ರಾಜ್ಯದಾದ್ಯಂತ ಅನಿರ್ದಿಷ್ಟ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಆಶಾ ಕಾರ್ಯಕರ್ತೆಯರ ತೀವ್ರ ಹೋರಾಟ

ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ರಾಜ್ಯ ವ್ಯಾಪಿಯಾಗಿ ಜೂನ್ 30 ರಂದು ಮತ್ತು ಕಳೆದ ಒಂದು ವಾರದಿಂದ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಿ ಜಿಲ್ಲಾಧಿಕಾರಿಗಳು ಮತ್ತು ತಹಸೀಲ್ದಾರರುಗಳಿಗೆ ಮತ್ತು ರಾಜ್ಯದ ಹಲವಾರು ಸಚಿವರಿಗೆ ಮತ್ತು ಶಾಸಕರಿಗೆ ಖುದ್ದಾಗಿ ಆಶಾ ಕಾರ್ಯಕರ್ತೆಯರು ಅವರರವರ ಕ್ಷೇತ್ರಗಳಲ್ಲಿ ಮನವಿ ಸಲ್ಲಿಸಿ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಗಿತ್ತು. ಹಾಗೆಯೇ ಕಳೆದ ಜನವರಿ ತಿಂಗಳಿನಿಂದ ಸರ್ಕಾರಕ್ಕೆ 10 ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ. ಆಶಾ ಕಾರ್ಯಕರ್ತೆಯರ ಸಂಘದ ಮನವಿ ಪತ್ರಗಳಲ್ಲಿನ ವಿಷಯಗಳ ಕುರಿತು ಚರ್ಚಿಸಲು ಈವರೆಗೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಇರುವುದಿಲ್ಲ. ಆದ್ದರಿಂದ ಅನಿವಾರ್ಯವಾಗಿ ರಾಜ್ಯದಾದ್ಯಂತ 10 ಜುಲೈ 2020 ರಿಂದ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಆಶಾ ಕಾರ್ಯಕರ್ತೆಯರ ತೀವ್ರ ಹೋರಾಟ ನಡೆಸಲಿದ್ದಾರೆ.

ಇತ್ತೀಚಿಗೆ ಕೇಂದ್ರ ಆರೋಗ್ಯ ಸಚಿವಾಲಯ ಕೊರೋನಾ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡಿರುವುದಕ್ಕೆ ಆಶಾ ಕಾರ್ಯಕರ್ತೆಯರ ಕೊಡುಗೆ ಅಪಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಪತ್ರಿಕಾ ಬಿಡುಗಡೆ ಮಾಡಿದೆ. ಕೊರೋನಾ ತಡೆಯ ಹೋರಾಟದ ಯಶಸ್ಸಿಗೆ ಆಶಾ ಕಾರ್ಯಕರ್ತೆಯರು ಆಧಾರ ಸ್ತಂಭಗಳು. ರಾಜ್ಯದ 42000 ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಿ, ಅಂತರ ರಾಜ್ಯ ಪ್ರಯಾಣಿಕರು, ವಲಸೆ ಕಾರ್ಮಿಕರು ಮತ್ತು ಇತರನ್ನು ಸ್ಕ್ರೀನಿಂಗ್ ಮಾಡಿ, ಸೋಂಕು ಪತ್ತೆ ಹಚ್ಚುವಲ್ಲಿ ಸಕ್ರಿಯವಾಗಿರುವರು ಎಂದು ಕೊಂಡಾಡಿದ್ದಾರೆ. ಹಿರಿಯ ನಾಗರಿಕರು, ಹೈ-ರಿಸ್ಕ್ ವರ್ಗದವರ ಸಮೀಕ್ಷೆ ನಡೆಸಿ, ಗಂಭೀರ ರೋಗ ಇರುವವರನ್ನು ಪತ್ತೆ ಹಚ್ಚಲಾಗಿದೆ. ಸುಮಾರು 1.59 ಕೋಟಿ ಮನೆಗಳ ಸಮೀಕ್ಷೆ ನಡೆಸಿರುತ್ತಾರೆ. ಕಂಟೇನ್ಮೆಂಟ್ ಪ್ರದೇಶದಲ್ಲಿ ಪ್ರತೀ ದಿನ ಮಾಹಿತಿ ಸಂಗ್ರಹಿಸುತ್ತಿರುವರು. ಇನ್‍ಪ್ಲುಯೆಂಜಾ, ತೀವ್ರ ಉಸಿರಾಟದ ಸೋಂಕು ಇರುವವರ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿರುವುದರಿಂದ ಸೊಂಕು ಹರಡುವುದನ್ನು ತಡೆಯಲು ಸಾಧ್ಯವಾಗಿದೆ ಎಂದು ಶ್ಲಾಘಿಸಲಾಗಿದೆ. ಜೊತೆಗೆ ಸ್ಥಳಿಯ ಮಟ್ಟದಲ್ಲಿ ಟಾಸ್ಕ್‍ಫೋರ್ಸ್ ನ ಸಕ್ರಿಯ ಸದಸ್ಯೆಯಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಫೀವರ್ ಕ್ಲೀನಿಕ್, ಸ್ವ್ಯಾಬ್ ಸಂಗ್ರಹ ಕೇಂದ್ರಗಳಲ್ಲಿ, ಅಂತರರಾಷ್ಟ್ರೀಯ, ಅಂತರ ರಾಜ್ಯ ಚೆಕ್ ಪೋಸ್ಟ್ಗಳಲ್ಲೂ ಇವರು ಸ್ರೀನಿಂಗ್ ತಂಡಗಳ ಜೊತೆಗೆ ಕೆಲಸ ಮಾಡಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.

ಅಪಾಯಕಾರಿ ಕೆಲಸಗಳಲ್ಲಿ ಎದೆಗುಂದೆ ಕಾರ್ಯ ನಿರ್ವಹಿಸಿರುತ್ತಾರೆ. ಕೇವಲ ಚಪ್ಪಾಳೆ, ಹೂಮಳೆ ಈ ರೀತಿಯ ಮೆಚ್ಚುಗೆಗೆ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಖಂಡಿತವಾಗಿಯೂ ಸಂತಸವಿದೆ. ಆದರೆ ಕೊರೊನಾ ನಿಯಂತ್ರಣ ಕಾರ್ಯದಲ್ಲಿ ನಿರತರಾಗಿರುವ ಆಶಾ ಕಾರ್ಯಕರ್ತೆಯರು ವೇತನವಿಲ್ಲದೆ, ರಕ್ಷಣೆಯಿಲ್ಲದೆ, ಸಾಫ್ಟವೇರ್ ಅವ್ಯವಸ್ಥೆಯಿಂದಾಗಿ ಬಳಲಿ ಬೆಂಡಾಗಿದ್ದಾರೆ.

ದುಡಿತಕ್ಕೆ ತಕ್ಕ ಪ್ರತಿಫಲವಿಲ್ಲದೇ ಆಶಾಗಳು ಅನಿಶ್ಚಿತ ವೇತನದಿಂದ ಹೈರಾಣಾಗಿದ್ದು ಸರ್ಕಾರ ಕೂಡಲೆ ಗೌರವಧನ ಹಾಗೂ ಪ್ರೋತ್ಸಾಹಧನ ಎರಡನ್ನೂ ಸೇರಿಸಿ ಹಾಗೂ ಆಶಾ ಕಾರ್ಯಕರ್ತೆಯರ ಸೇವೆಗೆ ನೈಜ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಮಾಸಿಕ ಕನಿಷ್ಟ 12,000 ರೂ ವೇತನವನ್ನು ನಿಗದಿಪಡಿಸಬೇಕು ಎಂಬುದು ರಾಜ್ಯದ ಸಮಸ್ತ ಆಶಾ ಕಾರ್ಯಕರ್ತೆಯರ ಒಕ್ಕೊರಲಿನ ಬೇಡಿಕೆಯಾಗಿದೆ.

ಆಶಾ ಕಾರ್ಯಕರ್ತೆಯರು ತಮ್ಮ ಜೀವವನ್ನು ಪಣವಾಗಿಟ್ಟು, ತಮ್ಮ ಜೀವನವನ್ನು ಅಪಾಯಕ್ಕೆ ಒಡ್ಡುವುದರ ಮೂಲಕ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಸೋಂಕಿತರ ನಡುವೆ ದಿನ ನಿತ್ಯವೂ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರ ಆರೋಗ್ಯ ರಕ್ಷಣೆಯ ಜವಾಬ್ದಾರಿ ಸರ್ಕಾರÀದ್ದಾಗಿದೆ. ಆಶಾ ಕಾರ್ಯಕರ್ತೆರನ್ನು ಆಯಧಗಳಿಲ್ಲದೆ ಯುದ್ಧಕ್ಕೆ ಕಳುಹಿಸಿದಂತಾಗಿದೆ. ಕೊರೋನಾ ಸೋಂಕು ನಿಯಂತ್ರಣಕ್ಕೆ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ಆಶಾಗಳ ಆರೋಗ್ಯವನ್ನು ರಕ್ಷಿಸಲು ಅಗತ್ಯವಿರುವ ರಕ್ಷಣಾ ಸಾಮಗ್ರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ನೀಡಬೇಕೆಂದು ಒತ್ತಾಯಿಸುತ್ತೇವೆ.

ಈ ಸಮಯದಲ್ಲಿ ಸರ್ಕಾರ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಪರಿಹರಿಸಲು ಮುಂದಾಗದಿರುವುದರಿಂದ ಅನಿವಾರ್ಯವಾಗಿ ನಿನ್ನೆ ಜುಲೈ 10 ರಿಂದ ಅನಿರ್ದಿಷ್ಟವಾಗಿ ರಾಜ್ಯ ವ್ಯಾಪಿ ತಮ್ಮ ಸೇವೆಯನ್ನು ಸ್ಥಗಿತಗೊಳಿಸುತ್ತಿರುವರು. ಅಂದು ಜಿಲ್ಲೆ, ತಾಲೂಕು, ಪಿಎಚ್‍ಸಿ ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರು ಹೋರಾಟವನ್ನು ತೀವ್ರಗೊಳಿಸಿ ಮನವಿಯನ್ನು ಆರೋಗ್ಯ ಅಧಿಕಾರಿಗಳಿಗೆ ಮನವಿ ಕೊಡಲು ನಿರ್ಧರಿಸಿದ್ದಾರೆ ಎಂದು ಈ ಮೂಲಕ ಸರ್ಕಾರದ ಗಮನಕ್ಕೆ ತರುತ್ತಿದ್ದೇವೆ. ಈ ಹೋರಾಟದ ಯಶಸ್ಸಿಗೆ ಆಶಾ ಕಾರ್ಯಕರ್ತೆಯರು ಎಂದಿನಂತೆ ಒಗ್ಗಟ್ಟನ್ನು ಪ್ರದರ್ಶಿಸಲು ಸಂಘದಿಂದ ಕರೆ ನೀಡುತ್ತೇವೆ.

ಡಿ.ನಾಗಲಕ್ಷ್ಮಿ

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...