ಒಬ್ಬ ಅಧಿಕಾರಿಯಾಗಿ ಅದರಲ್ಲೂ ಉಚಿತ ಸೇವೆ ನೀಡುವಾಗ ಅನುಭವಿಸಬೇಕಾದ ಬವಣೆಗಳ ಅರಿವು ನನಗಿದೆ: ಎಂ.ಫ್ರೆಂಡ್ಸ್ ಕಾರುಣ್ಯ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾಧಿಕಾರಿ


ಮಂಗಳೂರು(ವಿಶ್ವ ಕನ್ನಡಿಗ ನ್ಯೂಸ್):ಎಂ.ಫ್ರೆಂಡ್ಸ್ ನ ಮಹತ್ವಾಕಾಂಕ್ಷಿ ಯೋಜನೆಯಾಗಿರುವ “ಕಾರುಣ್ಯ” ಕಾರ್ಯಕ್ರಮ ಸಾವಿರ ದಿನಗಳು ತುಂಬಿರುವ ಸಂದರ್ಭದಲ್ಲಿ ಮಂಗಳೂರಿನ ಐ.ಎಂ.ಎ ಹಾಲ್ ನಲ್ಲಿ ಸರಳ ಸಮಾರಂಭವನ್ನು ಏರ್ಪಡಿಸಲಾಗಿತ್ತು.ಆರಂಭದಲ್ಲಿ “ಕಾರುಣ್ಯ” ವನ್ನು ವಿವರಿಸುವ ಸಣ್ಣ ಸಾಕ್ಷ್ಯ ಚಿತ್ರವನ್ನು ತೋರಿಸಲಾಯಿತು.ಎಂ.ಫ್ರೆಂಡ್ಸ್ ನ ಸ್ಥಾಪಕರೂ -ಹಾಲಿ ಕಾರ್ಯದರ್ಶಿಗಳೂ ಆದ ರಶೀದ್ ವಿಟ್ಲ ರವರು ಎಂ.ಫ್ರೆಂಡ್ಸ್ ಹಾಗು ಕಾರುಣ್ಯದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ದ.ಕ ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ ರಾಜೆಂದ್ರ ರವರು ಮಾತನಾಡಿ;ಒಬ್ಬ ಅಧಿಕಾರಿಯಾಗಿ ಅದರಲ್ಲೂ ಉಚಿತ ಸೇವೆ ಸಲ್ಲಿಸುವಾಗ ಅನುಭವಿಸಬೇಕಾದ ಬವಣೆಗಳ ಸರಿಯಾದ ಅರಿವು ನನಗಿದೆ,ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ಎಂ.ಫ್ರೆಂಡ್ಸ್ ನಡೆಸುತ್ತಿರುವ ಸೇವೆ ಅಭಿನಂದನಾರ್ಹ.ಯಾವುದೇ ಸರಕಾರಿ ಸೇವೆಗೆ ಸಮುದಾಯದ ಸಹಕಾರ ಅತೀ ಅಗತ್ಯ,ಸರಕಾರದ ಯೋಜನೆಗೆ ಕೈಜೋಡಿಸಿ ರೋಗಿಗಳ ಜೊತೆಗಾರರಿಗೂ ರಾತ್ರಿ ಆಹಾರ ನೀಡುವ ಕಾರ್ಯವನ್ನು ಅಭಿನಂದಿಸಲೆಂದೇ ಅತೀ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಕಾರ್ಯಕ್ರಮಕ್ಕೆ ಬಂದಿದ್ದೇನೆ.ಮುಂದಿನ ದಿನಗಳಲ್ಲಿ ನನ್ನಿಂದ ಸರಕಾರದ ವತಿಯಿಂದ ಯಾವುದೇ ಸಹಕಾರ ನೀಡಲು ಸಾಧ್ಯವಾಗುವುದಾದರೆ ಖಂಡಿತವಾಗಿಯೂ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.ಹಣ ಇರುವುದು ಮುಖ್ಯವಲ್ಲ,ಅದನ್ನು ಸಮಾಜಕ್ಕೆ ಮರಳಿ ನೀಡುವ ಮನಸ್ಸು ಶ್ರೇಷ್ಠವಾದುದು,ದಾನಿಗಳನ್ನು ಬಳಸಿಕೊಂಡು-ತಂಡ ಕಟ್ಟಿಕೊಂಡು ನಡೆಸುವ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಿ ಎಂದು ಪ್ರೋತ್ಸಾಹಿಸಿದರು.

ಕಾರ್ಯಕ್ರಮದ ಇನ್ನೋರ್ವ ಅತಿಥಿಗಳಾಗಿದ್ದ ವೆನ್ಲಾಕ್ ಆಸ್ಪತ್ರೆಯ ಡಿ.ಎಮ್.ಒ ಆಗಿರುವ ಡಾ.ಸದಾಶಿವ ರವರು ಮಾತನ್ನಾಡಿ,ಅನ್ನದಾನ ವಿದ್ಯಾದಾನದಷ್ಟೇ ಶ್ರೇಷ್ಠ ಕಾರ್ಯ.ಸುಮಾರು 10-12 ಜಿಲ್ಲೆಗಳಿಂದ ಆಗಮಿಸುತ್ತಿರುವ ರೋಗಿಗಳ ಜೊತೆಗಾರರಿಗೆ ಉಚಿತ ರಾತ್ರಿ ಆಹಾರ ನೀಡುವ ಎಂ.ಫ್ರೆಂಡ್ಸ್ ಮಾಡುತ್ತಿರುವುದು ಪುಣ್ಯ ಕಾರ್ಯ.ಅದರಲ್ಲೂ ಹಲವು ಕಾರ್ಯಕ್ರಮಗಳು ಆರಂಭವಾಗಿ ಕೆಲವೇ ಸಮಯದಲ್ಲಿ ಅಂತ್ಯ ಕಾಣುತ್ತದೆ,ಆದರೆ ಪ್ರಸ್ತುತ ಕಾರುಣ್ಯ ಕಾರ್ಯಕ್ರಮ 1000 ದಿನಗಳನ್ನು ದಾಟಿ ಮುನ್ನುಗ್ಗುತ್ತಿರುವುದು ಅಭಿನಂದನಾರ್ಹ ಎಂದು ಹುರಿದುಂಬಿಸಿದರು.ಪ್ರತೀ ದಾನಿಗಳನ್ನು-ತಂಡವನ್ನು,ಇದಕ್ಕೆ ಸಹಕಾರ ನೀಡುತ್ತಿರುವವರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದರು.

ಅತಿಥಿಗಳಾಗಿದ್ದ ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ,ಎಂ.ಫ್ರೆಂಡ್ಸ್ ಸದಸ್ಯರಾದ ಸಮಾಜ ಸೇವಕ ಹಮೀದ್ ಅತ್ತೂರ್ ರವರು ಒಂದು ತಿಂಗಳ ಪ್ರಾಯೋಜಕತ್ವ ಕೇಳಿದಾಗ ಇಲ್ಲವೆನ್ನಲಾಗಲಿಲ್ಲ.ನನಗೆ ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ಅತೀವ ತೃಪ್ತಿ ತಂದ ಕಾರ್ಯ ಇದು.ಈ ಪುಣ್ಯ ಕಾರ್ಯದಲ್ಲಿ ಜೊತೆಯಾಗಿರುವುದಕ್ಕೆ ನನಗೆ ಅಭಿಮಾನವಿದೆ ಎಂದರು.ಜಾಗತಿಕ ಬಂಟರ ಸಂಘ ಕಳೆದ ಎರಡು ವರ್ಷಗಳಿಂದ ವಾರ್ಷಿಕ ಒಂದು ತಿಂಗಳ ಆಹಾರ ಪ್ರಾಯೋಜಕತ್ವ ನೀಡುತ್ತಿದೆ ಎಂಬುದು ಗಮನಾರ್ಹ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಫ್ರೆಂಡ್ಸ್ ನ ಅಧ್ಯಕ್ಷರಾದ ಹನೀಫ್ ಹಾಜಿ ಗೋಳ್ತಮಜಲು ರವರು ಮಾತನ್ನಾಡಿ,ಕಾರುಣ್ಯ ಯೋಜನೆಯು ಇದುವರೆಗೂ ಸುಸೂತ್ರವಾಗಿ ನಡೆಯುತ್ತಿದೆ.ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಮುಂದುವರೆಸಿಕೊಂಡು ಹೋಗಲಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು ಮತ್ತು ಈ ಯೋಜನೆಯನ್ನು ಲೇಡಿಗೋಶನ್ ಆಸ್ಪತ್ರೆಯಲ್ಲೂ ಮುಂದುವರೆಸುವ ವಿಚಾರದಲ್ಲಿ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ವೇದಿಕೆಯಲ್ಲಿ ವೈಟ್ ಸ್ಟೋನ್ ಕಂಪೆನಿಯ ಮಾಲಕರಾದ ಶರೀಫ್ ವೈಟ್ ಸ್ಟೋನ್,ಐ.ಎಂ.ಎ ಅಧ್ಯಕ್ಷರಾದ ಡಾ.ಹಬೀಬುರ್ರಹ್ಮಾನ್ ಉಪಸ್ಥಿತರಿದ್ದರು.ರಶೀದ್ ವಿಟ್ಲ ಸ್ವಾಗತಿಸಿದರು,ಇರ್ಷಾದ್ ಬೈರಿಕಟ್ಟೆ ಕುರಾನ್ ಪಠಿಸಿದರು,ಆರಿಫ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು ಹಾಗು ಅಬೂಬಕರ್ ವಿಟ್ಲ ರವರು ಧನ್ಯವಾದ ಸಲ್ಲಿಸಿದರು.ಶರೀಫ್ ವೈಟ್ ಸ್ಟೋನ್ ಒಂದು ತಿಂಗಳ ಕಾರುಣ್ಯ ಯೋಜನೆಯ ಪ್ರಾಯೋಜಕತ್ವ ಘೋಷಿಸಿದರು.
ಇದೇ ಸಂದರ್ಭದಲ್ಲಿ ಆರಂಭಿಕ ದಿನಗಳಿಂದ ಕಾರುಣ್ಯ ಯೋಜನೆಯ ಸಿಬ್ಬಂದಿಯಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಶ್ಫಾಕ್ ಹಾಗು ಕ್ಲಪ್ತ ಸಮಯಕ್ಕೆ ಮತ್ತು ಗುಣಮಟ್ಟದ ಕ್ಯಾಟೆರಿಂಗ್ ಸೌಲಬ್ಯ ನೀಡುತ್ತಿರುವ ಸೌಹಾನ್ ರಿಗೆ ಸನ್ಮಾನ ನಡೆಸಲಾಯಿತು.ಸಾಕ್ಷ್ಯ ಚಿತ್ರ ನಿರ್ಮಿಸಿಕೊಟ್ಟ ಐಫ್ರೇಮ್ಸ್ ನ ಇಂತಿಯಾಝ್ ರವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...