ಆಶಾವಾದ ಮೂಡಿಸಿದ ‘ಡೆಕ್ಸಾ ಮೆಥಾಸೋನ್ ಔಷಧಿ’ (ಆರೋಗ್ಯ ಮಾಹಿತಿ)

(www.vknews.com) : ಕೋವಿಡ್-19 ರೋಗದ ತೀವ್ರತೆ ಮುಂದುವರಿಯುತ್ತಿದ್ದು, ಇದೀಗ ಸಮುದಾಯದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತದೆ. ಕೋವಿಡ್ -19 ರೋಗದಿಂದ ಮರಣ ಹೊಂದಿದವರ ಪ್ರಮಾಣ ಬಹಳ ಕಡಿಮೆ ಇದ್ದರೂ, ರೋಗ ಮಾತ್ರ ತೀವ್ರಗತಿಯಲ್ಲಿ ಹರಡುತ್ತಿದ್ದು, ನಿಯಂತ್ರಣಕ್ಕೆ ಸಿಗುತ್ತಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸೂಕ್ತ ಲಸಿಕೆ ಕಂಡು ಹಿಡಿಯುವ ಪ್ರಯತ್ನ ವಿಶ್ವದೆಲ್ಲೆಡೆ ನಡೆಯುತ್ತಿದ್ದು, ಕೆಲವೊಂದು ಪ್ರಯೋಗಗಳು ಮೂರನೇ ಹಂತಕ್ಕೆ ತಲುಪಿದೆ. ರಷ್ಯಾದಲ್ಲಿ ಮಾನವರ ಮೇಲೆ ಲಸಿಕೆ ಪ್ರಯೋಗ ನಡೆದಿದ್ದು, ಸಕಾರಾತ್ಮಕ ಫಲಿತಾಂಶ ಬಂದಿದೆ ಎಂದು ವರದಿಯಾಗಿದೆ. ಯಾವುದೇ ನಿರ್ದಿಷ್ಟ ಚಿಕಿತ್ಸೆ ಇರದ ಈ ರೋಗವನ್ನು ರೋಗದ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಿ ವೈದ್ಯರು ರೋಗಿಯನ್ನು ಗುಣಮುಖರಾಗಿಸಲು ಹಗಲು ರಾತ್ರಿ ಪರಿಶ್ರಮ ಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಇತ್ತೀಚಿನ ಬ್ರಿಟನ್ ದೇಶದ ಆಕ್ಸ್‍ಪರ್ಡ್ ವಿಶ್ವವಿದ್ಯಾನಿಲಯದಲ್ಲಿ ಬಹಳ ಕಡಿಮೆ ಖರ್ಚಿನ ಅತೀ ಹಳೆಯ ಔಷಧಿ ‘ಡೆಕ್ಸಾಮೆಥಾಸೋನ್’ ಎಂಬ ಸ್ಟೀರಾಯ್ಡ್ ಔಷಧಿಯನ್ನು ಬಳಸಿ ಸ್ವಲ್ಪಮಟ್ಟಿನ ಯಶಸ್ಸು ಕಂಡಿರುವುದು ವೈದ್ಯರಲ್ಲಿ ಮತ್ತು ರೋಗಿಗಳಲ್ಲಿ ಹೊಸ ಆಶಾವಾದ ಮೂಡಿಸಿದೆ. ಸುಮಾರು 2000 ರೋಗಿಗಳಲ್ಲಿ ಈ ಔಷಧಿ ಬಳಸಲಾಗಿದ್ದು, ಅದರ ಫಲಿತಾಂಶವನ್ನು ತಾಳೆ ಹಾಕಿ, ಒಂದಿಷÀ್ಟು ಯಶಸ್ಸು ಪಡೆದಿರುವುದು ತಿಳಿದು ಬಂದಿದೆ.

ಹೇಗೆ ಬಳಸುತ್ತಾರೆ?

ಕೋವಿಡ್-19 ರೋಗ ಬಂದ 20 ರಲ್ಲಿ 19 ಮಂದಿ ಯಾವುದೇ ಹೆಚ್ಚಿನ ಚಿಕಿತ್ಸೆ ಅಗತ್ಯವಿಲ್ಲದೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗದೆ ಗುಣಮುಖರಾಗುತ್ತಾರೆ. ಈ ರೀತಿ ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಹೆಚ್ಚಿನವರು, ಆಕ್ಸಿಜನ್ ನೀಡಿದಾಗ ಮತ್ತು ವೆಂಟಿಲೇಟರ್ ಯಂತ್ರದ ಮುಖಾಂತರ ಶ್ವಾಸಕೋಶಕ್ಕೆ ನೆರವು ನೀಡಿದಾಗ ಗುಣಮುಖರಾಗುತ್ತಾರೆ. ಇಂತಹ ರೋಗಿಗಳಲ್ಲಿ ಅತೀ ಹೆಚ್ಚು ಅಪಾಯ ಇರುವ ರೋಗಿಗಳಿಗೆ ‘ಡೆಕ್ಸಾಮೆಥಾಸೋನ್’ ಔಷಧಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎನ್ನಲಾಗಿದೆ. ಈ ಔಷಧಿ ದೇಹದ ಅತಿಯಾದ ಉರಿಯೂತವನ್ನು ನಿಯಂತ್ರಿಸುವ ಕೆಲಸ ಮಾಡಿ ಮಾಡಿ ದೇಹದ ರಕ್ಷಣಾ ವ್ಯವಸ್ಥೆ ಉಗ್ರವಾಗಿ ಪ್ರತಿರೋಧ ತೋರಿಸದಂತೆ ತಡೆಯುತ್ತದೆ. ಕೆಲವೊಮ್ಮೆ ರಕ್ಷಣಾ ವ್ಯವಸ್ಥೆ ಉಗ್ರವಾಗಿ ಕೆರಳಿಕೊಂಡು ‘ಸೈಟೋಕೈನ್ ಸ್ಟೋರ್ಮ್’ ಎಂಬ ಪರಿಸ್ಥಿತಿಗೆ ತಂದೊಡ್ಡುತ್ತದೆ. ಇಂತಹ ಸಂದರ್ಭಗಳಲ್ಲಿ ದೇಹದ ರಕ್ಷಣಾ ವ್ಯವಸ್ಥೆಯೇ ರೋಗಿಗೆ ಮಾರಕವಾಗುತ್ತದೆ. ಕೋವಿಡ್-19 ರೋಗದಲ್ಲಿ ನೂರರಲ್ಲಿ ಒಬ್ಬರು ರೋಗಿಗಳಲ್ಲಿ ಅವರ ರಕ್ಷಣಾ ವ್ಯವಸ್ಥೆ ಈ ರೀತಿ ಉಗ್ರವಾಗಿ ಕೆರಳಿಕೊಂಡು ಮಾರಣಾಂತಿಕವಾಗಿ ಕಾಡುತ್ತದೆ ಎಂದು ತಿಳಿದುಬಂದಿದೆ. ಇಂತಹ ಸಂದರ್ಭಗಳಲ್ಲಿ ‘ಡೆಕ್ಸಾಮೆಥಾಸೋನ್’ ಔಷಧಿ ಬಳಸಿದಾಗ, ಈ ರೀತಿ ಉಗ್ರವಾಗಿ ಕೆರಳಿದ ರಕ್ಷಣಾ ವ್ಯವಸ್ಥೆಯನ್ನು ಹತೋಟಿಗೆ ತಂದು, ಉರಿಯೂತವನ್ನು ನಿಯಂತ್ರಿಸಿ ರೋಗಿಯನ್ನು ಸಾವಿನ ದವಡೆಯಿಂದ ರಕ್ಷಿಸುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.

ಆಕ್ಸ್‍ಪರ್ಡ್ ವಿಶ್ವವಿದ್ಯಾನಿಲಯದ ಆಸ್ಪತ್ರೆಯ ವರದಿಯಂತೆ ಕೋವಿಡ್-19 ರೋಗದಿಂದ ಬಳಲಿ ವೆಂಟಿಲೇಟರ್ ಅಳವಡಿಸಿದ ರೋಗಿಗಳಲ್ಲಿ ಸಾವಿನ ಪ್ರಮಾಣವನ್ನು ‘ಡೆಕ್ಸಾ ಮೆಥಾಸೋನ್’ ಔಷಧಿ 40 ಶೇಕಡಾದಿಂದ 28 ಶೇಕಡಾಕ್ಕೆ ಇಳಿಸಿದೆ ಎಂದು ತಿಳಿದು ಬಂದಿದೆ. ಅಲ್ಲದೆ, ಆಕ್ಸಿಜನ್ ಅವಶ್ಯಕತೆ ಇದ್ದ ರೋಗಿಗಳಲ್ಲಿ ಸಾವಿನ ಪ್ರಮಾಣವನ್ನು ಡೆಕ್ಸಾ ಮೆಥಾಸೋನ್ ಸ್ಟಿರಾಯ್ಡ್ ಔಷಧಿ 25 ಶೇಕಡಾದಿಂದ 20 ಶೇಕಡಾಗಳಿಗೆ ಇಳಿಸಿದೆ ಎಂದು ವರದಿ ಮಾಡಲಾಗಿದೆ. ಆಕ್ಸ್‍ಪರ್ಡ್ ವಿಶ್ವವಿದ್ಯಾನಿಲಯದ ಮುಖ್ಯ ಸಂಶೋಧಕ ಪ್ರೊಫೆಸರ್ ಮಾರ್ಟಿನ್ ಲ್ಯಾಂಡ್ರೇ ಅವರ ಅಭಿಪ್ರಾಯದಂತೆ ವೆಂಟಿಲೇಟರ್ ಅಳವಡಿಸಿದ ಪ್ರತಿ ಎಂಟರಲ್ಲಿ ಒಬ್ಬರು ಮತ್ತು ಆಕ್ಸಿಜನ್ ನೀಡಿದ ಪ್ರತಿ 20ರಲ್ಲಿ ಒಬ್ಬರು, ‘ಡೆಕ್ಸಾ ಮೆಥಾಸೋನ್’ ಔಷಧಿ ಬಳಕೆಯಿಂದ ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಮುಂದುವರಿದ ಹಂತದಲ್ಲಿ ಉಸಿರಾಟ ಸಮಸ್ಯೆ ಇರುವವರಲ್ಲಿ ‘ಡೆಕ್ಸಾ ಮೆಥಾಸೋನ್’ ಬಹಳ ಉಪಯುಕ್ತ ಎಂದು ತಿಳಿದುಬಂದಿದೆ. ಆದರೆ ಆರಂಭದ ಹಂತದಲ್ಲಿರುವ ಕೋವಿಡ್-19 ರೋಗಿಗಳಲ್ಲಿ ಮತ್ತು ಸಣ್ಣ ಪ್ರಮಾಣದ ಜ್ವರ, ಮೈಕೈ ನೋವು, ಸುಸ್ತು ಇರುವವರಿಗೆ ಈ ಸ್ಟಿರಾಯ್ಡ್ ಅಗತ್ಯ ಇರುವುದಿಲ್ಲ ಎಂಬ ಕಿವಿಮಾತನ್ನು ಹೇಳಿರುತ್ತಾರೆ.

ಏನಿದು ಡೆಕ್ಸಾ ಮೆಥಾಸೋನ್

ಇದೊಂದು ಸ್ಟಿರಾಯ್ಡ್ ಔಷಧಿಯಾಗಿದ್ದು, ದೀರ್ಘಕಾಲಿಕ ಪರಿಣಾಮ ಬೀರುವ ಸ್ಟಿರಾಯ್ಡ್ ಎಂದು ಕರೆಯುತ್ತಾರೆ. 1960 ರಿಂದಲೂ ಈ ಔಷಧಿ ವೈದ್ಯಕೀಯ ಜಗತ್ತಿನಲ್ಲಿ ಬಳಕೆಯಲ್ಲಿದೆ. ಸಂಧಿವಾತ, ಗೌಟ್ ಮತ್ತು ಅಸ್ತಮಾ ರೋಗಕ್ಕೆ ಬಹಳ ಉಪಯುಕ್ತ ಔಷಧಿ ಇದಾಗಿರುತ್ತದೆ. ಹಲವಾರು ಚರ್ಮದ ಸಮಸ್ಯೆಗಳಿಗೂ ಈ ಔಷಧಿ ಬಳಸುತ್ತಾರೆ. ದೇಹದ ರಕ್ಷಣಾ ವ್ಯವಸ್ಥೆಯನ್ನು ನಿಯಂತ್ರಿಸಿ, ಉರಿಯೂತದ ತೀವ್ರತೆಯನ್ನು ಕಡಿಮೆ ಮಾಡುವ ಕಾರಣದಿಂದ ಈ ಔಷಧಿಯನ್ನು ವೈದ್ಯಕೀಯ ರಂಗದಲ್ಲಿ ಬಳಸಲಾಗುತ್ತಿದೆ. ಇಂಜೆಕ್ಷನ್ ಮತ್ತು ಮಾತ್ರೆಯ ರೂಪದಲ್ಲಿ ಈ ಔಷಧಿ ಲಭ್ಯವಿದ್ದು, ರೋಗಿಯ ರೋಗದ ತೀವ್ರತೆಯನ್ನು ಹೊಂದಿಕೊಂಡು ಯಾವ ರೀತಿ ಔಷಧಿ ನೀಡಬೇಕು ಎಂದು ವೈದ್ಯರೇ ನಿರ್ಣಯ ಮಾಡುತ್ತಾರೆ. ಬಹಳ ಕಡಿಮೆ ವೆಚ್ಚದ ಔಷಧಿ ಇದಾಗಿದ್ದು, ಬಹಳ ಸುಲಭವಾಗಿ ವೈದ್ಯರ ಚೀಟಿಯ ಮೇರೆಗೆ ಎಲ್ಲೆಡೆ ಲಭ್ಯವಿರುತ್ತದೆ. ಈ ಸ್ಟಿರಾಯ್ಡ್ ಔಷಧಿಯನ್ನು ಕೋವಿಡ್-19 ರೋಗದ ಚಿಕಿತ್ಸೆಯ ಇತರ ಔಷಧಿಗಳಾದ ರೆಮ್‍ಡೆಸಿಪರ್, ಹೈಡ್ರೋಕ್ಸಿಕ್ಲೊರೋಕ್ವಿನ್‍ಗಳ ಜೊತೆಗೆ ನೀಡಲಾಗುತ್ತದೆ. ಎಷ್ಟು ಔಷಧಿ ನೀಡಬೇಕು, ಹೇಗೆ ನೀಡಬೇಕು, ಯಾವಾಗ ನೀಡಬೇಕು ಎಂಬುದನ್ನು ವೈದ್ಯರೇ ನಿರ್ಧರಿಸುತ್ತಾರೆ.

ಕೊನೆಮಾತು:

ಕೋವಿಡ್-19 ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿದ್ದರೂ ರೋಗದ ಲಕ್ಷಣಗಳಿಗನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಜ್ವರ, ತಲೆ ನೋವು ಇದ್ದಾಗ ಪ್ಯಾರಾಸಿಟಮಾಲ್ ಔಷಧಿ, ದೇಹದ ರಕ್ಷಣಾ ವ್ಯವಸ್ಥೆ ಸದೃಢಗೊಳಿಸಲು ಝಿಂಕ್, ವಿಟಮಿನ್ ಸಿ, ವಿಟಮಿನ್ ಡಿ, ವಿಟಮಿನ್ ಬಿ ಕಾಂಪ್ಲೆಕ್ಸ್, ಬ್ಯಾಕ್ಟೀರಿಯಾ ಸೋಂಕು ಇದ್ದಲ್ಲಿ ಆಂಟಿಬಯೋಟಿಕ್ ಔಷಧಿ, SARS-Cov-2 ವೈರಾಣು ನಿಯಂತ್ರಿಸಲು ರೆಮ್‍ಡೆಸಿವಿರ್ ಔಷಧಿ, ಹೈಪ್ರೊಕ್ಸಿಕ್ಲೊರೋಕ್ವಿನ್ ಔಷಧಿ, ಉಸಿರಾಟದ ತೊಂದರೆ ಇದ್ದಾಗ ಆಕ್ಸಿಜನ್ ನೀಡುವುದು, ವೆಂಟಿಲೇಟರ್‍ನಿಂದ ಉಸಿರಾಟಕ್ಕೆ ಸಹಾಯ ಮಾಡುವುದು ಹೀಗೆ ಹಲವು ರೀತಿಯಲ್ಲಿ ಕೋವಿಡ್-19 ರೋಗಕ್ಕೆ ಔಷಧಿ ನೀಡಲಾಗುತ್ತದೆ. ಈಗ ಈ ಪಟ್ಟಿಗೆ ಹೊಸದಾಗಿ ಸೇರಿಕೊಂಡ ಔಷಧಿ ಡೆಕ್ಸೊ ಮೆಥಾಸೋನ್ ಸ್ಟಿರಾಯ್ಡ್ ಔಷಧಿ ಹೊಸ ಆಶಾವಾದವನ್ನು ಮೂಡಿಸಿರುವುದಂತೂ ನಿಜ.

– ಡಾ|| ಮುರಲೀ ಮೋಹನ್ ಚೂಂತಾರು

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...