ಎಲೆಮರೆಯ ಸ್ತ್ರೀವೇಷಧಾರಿ ಯಕ್ಷರಂಗಕ್ಕೆ ಬಂದು ಕಾರ್ಯ ನಿರ್ವಾಹಕಾರಾದರು ಸೌಢ ಭಾಸ್ಕರ ಪೂಜಾರಿ

(www.vknews.com) : “ಬಾನ ಭಾಸ್ಕರ ತಾನು ಏರಿ ರಥವನು! ತಾನು! ಬೆಳಗುತಿಹ ಮೂಡಣದಿ ಸಪ್ತಾಶ್ವವನೇರಿ ಬಂದ !!” ಎಂಬ ಕವಿವಾಣಿಯಂತೆ ಈ ಸಂಗೀತವನ್ನು ಯಾರು ಸ್ವಾದಿಸುದಿಲ್ಲ ಹೇಳಿ, ಸಂಗೀತವನ್ನು ಮೆಚ್ಚುವರು ಯಕ್ಷಗಾನವನ್ನು ಮೆಚ್ಚುತ್ತಾರೆ. ಅದು ಯಕ್ಷಗಾನದಲ್ಲಿ ಗಾನ, ನಾಟ್ಯ, ಸಂಗೀತದ ಎಲ್ಲಾ ಪ್ರಕಾರಗಳು ಸಹ ಕೇವಲ ಚಿಕ್ಕ ರಂಗಸ್ಥಳದಲ್ಲಿ ಬಂದು ರಂಗೇರುತ್ತದೆ. ಆ ಯಕ್ಷಗಾನ ಕಲೆ ಕರ್ನಾಟಕದ ಮೂಲೆ ಮೂಲೆಗಳಲ್ಲೂ ಪಸರಿದ ಕೀರ್ತಿ ಕರಾವಳಿಯ ಜನತೆಗೆ ಸಲ್ಲಿಸಬಹುದು. ಕರಾವಳಿಯ ಮನೆ ಮನಗಳಲ್ಲಿ ಗೆಜ್ಜೆ ತಾಳಗಳು ಝಲ್ ಝಲ್ ಎಂದು ನಿನಾದ ಕೇಳಿಸುತ್ತದೆ. ಯಕ್ಷಗಾನ ಪದಗಳು ಇಲ್ಲಿನ ಜನರು ಗುನುಗುತ್ತಾರೆ. ಇಂತಹ ಗಂಡು ಕಲೆಯಲ್ಲಿ ಬಡಗುತ್ತಿಟ್ಟಿನ ಬಯಲಾಟದ ಎಲೆಮರೆಯ ಕಲಾವಿದರು ನಮ್ಮ ಸೌಢ ಬಾಸ್ಕರ ಪೂಜಾರಿ.

ಕರಾವಳಿಯ ಜಿಲ್ಲೆಯಾದ ಪೋಡವಿಗೊಡೆಯ ಶ್ರೀಕೃಷ್ಣನ ನಾಡಿನ ಜಿಲ್ಲೆ ಉಡುಪಿಯ ಕುಂದಾಪುರ ತಾಲೂಕಿನ ಶಂಕರನಾರಾಯಣದ ಬಳಿ ಒಂದು ಹಳ್ಳಿಯಾದ ಸೌಢ ಎಂಬ ಊರಿನ ಅತಿ ಬಡ ಕುಟುಂಬದ ಕೃಷಿಕರಾಗಿದ್ದ ದಿವಂಗತ ಶಂಕರ ಪೂಜಾರಿ ಮತ್ತು ಶ್ರೀಮತಿ ಪದ್ಮಾವತಿ ಯವರ ಗರ್ಭಸಂಜಾತರಾಗಿ ೧೯೭೬ರಲ್ಲಿ ಜನಿಸಿದರು. ಆಗಿನ ಕಾಲದಲ್ಲಿ ಒಂದೆಡೆಯಲ್ಲಿ ಕಿತ್ತು ತಿನ್ನುವ ಬಡತನ. ಹಾಗೆ ಅಲ್ಲಲ್ಲಿ ಬಯಲಾಟಗಳು ಹರಿಕೆ ಯಾಟಗಳು ನಡೆಯುತ್ತಿದ್ದವು. ಈ ಬಡತನದದಲ್ಲಿ ಮನರಂಜನೆಗಾಗಿ ರಾತ್ರಿ ಮನೆಯವರೆಲ್ಲರೂ ಸೇರಿ ಆಟಕ್ಕೆ ಹೋಗುವವಾಡಿಕೆ. ಆಗ ಸಣ್ಣ ಮಕ್ಕಳು ದೊಡ್ಡವರೆನ್ನದೆ ಹುಲ್ಲು ಹಾಸಿದ ನೆಲದಲ್ಲಿ ಎಲ್ಲರು ಕುಳಿತು ಹಳ್ಳಿಯಲ್ಲಿ ಆಟ ನೋಡುವ ಅಭ್ಯಾಸ. ಹೀಗೆ ಎಳವೆಯಲ್ಲಿ ಯಕ್ಷಗಾನ ನೋಡುತ್ತಿದ್ದ ಬಾಲ ಭಾಸ್ಕರನಿಗೆ ತಾನು ಅವರಂತೆ ರಂಗದಲ್ಲಿ ಕುಣಿಯಬೇಕು ಎಂಬುದು ಮನದಲ್ಲಿ ಮೂಡಿತು. ಆ ಕಾಲಘಟ್ಟದಲ್ಲಿ ಕೀರ್ತಿಶೇಷ ಕಾಳಿಂಗ ನಾವುಡರು, ಶ್ರೀಯುತ ಪದ್ಮಶ್ರೀ ಚಿಟ್ಟಾಣಿ, ಗೋಡೆ ನಾರಾಯಣ ಹೆಗಡೆ, ನಾರಾಯಣ ಉಪ್ಪೂರು, ನೇಬ್ಬೂರು ಭಾಗವತರು, ಕೆರೆಮನೆ ಶಂಭು ಹೆಗಡೆ, ಕೋಟ ವೈಕುಂಠ ನಾಯಕ್ ಮುಂತಾದವರು ಹೆಸರುವಾಸಿಯಾಗಿದ್ದರು.

ಆ ಕಾಲದಲ್ಲಿ ಇವರು ಎಲ್ಲ ಪಾತ್ರಗಳ ಸೆಳೆತ ಬಾಲಕ ಭಾಸ್ಕರನ ಮೇಲೆ ಪರಿಣಾಮ ಹೊಂದಿತು. ಕಡು ಬಡತನದಿಂದ ಪ್ರಾಥಮಿಕ ಶಾಲೆಯನ್ನು ಸೌಢದಲ್ಲಿ ಪೂರೈಸಿ ಶಂಕರನಾರಾಯಣದಲ್ಲಿ ಪ್ರೌಢ ಶಿಕ್ಷಣ ಎಂಟನೇ ತರಗತಿಗೆ ತೀಲಾಂಜಲಿ ಹೇಳಿದರು. ಆ ಸಮಯದಲ್ಲಿ ಇವರಿಗೆ ಸಿಕ್ಕ ಗುರು ಬಡಗುತ್ತಿಟ್ಟಿನ ಹೆಸರಾಂತ ಸ್ತ್ರೀವೇಷಧಾರಿ ಜ್ವಾಲೆ ಖ್ಯಾತಿಯ ದಿವಂಗತ ಅರಾಟೆ ಮಂಜುನಾಥರ ಬಳಿ ಶಿಷ್ಯರಾಗಿ ಪ್ರಾಥಮಿಕ ಹಂತದ ಹೆಜ್ಜೆಗಳನ್ನು ಕಲಿತರು. ಶ್ರೀಯುತರು ನಂತರ ಹದಿನಾರನೇ ವಯಸ್ಸಿನಲ್ಲಿ ಸಂಪೂರ್ಣ ಹೆಜ್ಜೆ ಕುಣಿತ ಕಲಿತು ಅಮೃತೇಶ್ವರೀ ಮೇಳಕ್ಕೆ ಪೀಠಿಕೆ ಸ್ತ್ರೀ ವೇಷಧಾರಿಯಾಗಿ ಸೇರಿದರು. ನಂತರ ಗೋಳಿಗರಡಿ ಮೇಳದಲ್ಲಿ ತದನಂತರ ಮಡಾಮಕ್ಕಿ ಮೇಳದಲ್ಲಿ ಸಂಪೂರ್ಣ ಹದಿನೈದು ವರುಷಗಳ ಕಾಲ ಪ್ರಧಾನ ಸ್ತ್ರೀವೇಷಧಾರಿಯಾಗಿ ಮನೆ ಮನದಲ್ಲಿ ರಂಜಿಸಿದರು.

ಅಂಗಕ್ಕೊಪ್ಪುವ ಸೀರೆ ಕುಪ್ಪಸ ಆಭರಣಗಳನ್ನು ತೊಟ್ಟು ಒನಪು ವೈಯಾರದ ಮಾತುಗಳಿಂದ ಶ್ವೇತ ಕುಮಾರನ ತ್ರಿಪುರಸುಂದರಿ, “ಇತ್ತಲಾ ಗಂಧರ್ವ ರಾಯನ ಪುತ್ರಿಯಾಗಿಹ ಚಿತ್ರಾಲೋಚನೆ” ರುಧ್ರಕೋಪದ ಪ್ರಸಂಗದ ಚಿತ್ರಾಕ್ಷಿ , “ಎಂದು ಜಗನ್ಮೋಹಕ ರೂಪದಿಂದ ಅಂದು ಹಿಡಿಂಬೆ ” ಹಿಡಿಂಬೆ ವಿವಾಹ ಪ್ರಸಂಗದ ಮಾಯಾ ಹಿಡಿಂಬೆ, “ಹದಿನಾರು ವತ್ಸರದ ಹೆಣ್ಣದವಳು ಮುದದಿಂದ ಶೃಂಗಾರವಾಗಿ ಮತ್ತವಳು” ಪಂಚವಟಿ ಪ್ರಸಂಗದ ಮಾಯಾ ಶೂರ್ಪನಖಿ, ಬೀಷ್ಮ ವಿಜಯದ “ಧರಣಿತಾತ್ಮಜೆ ಧರಣೇಂದ್ರನ ಸುತೆ ನಾನು” ಎಂಬ ವೈಯಾರದ ಅಂಬೆಯಾಗಿ, ದೇವಿ ಮಾಹಾತ್ಮೆಯ “ದತಿದೇವಿ ಸುತೆ ನಾನು ಮಾಲಿನಿ” ಎಂಬ ಮಾಲಿನಿ, ನಂತರ ವೀರ ರಸದ “ಇತ್ತಲೊಂದಿನ ಸ್ತ್ರೀರಾಜ್ಯವ ನಾಳ್ವ ರಾಣಿ ಶಶಿಪ್ರಭೆಯು” ಎಂಬ ಶಶಿಪ್ರಭೆ ಅಲ್ಲದೆ ಅದೇ ಪ್ರಸಂಗದಲ್ಲಿ “ಯಾವನಿತ ಸುಂದರ ಪುರುಷನು” ಎಂದು ಮೋಹಕೊಳಗಾದ ಭ್ರಮರಕುಂತಳೆಯಾಗಿ, “ನೀರಾ ನಿನಗೆ ನಮಸ್ಕಾರ” ಎಂಬ ದ್ರೌಪತಿ ಪ್ರತಾಪದ ದ್ರೌಪತಿಯಾಗಿ, ಮೀನಾಕ್ಷಿ ಕಲ್ಯಾಣದ ಮೀನಾಕ್ಷಿ, ಚಂದ್ರಾವಳಿ ವಿಲಾಸದ ಚಂದ್ರಾವಳಿ ಕೆಲವೊಮ್ಮೆ ರಾಧೆ, ಹೀಗೆ ಆಗಿನ ಕಾಲದಲ್ಲಿ ಎಲ್ಲಾ ಪೌರಾಣಿಕ ಪಾತ್ರವನ್ನು ಸಹ ಮಾಡುತ್ತಿದ್ದರು. ಅದು ಅಲ್ಲದೆ ಕೆಲವು ಹಾಸ್ಯಗಾರನ ಪಾತ್ರವನ್ನು ಸಹ ಮಾಡುತ್ತಿದ್ದರು. ಶಶಿಪ್ರಭೆಯ ದೂತಿ, ಮಾಲಿನಿಯ ದೂತ, ಹರಿಶ್ಚಂದ್ರನ ಚಂದ್ರಮತಿ ಕೆಲವೊಮ್ಮೆ ನಕ್ಷತ್ರಿಕ, ನಳ ದಮಯಂತಿಯ ಕರುಣಾರಸ ದಮಯಂತಿ, ಸತ್ಯವಾನ ಸಾವಿತ್ರಿಯ ಸಾವಿತ್ರಿ, ಅಭಿಮನ್ಯು ಕಾಳಗದ ಸುಭದ್ರೆ ಮುಂತಾದ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿ ರಂಗದಲ್ಲಿ ಮನದಣಿಯಾದಂತೆ ಕುಣಿದು ಪ್ರೇಕ್ಷಕರನ್ನು ರಂಜಿಸಿದರು.

ಹೀಗೆ ಹದಿನೈದು ವರುಷದ ಮೇಳದ ತಿರುಗಾಟದಲ್ಲಿ ಸಾಮಾನ್ಯವಾಗಿ ಸ್ತ್ರೀ ವೇಷಧಾರಿಯಾಗಿ, ಹಾಗು ಸಮಯಕ್ಕೆ ತಕ್ಕಂತೆ ಮಣಿಕೇತನ, ಧರ್ಮರಾಯ, ಯಮ, ಋತುಪರ್ಣ, ರಾವಣ, ರಾಮ, ಪರಶುರಾಮ, ಶ್ರೀಕೃಷ್ಣ ಮುಂತಾದ ಸೌಮ್ಯ ಸ್ವಭಾವದ ಪುರುಷವೇಷವನ್ನು ಮಾಡಿದ್ದಾರೆ. ಒಟ್ಟಾರೆ ಹೇಳುದಾದರೆ ಮೇಳದಲ್ಲಿ ಲವಲವಿಕೆಯಿಂದ ಇದ್ದ ಭಾಸ್ಕರರಿಗೆ ಮಡಾಮಕ್ಕಿ ಮೇಳದ ಸಂಚಾಲಕರಾದ ಪಿ ಕಿಶನ್ ಹೆಗಡೆಯವರು ಕಳೆದ ಐದಾರು ವರುಷದಿಂದ ಮೇಳದ ತಿರುಗಾಟದ ಕಾರ್ಯನಿರ್ವಾಹಕ(ಮೆನೇಜರ್) ರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲದೆ ತನ್ನ ಯಕ್ಷಗಾನ ತಿರುಗಾಟದಲ್ಲಿ ಕಳೆದ ಇಪ್ಪತ್ತೆರಡು ವರುಷ ತಿರುಗಾಟವನ್ನು ಮಾಡಿ ಜನಾನುರಾಗಿದ್ದಾರೆ. ಶ್ರೀಯುತರು ತಮ್ಮ ಸರಳ ಸಜ್ಜನಿಕೆಯ ಮಾತುಗಳಿಂದ ಹಲಾವಾರು ಸಂಘಟಕರನ್ನು ಹಾಗು ಹರಿಕೆ ಆಟವನ್ನು ಮಾಡಿಸಿ ಮೇಳದ ಯಜಮಾನರಿಗೂ ಹಾಗು ಸಹವೃತ್ತಿ ಕಲಾವಿದರಿಗೂ ಪ್ರೀತಿ ಪಾತ್ರರಾಗಿದ್ದಾರೆ. ಅಪಾರ ಅಭಿಮಾನ ಬಳಗವನ್ನು ಸಹ ಹೊಂದಿದ್ದಾರೆ. ರಾತ್ರಿಯಲ್ಲಿ ಮೇಳದ ಕಲಾವಿದರೊಂದಿಗೆ ಲವಲವಿಕೆಯಿಂದ ಹಾಗು ಹಗಲಿಡೀ ಬಿರು ಬಿಸಿಲಿನಲ್ಲಿ ಮೇಳದ ಆಟಡಾ ಸಂಘಟಕರನ್ನು ಹುಡುಕುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಸೌಮ್ಯ ಸ್ವಭಾವದ ಇವರಿಗೆ ಹಮ್ಮು ಬಿಮ್ಮುಗಳಿಲ್ಲ. ಒಟ್ಟಾರೆ ಹೇಳುದಾದರೆ ಮೇಳದ ಅಭಿವೃದ್ಧಿಗೆ ಹಗಲಿರುಳೆನ್ನದೆ ಪಾದರಸದಂತೆ ಶ್ರಮಿಸುತ್ತಾರೆ ಎಂದರೆ ತಪ್ಪಾಗಲಾರದು.

ಶ್ರೀಯುತರು ಮೇಳದ ಅಭಿವೃದ್ಡಿಗಾಗಿ ದುಡಿದರುತಮ್ಮ ರಂಗ ಬದುಕಿನ ಜೊತೆಗೆ ಸಂಕಷ್ಟದ ಏಳುಬೀಳುವಿನ ಜೀವನವನ್ನು ಸಹ ಅನುಭವಿಸಿದ್ದಾರೆ. ಮಡಾಮಕ್ಕಿ ಸಮೀಪದ ಮಾಂಡಿ ಮೂರ್ ಕೈ ಎಂಬಲ್ಲಿ ಸಹಧರ್ಮಿಣಿ ಶಾರದಾಳೊಂದಿಗೆ ಮಕ್ಕಳಾದ ಶಾಂಭವಿ, ಸೌಜನ್ಯವೆಂಬ ಕನ್ಯಾರತ್ನರನ್ನು ಪಡೆದು ಕುಲದೀಪಕನಾದ ವಿಘ್ನೇಶನೆಂಬ ಮಕ್ಕಳೊಂದಿಗೆ ಸುಖದಿಂದ ಜೀವನ ಸಾಗಿಸುತ್ತಾರೆ. ಹೀಗೆ ಇವರು ನಂಬಿದ ಕಲಾ ದೇವಿ ಶಾರದೆ ಹಾಗು ಮಡಾಮಕ್ಕಿ ವೀರಭದ್ರೇಶ್ವರ ದೇವರು ಹಾಗು ನನ್ನ ಆರಾಧ್ಯ ದೇವಿಯಾದ ಆದಿಶಕ್ತಿ ಎನಿಸಿದ ಚಾರ ಮಹಿಷಮರ್ಧಿನಿ ಅಮ್ಮನವರು ಇವರ ಮುಂದಿನ ಜೀವನ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಆಶಯ ವ್ಯಕ್ತಪಡಿಸೋಣ.

🖋 ಪ್ರಸಂಗಕರ್ತರು ಚಾರ ಪ್ರದೀಪ ಹೆಬ್ಬಾರ್

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...