ಕರೋನ – ಆರದ ಗಾಯ (ಲೇಖನ)

(www.vknews.com) : ಬಚ್ಚನ್ ತರಕಾರಿ ತೆಗೆದುಕೊಳ್ಳಲು ಮಾರುಕಟ್ಟೆಗೆ ಹೋಗಿರಲಿಲ್ಲ. ಆಟೋ ಚಾಲಕರೂ ಆಗಿರಲಿಲ್ಲ. ಫುಟ್ ಪಾತ್ ಮೇಲೆ ನಿಂತು ಯಾವುದೇ ಟೀ ಅಂಗಡಿಯಲ್ಲಿ ಟೀ ಕುಡಿಯಲಿಲ್ಲ. ಹಾಗಾದರೆ ಅವರಿಗೆ ಕರೋನ ಸೋಂಕು ಹೇಗೆ ತಗುಲಿತು?

ಆ ಮಹಿಳೆಗೆ ಉಸಿರಾಟದ ತೊಂದರೆ ಉಂಟಾಗಿ ಆಂಬುಲೆನ್ಸ್ ಗೆ ಫೋನ್ ಮಾಡಿ, ಮನೆ ಆಚೆ ಕಾದು ಕುಳಿತು, ಕೊನೆಗೂ ಆಂಬುಲೆನ್ಸ್ ಬಾರದೆಯೇ ಅಲ್ಲೇ ಪ್ರಾಣ ಬಿಟ್ಟುಬಿಟ್ಟರಂತೆ..!

ಉಸಿರಾಟದ ತೊಂದರೆಯಾಗಿ ಅವರಿಗೆ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಬೆಳಿಗ್ಗೆ ಸಿಕ್ಕಿದ್ದು ಹೆಣ ಮಾತ್ರ. ಮುಖವೂ ತೋರಿಸಲಿಲ್ಲ. ನಾಲ್ಕು ಜನ ಮಾತ್ರ ಹೋಗಿ ಅಂತ್ಯ ಕ್ರಿಯೆ ನಡೆಸಿದರು. ಅವರ ಯಜಮಾನರು ಹೇಳಿದರು – ಮೈಮೇಲಿದ್ದ ಚಿನ್ನ ಆಸ್ಪತ್ರೆಯವರು ತೆಗೆದುಕೊಂಡುಬಿಟ್ಟಿದ್ದರಂತೆ, ಗಾಬರಿಯಲ್ಲಿ ಮನೆಯವರು ಅದರ ಕಡೆ ಗಮನ ಹರಿಸಿರಲಿಲ್ಲವಂತೆ….!

ಕೋವಿಡ್ ರೋಗ ಇಲ್ಲದಿದ್ದರೂ ಆಸ್ಪತ್ರೆಯವರ ಜೊತೆ ಸೇರಿಕೊಂಡು ಗಂಡ ಹೆಂಡತಿ ಹತ್ತು ಲಕ್ಷ ಬಿಲ್ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾರಂತೆ…!

ಓರ್ವನ ಹೆಂಡತಿಗೆ ಕರೋನ ಬಂತು. ಗಾಬರಿಗೊಂಡು ಆಸ್ಪತ್ರೆಗೆ ಸೇರಿಸಲು ಹೊರಟರು. ಐದು ಆಸ್ಪತ್ರೆಗಳು ಸುತ್ತಾಡಿ ಆಯಿತು. ಆದರೆ ಬೆಡ್ ಸಿಗಲಿಲ್ಲ. ಪರಿಚಿತ ಓರ್ವ ವೈದ್ಯರ ಸಲಹೆಯ ಮೇರೆಗೆ ಮನೆಯಲ್ಲೇ ಚಿಕಿತ್ಸೆ ಪ್ರಾರಂಭ ಮಾಡಿದರು. ಆಕ್ಸಿಜನ್ ಸಿಲಿಂಡರ್ ಬೇಕಾಗಿತ್ತು. ಅದಕ್ಕೂ ಹದಿನೈದು ಸಾವಿರ ಡೆಪಾಸಿಟ್. ಸಾಲಲ್ಲಿ ನಿಂತು ತೆಗೆದುಕೊಳ್ಳಬೇಕಾಗಿತ್ತು. ಬಹಳ ಕಷ್ಟ ಪಟ್ಟು ಹೊತ್ತು ಮನೆಗೆ ತಂದರು. ಪಿ ಪಿ ಇ ಕಿಟ್ ಧರಿಸಿ ಚಿಕಿತ್ಸೆ ಪ್ರಾರಂಭಿಸಿದರು. ವಾಟ್ಸ್ ಆಪ್ ನಲ್ಲಿ ನುರಿತ ವೈದ್ಯರು ಹೇಗೆ ಏನು ಮಾಡಲು ಹೇಳಿದರೋ ಹಾಗೆಯೇ ಮಾಡಲಾಯಿತು. ಐವಿ ಸಹ ಕೊಡಲಾಯಿತು. ಕಷ್ಟ ಬಂದಾಗ ಸಮಯ ಎಲ್ಲಾ ಕಲಿಸಿ ಬಿಡುತ್ತದೆ. ಸದ್ಯ ಅವರ ಹೆಂಡತಿ ಚೇತರಿಸಿಕೊಂಡು ಬದುಕುಳಿದರು. ದುರಂತವೇನೆಂದರೆ ತನ್ನ ಮಗಳಿಗೆ ಆಸ್ಪತ್ರೆಗೆ ಸೇರಿಸಲು ಓಡಾಡಿದ ಅವರ ತಂದೆ ತೀರಿ ಹೋದರಂತೆ…!

ನಮ್ಮ ಸುತ್ತ ಮುತ್ತ ಇಂತಹ ಅನೇಕ ರೀತಿಯ ಮಾತುಗಳು ನಡೆಯುತ್ತಿವೆ. ಇವೆಲ್ಲವೂ ಸುಳ್ಳಲ್ಲ. ಸಮಾಜದ ಕನ್ನಡಿಯೂ ಹೌದು.

ನನ್ನ ಪರಿಚಿತರಲ್ಲಿ ಈ ಕಳೆದ ಎರಡು ತಿಂಗಳಲ್ಲಿ ಎಂಟು ಜನರು ಸ್ವರ್ಗವಾಸಿಯಾಗಿದ್ದರೆ.

ಒಬ್ಬ ವ್ಯಕ್ತಿಗೆ ಜ್ವರ ಬಂತು. ಆಸ್ಪತ್ರೆಗೆ ಸೇರಿಸಿದರು. ಕೋವಿಡ್ ಟೆಸ್ಟ್ ಆಯಿತು. ನೆಗೆಟಿವ್ ಬಂತು. ಒಂದು ಲಕ್ಷ ಬಿಲ್ ಆಯಿತು. ಸ್ವಲ್ಪ ಚೇತರಿಸಿಕೊಂಡರು. ಪುನಃ ಅರೋಗ್ಯ ಕ್ಷೀಣಿಸಿತು. ಆಸ್ಪತ್ರೆಗೆ ದಾಖಲಿಸಿದರು. ಕೋವಿಡ್ ಪಾಸಿಟಿವ್ ಬಂತು. ಚಿಕಿತ್ಸೆ ಪ್ರಾರಂಭವಾಯಿತು. ಚೇತರಿಕೆ ಕಾಣಲಿಲ್ಲ. ಬಿಲ್ಲು ಮಾತ್ರ ಒಂದು ಲಕ್ಷ ಎಂಬತ್ತು ಸಾವಿರ ಆಗಿತ್ತು. ಆಸ್ಪತ್ರೆಯವರ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಗೊತ್ತಾಗಿ, ಬೇರೆ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಅಲ್ಲಿಗೆ ತರುವಷ್ಟರಲ್ಲಿ ತೀರಾ ತಡವಾಗಿತ್ತು. ರಾತ್ರಿ ದಾಖಲಿಸಿದರು. ಬೆಳಿಗ್ಗೆ ಪ್ರಾಣದ ಪಕ್ಷಿ ಹಾರಿ ಹೋಗಿತ್ತು. ಅಲ್ಲಿಯ ಬಿಲ್ಲು ನಲವತ್ತು ಸಾವಿರ ಆಯಿತು. ಎಲ್ಲರು ಶೋಕದ ಮಡುವಿನಲ್ಲಿ ಮುಳುಗಿ ಹೋದರು. ಆ ಸಂಸಾರದ ಆಕ್ರಂದನ ಮುಗಿಲು ಮುಟ್ಟಿತು. ಸರ್ಕಾರದ ಕಾರ್ಯಾಚರಣೆಯ ನಂತರ ಶವವನ್ನು ಮೈಸೂರು ರಸ್ತೆಯ ಕಬರಸ್ತಾನಕ್ಕೆ ಕೊಂಡಯ್ಯಲಾಯಿತು. ಅಲ್ಲಿ ವ್ಯವಸ್ಥೆ ಇರಲಿಲ್ಲ. ನಂತರ ಖುದ್ದೂಸ್ ಸಾಬ್ ಕಬರಸ್ತಾನಕ್ಕೆ ಕೊಂಡೊಯ್ಯಲಾಯಿತು. ಅಂತ್ಯ ಕ್ರಿಯೆಯ ವಿಧಿವಿಧಾನಗಳನ್ನು ಕೆಲ ಸಮಾಜ ಸೇವಕರು ನೆರವೇರಿಸಿದರು. ಸ್ವಂತ ರಕ್ತ ಸಂಬಂಧಿಕರೂ ಸಹ ಹಾಗೆ ಮಾಡುವುದಿಲ್ಲ. ಅಂತಹ ಶ್ಲಾಘನೀಯ ಸೇವೆ ಸಿಲ್ಲಿಸಿದರು. ದೇವರು ಅವರಿಗೆ ಅವರ ಕುಟುಂಬದವರಿಗೆ ಅರೋಗ್ಯ ಮತ್ತು ಶಾಂತಿ ನೀಡಲಿ. ಮನುಷ್ಯತ್ವ ಸತ್ತು ಹೋಗಿರುವ ಈ ಕಾಲದಲ್ಲಿ ಕೆಲವರು ಎಂತಹ ಸಮಾಜ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂಬುದನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ.

“ಕೆಲ ಆಸ್ಪತ್ರೆಗಳು ಮತ್ತು ಕೆಲ ವೈದ್ಯರುಗಳು” ಸಮಾಜ ಸೇವೆಯನ್ನು ಮರೆತು ಹೋಗಿದ್ದಾರೆ. ಇಲ್ಲಿ ಯಾರೂ ಶಾಶ್ವತವಾಗಿ ಉಳಿಯಲಾರರು. ಮರೆಯಬೇಡಿ. ಸಂಕಷದಲ್ಲಿರುವವರನ್ನು ಇನ್ನೂ ಸಂಕಷ್ಟಕ್ಕೆ ಗುರಿ ಪಡಿಸುವುದು ಸರಿಯಲ್ಲ. ೨೫೦ ಮತ್ತು ೮೦೦ ರೂಗಳ ಪಿ ಪಿ ಇ ಕಿಟ್ ೬ ಸಾವಿರ ರೂಗಳು, ಒಂದು ಸಾವಿರದ ಚುಚ್ಚು ಮದ್ದಿಗೆ ೧೦ ಸಾವಿರ ರೂಗಳು ತೆಗೆದುಕೊಳ್ಳುವುದು ನ್ಯಾಯವೇ ? ೧೫ ದಿನಗಳಿಗೆ ೨೦ ಲಕ್ಷ ಬಿಲ್ಲನ್ನು ಮಾಡುವುದು ಸರಿಯೇ ? ಪ್ರೈವೇಟ್ ಆಸ್ಪತ್ರೆಗಳಿಗೆ ಬರುವವರೆಲ್ಲ ಶ್ರೀಮಂತರೇ ? ದುಬಾರಿ ಬಿಲ್ಲುಗಳ ಹೊರೆ ಹೊರೆಸಿ, ರೋಗಿ ಸಾಯುವ ಮುನ್ನ ಅವರ ಕುಟುಂಬದವರಿಗೆ ನೀವು ನಿರ್ದಾಕ್ಷಿಣ್ಯ ವಾಗಿ ಸಾಯಿಸಲು ಹೊರಟಿರುವ ಬಿಳಿ ಹಾವುಗಳು. ಕಾಲ ನಿಲ್ಲಲ್ಲ ಎನ್ನುತ್ತಾರೆ. ನಿಮಗೆ ಆ ಕಾಲವೇ ಉತ್ತರ ಕೊಡಲಿ.

– ಜಬೀವುಲ್ಲಾ ಖಾನ್

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...