ಕೋವಿಡ್ ಕಾಲದಲ್ಲಿ ಅನಿವಾಸಿಗಳಿಗೆ ತವರಿಗೆ ಹಿಂತಿರುಗಲು ಅಭೂತಪೂರ್ವ ಕೊಡುಗೆ ನೀಡಿದ ಡಾ.ಆರತಿ ಕೃಷ್ಣರೊಂದಿಗೆ ವಿಕೆ ನ್ಯೂಸ್ ನಡೆಸಿದ ಸಂವಾದ.

ಅಮೇರಿಕಾದ ಭಾರತೀಯ ದೂತವಾಸದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ,ಡಾ.ಮನಮೋಹನ್ ಸಿಂಗ್ ಸರಕಾರದಲ್ಲಿ ಸಾಗರೋತ್ತರ ಸಚಿವಾಲಯದ ಇಂಡಿಯಾ ಡೆವಲಪ್ ಮೆಂಟ್ ಫೌಂಡೇಶನ್ ನ ಸಲಹೆಗಾರ್ತಿಯಾಗಿ ಕಾರ್ಯ ನಿರ್ವಹಣೆ,ಶ್ರೀ ಸಿದ್ದರಾಮಯ್ಯನವರ ಕಾಲದಲ್ಲಿ ಕರ್ನಾಟಕ ಸರ್ಕಾರದ ಅನಿವಾಸಿ ಫಾರಂ ನ ಮೊದಲ ಮಹಿಳಾ ಉಪಾಧ್ಯಕ್ಷರಾಗಿ ಸೇವೆ ಹೀಗೆ ವಿವಿಧ ಹುದ್ದೆಗಳನ್ನು ಅನುಭವಿಸಿದ,ಅನೇಕ ಪ್ರಶಸ್ತಿ,ಸನ್ಮಾನಗಳಿಂದ ಪುರಸ್ಕರಿಸಲ್ಪಟ್ಟ ಹೆಮ್ಮೆಯ ಕನ್ನಡತಿ ಡಾ.ಆರತಿ ಕೃಷ್ಣರೊಂದಿಗೆ ವಿಶ್ವ ಕನ್ನಡಿಗ ನ್ಯೂಸ್ ಸಂಪಾದಕರಾದ ಇರ್ಷಾದ್ ಬೈರಿಕಟ್ಟೆ ನಡೆಸಿದ ಸಂವಾದ ಇಲ್ಲಿದೆ

ವಿಕೆ ನ್ಯೂಸ್: ನಿಮ್ಮ ಬಗ್ಗೆ ಕಳೆದ ಕೆಲವು ವರ್ಷಗಳಿಂದಷ್ಟೇ ಮಾಧ್ಯಮಗಳಲ್ಲಿ ಕೇಳಿ ಬರುತ್ತಿದೆ,ನಿಮ್ಮ ವೃತ್ತಿ ಬದುಕಿನ ಬಗ್ಗೆ-ರಾಜಕೀಯಕ್ಕೆ ಬಂದ ಹಾದಿಯ ಬಗ್ಗೆ ಸ್ವಲ್ಪ ವಿವರಿಸುವಿರಾ.?
-ನಾನು ಕರ್ನಾಟಕದ ಮಾಜಿ ಶಾಸಕರೂ-ಸಚಿವರೂ,ಆದ ಬೆಗಣೆ ರಾಮಯ್ಯನವರ ಮಗಳು.ಡಿಗ್ರಿ ಕಲಿಯುವ ಸಂದರ್ಭದಲ್ಲೇ ಅಮೇರಿಕಾದಲ್ಲಿ ಉದ್ಯಮದಲ್ಲಿದ್ದ ಗೋಪಾಲ ಕೃಷ್ಣರೊಂದಿಗೆ ಮದುವೆಯಾಗಿತ್ತು.ಗಂಡನ ಕುಟುಂಬದವರೆಲ್ಲರೂ ಹಿಂದಿನಿಂದಲೇ ಅಮೇರಿಕಾದಲ್ಲಿ ವಾಸ್ತವ್ಯದಲ್ಲಿದ್ದರೂ ನಾನು ನನ್ನ ಪದವಿಯನ್ನು ಇಲ್ಲಿಯೇ ಮುಗಿಸಿದೆ.ಆ ಬಳಿಕ ಮೈಸೂರಿನಲ್ಲಿ ರಾಜ್ಯಶಾಸ್ತ್ರದಲ್ಲಿ ಮಾಸ್ಟರ್ಸ್ ಅನ್ನೂ ಕಲಿತೆ.ಐ.ಎ.ಎಸ್ ಆಗಬೇಕೆಂಬ ಅದಮ್ಯ ಬಯಕೆಯಿತ್ತು.ಆದರೆ ಗಂಡನ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ತಕ್ಷಣಕ್ಕೆ ಅಲ್ಲಿನ ವ್ಯವಹಾರವನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಯಿತು.ವ್ಯವಹಾರ ನೋಡುವುದರ ಜೊತೆಗೇ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಿಂದ ಎಂ.ಬಿ.ಎ ಪದವಿ ಪಡೆದೆ.ಜಗತ್ತಿನ ಪ್ರಮುಖ ಭಾಷೆಗಳಾದ ಸ್ಪಾನಿಶ್ ಹಾಗು ಫ್ರೆಂಚ್ ಅನ್ನೂ ಕಲಿತೆ.ಇದೇ ಸಂದರ್ಭದಲ್ಲಿ ಅಮೇರಿಕಾದ ಜಾರ್ಜ್ ಮಾಸೆನ್ ವಿಶ್ವವಿದ್ಯಾನಿಲಯದಲ್ಲಿ “ಸಾರ್ವಜನಿಕ ನೀತಿ” ವಿಷಯದಲ್ಲಿ ಮಾಸ್ಟರ್ಸ್ ಗೆ ಅರ್ಜಿ ಹಾಕಿದೆ.ಅವಕಾಶ ದೊರೆಯಿತು.ನನ್ನ ಬದುಕಿನಲ್ಲಿ ಮಹತ್ವದ ತಿರುವು ಪಡೆದ ಕ್ಷಣ ಇದು.ಅಂತರಾಷ್ಟ್ರೀಯ ಕಾರ್ಯಕ್ರಮಗಳನ್ನು ನಿರ್ದೇಶಿಸುವ ಅಪೂರ್ವ ಅವಕಾಶ ಅಲ್ಲಿ ದೊರಕಿತು,ಇದೇ ನನ್ನನ್ನು ವಾಶಿಂಗ್ಟನ್ ನ ಭಾರತೀಯ ರಾಯಭಾರ ಕಚೇರಿಯಲ್ಲಿ ಸಾಮಾಜಿಕ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುವ ಸೌಭಾಗ್ಯಕ್ಕೆ ಕಾರಣವಾಯಿತು.ವಿವಿಧ ರಾಯಭಾರಿಗಳ ಅಡಿಯಲ್ಲಿ-ಹಲವು ಸವಾಲುಯುತ ಕೆಲಸಗಳನ್ನು ನಿರ್ವಹಿಸುವಲ್ಲಿ ಯಶಸ್ವಿಯಾದೆ.ಆ ಬಳಿಕ ಭಾರತ ಸರಕಾರದ ಸಾಗರೋತ್ತರ ವ್ಯವಹಾರಗಳ ಸಚಿವಾಲಯದ ವಾಶಿಂಗ್ಟನ್ ನ ಸಮುದಾಯ ಅಭಿವೃದ್ದಿ ಅಧಿಕಾರಿಯಾಗಿ ನೇಮಕಗೊಳಿಸಿದರು.ಭಾರತದ ಎನ್.ಆರ್.ಐ ಸಚಿವಾಲಯವನ್ನು ಅಮೇರಿಕಾದ ಉದ್ದಗಲಕ್ಕೂ ಸಂಚರಿಸಿ ಪ್ರಚಾರ ಪಡಿಸಿದೆ,ಸಮಸ್ಯೆಗಳನ್ನು ಆಲಿಸಿದ್ದೇನೆ,ಸರಕಾರಕ್ಕೆ ಸೇತುವೆಯಂತೆ ಕಾರ್ಯನಿರ್ವಹಿಸಿದ್ದೇನೆ.ಭಾರತಕ್ಕೆ ಹಿಂತಿರುಗಿದ ಬಳಿಕವೂ 2011 ರಲ್ಲಿ ಮಾನ್ಯ ಮನಮೋಹನ್ ಸಿಂಗ್ ಸರಕಾರದಲ್ಲಿ ಸಾಗರೋತ್ತರ ಸಚಿವಾಲಯದಲ್ಲಿ ಇಂಡಿಯಾ ಡೆವಲಪ್ ಮೆಂಟ್ ಫೌಂಡೇಶನ್ ನ ಸಲಹೆಗಾರ್ತಿಯಾಗಿ ಕಾರ್ಯ ನಿರ್ವಹಿಸಿದ್ದೇನೆ.ಈ ಸಂದರ್ಭದಲ್ಲಿ ಜಗತ್ತಿನಾದ್ಯಂತ ಇರುವ ಎನ್.ಆರ್.ಐ ಗಳ,ಪಿ.ಐ.ಒ(ಪಾಸ್ಟ್ ಇಂಡಿಯನ್ ಒರಿಜಿನ್) ಗಳ ಜತೆಗೆ ಸಂವಹನ ನಡೆಸಿದ್ದೇನೆ,ಅವರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅವಕಾಶವೂ ದೊರಕಿದೆ.ಆದರೆ ಆ ಬಳಿಕ ನನ್ನ ತವರು ಕನ್ನಡ ನಾಡಿನಲ್ಲಿ ಸಮಾಜ ಸೇವೆಯ ಗುರಿಯಿಟ್ಟುಕೊಂಡು ಆಗಮಿಸಿದ್ದೇನೆ.ಥಾಯ್ಲೆಂಡ್ ನಲ್ಲಿರುವ ಬ್ಯಾಂಕಾಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ “ಮಹಾತ್ಮ ಗಾಂಧಿ ಸಮ್ಮಾನ್-2016” ಪ್ರಶಸ್ತಿ ನೀಡಿದ್ದಾರೆ. ನನ್ನ ಸಾಧನೆಗಳನ್ನು ಮುಂದಿಟ್ಟು ಶಿವಮೊಗ್ಗದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯ ಡಾಕ್ಟರೇಟ್ ನೀಡಿ ಗೌರವಿಸಿದೆ. ಹಾಗು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನಳಾಗಿರುವುದು ನನ್ನ ಪುಣ್ಯವೇ ಸರಿ, ಈ ಹಿಂದೆ ತಿಳಿಸಿದಂತೆ ರಾಜಕೀಯ ನನ್ನ ಅಂತಿಮ ಆಯ್ಕೆಯಲ್ಲ,ತಂದೆ ರಾಜಕೀಯದಲ್ಲಿದ್ದರೂ,ರಾಜಕೀಯಕ್ಕಿಂತ ಸಾಮಾಜಿಕ ಸೇವೆಯಲ್ಲಿ ಸಂತಸ ಕಾಣುವುದು ನನ್ನ ಧ್ಯೇಯ.

ವಿಕೆ ನ್ಯೂಸ್:ನಿಮ್ಮ ಸಂಸ್ಥೆ ಕೃಷ್ಣಾ ಫೌಂಡೇಶನ್ ಕಾರ್ಯಾಚರಣೆ ಏನು.?
-ಕೃಷ್ಣಾ ಫೌಂಡೇಶನ್ ಬೆಂಗಳೂರು, ಶೃಂಗೇರಿಯಲ್ಲಿ ನಾನು ವೈಯಕ್ತಿಕವಾಗಿ ನಡೆಸುವ ಸರಕಾರೇತರ ಸಂಸ್ಥೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು,ವಿದ್ಯಾರ್ಥಿ ವೇತನ,ಸರಕಾರಿ ಶಾಲೆಗಳ ನವೀಕರಣಕ್ಕೆ ಸಹಕಾರ,ಸೌಲಭ್ಯಗಳ ಕೊರತೆಗೆ ಸಹಾಯ ನೀಡುವುದು ಮೊದಲಾದುವುಗಳನ್ನು ಈ ಸಂಸ್ಥೆ ಮೂಲಕ ನಡೆಸುತ್ತಿದ್ದೇನೆ, ಪ್ರತಿ ವರ್ಷ ಪ್ರತಿ ಶಾಲೆಯಲ್ಲೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮತ್ತು ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬ್ಯಾಗ್, ಪಠ್ಯ ಪುಸ್ತಕ, ಸಮ ವಸ್ತ್ರ ವಿತರಣೆ ಮಾಡುತ್ತಾ ಬಂದಿದ್ದೇವೆ. ಸರ್ಕಾರಿ ಅಲ್ಲದೆ ಅನೇಕ ಶಾಲೆಗಳಿಗೆ ಅಗತ್ಯ ವಸ್ತುಗಳನ್ನು ನೀಡಿದ್ದೇವೆ. ಶೃಂಗೇರಿಯ ಆಂಗ್ಲ ಮಾಧ್ಯಮ ಶಾಲೆಗೆ ಮಕ್ಕಳು ಬಹುದೂರದಿಂದ ಬಸ್ಸಿನಲ್ಲಿ ಬರುತ್ತಿದ್ದರು ಹಾಗು ಕೆಲವೊಮ್ಮ ಸರ್ಕಾರಿ ಬಸ್ಸು ಬಾರದ ಕಾರಣ ಶಾಲೆಗೆ ಬರಲಾಗುತ್ತಿರಲಿಲ್ಲ, ನಮ್ಮ ಸಂಸ್ಥೆಯ ವತಿಯಿಂದ ಶಾಲೆಗೆ ಬಸ್ಸು ಕೊಡುಗೆ ನೀಡಿದೆವು ಮತ್ತು ಅದೇ ಶೃಂಗೇರಿ ಮಠದಿಂದ ಊಟ ಬರುತ್ತಿದ್ದುದರಿಂದ ಊಟ ಸಾಗಿಸುತ್ತಿದ್ದ ವಾಹನದ ಖರ್ಚು ಕೆಲವು ವರ್ಷ ಭರಿಸಿ ನಂತರ ಸರ್ಕಾರದ ವತಿಯಿಂದ ಭರಿಸುವಂತೆ ಮಾಡಿದ್ದೇವೆ.ಅದಲ್ಲದೆ ನಮ್ಮನ್ನರಸಿ ಬರುವ ಇನ್ನಿತರ ಹಿಂದುಳಿದ ವರ್ಗಗಳ ಕಲ್ಯಾಣ, ಮಸೀದಿಗಳಿಗೆ, ಜೈನ ದೇವಾಲಯಗಳ ಜೇರ್ಣೋದ್ದಾರ, ಸಮುದಾಯಭವನ ನಿರ್ಮಾಣ, ಕಲೆ ಮತ್ತು ಸಾಹಿತ್ಯ ಪ್ರೋತ್ಸಾಹ. ಶಿಕ್ಷಣ ಕ್ಷೇತ್ರವನ್ನು ಮೊದಲುಗೊಂಡು ಎಲ್ಲಾ ಸಮಾಜಮುಖಿ ಕೆಲಸಗಳನ್ನು ನಮ್ಮ ಸಂಸ್ಥೆ, ಸರ್ಕಾರ ಮತ್ತು ಇತರ ಆಸಕ್ತರಿಂದ ಮಾಡಿಸುವುದು ಸಂಸ್ಥೆಯ ಧ್ಯೇಯವಾಗಿದೆ.

ವಿಕೆ ನ್ಯೂಸ್: ಕರ್ನಾಟಕ ಸರಕಾರದ ಎನ್.ಆರ್.ಐ ಫೋರಂ ನ ಮೊದಲ ಮಹಿಳಾ ಉಪಾದ್ಯಕ್ಷರು ತಾವು,ಯಾವ ಕಾರ್ಯಕ್ರಮಗಳನ್ನು ಕೈಗೊಂಡಿದ್ದೀರಿ?ಎಷ್ಟರ ಮಟ್ಟಿಗೆ ಯಶಸ್ವಿ ಆಗಿದ್ದೀರಿ.?
-ಕರ್ನಾಟಕ ಸರಕಾರ ಮಾನ್ಯ ಯಡಿಯೂರಪ್ಪನವರ ಹಿಂದಿನ ಅವಧಿಯಲ್ಲಿ ಆರಂಭಿಸಿದ್ದ ಕರ್ನಾಟಕ ಅನಿವಾಸಿ ಫೋರಂ ಗೆ ಮೊದಲ ಉಪಾಧ್ಯಕ್ಷರಾಗಿ ಶ್ರೀ ಗಣೇಶ್ ಕಾರ್ಣಿಕ್ ನೇಮಕಗೊಂಡಿದ್ದರು,ಆ ಬಳಿಕ ಮಾನ್ಯ ಸಿದ್ದರಾಮಯ್ಯನವರ ಅವಧಿಯಲ್ಲಿ ಶ್ರೀ ವಿ.ಸಿ.ಪ್ರಕಾಶ್ ಎನ್ನುವವರು ಮೂರು ವರ್ಷಗಳ ಕಾಲ ಅಧಿಕಾರಿಯಾಗಿದ್ದರು.ಕೇವಲ ಒಂದುವರೆ ವರ್ಷಗಳಷ್ಟೇ ಅಧಿಕಾರ ನಡೆಸುವ ಅವಕಾಶ ನನಗೆ ಲಭಿಸಿದೆ.ಈ ಒಂದುವರೆ ವರ್ಷಗಳ ಅವಧಿಯಲ್ಲಿ ನನ್ನ ಅನುಭವಗಳನ್ನು ಬಳಸಿ ಶಕ್ತಿಶಾಲಿಯಾಗಿಸಿದ್ದೇನೆ.ಎನ್.ಆರ್.ಐ.ಫೋರಂ ಗೆ ನೀತಿ ರೂಪಿಸಿದ್ದೇನೆ,ನನಗೆ ಸಂಪುಟ ದರ್ಜೆ ಸ್ಥಾನಮಾನವನ್ನೂ ನೀಡಲಾಗಿದ್ದರಿಂದ ಈ ಅವಧಿಯಲ್ಲಿ ಸರಕಾರಕ್ಕೆ ಭಾರೀ ಒತ್ತಡ ತಂದು ಎರಡು ಕೋಟಿಯಷ್ಟು ಅನುದಾನ ಒದಗಿಸಿದ್ದೇನೆ.ಮತ್ತು ವಿದೇಶಗಳಲ್ಲಿನ ಕನ್ನಡ ಸಂಘ ಮತ್ತು ಕನ್ನಡಿಗರ ಕಾರ್ಯಕ್ರಮಗಳಿಗೆ ಅನುದಾನ ಪ್ರಾರಂಭಿಸಿದೆವು, ಹಾಗು ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಮತ್ತು ಮೃತದೇಹ ಬಾರತಕ್ಕೆ ಕರೆತರಲು ಧನ ಸಹಾಯ ಮತ್ತಿತರ ಕಾರ್ಯಗಳನ್ನು ಪ್ರಾರಂಭಿಸಿದ್ದೆವು, ಮತ್ತು ನಾನು ಅಧಿಕಾರ ಸ್ವೀಕರಿಸಿದ ನಂತರ ಸಮಿತಿಗೆ ನೀತ ರಚಿಸಿ ಅದನ್ನು ಕಾರ್ಯರೂಪಕ್ಕೆ ತರುವ ಹಂತದಲ್ಲಿ ಸರಕಾರ ಬದಲಾದ ಬಳಿಕ ಶ್ರೀ ಕುಮಾರಸ್ವಾಮಿ ಅವಧಿಯಲ್ಲಿ ಅನಿವಾಸಿ ಬಾರತೀಯ ಸಮಿತಿ ಯಾವುದೇ ಚಟುವಟಿಕೆಯಿಲ್ಲದೆ ಉಳಿದುಕೊಂಡಿತ್ತು ,ಪ್ರಸ್ತುತ ಇರುವ ಬಿಜೆಪಿ ಸರಕಾರವೂ ಈ ಬಗ್ಗೆ ಯಾವುದೇ ಗಮನ ಹರಿಸಿಲ್ಲ ಆದ್ದರಿದಲೇ ಈ ಕೋವಿಡ್ ಸಂಧರ್ಭದಲ್ಲಿ ಅನಿವಾಸಿ ಕನ್ನಡಿಗರಿಗೆ ತೊಂದರೆಯಾಗುತ್ತಿರುವುದು..

ವಿಕೆ ನ್ಯೂಸ್: ಕೇರಳದಲ್ಲಿ ನೋರ್ಕಾ ಬಹಳಷ್ಟು ಶಕ್ತಿಶಾಲಿಯಾಗಿದೆ,ವಿದೇಶಿಗ ಕೆಲಸವಿಲ್ಲದೆ ಊರಿಗೆ ಬಂದರೆ ಆತನ ಯೋಜನೆಗಳಿಗೆ ಸಾಕಷ್ಟು ಸ್ಪಂದಿಸುತ್ತದೆ,ಕರ್ನಾಟಕದಲ್ಲಿ ಇದು ಸಾಧ್ಯವಿಲ್ಲವೇಕೆ.?
-ಹೌದು,ಕೇರಳದಲ್ಲಿ ನೋರ್ಕಾ ಬಹಳಷ್ಟು ಶಕ್ತಿಶಾಲಿಯಾಗಿದೆ,ಒಂದನೇ ಕಾರಣ ಅಲ್ಲಿರುವ ಅನಿವಾಸಿಗಳ ಸಂಖ್ಯೆ ಹಾಗು ಅವರ ಬಲಿಷ್ಟ ಸಾಗರೋತ್ತರ ಸಂಘಟನಾ ಚಟುವಟಿಕೆಗಳು ಮತ್ತು ಅದಕ್ಕೆ ಸ್ಪಂದಿಸುವ ಸರಕಾರ.ಕರ್ನಾಟಕದಲ್ಲಿಯೂ ಅನಿವಾಸಿ ಫೋರಂ ಅನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸಿಕೊಂಡು ಹೋಗುವಲ್ಲಿ ನಾನು ನನ್ನ ಅಧಿಕಾರದ ಅವಧಿಯಲ್ಲಿ ಬಹಳಷ್ಟು ಕಾರ್ಯ ತಂತ್ರ ನಡೆಸಿದ್ದೆ.ಎನ್.ಆರ್.ಐ ಫೋರಂ ಅನ್ನು ಬಲಪಡಿಸುವುದು,ಎನ್.ಆರ್.ಕೆ ಕಾರ್ಡ್ ನೀಡುವುದು,ಕನ್ನಡ ಸಂಘಟನೆಗಳಿಗೆ ಪ್ರೋತ್ಸಾಹ ನೀಡುವುದು,ಅನಿವಾಸಿ ಕಾರ್ಮಿಕರಿಗೆ ಹಾಗು ಸಿಲುಕಿಕೊಂಡವರಿಗೆ ಅಗತ್ಯ ನೆರವು ನೀಡುವುದು,ಮರಣಿಸಿದವರನ್ನು ತವರಿಗೆ ಕರೆದುಕೊಂಡು ಬರಲು ಅಗತ್ಯ ಕ್ರಮ ಕೈಗೊಳ್ಳುವುದು,ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು,ನಮ್ಮ ಊರು-ನಮ್ಮ ನಾಡು ಅಭಿಯಾನ,ಎನ್.ಆರ್.ಐ ಗಳ ನೋಂದಣೆ ನಡೆಸುವುದು,ಭಾರತೀಯ ಪ್ರವಾಸಿ ದಿವಸ್ ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅನಿವಾಸಿ ಭಾರತೀಯರನ್ನು ಪ್ರೋತ್ಸಾಹಿಸುವುದು ಮೊದಲಾದ ಹಲವು ಯೋಜನೆಗಳನ್ನು ಮುಂದಿಟ್ಟುಕೊಂಡು ಅನಿವಾಸಿ ಬಾರತೀಯರಿಗೆ ನೀತಿಯನ್ನು ಸಿದ್ದಪಡಿಸಿದ್ದೆ. ಸೌದಿ-ಯು.ಎ.ಇ ಸೇರಿದಂತೆ ಮಧ್ಯಪ್ರಾಚ್ಯದ ವಿವಿಧ ದೇಶಗಳಿಗೂ ತೆರಳಿ ಅನಿವಾಸಿ ಬಾರತೀಯ ಸಮಿತಿಯನ್ನು ಬಲಪಡಿಸಲು ಪ್ರಯತ್ನಿಸಿದ್ದೇನೆ.ಆದರೆ ದುರದೃಷ್ಟವಶಾತ್ ಇನ್ನೂ ಕಾರ್ಯಗತಗೊಳ್ಳದೆ ಹಾಗೆಯೇ ಉಳಿದುಕೊಂಡಿದೆ. ಇದು ಮುಂದಿನ ದಿನಗಳಲ್ಲಿ ಈಡೇರಲಿದೆ ಎಂಬ ಆಶಯದಲ್ಲಿದ್ದೇನೆ.

ವಿಕೆ ನ್ಯೂಸ್: ತಾವು ಆತ್ಮಕಥೆ ಬರೆದಿದ್ದೀರಿ,ಯಾರು ಪ್ರೇರಣೆ.?
-ಚಿಕ್ಕಂದಿನಿಂದಲೇ ಮಾನ್ಯ ಗುಂಡೂರಾವ್ ರವರ ಅಧಿಕಾರದಲ್ಲಿ ಸಚಿವರಾಗಿದ್ದ ತಂದೆ ರಾಮಯ್ಯನವರ ರಾಜಕೀಯ ಜೀವನ ನೋಡುತ್ತಾ ಬೆಳೆದಿದ್ದೇನೆ,ಮಾನ್ಯ ಇಂದಿರಾ ಗಾಂಧಿ ಕರ್ನಾಟಕದಿಂದ ಚುನಾವಣೆಗೆ ಸ್ಪರ್ಧಿಸಿದಾಗ ತಂದೆಯೇ ಅವರ ಚುನಾವಣಾ ಪ್ರಚಾರಕ್ಕೆ ಸಾಥ್ ನೀಡಿದ್ದರು.ಇವೆಲ್ಲವನ್ನು ನೋಡುತ್ತಾ ಹಳ್ಳಿಯಿಂದ ಬೆಂಗಳೂರಿನೆಡೆಗೆ ಬಂದು ಅಲ್ಲಿಂದ ಅಮೇರಿಕಾದಲ್ಲಿ ಸುಧೀರ್ಘ ಬದುಕು ಸಾಗಿಸಿದೆ.ಹಿಂದಿನಿಂದಲೇ ಜಾನಪದ ಹಾಡುಗಳಲ್ಲಿ ನಾನು ಸಂತಸ ಕಂಡಿದ್ದೇನೆ,ಕೆಲವು ಹಾಡುಗಳು ರೆಕಾರ್ಡ್ ಆಗಿ ಮೂಡಿ ಬಂದಿದೆ ಕೂಡ.ಹೀಗೆ ನನ್ನ ಹಾಡುಗಳ ಅಡಕ ‘ಮಲೆನಾಡ ಸಿರಿ’ ಬಿಡುಗಡೆಯನ್ನು ಅಂದಿನ ಮುಖ್ಯಮಂತ್ರಿ ಶ್ರೀ ಎಸ್.ಎಂ ಕೃಷ್ಣರವರು ನರವೇರಿಸಿದ ದಿನದಂದು ನನ್ನ ಜೀವನವನ್ನು ಹತ್ತಿರದಿಂದ ನೋಡಿದ್ದ ಜನ ಹಾಗು ಬಂಧು ಮಿತ್ರರು ಮದುವೆಯ ನಂತರ ಶಿಕ್ಷಣ ಮುಂದುವರೆಸಿ, ಪದವಿ ಪಡೆದು, ಅಮೇರಿಕಾದಲ್ಲಿ ಉದ್ಯೋಗ ಮಾಡುತ್ತಾ ಮಕ್ಕಳ ಭವಿಷ್ಯ ರೂಪಿಸಿದ ನೀವು ಭಾರತದ ಅನೇಕ ಮಹಿಳೆಯರಿಗೆ ಮಾದರಿಯಾಗಿದದ್ದೀರಿ ನಿಮ್ಮ ಆತ್ಕಥನ ಬಹಳ ಜನರಿಗೆ ಸ್ಪೂರ್ತಿಯಾಗತ್ತದೆ ಎಂದು ಹೇಳಿದಾಗ, “ಎ ಕ್ವೆಸ್ಟ್ ಎಕ್ರೋಸ್ ದ ಸೀ” ಎಂಬ ಕೃತಿ ಬರೆದಿದ್ದೆ,ಅಂದಿನ ಮುಖ್ಯ ಮಂತ್ರಿಗಳಾದ ಧರಂ ಸಿಂಗ್ ರವರು ಅದನ್ನು ಬಿಡುಗಡೆಗೊಳಿಸಿದ್ದರು.

ವಿಕೆ ನ್ಯೂಸ್: ಕೋವಿಡ್ ನ ಸಂಧಿಗ್ದ ಪರಿಸ್ಥಿತಿಯಲ್ಲಿ ನೀವು ವಿದೇಶದಲ್ಲಿ ಅನಿಶ್ಚಿತತೆಯಲ್ಲಿರುವ ಕನ್ನಡಿಗರನ್ನು ಕರೆ ತರಲು ಆರಂಭದಿಂದಲೇ ಒತ್ತಡ ಹೇರಿದ್ದೀರಿ,ನಿಮ್ಮ ವೈಯಕ್ತಿಕ ಅನುಭವ ಹೇಗಿದೆ.?
-ಹೌದು, ವಿದೇಶದಲ್ಲಿ ಕೋವಿಡ್ ಎಂಬ ಮಹಾಮಾರಿಗೆ ಸಿಲುಕಿ ಆರಂಭದಿಂದಲೇ ವಿದ್ಯಾರ್ಥಿಗಳು-ವೀಸಾ ಅವಧಿ ಮುಗಿದವರು-ಪ್ರವಾಸಕ್ಕೆ ತೆರಳಿ ಸಿಲುಕಿದವರು-ಕೆಲಸ ಕಳೆದುಕೊಂಡು ಅತಂತ್ರರಾದವರು ಲಕ್ಷಗಟ್ಟಲೆ ಜನರಿದ್ದಾರೆ.ಇವರಿಗೆ ಸರಕಾರ ವ್ಯವಸ್ಥಿತ ರೀತಿಯಲ್ಲಿ ಮರಳಿ ತಾಯ್ನಾಡಿಗೆ ಕರೆ ತರುವ ಮಾಡಲಿಲ್ಲ.ವಂದೇ ಭಾರತ್ ಮಿಶನ್ ಅಡಿಯಲ್ಲಿ ಇರುವ ಕೆಲವೇ ವಿಮಾನಗಳು ಕೇವಲ ನ್ಯಾಯ ಒದಗಿಸುವುದು ದುರ್ಲಭ.ವಿವಿಧ ಕಷ್ಟಗಳಲ್ಲಿರುವವರು-ಅನಿಶ್ಚಿತತೆಯಲ್ಲಿರುವವರು ನನ್ನನ್ನು ಸಂಪರ್ಕಿಸುತ್ತಿದ್ದಾರೆ.ಹತ್ತಕ್ಕೂ ವರ್ಷಕ್ಕೂಅಧಿಕ ಕಾಲ ಅಮೇರಿಕಾದಲ್ಲಿ ಕೆಲಸ ಮಾಡಿರುವುದು,ಬಳಿಕ ಕೇಂದ್ರ ಸರ್ಕಾರದ ಸಚಿವಾಲಯದಲ್ಲಿ ಮಾಡಿರುವ ಸೇವೆ,ಎನ್.ಆರ್.ಐ ಫೋರಂ ನಲ್ಲಿ ಅಧಿಕಾರ ನಡೆಸಿರುವುದರಿಂದಲೇ ದಿನವೊಂದಕ್ಕೆ ನೂರಾರು ಬೇಡಿಕೆಗಳು ಬರುತ್ತಿದೆ.ಹಲವಾರು ಚಾರ‍್ಟರ್ಡ್ ವಿಮಾನಗಳ ಅನುಮತಿಯನ್ನು ಒದಗಿಸಿ ಕೊಡುವಲ್ಲಿ ಸಫಲನಾಗಿದ್ದೇನೆ.ಪ್ರಸ್ತುತ ಕೇಂದ್ರ ಸರ್ಕಾರದಲ್ಲಿರುವ ವಿದೇಶಾಂಗ ಮಂತ್ರಿಯಾದ ಶ್ರೀ ಜೈಶಂಕರ್ ಹಾಗು ವಿಮಾನಯಾನ ಸಚಿವ ಶ್ರೀ ಹರ್ವಿಂದರ್ ಸಿಂಗ್ ಈ ಹಿಂದೆ ರಾಯಭಾರಿಗಳಾಗಿದ್ದರಿಂದ ಅವರ ಸಂಪರ್ಕ ಹಾಗು ಸಹಕಾರ ಕೂಡ ಈ ನಿಟ್ಟಿನಲ್ಲಿ ಲಭಿಸುತ್ತಿದೆ.ಯಾವುದೇ ಪಕ್ಷ-ಜಾತಿ-ಧರ್ಮ ಎಂದು ನೋಡದೆ ನನ್ನ ಅನುಭವ -ಸಂಪರ್ಕಗಳನ್ನು ಬಳಸಿ ವೈಯಕ್ತಿಕವಾಗಿಯೂ,ವಿವಿಧ ಸಂಘ ಸಂಸ್ಥೆಗಳು-ಕಂಪೆನಿಗಳು ಶ್ರಮಿಸಿ ವ್ಯವಸ್ಥೆ ಮಾಡುವ ವಿಮಾನಕ್ಕೆ ಅನುಮತಿ ನೀಡುವಲ್ಲಿ ಸಹಕರಿಸುವುದು ಹೀಗೆ ವಿವಿಧ ರೀತಿಯಲ್ಲಿ ಆಫ್ರಿಕಾ-ಏಷ್ಯಾ-ಮಧ್ಯಪ್ರಾಚ್ಯ-ಯುರೋಪ್-ಅಮೇರಿಕಾ ಹೀಗೆ ವಿವಿಧ ದಿಕ್ಕಿನಿಂದ ಸಾವಿರಾರು ಜನರನ್ನು ಮನೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದೇನೆಂಬ ನೆಮ್ಮದಿ ನನ್ನಲ್ಲಿದೆ.

ವಿಕೆ ನ್ಯೂಸ್: ಕಾಂಗ್ರೆಸ್ ಬಿಜೆಪಿಯ ಬಲಿಷ್ಠ ಐಟಿ ಸೆಲ್ ನೆದುರು ದುರ್ಬಲ ಎಂದನಿಸುತ್ತಿಲ್ಲವೇ.?
-ಖಂಡಿತಾ ಇಲ್ಲ ನಾವು ಹೊಸ ಐ.ಟಿ ಸೆಲ್ ಅಧ್ಯಕ್ಷ ರನ್ನು ನಿಯೋಜಿಸಿದ್ದೇವೆ ಅವರ ನೇತೃತ್ವದಲ್ಲಿ ಕೊರೋನ, ಭ್ರಷ್ಟಾಚಾರ ಮತ್ತು ಇನ್ನಿತರ ವಿಷುಗಳ ಬಗ್ಗೆ ಪ್ರತಿಭಟನೆ ಮಾಡಿದ್ದೀವಿ, ರಾಜ್ಯ ಸರ್ಕಾರದ ಪ್ರವಾಹ ನಿರ್ವಣೆಯ ವಿಫಲತೆಯ ಬಗ್ಗೆ ಬೆಳಕು ಚೆಲ್ಲುತ್ತಿದ್ದೇವೆ, ಕಾಂಗ್ರೆಸ್ ಪಕ್ಷ ದ ಐ.ಟಿ ಸೆಲ್ ತುಂಬಾ ಸಕ್ರಿಯವಾಗಿದೆ. ಕಾಂಗ್ರೆಸ್ ಪಕ್ಷ ಸಕ್ರಿಯ ವಾಗಿರುವುದರಿಂದಲೇ ಕೊರೊನ ಭ್ರಷ್ಟಾಚಾರ ಹೊರ ಬರಲು ಸಾಧ್ಯವಾಯಿತು. ಅಲ್ಲದೆ ರಾಜ್ಯ ಸರ್ಕಾರದ ಎಲ್ಲಾ ವೈಫಲ್ಯಗಳನ್ನು ಹೊರತೆಗೆದ ಹೆಮ್ಮೆ ನಮ್ಮ ಐ.ಟಿ ಸೆಲ್ ಗೆ ಸೇರಿದ್ದು. ಪ್ರತೀ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸುತ್ತ ಬಿಜೆಪಿ ಸರ್ಕಾರದ ವೈಫಲ್ಯ ಗಳನ್ನು ಮನೆ ಮನೆಗೆ ಸೇರಿಸುವ ಕಾರ್ಯ ಮಾಡಿದ್ದೇವೆ ಎನ್ನುವ ಹೆಮ್ಮೆ ಇದೆ ಇದರ ಜೊತೆಯಲ್ಲಿ ಪ್ರವಾಹ ಪರಿಸ್ತಿತಿಯನ್ನು ನಿಭಾಯಿಸಲು ವಿಫಲವಾದ ರಾಜ್ಯ ಸರ್ಕಾರದ ವಿರುದ್ಧ ಹೋರಾಡುತ್ತಿರುವ ಘಟಕ ಆಡಳಿತ ಪಕ್ಷಕ್ಕೆ ನಡುಕ ಹುಟ್ಟಿಸಲು ಸಫಲವಾಗಿದೆ.

ವಿಕೆ ನ್ಯೂಸ್: ಕೆಪಿಸಿಸಿ ಯ ಎನ್.ಆರ್.ಐ ಸೆಲ್ ನ ಮೊದಲ ಅಧ್ಯಕ್ಷರು ತಾವು,ಯಾವ ಕಾರ್ಯಕ್ರಮಗಳನ್ನು ಕೈಗೊಂಡಿದ್ದೀರಿ?ಎಷ್ಟರ ಮಟ್ಟಿಗೆ ಯಶಸ್ವಿ ಆಗಿದ್ದೀರಿ.?
-ಕನ್ನಡಿಗರು ಹೆಚ್ಚು ಇರುವ ಹಾಗು ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಒಪ್ಪುವ ಜನರು ಹೆಚ್ಚು ಇರುವ ಕಡೆಗಳಲ್ಲೆಲ್ಲ ಸಮಿತಿಯನ್ನು ರಚಿಸಿ ಅಧ್ಯಕ್ಷರನ್ನು ನೇಮಿಸಿ ಪಕ್ಷ ಸಂಘಟನೆಯನ್ನು ಮಾಡುತ್ತಿದ್ದೇನೆ, ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಸಾಗರೋತ್ತರ ವಿಭಾಗ) ನ ಕಾರ್ಯದರ್ಶಿ ಕೂಡ ಆಗಿದ್ದ ಕೊಲ್ಲಿ ರಾಷ್ಟ್ರಗಳಲ್ಲಿ ಸಮಿತಿಯನ್ನು ರಚಿಸಿ ಇಂದಿಗೂ ಕಾರ್ಯನಿರ್ವಹಿಸುತ್ತಿವೆ ಹಾಗು ನಾನು ಕೆ.ಪಿ.ಸಿ.ಸಿ ಹಾಗು ಎ.ಐ.ಸಿ.ಸಿಯ ಅಧಿಕಾರ ಪಡೆಯುವ ಮೊದಲೂ ರಾಹುಲ್ ಗಾಂದಿ ಸಮಾವೇಷವನ್ನು ಲಂಡನ್-ಬಹರೇನ್-ಜರ್ಮನಿ-ಸಿಂಗಾಪುರ್-ಮಲೇಷಿಯಾ-ಯು.ಎ.ಇ ರಾಷ್ಟ್ರಗಳಲ್ಲಿ ನಡೆಸಿ ಯಶಸ್ವಿಗೊಳಿಸಿದ್ದೇನೆ. ಅದರಲ್ಲೂ ದುಬೈ ಸಮಾವೇಶದಲ್ಲಂತು ಸುಮಾರು 50,000(ಐವತ್ತು ಸಾವಿರಿ) ವೀಕ್ಷಕರು ಸೇರಿದ ಸಭೆ ನಮ್ಮ ಕಾಂಗ್ರೆಸ್ ಅಧ್ಯಕ್ಷರಿಗೆ ಯಶಸ್ಸನ್ನು ತಂದುಕೊಟ್ಟಿತ್ತು.

ವಿಕೆ ನ್ಯೂಸ್: ಎನ್.ಆರ್.ಐ ಓಟಿಂಗ್ ಹಕ್ಕುಗಳಿಗಾಗಿ ಹಿಂದಿನಿಂದಲೇ ಕೂಗು ಕೇಳಿ ಬರುತ್ತಿದೆ,ಇದು ಕೇವಲ ಭರವಸೆಯಾಗಿಯಷ್ಟೇ ಉಳಿದಿದೆ ಏಕೆ.?
-ಭಾರತೀಯರು ಪ್ರಪಂಚದಾದ್ಯಂತ ಇದ್ದಾರೆ ಅದರಲ್ಲೂ ಅಮೇರಿಕಾ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಹೆಚ್ಚು. ಕೊಲ್ಲಿ ರಾಷ್ಟ್ರಗಳಿಂದ ಮತದಾನ ಅವಕಾಶ ಕಲ್ಪಿಸಲು ಬಹಳ ವರ್ಷಗಳಿಂದ ಕೇಳಿಬರುತ್ತಿರುವ ಕೂಗು ಕೋರಿಕೆಯಾಗಿ ಉಳಿದಿದೆ. ಈಗ ಸದ್ಯಕ್ಕೆ ರಾಯಭಾರಿ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಮಾತ್ರ ಮತದಾನ ಮಾಡಲು ಅವಕಾಶವಿದ್ದು ಎಲ್ಲಾ ಅನಿವಾಸಿ ಬಾರತೀಯರಿಗೆ ಅವಕಾಶ ಕಲ್ಪಿಸುವುದು ತೊಂಬ ಕಷ್ಟಸಾಧ್ಯ, ಹಲವು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತವೆ. ಒಂದು ಅಥವಾ ಎರಡು ದಿನ ಮತದಾನ ನಡೆಸಲು ಸಾಧ್ಯವಿಲ್ಲ, ಅನ್ ಲೈನ್ ವೋಟಿಂಗ್ ನ್ನು ಯಾರು ಮಾಡಿದರು ಎಂದು ಕಂಡುಹಿಡಿಯುವುದು ಕಷ್ಟಸಾಧ್ಯ,ಆದರೆ ಎಲ್ಲಾ ತೊಡಕುಗಳನ್ನು ನಿವಾರಿಸಿ ಮುಂದಿನ ದಿನಗಳಲ್ಲಿ ಇದು ಸಾಧ್ಯವಾಗಲಿದೆ ಎಂದು ಆಶಿಸುತ್ತೇನೆ.

ವಿಕೆ ನ್ಯೂಸ್: ನಿಮ್ಮ ಮುಂದಿನ ಯೋಜನೆಗಳೇನು.?
-ಅದನ್ನು ನಾನು ಇನ್ನೂ ನಿರ್ಧಾರ ಮಾಡಿಲ್ಲ, ನನಗೆ ಭಾರತ ಮಾತ್ರವಲ್ಲದೆ ಹಲವು ದೇಶಗಳಿಂದ ಅನೇಕ ಸಂಸ್ಥೆಗಳು ಆಹ್ವಾನಿಸುತ್ತಿದ್ದು ನಾನು 2012ರಲ್ಲಿ ಭಾರತೀಯ ರಾಯಭಾರಿ ಕಛೇರಿ ತೊರೆದ ಕಾರಣವೇ ನನ್ನ ನೆಲದ ಜನರ ಸೇವೆ ಮಾಡಲೆಂದು, ಹಾಗು ನಮ್ಮ ಕೃಷ್ಣ ಫೌಂಡೇಷನ್ ಮುಖಾಂತರ ಶಿಕ್ಷಣವನ್ನು ಮೊದಲುಗೊಂಡು ನನ್ನ ಕೈಲಾದ ಸಹಾಯವನ್ನು ಮಾಡುತ್ತಿದ್ದೇನೆ ಹಾಗು ಬಹು ವರ್ಷಗಳಿಂದ ನನ್ನ ಒಡನಾಟ ಅನಿವಾಸಿ ಬಾರತೀಯರೊಡನೆ ಮತ್ತು ನನ್ನ ನೈಪುಣ್ಯತೆ ರಾಯಭಾರಿ ಕಛೇರಿಗಳಲ್ಲಿ ಇರುವ ಕಾರಣ ನಾನು ಇದರಲ್ಲಿ ಹೆಚ್ಚು ಗುರುತಿಸಿಕೊಂಡಿದ್ದೇನೆ, ಹಾಗು ನನ್ನ ಕುಟುಂಬ ಹಿನ್ನೆಲೆಯಿಂದ ಅನೇಕ ಸ್ನೇಹಿತರು ಮತ್ತು ಬಂಧುಗಳು ನನ್ನನ್ನು ರಾಜಕೀಯ ನಾಯಕಿಯಾಗಿ ಕಾಣಲು ಇಚ್ಚಿಸುತ್ತಿದ್ದಾರೆ. ಸದ್ಯಕ್ಕೆ ಹಿಂದುಳಿದ ಮತ್ತು ಬಡವರ ನೆರವಿಗೆ ಶ್ರಮಿಸುವುದೊಂದೆ ನನ್ನ ಗುರಿಯಾಗಿದೆ.

ವಿಕೆ ನ್ಯೂಸ್:ಓದುಗರಿಗೆ ನಿಮ್ಮ ಸಂದೇಶ.?
-ನಾನು ಈ ಕೋವಿಡ್ ಸಮಯದಲ್ಲಿ ಯಾವುದೇ ಅಧಿಕಾರದಲ್ಲಿಲ್ಲ-ಸರ್ಕಾರಿ ಹುದ್ದೆಯಲ್ಲಿಲ್ಲ, ಹೀಗಿದ್ದರೂ ಇದು ಕೇವಲ ಅಧಿಕಾರ ಇದ್ದಾಗಿನ ಕೆಲಸ ಎಂದು ಭಾವಿಸದೆ,ಸಂಕಷ್ಟದಲ್ಲಿರುವ ಜನರು ನನ್ನನ್ನು ಸಂಪರ್ಕಿಸಿದಾಗ, ವಿದೇಶದಲ್ಲಿ ಸಿಲುಕಿಕೊಂಡು ತಾಯ್ನಾಡಿಗೆ ಮರಳಬೇಕೆಂದಿರುವ ವಿಧ್ಯಾರ್ಥಿಯಾದರು ಸರಿ, ಭಾರತ ಮೂಲದ ಕಾರ್ಮಿಕರನ್ನು ವಾಪಸ್ಸ ಭಾರತಕ್ಕೆ ಕರೆತರುವ ಚಾರ್ಟರ್ ವಿಮಾನಕ್ಕೆ ಒಪ್ಪಿಗೆ/ಅನುಮೋದನೆಗಳನ್ನು ಕೊಡಿಸುವುದಾದರು ಸರಿ ಹಾಗು ನಾವುಗಳು ಅಪೇಕ್ಷೆ ಇಲ್ಲದೆ ನಿಸ್ವಾರ್ಥದಿಂದ ಸಹಾಯ ಮಾಡಿದ್ದೇನೆ.ಅಂತೆಯೇ ನಿಮ್ಮ ಮಿತಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚಿ. ತೋರಿಕೆ, ಸ್ವಾರ್ಥದ ಕಾರ್ಯ ಸಮಾಧಾನ ಮತ್ತು ಶಾಂತಿ ತಂದುಕೊಡುವುದಿಲ್ಲ.

ಡಾ.ಆರತಿ ಕೃಷ್ಣ ರವರು ಜಾತಿ-ಮತ ಬೇಧವಿಲ್ಲದೆ ಸದಾ ಸಮಾಜದ ಒಳಿತಿಗಾಗಿ ಕಾರ್ಯ ನಿರ್ವಹಿಸುತ್ತಿರುವವರು. ಅನಿವಾಸಿಗಳ ಸಮಸ್ಯೆಗಳನ್ನು ಆಳವಾಗಿ ಅರಿತಿರುವ ಇವರು, ಅಧಿಕಾರ ಇದ್ದರೂ -ಇಲ್ಲದಿದ್ದರೂ ತಮ್ಮ ಅನುಭವ-ಸಂಪರ್ಕಗಳನ್ನು ಬಳಸಿ ಪರಿಣಾಮಕಾರಿಯಾಗಿ ನೆರವು ನೀಡುವ ವ್ಯಕ್ತಿತ್ವ .ಇಂತಹ ಸಮಾಜಮುಖಿ ವ್ಯಕ್ತಿತ್ವಗಳು ನಾಡಿನ ಜನರ ದನಿಯಾಗಿ ಮೂಡಿ ಬರಲಿ ಎಂಬ ಹಾರೈಕೆ ನನ್ನದು.
-ಝಕರಿಯಾ ಮುಝೈನ್
ಅಧ್ಯಕ್ಷರು ,ಕೆಪಿಸಿಸಿ ಎನ್.ಆರ್.ಐ ಫಾರಂ ಸೌದಿ ಅರೇಬಿಯಾ

ಕರ್ನಾಟಕ ಸರಕಾರದ ಎನ್.ಆರ್.ಐ ಫಾರಂ ನ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸೌದಿ ಅರೇಬಿಯಾಕ್ಕೂ ಭೇಟಿ ನೀಡಿದ್ದ ಡಾ.ಆರತಿಯವರು ಅತ್ಯಂತ ಶೃದ್ದೆಯಿಂದ ಕಾರ್ಯ ನಿರ್ವಹಿಸುವುದನ್ನು ಕಂಡಿದ್ದೇವೆ. ಕೋವಿಡ್ ನ ಸಮಯದಲ್ಲೂ ವಿವಿಧ ದೇಶಗಳಲ್ಲಿ ಸಿಲುಕಿರುವ ಅನಿವಾಸಿಗಳನ್ನು ಮರಳಿ ಕರೆ ತರಲು ಸಡೆಸುತ್ತಿರುವ ಪ್ರಯತ್ನ ಪ್ರಶಂಸಾರ್ಹ.

-ಫಾರೂಕ್ ಪೋರ್ಟ್ ಫೋಲಿಯೋ
ಜುಬೈಲ್, ಸೌದಿ ಅರೇಬಿಯಾಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...