ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದಾಗ ಪ್ರತಿದಿನವೂ ವಿನೂತನ : ನಿರ್ಗಮಿತ ಜಿಲ್ಲಾಧಿಕಾರಿ ಸಿಂಧೂ ರೂಪೇಶ್

ಮಂಗಳೂರು (www.vknews.com): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದಾಗ ಪ್ರತೀದಿನವೂ ವಿನೂತನವಾಗಿದ್ದು, ಒಂದಲ್ಲೊಂದು ಸಮಸ್ಯೆ, ಸವಾಲು, ಘಟನೆಗಳು ಬರುತ್ತಿದ್ದವು. ಎಲ್ಲರ ಸಹಕಾರದಿಂದ ಇವುಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಪ್ರಯತ್ನಿಸಿದ್ದೇನೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು ತಿಳಿಸಿದ್ದಾರೆ.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತಮಗೆ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಅಧಿಕಾರಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕರ್ತವ್ಯವು ವೃತ್ತಿ ಜೀವನದಲ್ಲಿ ಉತ್ತಮ ಅನುಭವ ಹಾಗೂ ಪ್ರಾವೀಣ್ಯತೆ ನೀಡುತ್ತದೆ. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿದರೆ, ಅವರಲ್ಲಿ ಉಂಟಾಗುವ ನೆಮ್ಮದಿಯು ಸೇವೆಯ ಸಾರ್ಥಕತೆ ಮೂಡಿಸುತ್ತದೆ. ಪ್ರತಿಯೊಬ್ಬ ಸರಕಾರಿ ನೌಕರರು ಈ ದಿಸೆಯಲ್ಲಿ ಮುಂದುವರಿಯಬೇಕು ಎಂದು ಅವರು ತಿಳಿಸಿದರು.

ಕೋವಿಡ್ ನಿರ್ವಹಣೆಯು ದೊಡ್ಡ ಸವಾಲಾಗಿತ್ತು. ಇದರೊಂದಿಗೆ ಸಾರ್ವಜನಿಕರ ಸಮಸ್ಯೆಗಳಿಗೂ ಪರಿಹಾರ ನೀಡುವ ಹೊಣೆಯೂ ಇತ್ತು. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸಾಕಷ್ಟು ಪ್ರಗತಿ ಕಂಡಿದೆ. ಕೋವಿಡ್ ವಿರುದ್ಧ ಇನ್ನಷ್ಟು ಹೋರಾಡಬೇಕಾದ ಅಗತ್ಯವಿದೆ ಎಂದು ಸಿಂಧೂ ರೂಪೇಶ್ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಅವರು ಮಾತನಾಡಿ, ಸಿಂಧೂ ರೂಪೇಶ್ ಅವರು ಜಿಲ್ಲಾಧಿಕಾರಿಯಾಗಿ 11 ತಿಂಗಳ ಸೇವೆಯಲ್ಲಿ ಸಾಕಷ್ಟು ಸವಾಲುಗಳು ಎದುರಾಗಿದೆ. ನೆರೆ, ಕೋವಿಡ್ ನಿರ್ವಹಣೆ, ವಲಸೆ ಕಾರ್ಮಿಕರ ರವಾನೆ, ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಚಾರ ಮತ್ತಿತರ ಘಟನೆಗಳಲ್ಲಿ ಸೂಕ್ತ ಸಂದರ್ಭದಲ್ಲಿ ನಿರ್ಣಾಯಕ ನಿರ್ಧಾರವನ್ನು ಸಿಂಧೂ ರೂಪೇಶ್ ಅವರು ಕೈಗೊಂಡಿದ್ದಾರೆ. ಅಬ್ಬಕ್ಕ ಉತ್ಸವ, ಕರಾವಳಿ ಉತ್ಸವಗಳಲ್ಲಿ ಹಣಕಾಸು ಶಿಸ್ತು ಜಾರಿಗೆ ತಂದಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನೂತನ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, ಸವಾಲುಗಳು ಇರುವ ಜಿಲ್ಲೆಗಳಲ್ಲಿ ಕೆಲಸ ಮಾಡುವುದು ಉತ್ತಮ ಅನುಭವ ನೀಡುತ್ತದೆ. ಕೋವಿಡ್ ಸಂದರ್ಭದಲ್ಲಿ ಕುಟುಂಬದಿಂದಲೂ ದೂರ ಇದ್ದು, ಕರ್ತವ್ಯ ನಿರ್ವಹಿಸಿದ ಸಿಂಧೂ ರೂಪೇಶ್ ಅವರ ಕರ್ತವ್ಯ ಮಾದರಿಯಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ, ಮೆಸ್ಕಾಂ ಎಂಡಿ ಸ್ನೇಹಲ್, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಡಿಸಿಪಿ ಅರುಣಾಂಶಗಿರಿ ಮತ್ತಿತರರು ಮಾತನಾಡಿ, ನಿರ್ಗಮಿತ ಜಿಲ್ಲಾಧಿಕಾರಿಗಳಿಗೆ ಶುಭ ಕೋರಿದರು. ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್ ವಂದಿಸಿದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...