ಸೈಲೆಂಟ್ ಹೈಪೋಕ್ಸಿಯಾ (ಆರೋಗ್ಯ ಮಾಹಿತಿ)

(www.vknews.com) : ಒಬ್ಬ ವ್ಯಕ್ತಿಯ ದೇಹದಲ್ಲಿನ ರಕ್ತನಾಳಗಳಲ್ಲಿ ಹರಿಯುತ್ತಿರುವ ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ‘ಆಕ್ಸಿಜನ್ ಸಾಚುರೇಷನ್’ ಎನ್ನುತ್ತಾರೆ. ಇದನ್ನು ಪಲ್ಸ್ ಆಕ್ಸಿಮೀಟರ್ ಎಂಬ ಸಾಧನದ ಮುಖಾಂತರ ಪತ್ತೆಹಚ್ಚಲು ಸಾಧ್ಯವಿದೆ. ಒಬ್ಬ ಆರೋಗ್ಯವಂತ ವ್ಯಕ್ತಿಯ ಆಮ್ಲಜನಕದ ಪ್ರಮಾಣ 95ರಿಂದ ಶೇಕಡಾ 100 ಇರುತ್ತದೆ. ದೇಹದಲ್ಲಿನ ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುವುದನ್ನು ಹೈಪೊಕ್ಸಿಯಾ ಎನ್ನುತ್ತಾರೆ. ಇದು ಬೇರೆ ಬೇರೆ ಕಾರಣದಿಂದ ಉಂಟಾಗಬಹುದು. ರಕ್ತದಲ್ಲಿನ ಆಮ್ಲಜನಕದ ಪ್ರಮಾಣ ಕಡಿಮೆಯಾದಂತೆ ಆ ವ್ಯಕ್ತಿಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಅಂತಹ ವ್ಯಕ್ತಿಗಳು ದೀರ್ಘವಾಗಿ, ಜೋರಾಗಿ ಉಸಿರಾಡುತ್ತಾರೆ ಮತ್ತು ಸಾಕಷ್ಟು ಗಾಳಿ ಒಳಗೆಳೆದುಕೊಳ್ಳಲು ಹರಸಾಹಸ ಪಡುತ್ತಾರೆ. ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾದಾಗಲೂ ದೇಹಕ್ಕೆ ಬೇಕಾದ ಆಮ್ಲಜನಕ ಸಿಗದೆ ಈ ತೊಂದರೆ ಉಂಟಾಗಬಹುದು. ದೇಹಕ್ಕೆ ಸೋಂಕು ತಗಲಿದಾಗ, ಶ್ವಾಸಕೋಶಕ್ಕೆ ಸೋಂಕು ಉಂಟಾಗಿ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಮತ್ತು ಇಂಗಾಲದ ಡೈ ಆಕ್ಸೈಡ್ ವಿನಿಮಯವಾಗದೆ ಹೈಪೊಕ್ಸಿಯಾ ಉಂಟಾಗುವ ಸಾಧ್ಯತೆ ಇದೆ.

ಈಗ ಕೋವಿಡ್—19 ಸಾಂಕ್ರಾಮಿಕ ರೋಗ ಸಮುದಾಯದಲ್ಲಿ ತೀವ್ರವಾಗಿ ಹರಡುತ್ತಿದ್ದು, ಮುಖ್ಯವಾಗಿ ಶ್ವಾಸಕೋಶವನ್ನೇ ಗುರಿಯಾಗಿಟ್ಟುಕೊಂಡು, ಶ್ವಾಸಕೋಶದ ಸೋಂಕು ಉಂಟುಮಾಡಿ ಉರಿಯೂತ ಮತ್ತು ಸೋಂಕು ಉಂಟಾಗುವಂತೆ ಮಾಡಿ ಉಸಿರಾಟದ ತೊಂದರೆ ಉಂಟಾಗುವಂತೆ ಮಾಡುತ್ತದೆ. ಸಾಮಾನ್ಯವಾಗಿ ಆಮ್ಲಜನಕದ ಪ್ರಮಾಣ 90ಕ್ಕಿಂತ ಕಡಿಮೆಯಾದಾಗ ಅಂತಹಾ ವ್ಯಕ್ತಿಗಳಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಆದರೆ ಕೆಲವೊಂದು ಆರೋಗ್ಯವಂತ ವ್ಯಕ್ತಿಗಳಲ್ಲಿ ಆಮ್ಲಜನಕದ ಪ್ರಮಾಣ 80ಕ್ಕಿಂತ ಕಡಿಮೆ ಆದರೂ ಯಾವುದೇ ಉಸಿರಾಟದ ತೊಂದರೆ ಕಾಣಿಸಿಕೊಳ್ಳದೆ ಇರುತ್ತದೆ. ಇದನ್ನೇ ವೈದ್ಯರು ಸೈಲೆಂಟ್ ಹೈಪೊಕ್ಸಿಯಾ ಅಥವಾ ಹ್ಯಾಪಿ ಹೈಪೊಕ್ಸಿಯಾ ಎಂದು ವ್ಯಾಕ್ಯಾನಿಸಿದ್ದಾರೆ. ಇಂತಹಾ ರೋಗಿಗಳು, ಇತರ ಎಲ್ಲಾ ವ್ಯಕ್ತಿಗಳಂತೆ ಸಹಜವಾಗಿಯೇ ಇರುತ್ತಾರೆ. ತಮ್ಮ ದೇಹದ ಒಳಗೆ ಇರುವ ರೋಗದ ತೀವ್ರತೆಯ ಅರಿವು ಅವರಿಗಿರುವುದಿಲ್ಲ. ಇತರ ಎಲ್ಲಾ ವ್ಯಕ್ತಿಗಳಂತೆ ಚೆನ್ನಾಗಿ ಒಡಾಡಿಕೊಂಡಿರುತ್ತಾರೆ. ಆದರೆ ಆ ಹಂತದಲ್ಲಿ ಸೋಂಕು ಎಲ್ಲೆಡೆ ಹಬ್ಬಿಕೊಂಡು ರೋಗ ನಿಯಂತ್ರಣ ಮಾಡಲು ಕಷ್ಟವಾಗಬಹುದು. ಈ ಕಾರಣದಿಂದ ಆರಂಭಿಕ ಹಂತದಲ್ಲಿಯೇ ಆಮ್ಲಜನಕದ ಪ್ರಮಾಣ ಕುಸಿಯುವುದನ್ನು ಪಲ್ಸ್ ಆಕ್ಸಿಮೀಟರ್ ಯಂತ್ರದಿಂದ ಪತ್ತೆ ಹಚ್ಚಿದಲ್ಲಿ, ಮುಂದೆ ಉಂಟಾಗುವ ತೀವ್ರತರವಾದ ತೊಂದರೆಯನ್ನು ಮೊದಲೇ ಗುರುತಿಸಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಯಾಕೆ ಉಂಟಾಗುತ್ತದೆ?

ಶ್ವಾಸಕೋಶದ ಒಳಗೆ ಇರುವ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿಕೊಂಡು ಅದರಿಂದ ಪ್ರೊಟೀನ್ ಬಿಡುಗಡೆಯಾಗಿ ಆ ಪ್ರೊಟೀನ್ ಶ್ವಾಸಕೋಶಗಳಲ್ಲಿ ಸರಿಯಾಗಿ ಆಮ್ಲಜನಕ ಸರಬರಾಜು ಉಂಟಾಗಲು ತಡೆ ಉಂಟುಮಾಡುತ್ತದೆ ಎಂದು ಅಂದಾಜಿಸಲಾಗಿದೆ. ರಕ್ತದಲ್ಲಿ ಆಮ್ಲಜನಕದ ಸಾಂದ್ರತೆ 80ಕ್ಕಿಂತ ಕಡಿಮೆ ಆದರೂ ಆ ವ್ಯಕ್ತಿಗಳಿಗೆ ಯಾವುದೇ ಉಸಿರಾಟದ ಒಂದರೆ ಕಾಣಿಸದೇ ಇರುತ್ತದೆ. ಈ ರೀತಿಯ ವಿಚಿತ್ರ ವಿದ್ಯಮಾನವನ್ನು ಕೋವಿಡ್-19 ವೈರಾಣು ಸೋಂಕಿನಲ್ಲಿ ವೈದ್ಯರು ಗುರುತಿಸಿದ್ದಾರೆ. ಯಾಕಾಗಿ ಈ ರೀತಿಯ ವಿದ್ಯಮಾನ ಉಂಟಾಗುತ್ತದೆ ಎಂಬುದನ್ನು ಪತ್ತೆಹಚ್ಚಲು ವೈದ್ಯರು ಹರಸಾಹಸ ಪಡುತ್ತಿದ್ದಾರೆ. ಆದರೆ ಇಂತಹಾ ವ್ಯಕ್ತಿಗಳು ಒಂದು ವಾರದ ಬಳಿಕ ಯಾವುದೇ ಮುನ್ಸೂಚನೆ ಇಲ್ಲದೆ ತೀವ್ರ ಎದೆನೋವು ಮತ್ತು ಹೃದಯದ ವೈಫಲ್ಯಕ್ಕೆ ತುತ್ತಾಗುತ್ತಾರೆ ಮತ್ತು ಅಂತಹವರಲ್ಲಿ ಮರಣದ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದೂ ವರದಿ ಮಾಡಿದ್ದಾರೆ. ಈ ರೀತಿಯ ವಿಚಿತ್ರ ವಿದ್ಯಮಾನವನ್ನು ವೈದ್ಯರು ಸೈಲೆಂಟ್ ಹೈಪೊಕ್ಸಿಯಾ ಅಥವಾ ಹ್ಯಾಪಿ ಹೈಪೋಕ್ಸಿಯಾ ಎಂದು ವ್ಯಾಖ್ಯಾನಿಸಿ, ಇಂತಹ ವ್ಯಕ್ತಿಗಳಲ್ಲಿ ಕೋವಿಡ್-19 ಹೆಚ್ಚು ಆತಂಕಕಾರಿ ಎಂದೂ ತಿಳಿಸಿದ್ದಾರೆ.

ಏನು ಮಾಡಬೇಕು?

ಒಬ್ಬ ವ್ಯಕ್ತಿ ಕೋವಿಡ್-19 ರೋಗಕ್ಕೆ ತುತ್ತಾಗಿದ್ದಾಗ ಆತನ ರೋಗದ ಲಕ್ಷಣಗಳನ್ನು ನಿರಂತರವಾಗಿ ಗಮನಿಸುತ್ತಿರಬೇಕು. ಜ್ವರ, ಕೆಮ್ಮು, ಉಸಿರಾಟದ ತೊಂದರೆಗಳನ್ನು ಸೂಕ್ತವಾಗಿ ಗಮನಿಸಬೇಕು. ಮತ್ತು ತಕ್ಷಣವೇ ವೈದ್ಯರ ಗಮನಕ್ಕೆ ತರಬೇಕು. ಇದಲ್ಲದೆ ಕೆಲವೊಮ್ಮೆ ರೋಗಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲದೇ ಇರಬಹುದು. ಆತ ಆರಾಮಾವಾಗಿ ಓಡಾಡಿಕೊಂಡಿರಬಹುದು. ಆದರೂ ಆತನ ರಕ್ತದೊತ್ತಡ ನಾಡಿಬಡಿತ ದೇಹದ ಉಷ್ಣತೆ ಮತ್ತು ಆಮ್ಲಜನಕದ ಪ್ರಮಾಣವನ್ನು ದಿನನಿತ್ಯ ನೋಡುತ್ತಿರಬೇಕು. ಇದರಲ್ಲಿ ಏನಾದರೂ ಹೆಚ್ಚು ಕಮ್ಮಿ ಕಂಡುಬಂದಲ್ಲಿ ತಕ್ಷಣವೇ ವೈದ್ಯರ ಗಮನಕ್ಕೆ ತರಬೇಕು. ಪಲ್ಸ್ ಆಕ್ಸಿಮೀಟರ್ ಯಂತ್ರದ ಸಹಾಯದಿಂದ ದಿನಕ್ಕೆರಡು ಬಾರಿಯಾದರೂ ರೋಗಿಯ ರಕ್ತದ ಆಮ್ಲಜನಕದ ಪ್ರಮಾಣವನ್ನು ನೋಡಬೇಕು. ಇದೇನಾದರೂ 90ಕ್ಕಿಂತ ಕಡಿಮೆ ಇದ್ದಲ್ಲಿ ತಕ್ಷಣವೇ ವೈದ್ಯರನ್ನು ಕಾಣಬೇಕು.

ಯಾಕೆಂದರೆ ಇಂತಹ ವ್ಯಕ್ತಿಗಳಲ್ಲಿ ಯಾವುದೇ ಲಕ್ಷಣ ಇಲ್ಲದಿದ್ದರೂ ಉಸಿರಾಟದ ತೊಂದರೆ ಇಲ್ಲದಿದ್ದರೂ ಕಾರಣವಿಲ್ಲದೆ, ಸೈಲೆಂಟ್ ಹೈಪೋಕ್ಸಿಯಾ ಉಂಟಾಗಿ ತೀವ್ರ ಎದೆನೋವು ಬರುವ ಸಾಧÀ್ಯತೆ ಇರಬಹುದು ಮತ್ತು ಹೃದಯ ವೈಫಲ್ಯ ಅಥವಾ ಸ್ತಂಭನದಿಂದ ಸಾವಿನಲ್ಲಿ ಅಂತ್ಯವಾಗಬಹುದು. ಕೋವಿಡ್-19 ಮೂಲತ: ಶ್ವಾಸಕೋಶಕ್ಕೆ ದಾಳಿ ಮಾಡುವ ವೈರಾಣು ಸೋಂಕು ಆಗಿದ್ದರೂ ಹೃದಯ ಸ್ತಂಭನದಿಂದಲೂ ಸಾವು ಬರುವ ಸಾಧ್ಯತೆ ಇದೆ. ಈ ಕಾರಣದಿಂದ ನಮಗರಿವಿಲ್ಲದೆ ಬರುವ ಸೈಲೆಂಟ್ ಹೈಪೋಕ್ಸಿಯಾ ಗುರುತಿಸಬೇಕಾದರೆ ದಿನನಿತ್ಯ ಮನೆಯಲ್ಲಿ ಕೋವಿಡ್-19 ಸೋಂಕಿತರ ಆಮ್ಲಜನಕದ ಸಾಂದ್ರತೆಯನ್ನು ಪಲ್ಸ್ ಆಕ್ಸಿಮೀಟರ್ ಯಂತ್ರದಿಂದ ತಿಳಿಯುವುದು ಅವಶ್ಯಕ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಕೋವಿಡ್-19 ಪಾಸಿಟಿವ್ ಎಂಬ ವರದಿ ಬಂದಲ್ಲಿ ರೋಗಿಗೆ ರೋಗದ ಲಕ್ಷಣ ಇರಲಿ ಅಥವಾ ಇಲ್ಲದೆ ಇರಲಿ ಅವನನ್ನು ದಿಗ್ಭಂಧನದಲ್ಲಿ ಇರಿಸಿ ಆತನನ್ನು ಸೂಕ್ತವಾಗಿ ಗಮನಿಸಬೇಕು ಮತ್ತು ರಕ್ತದ ಒತ್ತಡ, ರಕ್ತದ ಆಮ್ಲಜನಕದ ಪ್ರಮಾಣವನ್ನು ನಿರಂತರವಾಗಿ ದಾಖಲೆ ಮಾಡಿದರೆ ಮುಂಬರುವ ಅಪಾಯವನ್ನು ಮೊದಲೇ ಪತ್ತೆಹಚ್ಚಲು ಸಾಧ್ಯವಿದೆ ಎಂದು ವೈದ್ಯರ ಒಕ್ಕೊರಲಿನ ಅಭಿಮತ.

ಕೊನೆಮಾತು:

ಕೋವಿಡ್-19 ವೈರಾಣು ಸೋಂಕು ಬೇರೆ ಬೇರೆ ರೋಗಿಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ವರ್ತಿಸುತ್ತದೆ. ಹೊಸದಾಗಿ ಹುಟ್ಟಿಕೊಂಡಿರುವ ರೋಗ ಇದಾಗಿದ್ದು, ರೋಗದ ಬಗ್ಗೆ ಸಂಪೂರ್ಣ ಮಾಹಿತಿ ವೈದ್ಯರಿಗೂ ಪೂರ್ತಿಯಾಗಿ ತಿಳಿದಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಕೋವಿಡ್-19 ಸೋಂಕಿತರು ಸಾಕಷ್ಟು ಜಾಗ್ರತೆ ವಹಿಸಬೇಕು ಮತ್ತು ಮನೆಯಲ್ಲಿಯೇ ಪಲ್ಸ್ ಆಕ್ಸಿಮೀಟರ್ ಬಳಸಿ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಪತ್ತೆ ಹಚ್ಚಬೇಕು. ರಕ್ತದಲ್ಲಿನ ಆಮ್ಲಜನಕದ ಪ್ರಮಾಣ 90ಕ್ಕಿಂತ ಕಡಿಮೆ ಕಂಡುಬಂದಲ್ಲಿ ರೋಗದ ಯಾವುದೇ ಲಕ್ಷಣಗಳು ಇಲ್ಲದಿದ್ದರೂ ವೈದ್ಯರನ್ನು ಸಂಪರ್ಕಿಸಿದಲ್ಲಿ ಮುಂದೆ ಬರಬಹುದಾದ ಅಪಾಯವನ್ನು ತಪ್ಪಿಸಬಹುದಾಗಿದೆ.

– ಡಾ|| ಮುರಲೀ ಮೋಹನ ಚೂಂತಾರು

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...