದ ಲಾಕ್‌ಡೌನ್ ಅವಧಿಯಲ್ಲಿ, ಜನರು ತಮ್ಮದೇ ಆದ ಕೆಲಸ ಕಾರ್ಯಗಳಲ್ಲಿ ತಲ್ಲೀನರಾಗಿದ್ದಾಗ ನಾನು ಇಲ್ಲಿ ವಾಸಿಸುವ ಸಮುದಾಯಕ್ಕೆ ಹೇಗೆ ಸಹಾಯ ಮಾಡಬಲ್ಲೆ ಮತ್ತು ಅವರಿಗೆ ಸಹಾಯ ಮಾಡುವ ಬಗ್ಗೆ ವಿಭಿನ್ನ ವಿಷಯಗಳ ಬಗ್ಗೆ ಯೋಚಿಸುತ್ತಿದ್ದೆ.

ನನ್ನ ಹೆಸರು ಅಬ್ದುಲ್ ರಜಾಕ್ ಉಜಿರೆ ಮತ್ತು ನಾನು ಸುಮಾರು 20 ವರ್ಷಗಳಿಂದ ಸಾಮಾಜಿಕ ಸೇವೆ ಮಾಡುತ್ತಿದ್ದೇನೆ. ಲಾಕ್‌ಡೌನ್ ಅವಧಿಯಲ್ಲಿ, ಬಹಳಷ್ಟು ಜನರು ಏನು ಮಾಡಬೇಕೆಂದು ತೋಚದೇ ಇಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು ಅಸಹಾಯಕರಾಗಿದ್ದಾರೆಂದು ನಾನು ಅರಿತುಕೊಂಡೆ. ನನ್ನ ಕಡೆಯಿಂದ ಬಂದ ಮೊದಲ ಕ್ರಿಯಾಶೀಲ ಅಂಶವೆಂದರೆ, ಆ ಜನರು ತಮ್ಮ ಉಳಿವಿಗಾಗಿ ಆಹಾರವನ್ನು ಹೊಂದಿದ್ದಾರೆಯೇ ಮತ್ತು ಅವರ ವಸತಿಗಾಗಿ ಪಾವತಿಸಲು ಬಾಡಿಗೆ ಹೊಂದಿದ್ದಾರೆಯೇ ಎಂದು ಪರಿಶೀಲಿಸುವುದು.

ಜನರು ತೀವ್ರವಾಗಿ ಅಗತ್ಯವಿರುವ ಅನೇಕ ಪ್ರಕರಣಗಳನ್ನು ನಾವು ನೋಡಿದ್ದೇವೆ, ನಾನು ಹೆಚ್ಚಾಗಿ ಕುಟುಂಬ-ರಹಿತವಾಗಿ ವಾಸಿಸುವ ವ್ಯಕ್ತಿಗಳನ್ನು ಮತ್ತು ಸಂದರ್ಶನ ವೀಸಾ (ವಿಸಿಟ್ ವೀಸಾ) ಹೊಂದಿದವರನ್ನು ಭೇಟಿಯಾಗಲು ಪ್ರಾರಂಭಿಸಿದೆ ಮತ್ತು ಸಾಧ್ಯವಾದಷ್ಟು ಸಹಾಯ ಮಾಡಲು ಪ್ರಯತ್ನಿಸಿದೆ. ನನ್ನ
ಕಾಲೇಜು ಸಹಪಾಠಿಗಳ ಮತ್ತು ಸ್ನೇಹಿತರ ಸಹಯೋಗದೊಂದಿಗೆ ಈ ಕಾರ್ಯ ಬಹುತೇಕ ಯಶಸ್ವಿಯಾಗಿದೆ ಮತ್ತು ಅಗತ್ಯವಿರುವವರಿಗೆ ಅವರ ಜಾತಿ, ಧರ್ಮ ಅಥವಾ ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಸಹಾಯ ಮಾಡಲು ಸಾಧ್ಯವಾಗಿದೆ.

ಭಾರತದಲ್ಲಿಯೂ ನಾವು ಬಡತನದ ರೇಖೆಗಿಂತ ಕೆಳಗಿರುವ ಜನರನ್ನು ಗುರುತಿಸಿ ತೀರಾ ಹಿಂದುಳಿದ ಪ್ರದೇಶಗಳಲ್ಲಿ ವಾಸಿಸುವ ಸುಮಾರು ಇನ್ನೂರರಷ್ಟು ಕುಟುಂಬಗಳಿಗೆ ಒಂದು ತಿಂಗಳ ಅವಧಿಗೆ ಆಹಾರ ಸಾಮಗ್ರಿಗಳನ್ನು ಒದಗಿಸಲು ಸಾಧ್ಯವಾಯಿತು.

ವಾಪಸಾತಿ ಪ್ರಕರಣ: ಹೆಚ್ಚಿನ ಜನರು ತಮ್ಮ ಊರಿಗೆ ಹಿಂತಿರುಗುವ ಬಗ್ಗೆ ಮಾಹಿತಿ ಲಭ್ಯತೆಯ ಕೊರತೆಯಿಂದ ಯಾವ ರೀತಿ ಮುಂದುವರಿಯುವುದು ಎಂಬುದರ ಬಗ್ಗೆ ಯಾವುದೇ ಸುಳಿವು ಹೊಂದಿರಲಿಲ್ಲ. ನೋಂದಣಿ ಲಿಂಕ್ ಮತ್ತು ವಾಪಸಾತಿಗೆ ಸಂಬಂಧಿಸಿದ ಎಲ್ಲಾ ಇತರ ಮಾಹಿತಿಯನ್ನು ಒದಗಿಸುವ ಮೂಲಕ ಆ ಸೇವೆಯನ್ನು ಪಡೆಯಲು ಸರಿಯಾದ ಕಾರ್ಯವಿಧಾನಗಳೊಂದಿಗೆ ಅವರಿಗೆ ಮಾರ್ಗದರ್ಶನ ನೀಡುವಲ್ಲಿ ನಾನು ಪ್ರಮುಖ ಪಾತ್ರ ವಹಿಸಿದೆ. ಈ ಅವಧಿಯಲ್ಲಿ ನಾನು ಪ್ರತಿದಿನ ಸುಮಾರು 100 ಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿದ್ದೇನೆ.

ಚಾರ್ಟರ್ ಫ್ಲೈಟ್ ಸೇವೆಗಳು ಪ್ರಾರಂಭವಾದ ಸಮಯ, ನಮ್ಮಲ್ಲಿ ಬಹಳಷ್ಟು ಜನರ ಡೇಟಾಬೇಸ್ ಇತ್ತು ಮತ್ತು ಇತರ ಸಂಘಗಳೊಂದಿಗೆ ಸಮಾಲೋಚನೆ ಮತ್ತು ನಿಕಟ ಹೊಂದಾಣಿಕೆಯ ನಂತರ ನಾವು 200 ಕ್ಕೂ ಹೆಚ್ಚು ಜನರಿಗೆ ಫ್ಲೈಟ್ ಆಸನಗಳನ್ನು ವ್ಯವಸ್ಥೆಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಮತ್ತು ತೀರಾ ಸಂಕಷ್ಟದಲ್ಲಿದ್ದ ಸುಮಾರು 10-15 ಕ್ಕಿಂತ ಹೆಚ್ಚು ಜನರಿಗೆ ಉಚಿತ ಟಿಕೆಟ್ ನೀಡಿ ಕಳುಹಿಸಲು ಯಶಸ್ವಿಯಾಗಿದ್ದೇವೆ.

ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುವ ಒಂದು ಹೃದಯಸ್ಪರ್ಶಿ ಉದಾಹರಣೆಯೆಂದರೆ, ಉತ್ತರ ಕರ್ನಾಟಕ ಮೂಲದ ಮತ್ತು ದುಬೈನಲ್ಲಿ ನೆಲೆಸಿರುವ ಕುಟುಂಬದ ಏಳೆಂಟು ಮಂದಿ ತುರ್ತಾಗಿ ಭಾರತಕ್ಕೆ ಮರಳಲು ಬಯಸಿದ್ದರು. ತಮ್ಮ ಊರಿನ ಮತ್ತು ಇತರ ಅನೇಕ ಪ್ರಭಾವಿ ವ್ಯಕ್ತಿಗಳನ್ನು ಸಂಪರ್ಕಿಸಿದ ನಂತರವೂ ಯಾವುದೇ ಪ್ರಯೋಜನವಾಗದೇ ಮಾನಸಿಕವಾಗಿ ತುಂಬಾ ತೊಂದರೆಗೀಡಾದ ಅವರನ್ನು ಚಾರ್ಟರ್ ಫ್ಲೈಟ್‌ನಲ್ಲಿ ಭಾರತಕ್ಕೆ ಕಳುಹಿಸಲು ಸಾಧ್ಯವಾಯಿತು ಮತ್ತು ಅವರು ಸುರಕ್ಷಿತವಾಗಿ ತಮ್ಮ ಊರಿಗೆ ತಲುಪಿದರು.

ವೀಸಾ ರದ್ದತಿ ಉದ್ದೇಶಕ್ಕಾಗಿ ದುಬೈಗೆ ಬಂದು ಲಾಕ್‌ಡೌನ್ ಸಮಯದಲ್ಲಿ ಸಿಲುಕಿಕೊಂಡ ವ್ಯಕ್ತಿಯೊಬ್ಬರು ಹೆಚ್ಚು ಮಧುಮೇಹ ಮತ್ತು ಇತರ ಅನೇಕ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರು. ಈ ಸಮಯದಲ್ಲಿ ಮಂಗಳೂರಿಗೆ ನೇರ ವಿಮಾನಗಳಿಲ್ಲ, ಆದ್ದರಿಂದ ನಾವು ಅವರನ್ನು ಕ್ಯಾಲಿಕಟ್‌ಗೆ ವಿಮಾನದಲ್ಲಿ ಕಳುಹಿಸಿದ ಬಳಿಕ ಅವರನ್ನು ವಿಶೇಷ ಆಂಬ್ಯುಲೆನ್ಸ್‌ನಲ್ಲಿ ಮಂಗಳೂರಿಗೆ ಕಳುಹಿಸಿಕೊಡಲಾಯಿತು. ಅವರು ಪ್ರಸ್ತುತ ಭಾರತದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಹತ್ತು ಹಲವಾರು ಭಾರತೀಯರು ಕೋವಿಡ್ ಸೋಂಕಿಗೊಳಗಾಗಿ ಶಾರೀರಿಕವಾಗಿಯೂ ಮಾನಸಿಕವಾಗಿಯೂ ತೀವೃ ಯಾತನೆ ಅನುಭವಿಸುತ್ತಿದ್ದಾಗ ಅವರ ಸೇವೆಗೈಯ್ಯುವ ಅವಕಾಶ ಲಭಿಸಿದ್ದು ಮಹಾ ಸೌಭಾಗ್ಯವೆಂದೇ ನಾವು ಪರಿಗಣಿಸುತ್ತೇವೆ. ಬರ್ ದುಬೈ ಯಲ್ಲಿ ತಂಗಿದ್ದ ನಾಲ್ಕು ಸದಸ್ಯರಿರುವ ಕುಟುಂಬಕ್ಕೆ ಆಸರೆಯಾಗಿದ್ದ ಕುಟುಂಬನಾಥನ ಉದ್ಯೋಗ ನಷ್ಟ ಆ ಕುಟುಂಬಕ್ಕೆ ತೀರಾ ಅಸಹನೀಯವಾಗಿತ್ತು. ಸ್ವತಃ ಕನಿಷ್ಟ ಮನೆ ಬಾಡಿಗೆ ಪಾವತಿಸುವುದು ಕೂಡಾ ಅವರಿಗೆ ಕೈಗೆಟುಕದ ವಿಷಯವಾಗಿತ್ತು. ಅಂತಹ ಸಂದಿಗ್ಧ ಘಟ್ಟದಲ್ಲಿ ಆ ಕುಟುಂಬದ ಸಮಸ್ಯೆಯನ್ನು ಪರಿಹರಿಸುವಲ್ಲಿ ನಾವು ಯಶಸ್ಸು ಕಂಡಿದ್ದೇವೆ ಎನ್ನಲು ಬಹಳ ಸಂತೋಷಪಡುತ್ತೇವೆ.

ಇದಲ್ಲದೆ ತಮ್ಮ ಉದ್ಯೋಗ ನಷ್ಟದಿಂದಾಗಿ ಆತ್ಮವಿಶ್ವಾಸವನ್ನೇ ಕಳೆದುಕೊಂಡು ಭೂಮಿಗೆ ಭಾರವೆಂಬಂತೆ ಜೀವಿಸುತ್ತಿದ್ದ ಹಲವರಿಗೆ ಸ್ಪೂರ್ತಿಯ ಸಿಂಚನವನ್ನು ಸಿಂಪಡಿಸಿ ಅವರ ಮುಖದಲ್ಲೂ ಸಂತೋಷದ ಅಲೆ ಮೂಡುವಂತೆ ಮಾಡಲು ನಮಗೆ ಸಾಧ್ಯವಾಗಿದೆ.

ನಮ್ಮೆಲ್ಲಾ ಸಮಾಜ ಪೂರಕ ಕಾರ್ಯಕ್ರಮಗಳಿಗೆ ಮನತಟ್ಟುವ ಪ್ರಚಾರ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕನ್ನಡದ ಕೆಲವು ಪ್ರಾದೇಶಿಕ ಪತ್ರಿಕೆಗಳಲ್ಲಿ ಪ್ರಕಟಿಸಿ ಬೆನ್ನುತಟ್ಟಿ ಪ್ರೋತ್ಸಾಹಿಸಿದ ನನ್ನೆಲ್ಲಾ ಆತ್ಮೀಯ ಗೆಳೆಯರು, ಸಹಪಾಠಿಗಳು, ಊರಿನ ಪ್ರಮುಖರು, ಬಂಧುಗಳು ಎಲ್ಲರನ್ನೂ ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತಿದ್ದೇನೆ.

ಅಚಲ ನಿರ್ಧಾರ ಮತ್ತು ಸೇವಾ ಮನೋಭಾವನೆಯ ಛಲವಿದ್ದರೆ ಯಾವುದೇ ಕೆಲಸ ಕಾರ್ಯಗಳ ಒತ್ತಡ ನಮ್ಮ ಸಾಧನೆಗಳಿಗೆ ತೊಡಕವನ್ನುಂಟುಮಾಡದು ಎನ್ನುವುದು ನನ್ನ ಬಲವಾದ ನಂಬಿಕೆ. ನಾನು ಕೂಡಾ ಅಲ್-ಸೀರ್ ಕಂಪೆನಿಯಲ್ಲಿ ಸೇಲ್ಸ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಈ ಎಲ್ಲಾ ಮಾನವೀಯ ಕಾರ್ಯಗಳನ್ನು ಕೈಗೊಳ್ಳುತ್ತಿದ್ದೇನೆ ಎಂದು ಈ ಸಂದರ್ಭದಲ್ಲಿ ಒತ್ತಿ ಹೇಳುತ್ತಿದ್ದೇನೆ.

ಭಾರತಕ್ಕೆ ಸುರಕ್ಷಿತವಾಗಿ ಹಿಂದಿರುಗಿರುವ ಅನೇಕರು ಇನ್ನೂ ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ನನಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ. ಭವಿಷ್ಯದಲ್ಲಿ ಈ ಕಾರ್ಯವನ್ನು ಮುಂದುವರೆಸುವ ಗುರಿ ಹೊಂದಿದ್ದೇನೆ ಮತ್ತು ಇನ್ನು ಮುಂದೆಯೂ ತಮ್ಮೆಲ್ಲರ ಸಹಾಯ ಸಹಕಾರ ಮತ್ತು ಸಮಯೋಚಿತ ಮಾರ್ಗದರ್ಶನ ಕೋರುತ್ತಿದ್ದೇನೆ. ಇದನ್ನು ನಾನು ಮಾತ್ರ ಪ್ರಾರಂಭಿಸಿದೆ ಮತ್ತು ಇಂದು ನಾವು 4 ಸದಸ್ಯರ ತಂಡವನ್ನು ರಚಿಸಿದ್ದೇವೆ, ನಾವೆಲ್ಲರೂ ಕಾಲೇಜಿನಲ್ಲಿ ಒಟ್ಟಿಗೆ ಅಧ್ಯಯನ ಮಾಡಿದ ಸ್ನೇಹಿತರು. ನಾವು ನಮ್ಮ ತಂಡವನ್ನು ರಕ್ಷಾ ಸಹಾಯ ಸೇವೆ ಎಂದು ಹೆಸರಿಸಿದ್ದೇವೆ ಮತ್ತು ಕೇವಲ ನಾಲ್ಕು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ನಮ್ಮ ಸಂಸ್ಥೆ ಯುಎಇಯಲ್ಲಿ ಮನೆಮಾತಾಗಿ ಮಾರ್ಪಟ್ಟಿದೆ. ನಾವು ಇಂದಿಗೂ ಪ್ರತಿದಿನ ಹಲವಾರು ಕರೆಗಳನ್ನು ಸ್ವೀಕರಿಸುತ್ತಿದ್ದು ಜನರು ಸಲಹೆ ಮತ್ತು ಮಾರ್ಗದರ್ಶನಗಳನ್ನು ಕೇಳುತ್ತಿದ್ದಾರೆ ಮತ್ತು ಸರ್ವರಿಗೂ ಸಹಾಯ ಹಸ್ತ ಚಾಚಲು ನಾವು ಸನ್ನದ್ಧರಾಗಿದ್ದೇವೆ..

ನಮ್ಮೊಂದಿಗೆ ನೀವೂ ಕೈ ಜೋಡಿಸಿರಿ..

ಧನ್ಯವಾದಗಳು..

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...