ಜಿಯೋದಿಂದ ಶೇಕಡಾ 100ರಷ್ಟು ದೇಶೀಯ 5G ತಂತ್ರಜ್ಞಾನ: U.S.ನಿಂದ ಮತ್ತೊಮ್ಮೆ ಮೆಚ್ಚುಗೆ

ನ್ಯೂಯಾರ್ಕ್(ವಿಶ್ವಕನ್ನಡಿಗ ನ್ಯೂಸ್): ದೇಶೀಯವಾದ 5G ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಭಾರತದ ರಿಲಯನ್ಸ್ ಜಿಯೋ ಮಾದರಿಯನ್ನೇ ಇಡೀ ವಿಶ್ವದಾದ್ಯಂತ ಇರುವ ಆಪರೇಟರ್ ಗಳು ಅನುಸರಿಸಬೇಕು ಎಂದು ಅಮೆರಿಕ ಒತ್ತಾಯಿಸಿದೆ. 5G ಮೂಲಸೌಕರ್ಯ ಒದಗಿಸುವ ವಿಚಾರದಲ್ಲಿ ಚೀನಾ ಮೂಲದ ಹುವೈ ಕಂಪೆನಿ ಬಗ್ಗೆ ಕೇಳಿಬರುತ್ತಿರುವ ಟೀಕೆ ಹಾಗೂ ಚೀನಾದ ಬಿಡಿಭಾಗಗಳ ಬಗ್ಗೆ ಇರುವ ‘ವಿಶ್ವಾಸದ ಕೊರತೆ’ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ.

“5G ತಂತ್ರಜ್ಞಾನದಲ್ಲಿ ರಹಸ್ಯ ಅನ್ನೋದು ಏನೂ ಇಲ್ಲ ಎಂಬುದು ರಿಲಯನ್ಸ್ ನಿಂದ ಪಾಠ ಕಲಿಯಬಹುದು. 4G ತಂತ್ರಜ್ಞಾನದಲ್ಲಿ ಯಾವ ಬಿಡಿ ಭಾಗಗಳಿದ್ದವೋ ಅವೇ ಇದರಲ್ಲೂ ಇವೆ. ಇದು ಮತ್ತೊಂದು ಮಟ್ಟಕ್ಕೆ ಏರುತ್ತದೆ ಅಷ್ಟೇ” ಎಂದು ಯು.ಎಸ್. ಹಿರಿಯ ಸೈಬರ್ ಅಧಿಕಾರಿ ರಾಬರ್ಟ್ ಎಲ್. ಸ್ಟ್ರೇಯರ್ ತಿಳಿಸಿದ್ದಾರೆ.

ಜುಲೈ 15ನೇ ತಾರೀಕಿನಂದು ರಿಲಯನ್ಸ್ ನ 43ನೇ ಸಾಮಾನ್ಯ ಸಭೆಯಲ್ಲಿ (AGM), ರಿಲಯನ್ಸ್ ಜಿಯೋದಿಂದ ಶೇಕಡಾ 100ರಷ್ಟು ಮೇಡ್ ಇನ್ ಇಂಡಿಯಾ 5G ಸಲ್ಯೂಷನ್ ಬಳಸಲಾಗುವುದು ಎಂದು ಕಂಪೆನಿ ಅಧ್ಯಕ್ಷ ಮುಕೇಶ್ ಅಂಬಾನಿ ಘೋಷಿಸಿದ್ದರು. ಆ ಬಗ್ಗೆ ಸ್ಟ್ರೇಯರ್ ಅವರು ಯು.ಎಸ್. ಮೌಲ್ಯಮಾಪನವನ್ನು ತಿಳಿಸಿದ್ದಾರೆ.

ಹುವೈ ಹೊರತಾದ ಸಲಕರಣೆ ಬಳಕೆ: ಯು.ಎಸ್.ನ ಸೈಬರ್ ಹಾಗೂ ಅಂತರರಾಷ್ಟ್ರೀಯ ಸಂವಹನ ಹಾಗೂ ಮಾಹಿತಿ ನೀತಿಯ ಮುಖ್ಯ ಸಹಾಯಕ ಕಾರ್ಯದರ್ಶಿ ಆಗಿದ್ದಾರೆ ರಾಬರ್ಟ್ ಎಲ್. ಸ್ಟ್ರೇಯರ್. ಯು.ಎಸ್. ಮಿತ್ರ ರಾಷ್ಟ್ರಗಳು ಮತ್ತು ಇತರ ದೇಶಗಳನ್ನು ಯುನೈಟೆಡ್ ಸ್ಟೇಟ್ಸ್ ಪರವಾಗಿ ಸೆಳೆದು, 5G ನೆಟ್ ವರ್ಕ್ ಗೆ ಹುವೈ ಹೊರತಾದ ಸಲಕರಣೆ ಹಾಗೂ ಬಿಡಿ ಭಾಗಗಳಲ್ಲಿ ಹೂಡಿಕೆ ಮಾಡುವಂತೆ ಪ್ರೇರೇಪಿಸುವುದು ಸ್ಟ್ರೇಯರ ಕೆಲಸ.

ನಮ್ಮ ಅಭಿಯಾನವು 5Gಗೆ ಬದಲಾಗುತ್ತಿರುವುದರ ಕಡೆಗಿದೆ. ಈ ಹಿಂದಿನ 3G ಬಗ್ಗೆ ಗೊತ್ತಿದೆ ಹಾಗೂ 4G ಮೂಲಸೌಕರ್ಯ ಹೇಗೆ 5G ಕಡೆಗೆ ನಡೆಸುತ್ತದೆ ಎಂಬ ಬಗ್ಗೆ ಗೊತ್ತಿದೆ. ಆದ್ದರಿಂದ ವಿಶ್ವಾಸ ಇಡಲಾಗದ ಪೂರೈಕೆದಾರರಿಂದ ವಿಶ್ವಾಸಾರ್ಹ ಪೂರೈಕೆದಾರರಿಗೆ ಹೇಗೆ ಸರ್ಕಾರಗಳು ಮತ್ತು ಟೆಲಿಕಾಂ ಆಪರೇಟರ್ ಗಳು ನೋಡಬೇಕು, ಮುಂದುವರಿಯಬೇಕು ಹಾಗೂ ಬದಲಾಗಭೇಕು ಎಂಬುದನ್ನು ಪ್ರೋತ್ಸಾಹಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಮುಖ್ಯವಾಗಿ ಏರ್ ಟೆಲ್, ವೊಡಾ ಐಡಿಯಾ ಹಾಗೂ ಬಿಎಸ್ ಎನ್ ಎಲ್ ಚೀನಾದ ಸಲಕರಣೆಗಳ ಮೇಲೆ ಅವಲಂಬಿತವಾಗಿವೆ. ಆದ್ದರಿಂದ ಹೇಗೆ ವಿಶ್ವಾಸ ಇಡಲಾಗದ ಪೂರೈಕೆದಾರರಿಂದ ವಿಶ್ವಾಸಾರ್ಹ ಸರಬರಾಜುದಾರರಿಗೆ ಬದಲಾಗುವ ಬಗ್ಗೆ ಸ್ಟ್ರೇಯರ್ ಒತ್ತಿ ಹೇಳಿದ್ದಾರೆ.

ಅಮೆರಿಕದಿಂದ ಜಿಯೋ ಪ್ರಯತ್ನಕ್ಕೆ ಮೆಚ್ಚುಗೆ: ಅಮೆರಿಕವು ಹೊಗಳಿದ ದೇಶ ಹಾಗೂ ಕಂಪೆನಿಗಳು ಹೀಗಿವೆ: ಸ್ಪೇನ್ ನಲ್ಲಿ ಟೆಲಿಫೋನಿಕಾ, ಫ್ರಾನ್ಸ್ ನಲ್ಲಿ ಆರೇಂಜ್, ಭಾರತದಲ್ಲಿ ಜಿಯೋ, ಆಸ್ಟ್ರೇಲಿಯಾದಲ್ಲಿ ಟೆಲ್ಸ್ಟ್ರಾ, ದಕ್ಷಿಣ ಕೊರಿಯಾದಲ್ಲಿ SK ಮತ್ತು KT, ಜಪಾನ್ ನಲ್ಲಿ ಎನ್ ಟಿಟಿ, ಮತ್ತು ಇವುಗಳ ಜತೆಗೆ ಸಿಂಗಾಪೂರ್ ಮತ್ತು ಕೆನಡಾದಲ್ಲಿ 5G ತಂತ್ರಜ್ಞಾನಕ್ಕೆ “ನಂಬಿಕಸ್ಥ ಸರಬರಾಜುದಾರರ”ನ್ನು ಮಾತ್ರ ಆರಿಸಿಕೊಳ್ಳುವುದಕ್ಕೆ ನಿರ್ಧರಿಸಿರುವುದನ್ನು ಮೆಚ್ಚಿಕೊಂಡಿದೆ.

ಹುವೈ ಹಾಗೂ ZTEಯಂಥ ನಂಬಿಕೆ ಇಡಲಾಗದ ಚೀನಾ ಪೂರೈಕೆದಾರ ಕಂಪೆನಿಗಳು ಭಾರತಕ್ಕೆ ಎಷ್ಟು ಅಪಾಯಕಾರಿ ಎಂದು ಈ ಹಿಂದೆ ಯು.ಎಸ್. ಕಾರ್ಯದರ್ಶಿ ಮೈಕ್ ಪೊಂಪೆ ಲಂಡನ್ ನಲ್ಲಿ ಹೇಳಿದ್ದರು. ಜಿಯೋದಿಂದ ಯಾವುದೇ ಚೀನಾದ ಸಲಕರಣೆ, ಉಪಕರಣ ಬಳಸುವುದಿಲ್ಲ ಎಂದು ರಿಲಯನ್ಸ್ ಜಿಯೋ ಘೋಷಣೆಯನ್ನು ಸ್ಟ್ರೇಯರ್ ಮೆಚ್ಚಿಕೊಂಡಿದ್ದಾರೆ. ಇದು “ಜಾಗತಿಕ ಮಾರುಕಟ್ಟೆ”ಯಲ್ಲಿ ಭಾರತದ ದೇಶಿ ಉತ್ಪನ್ನಕ್ಕೆ ಅವಕಾಶ ಎಂದಿದ್ದಾರೆ.

ಮುಂದಿನ ವರ್ಷದಂತೆ 5G ಅಳವಡಿಸಿಕೊಳ್ಳಬಹುದು ಎಂದು ಸರ್ಕಾರಗಳು ಲೆಕ್ಕಾಚಾರದಲ್ಲಿವೆ. ಆದರೆ ಮತ್ತು ಮೊಬೈಲ್ ಆಪರೇಟರ್ ಗಳಿಗೆ ದಶಕಗಳ ಲೆಕ್ಕದಲ್ಲಿ ಅಲ್ಲ, ವರ್ಷಗಳ ಲೆಕ್ಕದಲ್ಲಿದೆ ಎಂದು ಸ್ಟ್ರೇಯರ್ ಹೇಳಿದ್ದಾರೆ. ಪರಿಸ್ಥಿತಿ ಹುವೈಗೆ ವಿರುದ್ಧವಾಗಿದೆ. ಇಡೀ ವಿಶ್ವ ಎಚ್ಚೆತ್ತುಕೊಂಡಿದೆ. ಚೀನಾದ ಕಮ್ಯುನಿಸ್ಟ್ ಸರ್ಕಾರದ ಮಾಹಿತಿ ಮೇಲಿನ ಕಣ್ಗಾವಲು ಹಾಗೂ ಅವುಗಳನ್ನು ಮುಚ್ಚಿಡುವುದರ ಅಪಾಯದ ಅರಿವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

5G ತಂತ್ರಜ್ಞಾನ ಸ್ವಚ್ಛ ಹಾದಿಯಲ್ಲಿ ಇರಬೇಕು. ಟ್ರಾನ್ಸ್ ಮಿಷನ್, ನಿಯಂತ್ರಣ, ಕಂಪ್ಯೂಟಿಂಗ್ ಅಥವಾ ಸಂಗ್ರಹ ಸಲಕರಣೆಗಳು ನಂಬಿಕೆಗೆ ಅರ್ಹ ಅಲ್ಲದ ಹುವೈ, ZTE ಬಳಿ ಇರಬಾರದು ಎಂದು ಅಮೆರಿಕ ಹೇಳಿತ್ತು. ಒಂದು ವೇಳೆ ಅಪಾಯಕಾರಿ ಸರಬರಾಜುದಾರರಾದ ಚೀನಾ ಮೂಲದ ಹುವೈ, ZTEಗೆ ಅವಕಾಶ ನೀಡಿದರೆ ಗೂಢಚಾರಿಕೆ ಮಾಡಲು ಅವಕಾಶ ನೀಡಿದಂತಾಗುತ್ತದೆ. ಸರ್ಕಾರದ ಸೂಕ್ಷ್ಮ ಮಾಹಿತಿ ಅಪಾಯದಲ್ಲಿ ಇಟ್ಟಂತಾಗುತ್ತದೆ. ಇದರ ಜತೆ ವಾಣಿಜ್ಯ ಹಾಗೂ ವೈಯಕ್ತಿಕ ಮಾಹಿತಿ ಕೂಡ ಅಪಾಯಕ್ಕೆ ಸಿಲುಕುತ್ತದೆ ಎಂದು ಸ್ಟ್ರೇಯರ್ ಹೇಳಿದ್ದಾರೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...