“ವಿಶ್ವ ಸಂವಾದ”ದಲ್ಲಿ ಯಶಸ್ಸಿನ ಶಿಖರವೇರಿದ ಕರಾವಳಿಯ ಯಶಸ್ವೀ ಉದ್ಯಮಿ ಝಕರಿಯಾ ಜೋಕಟ್ಟೆ, ಮುಝೈನ್


ಕರಾವಳಿಯ ಅತ್ಯಂತ ಯಶಸ್ವಿ ಅನಿವಾಸಿ ಉದ್ಯಮಿಗಳೂ,ಹಲವು ಶಿಕ್ಷಣ ಸಂಸ್ಥೆಗಳ ಪೋಷಕರೂ,ವಿಶಿಷ್ಟ ವ್ಯಕ್ತಿತ್ವದ ಝಕರಿಯಾ ಜೋಕಟ್ಟೆಯವರೊಂದಿಗೆ ವಿಶ್ವ ಕನ್ನಡಿಗ ನ್ಯೂಸ್ ನ ಸಂಪಾದಕರಾದ ಇರ್ಷಾದ್ ಬೈರಿಕಟ್ಟೆ ನಡೆಸಿದ “ವಿಶ್ವ ಸಂವಾದ” ಚಿಟ್ ಚಾಟ್ ಇಲ್ಲಿದೆ.

ಝಕರಿಯಾ ಜೋಕಟ್ಟೆ ಎಂಬುದು ಕರಾವಳಿಯ ಯಶಸ್ವಿ ವ್ಯಕ್ತಿತ್ವ,ನಿಮ್ಮ ಪಯಣವನ್ನು ನಮ್ಮೊಂದಿಗೆ ಹಂಚಿಕೊಳ್ಳುವಿರಾ.?
-ಯಶಸ್ಸು ತಲುಪಿದ್ದೇನೆ ಎಂದು ನೀವು ಹೇಳಿದರೆ,ಹೌದು ಎನ್ನಲಾರೆ-ಇಲ್ಲ ಎಂದು ಕೂಡ ಹೇಳಲಾರೆ.ಯಶಸ್ಸಿನೆಡೆಗೆ ಸದಾ ತುಡಿಯುತ್ತಿರುವ ವ್ಯಕ್ತಿ ಎನ್ನುವುದು ಮಾತ್ರ ಸತ್ಯ.ಮೊದಲಿಗೆ ನಮ್ಮಲ್ಲಿ ಕನಸು ಇರಬೇಕು,ಆ ಕನಸ್ಸು ಸಾಕಾರಗೊಳಿಸಲು ಗುರಿಯಿರಬೇಕು.ದೇವರೊಂದಿಗೆ ಸದಾ ಪ್ರಾರ್ಥಿಸುತ್ತಿರಬೇಕು.ಯಸಸ್ಸಿನೆಡೆಗಿನ ಪ್ರಯಾಣದ ಪ್ರಯತ್ನ ಸದಾ ಮುಂದುವರೆಸಬೇಕು ,ಇದು ನಮ್ಮ ಬದುಕನ್ನು ತುಂಬಾ ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆ.ಈ ಹಿಂದೆ ಹೇಳಿದಂತೆ ನಾನು ಯಶಸ್ಸು ಕಂಡಿದ್ದೇನೆ ಎನ್ನುವುದಕ್ಕಿಂತ ಸದಾ ಯಶಸ್ಸಿನ ಪಯಣದಲ್ಲಿ ಪ್ರಯತ್ನ ಮುಂದುವರೆಸುತ್ತಿದ್ದೇನೆ ಎಂದರೇನೆ ಸರಿ.ಸಣ್ಣ ವಯಸ್ಸಿನಲ್ಲಿ ಮಂಗಳೂರಿನಲ್ಲಿ ಕಷ್ಟಪಟ್ಟು ವಿವಿಧ ರೀತಿಯ ವ್ಯಾಪಾರ ಮಾಡಿದೆ,ಅತ್ಯಂತ ಯಾತನಾಮಯ ದಿನಗಳು,ಅಂದಿನಿಂದಲೇ ಪ್ರಾಮಾಣಿಕವಾಗಿ ನನ್ನನ್ನು ತೊಡಗಿಸಿಕೊಂಡೆ,1972 ರಲ್ಲಿ ಮಂಗಳೂರಿನ ಎನ್.ಎಂ.ಪಿ.ಟಿ ಯಲ್ಲಿ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದೆ.ಹೀಗೆ ಊರಿನಲ್ಲಿ ಕಷ್ಟಪಡುವಾಗ ಗಲ್ಫ್ ಜೀವನದ ಕನಸು ಕಾಣತೊಡಗಿದೆ,ಇದಕ್ಕಾಗಿ ಮುಂಬಯಿಗೆ ಬಂದು ಅಲ್ಲಿಂದ 1979 ರಲ್ಲಿ ಸೌದಿ ಅರೇಬಿಯಾದೆಡೆಗೆ ಪ್ರಯಾಣ ಬೆಳೆಸಿದೆ.ದೇವನ ಅನುಗ್ರಹದಿಂದ ನನ್ನ ಬದುಕಿನ ಚಕ್ರಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲು ಅಲ್ಲಿ ಬರೆದಿಟ್ಟಿತ್ತು.!

ಅನಬೀಬ್ ನಿಮ್ಮ ಬದುಕಿನ ತಿರುವು ಪಡೆದ ಕಂಪೆನಿ ಎಂದು ಕೇಳಿದ್ದೇನೆ,ನಿಮ್ಮ ಸಾಧನೆಯ ಪುಸ್ತಕವನ್ನೇ ಅಚ್ಚಾಗಿಸಿ ದಾಖಲಿಸಿದ್ದಾರೆಂದು ಕೇಳಿದ್ದೇನೆ,ಸ್ವಲ್ಪ ವಿವರಿಸುವಿರಾ.?
-ಹೌದು ,1980 ರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿರುವ “ಅನಬೀಬ್ ” ಕಂಪೆನಿಗೆ ಸೇರಿದೆ.ಮಂಗಳೂರಿನ ಎನ್.ಎಂ.ಪಿ.ಟಿ ಯಲ್ಲಿನ ಅನುಭವ ಸುಲಭವಾಗಿ ಕೆಲಸಕ್ಕೆ ಕಾರಣವಾಯಿತು. ಅತ್ಯಂತ ಶೃದ್ದೆ-ಪ್ರಾಮಾಣಿಕತೆ-ಕಠಿಣ ಶ್ರಮದ ಮೂಲಕ ಅಲ್ಲಿ ಹಂತ ಹಂತವಾಗಿ ಬೆಳೆಯಲು ಸಹಕಾರಿಯಾಯಿತು.ಸುಪರ್ ವೈಸರ್ ಆಗಿ ಸೇರಿದ ನಾನು ಅಲ್ಲಿಂದ ವಿರಮಿಸುವಾಗ ಪ್ರಾಜೆಕ್ಟ್ ಮಾನೇಜರ್ ಆಗಿದ್ದೆ.ಕಂಪೆನಿಯ ಉನ್ನತಿಗೆ ಯಾವ ರೀತಿಯಲ್ಲಿ ಸಾಧ್ಯವಾಗಬಹುದೋ ಆ ರೀತಿಯ ಶ್ರಮ ಪಟ್ಟೆ.ಈ ಬಳಿಕ ನನ್ನಲ್ಲಿನ ಕನಸು ನನಸಾಗುವ ಸಮಯ ಬಂದಿದೆ ಎಂದು ಅನಿಸತೊಡಗಿತ್ತು,ಗೌರವಯುತವಾಗಿ ಕಂಪೆನಿಯನ್ನು ತೊರೆದುಬಂದೆ.ಮುಝೈನ್ ಎಂಬ ನನ್ನದೇ ಆದ ಕಂಪೆನಿ ಕಟ್ಟಿದೆ.

ಮುಝೈನ್ ಎಂಬುದು ಸಾವಿರಾರು ಮಂದಿಗೆ ಅನ್ನದಾತ ಕಂಪೆನಿ,ಕರಾವಳಿಯ ಹೆಮ್ಮೆಯ ಮುಝೈನ್ ಬಗ್ಗೆ ತಿಳಿಸುವಿರಾ.?
-ಸೌದಿ ಅರೇಬಿಯಾದಲ್ಲಿ ನನ್ನ ಕಾರ್ಯ ವೈಖರಿ ಮೂಲಕ ಪ್ರಸಿದ್ದ ಇಂಧನ ಕಂಪೆನಿಗಳಾದ ಸಾಬಿಕ್-ಅರಮ್ಕೋ ಗಳಲ್ಲಿ ಹೆಸರುಗಳಿಸಿದ್ದೆ. ಮುಝೈನ್ ಒನ್ ಸ್ಟಾಪ್ ಸೊಲ್ಯೂಷನ್ ಕಂಪೆನಿ,ಆಯಿಲ್-ಗ್ಯಾಸ್-ರಿಫೈನೆರಿಗಳ ಎಲ್ಲಾ ರೀತಿಯ ಮೈಂಟೈನೆನ್ಸ್ ಕೆಲಸಗಳನ್ನು ಅಚ್ಚುಕಟ್ಟಾಗಿ-ಸಮಯ ಮಿತಿಯೊಳಗೆ ಮುಗಿಸಿಕೊಟ್ಟ ಹಿರಿಮೆಯನ್ನು ಹೊಂದಿದೆ.ಕರಾವಳಿಯ ಮಂದಿಗೆ ಉದ್ಯೋಗದಲ್ಲಿ ಆದ್ಯತೆ ನೀಡಿದ್ದೇವೆ.1400 ಉದ್ಯೋಗಿಗಳನ್ನು ಹೊಂದಿರುವ ಮುಝೈನ್ ಅರಮ್ಕೋ ನೀಡುವ ಪ್ರತಿಷ್ಠಿತ “ಪ್ಲಾಟಿನಂ ಹೆಲ್ಮೆಟ್” ಪ್ರಶಸ್ತಿಯನ್ನು ತನ್ನ ಸಾಧನೆಗೆ ಪಡೆದುಕೊಂಡಿದೆ ಎನ್ನುವುದು ಅತ್ಯಂತ ಹೆಮ್ಮೆಯ ವಿಚಾರ.ನಮ್ಮಲ್ಲಿ ಉತ್ತಮ ತಂಡವಿದೆ,ಪ್ರತಿಯೋರ್ವರನ್ನೂ ನಾನು ಭಾಗೀದಾರನಂತೆ ಭಾವಿಸಿ ಹುರಿದುಂಬಿಸುತ್ತೇನೆ,ಪರಿಣಾಮ ಎಲ್ಲರಿಗೂ ಕಂಪೆನಿಯ ಮೇಲೆ ಆತ್ಮೀಯ ಸಂಬಂಧವಿದೆ.ಸದಾ ಉತ್ಸಾಹದಲ್ಲಿದ್ದು,ಇತರರನ್ನೂ ಹುರಿದುಂಬಿಸುತ್ತೇನೆ.

ಸೌದಿ ಅರೇಬಿಯಾದಲ್ಲಿ ನಿಮ್ಮ ಕಂಪೆನಿಗೆ ಉತ್ತಮ ಇಮೇಜ್ ಇದೆ,ಆದರೆ ಭಾರತದಲ್ಲಿ ಇದನ್ನು ವಿಸ್ತರಿಸಬಾರದೇಕೆ?
-ಖಂಡಿತ.ಸೌದಿ ಅರೇಬಿಯಾದ ಸನ್ನಿವೇಶಕ್ಕಿಂತ ಭಾರತ ಸೇರಿದಂತೆ ಹಲವು ಇತರ ದೇಶಗಳಲ್ಲಿ ವ್ಯವಸ್ಥೆಯಲ್ಲಿ ಬದಲಾವಣೆಗಳಿವೆ.ವಮುಝೈನ್ ಇದಕ್ಕೆ ಅಗತ್ಯವಿರು ಈಗಾಗಲೇ ಇದರ ಕುರಿತು ಮಾರುಕಟ್ಟೆ ಅಧ್ಯಯನ ನಡೆಸಿದ್ದು ಶೀಘ್ರದಲ್ಲೇ ಭಾರತವನ್ನು ಕೇಂದ್ರೀಕರಿಸಿಕೊಂಡು ವಿಶ್ವದ ವಿವಿದೆಡೆ ವಿಸ್ತರಿಸುವ ಯೋಜನೆ ಬಗ್ಗೆ ಚಿಂತಿಸಿದ್ದೇವೆ.ಭಾರತದಲ್ಲಿ ಇಂಧನ ದೈತ್ಯ ರಿಲಾಯನ್ಸ್ ಜೊತೆಗೂ ಫಲಪ್ರದ ಮಾತುಕತೆ ನಡೆದಿದೆ.ಎಲ್ಲವೂ ಸುಲಲಿತವಾಗಿ ಸಾಗಲಿದೆ ಎಂಬ ವಿಶ್ವಾಸವಿದೆ.

ಉದ್ಯಮಿಯಾಗಿದ್ದರೂ,ಸಾಮಾಜಿಕ-ಧಾರ್ಮಿಕ ಸಂಘಟನೆಗಳಲ್ಲೂ ಸಕ್ರಿಯರಾಗಿದ್ದೀರಿ.ನಿಮಗೆ ಪ್ರೇರಣೆ ಯಾರು.?
-ನನ್ನ ಹೆತ್ತವರೇ ಪ್ರೇರಣೆ.ಬದುಕಿನ ಹೆಜ್ಜೆಯ ಹಿನ್ನೋಟ ನೋಡಿದರೆ,ಅನುಭವಿಸಿದ ಕಷ್ಟದ ದಿನಗಳ ಅರಿವು ನನಗಿದೆ.ಆದ್ದರಿಂದಲೇ ಸಮಾಜದಲ್ಲಿ ಬಡವರು-ಅಶಕ್ತರಿಗೆ ಸಾಧ್ಯವಾದಷ್ಟು ಸಹಾಯ ನೀಡಲು ಶ್ರಮಿಸುತ್ತಿದ್ದೇನೆ.ಕೇವಲ ಬ್ಯುಸಿನೆಸ್ ನಮ್ಮ ಬದುಕಾಗಬಾರದು,ಸಮಾಜಕ್ಕೆ ಬೇಕಾಗಿ ನಮ್ಮ ಸಮಯವನ್ನು ಮೀಸಲಿಡಬೇಕು.ಹಿದಾಯ ಫೌಂಡೇಶನ್ ನ ಆರಂಭಿಕ ದಿನಗಳಿಂದಲೇ ಅವರ ಜೊತೆಗಿದ್ದು ಹಿದಾಯ ಕಾಲನಿ ಹಾಗು ಯೋಜನೆಗಳ ಭಾಗವಾಗಲು ಸಾಧ್ಯವಾದುದಕ್ಕೆ ಅಭಿಮಾನವಿದೆ.ಇದರ ಜೊತೆಗೆ ಊರಿನ-ಸೌದಿ ಅರೇಬಿಯಾದ ವಿವಿಧ ಸಂಘಟನೆಗಳ ಮೂಲಕ ಪ್ರತ್ಯಕ್ಷ-ಪರೋಕ್ಷ ಸಹಕಾರವನ್ನು ಗರಿಷ್ಠ ಪ್ರಮಾಣದಲ್ಲಿ ನೀಡಲು ಪ್ರಯತ್ನಿಸುತ್ತಿದ್ದೇನೆ.ಬಿಸಿಸಿಐ-ಸೌದಿ ಘಟಕದ ಮೂಲಕ ವಿವಿಧ ಉತ್ತಮ ಯೋಜನೆಗಳನ್ನು-ಯೋಚನೆಗಳನ್ನು ಅಭಿವೃದ್ದಿಪಡಿಸಿ,ವ್ಯವಹಾರ ರಂಗದಲ್ಲಿ ಇನ್ನಷ್ಟು ಉತ್ತೇಜನ ನೀಡುವ ಉದ್ದೇಶವನ್ನು ಹೊಂದಿದೆ.ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅನಿವಾಸಿ ಫಾರಂ ನ ಅಧ್ಯಕ್ಷನಾಗಿಯೂ ಕಾರ್ಯ ನಿರ್ವಹಿಸಿದ್ದು ಸಾಮಾಜಿಕವಾಗಿ ತೊಡಗಿಸಿಕೊಳ್ಳುವ ಅವಕಾಶ ದೊರೆತಿದೆ.ನಮಗೆ ರಿಝ್ಕ್ ಕೊಡುವವನು ಸೃಷ್ಟಿಕರ್ತನು,ಅವನು ಕೊಟ್ಟ ಸಂಪತ್ತನ್ನು ಸಮಾಜಕ್ಕೆ ಮರಳಿ ನೀಡಬೇಕು.ಹಣ ನಮ್ಮಲ್ಲಿರುವುದು ಮುಖ್ಯವಲ್ಲ ಅದನ್ನು ಉತ್ತಮ ರೀತಿಯಲ್ಲಿ ವ್ಯಯಿಸುವುದು ಕೂಡ ಅಷ್ಟೇ ಮಹತ್ವಪೂರ್ಣವಾಗಿದೆ.ಅಲ್ ಹಮ್ದುಲಿಲ್ಲಾಹ್ ಪ್ರತೀ ವರ್ಷ ಉತ್ತಮ ಮೊತ್ತದ ರಮಝಾನ್ ಕಿಟ್ ವಿತರಣೆಯನ್ನು ಇಡೀ ಗ್ರಾಮಕ್ಕೇ ನಡೆಸುತ್ತಿದ್ದು ಹಾಗು ಇನ್ನಿತರ ವೈಯಕ್ತಿಕ ಕಾರ್ಯದಲ್ಲೂ ಸಂತೃಪ್ತಿ ಕಾಣುತ್ತಿದ್ದೇನೆ.ವಿಶೇಷವೆಂದರೆ ಹಲವು ಕಾರ್ಯಗಳಲ್ಲಿ ನನ್ನ ಪತ್ನಿಯೇ ಮುತುವರ್ಜಿಯಿಂದ ಇದನ್ನು ನಿರ್ವಹಿಸುತ್ತಾರೆ.ನಮ್ಮ ಮಕ್ಕಳನ್ನೂ ಇದೇ ರೀತಿ ಉತ್ತಮ ಸಮಾಜ ಕಟ್ಟುವ ಶಿಕ್ಷಣ ಹೇಳಿಕೊಟ್ಟಿದ್ದೇನೆ.

ತವರೂರಿನಲ್ಲಿ ಝಕರಿಯ ಫೌಂಡೇಶನ್ ಕಾರ್ಯ ನಿರ್ವಹಿಸುತ್ತಿದೆ,ಯಾವ ಚಟುವಟಿಕೆಗಳಿಗೆ ಮೀಸಲಾಗಿದೆ.?
-ಝಕರಿಯಾ ಫೌಂಡೇಶನ್ ಮೂಲಕ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಿದ್ದೇವೆ.ವಿಶೇಷವೆಂದರೆ ಪ್ರತೀ ಜೋಡಿಗಳ ಬಗ್ಗೆ ಅವರ ವಿವಾಹ ಜೀವನದ ಪ್ರಸ್ತುತ ಸಮಸ್ಯೆಗಳ ಬಗ್ಗೆ ಅರಿತು,ಅಗತ್ಯ ಬಿದ್ದರೆ ಅವರಿಗೆ ಸೂಕ್ತ ಪರಿಹಾರ ಕ್ರಮಗಳನ್ನೂ ನೀಡುತ್ತಿದ್ದೇವೆ.ಅದೇ ರೀತಿ ಕುಟುಂಬದಲ್ಲಿರುವ ಅರ್ಹರಿಗೆ ಅವರ ಸಮಸ್ಯೆಗಳಿಗೆ ಅಗತ್ಯ ಪರಿಹಾರಗಳನ್ನು ದೇವನ ಅನುಗ್ರಹದಿಂದ ನೀಡುತ್ತಾ ಬಂದಿದ್ದೇವೆ.

ಮುಸ್ಲಿಂ ಸಮುದಾಯದಲ್ಲಿ ಶಿಕ್ಷಣ ಕ್ರಾಂತಿಯಾಗುತ್ತಿದೆ,ಭವಿಷ್ಯದಲ್ಲಿ ಯಾವ ರೀತಿ ಫೋಕಸ್ ಮಾಡಬೇಕೆಂದು ಭಾವಿಸುತ್ತೀರಿ.?ಶಿಕ್ಷಣ ಸಂಸ್ಥೆ ಆರಂಭಿಸುವ ಚಿಂತನೆ ಇದೆಯೇ?
-ಹೌದು,ಇದು ಉತ್ತಮ ಬೆಳವಣೆಗೆ.ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ದಿ ಈಗ್ಗೆ ಕೆಲವು ವರ್ಷಗಳಿಂದ ನಡೆಯುತ್ತಿರುವುದು ಅತ್ಯಂತ ಸಂತೋಷದಾಯಕ ವಿಚಾರ.ವೈದ್ಯಕೀಯ ಹಾಗು ಪಾರಾ ಮೆಡಿಕಲ್ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ದಿ ಆಗಬೇಕಿದೆ.ಶಿಕ್ಷಣ ಎನ್ನುವುದು ಅತೀ ಮುಖ್ಯ,ಪ್ರತಿಯೋರ್ವನೂ ಈ ಬಗ್ಗೆ ಗಮನ ಹರಿಸಬೇಕು.ಇದುವರೆಗೂ ಯಾವುದೇ ಸಂಸ್ಥೆ ಆರಂಭಿಸುವ ಬಗ್ಗೆ ಚಿಂತನೆ ನಡೆಸಿಲ್ಲ.ಆದರೆ ಜಿಲ್ಲೆಯ ಹಲವಾರು ವಿದ್ಯಾಸಂಸ್ಥೆಗಳಿಗೆ ಸಾಕಷ್ಟು ಧನ ಸಹಾಯದ ಮೂಲಕ ಬೆಂಬಲ ನೀಡುತ್ತಿದ್ದೇನೆ.ಸಾವಿರಾರು ಮಂದಿಗೆ ಕೆರಿಯರ್ ಮಾರ್ಗದರ್ಶನ ಆ ಸಂಸ್ಥೆ ನೀಡಿದೆ ಎನ್ನುವುದರಲ್ಲಿ ಅಭಿಮಾನವಿದೆ. ದಶಕಗಳ ಹಿಂದೆ ಮಂಗಳೂರಿನ ಖ್ಯಾತ ಕೆರಿಯರ್ ಮಾರ್ಗದರ್ಶನ ನೀಡುತ್ತಿರುವ ವ್ಯಕ್ತಿಯೋರ್ವರಿಗೆ ಆರಂಭಿಕ ವ್ಯವಸ್ಥೆಗಳಾದ ಕಂಪ್ಯೂಟರ್,ಕಚೇರಿಗಳನ್ನು ನೀಡುವ ಮೂಲಕ ಅವರ ಬೆನ್ನಿಗೆ ನಿಂತಿದ್ದೆ.ಹಲವು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಚಾನೆಲ್ ಒಂದನ್ನು ಆರಂಭಿಸಿದ್ದೆವು,ಆದರೆ ವಿವಿಧ ಕಾರಣಗಳಿಗೆ ಅದು ಸ್ಥಗಿತವಾಯಿತು.

ಕೋವಿಡ್ ಕಾಲದಲ್ಲಿ ಮುಝೈನ್ ಸಂಸ್ಥೆಯಿಂದ ಮೊದಲ ವಿಶೇಷ ವಿಮಾನ ಹಾರಾಟ ನಡೆಸಲಾಗಿತ್ತಲ್ಲವೇ.?
-ಕೋವಿಡ್ ಕಾಲದಲ್ಲಿ ಅಂತರಾಷ್ಟ್ರೀಯ ವಿಮಾನಯಾನ ಸ್ಥಗಿತಗೊಂಡ ಸಂಧಿಗ್ದ ಕಾಲದಲ್ಲಿ ನಮ್ಮ ಶಟ್ ಡೌನ್ ಸೇವೆಗೆ ಆಗಮಿಸಿದ್ದ ಹಲವು ಉದ್ಯೋಗಿಗಳು ಅತಂತ್ರರಾಗಿದ್ದರು.ಇದರ ಜೊತೆಗೆ ಕರಾವಳಿಯ ಹಲವು ಮಂದಿಗೆ ಇದೇ ಸ್ಥಿತಿ ಬಂದಿತ್ತು.ತೀವ್ರ ಪರಿಶ್ರಮದ ಬಳಿಕ ಮೊದಲ ವಿಶೇಷ ವಿಮಾನವನ್ನು ಮಂಗಳೂರಿಗೆ ನಾವು ಕಳುಹಿಸಿಕೊಡುವಲ್ಲಿ ಸಫಲರಾದೆವು.ಹೀಗೆ ಆರಂಭಿಕ ಘಟ್ಟದಲ್ಲಿ 8 ವಿಮಾನಗಳು ದೇಶದ ವಿವಿದೆಡೆಗೆ ಕಳುಹಿಸಿಕೊಟ್ಟೆವು.ನಮ್ಮ ಉದ್ಯೋಗಿಗಳು ಮನೆ ಸೇರಿದ ನೆಮ್ಮದಿ ನಮಗೂ ಸಮಾಧಾನ ತಂದಿಟ್ಟಿದೆ.

ವಿಶ್ವ ಕನ್ನಡಿಗ ಓದುಗರಿಗೆ ನಿಮ್ಮ ಸಂದೇಶವೇನು.?
-ಆರೋಗ್ಯ-ದೀರ್ಘಾಯುಷ್ಯಕ್ಕಾಗಿ ನಾವು ಸದಾ ಪ್ರಾರ್ಥಿಸುತ್ತಿರಬೇಕು.ಅಂತೆಯೇ ಆರೋಗ್ಯದೆಡೆಗೆ ನಮ್ಮ ಗಮನವನ್ನು ಕೇಂದ್ರೀಕರಿಸಬೇಕು.ನಾವು ಒಬ್ಬರ ಕಣ್ಣೀರೊರೆಸಿದರೆ ಅವರ ಪ್ರಾರ್ಥನೆ ನಮ್ಮ ಬಾಳಿನ ಬೆಳಕಾಗುವುದಾದರಲ್ಲಿ ಸಂಶಯವಿಲ್ಲ.ಪ್ರತಿಯೋರ್ವರೂ ಉತ್ತಮ ಸಮಾಜ ಕಟ್ಟುವತ್ತ ಗಮನಹರಿಸಬೇಕು.ಅದರಲ್ಲೂ ಯುವಕರು ಈ ಬಗ್ಗೆ ತಮ್ಮ ಜವಬ್ದಾರಿ ನಿರ್ವಹಿಸಬೇಕು.

ನಾನು ಬದುಕಿನಲ್ಲಿ ಕಂಡ ಅತೀ ಸ್ಪೂರ್ತಿದಾಯಕ ವ್ಯಕ್ತಿ ನನ್ನ ತಂದೆ.ಕೇವಲ ಸಮಾಜಕ್ಕೆ ಮಾತ್ರ ಪ್ರೇರಣೆಯಾಗುಳಿಯದೆ ನಮಗೂ ಆದರ್ಶ ಪ್ರಾಯ ವ್ಯಕ್ತಿತ್ವ.ಎಲ್ಲಾ ಸವಾಲುಗಳನ್ನು ನುಂಗಿ-ತನ್ನ ಕಷ್ಟಗಳನ್ನು ಯಾರಲ್ಲೂ ತೋಡಿಕೊಳ್ಳದೆ,ಇತರರಿಗೆ ತೊಂದರೆಯಾಗಬಾರದೆಂಬ ನಿಷ್ಕಲ್ಮಶ ಮನಸ್ಸಿನವರು.ನನ್ನ ಜೀವನದಲ್ಲಿ ಅನೇಕ ಸಂದರ್ಭಗಳಲ್ಲಿ ಸವಾಲುಗಳನ್ನೆದುರಿಸಿ ಕೈಚೆಲ್ಲಿದಾಗೆಲ್ಲಾ ಕೈ ಹಿಡಿದು ಮೇಲೆತ್ತಿದವರು.ಕೇವಲ ವ್ಯವಹಾರವನ್ನು ಮಾತ್ರ ಕಲಿಸದೆ,ನೈತಿಕ ಮೌಲ್ಯ-ಸಚ್ಚಾರಿತ್ರ್ಯದ ಪಾಠವನ್ನು ಪಾಲಿಸಿ-ಕಲಿಸಿ-ತೋರಿಸಿಕೊಟ್ಟವರು.ಸರಳವಾಗಿ ಬದುಕು ಸಾಗಿಸಿದ್ದಷ್ಟೇ ಅಲ್ಲ,ನಮಗೂ ನಿರಂತರ ಇದರ ಪಾಠಗಳನ್ನು ಬೋಧಿಸುತ್ತಲೇ ಇರುವವರು.ತಾನು ಹೇಳಿದ್ದೇ ಆಗಬೇಕು-ತಾನು ನಿರ್ಧರಿಸಿದ್ದೇ ಅಂತಿಮ ಮಾತಾಗಬೇಕು ಎನ್ನುವ ಧೋರಣೆಗೂ ಬದಲಾಗಿ ನಮ್ಮ ಸ್ವಂತಿಕೆಯನ್ನು ಗೌರವಿಸಿ ಬದುಕಲು ಕಲಿಸಿದರು.ಒಟ್ಟಿನಲ್ಲಿ ನನ್ನ ತಂದೆ ಸಮಾಜದಲ್ಲಿ-ವ್ಯವಹಾರದಲ್ಲಿ ಮಾತ್ರ ಹೀರೋ ಅಲ್ಲ,ನನಗೂ ಕೂಡ.!
-ಝಹೀರ್ ಮುಝೈನ್
(ಝಕರಿಯಾ ಜೋಕಟ್ಟೆಯವರ ಮಗ)

ಝಹೀರ್ ಮುಝೈನ್

ವಿಶ್ವ ಕನ್ನಡಿಗ ಆನ್‌ಲೈನ್ ಸುದ್ದಿ ವೆಬ್‌ಸೈಟ್‌ನಲ್ಲಿ Zakariya Muzain ಅವರ ಸಂದರ್ಶನವನ್ನು ಪ್ರಕಟಿಸುವ ಬಗ್ಗೆ ತಿಳಿದು ಸಂತೋಷವಾಯಿತು .ಇವರು ಇಡೀ ಸೌದಿ ಅರೇಬಿಯಾದಲ್ಲಿ ಅತ್ಯಂತ ಗೌರವಾನ್ವಿತ ಅನಿವಾಸಿ ವ್ಯಕ್ತಿಗಳಲ್ಲಿ ಒಬ್ಬರು.ಸೌದಿ ಅರೇಬಿಯಾದಲ್ಲಿ ಪ್ರಸಿದ್ಧ ಉದ್ಯಮಿ ಮಾತ್ರವಲ್ಲದೇ , ಓರ್ವ ಗೌರವಾನ್ವಿತ ಸಮಾಜ ಸೇವಕರೂ ಕೂಡಾ ಆಗಿರುತ್ತಾರೆ. ಅವರ ಸರಳತೆ ಮತ್ತು ಜನ ಸಾಮಾನ್ಯರೆಡೆಯಲ್ಲಿ ಓರ್ವ ಸಾಮಾನ್ಯ ವ್ಯಕ್ತಿಯಾಗಿ ಕೂಡಿ ಬಾಳುವ ಸ್ವಭಾವ ದಿಂದಾಗಿ ಅನಿವಾಸಿ ಸಮುದಾಯವು ಅವರನ್ನು ತುಂಬಾ ಪ್ರೀತಿಸುತ್ತದೆ . ಸೌದಿ ಅರೇಬಿಯಾದ ಹೆಚ್ಚಿನ ಅನಿವಾಸಿ ಸಂಘಟನೆಗಳಿಗೆ ಅವರು ಮಾರ್ಗದರ್ಶಕರಾಗಿದ್ದಾರೆ. ಎಲ್ಲ ಸಂಘ ಸಂಸ್ಥೆಗಳು ತಮ್ಮ ಕಾರ್ಯಕ್ರಮಗಳಿಗೆ ಅವರನ್ನು ಅತಿಥಿಯಾಗಿ ಆಹ್ವಾನಿಸಲು ಹಾತೊರೆಯುತ್ತದೆ ಅವರ ಉಪಸ್ಥಿತಿಯು ಕಾರ್ಯಕ್ರಮಕ್ಕೆ ಮೆರುಗು ನೀಡುತ್ತದೆ ಎಂದು ಭಾವಿಸುತ್ತಾರೆ. ಅವರು ಅತ್ಯುತ್ತಮ ಪ್ರೇರೇಪಕರು (Motivator) ಕೂಡ ಹೌದು. ಸಮಾಜದ ಹಲವು ಉತ್ತಮ ಕಾರ್ಯಗಳಿಗಾಗಿ ತಾನೂ ದಾನ ಮಾಡುವುದಲ್ಲದೆ, ಇಡೀ ಅನಿವಾಸಿ ವ್ಯಾಪಾರ ಸಮುದಾಯವನ್ನು ವಿವಿಧ ಸಾಮಾಜಿಕ ಕಾರಣಗಳಿಗಾಗಿ ಸಹಕಾರಿಯಾಗಿರುವಂತೆ ಪ್ರೋತ್ಸಾಹಿಸುತ್ತಾರೆ. ಕಳೆದ ಒಂದೂವರೆ ದಶಕದಿಂದ ಸೌದಿ ಅರೇಬಿಯಾದ ಜುಬೈಲ್/ದಮ್ಮಾಮ್ ನಲ್ಲಿ ನಲ್ಲಿ ಹಲವು ಸಾಮಾಜಿಕ ಕಾರ್ಯಗಳಲ್ಲಿ ಅವರೊಂದಿಗೆ ಒಟ್ಟಿಗೆ ಕಾರ್ಯ ನಿರ್ವಹಿಸಿ ನಿಕಟ ಸಂಪರ್ಕವಿಟ್ಟಿರುದರಿಂದ ಅವರ ವ್ಯಕ್ತಿತ್ವದ ಆಳವನ್ನು ಹತ್ತಿರದಿಂದ ಅರಿತಿದ್ದೇನೆ. ಅಲ್ಲಾಹನು ಅವರಿಗೆ ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ

-ಖಮರುದ್ದೀನ್ ಗೂಡಿನಬಳಿ
ಪ್ರಧಾನ ಕಾರ್ಯದರ್ಶಿ
ಅಂತಾರಾಷ್ಟ್ರೀಯ ಸಮಿತಿ , ಕರ್ನಾಟಕ ಕಲ್ಚರಲ್ ಫೌಂಡೇಶನ್

ಖಮರುದ್ದೀನ್ ಗೂಡಿನಬಳಿ

ಝಕರಿಯಾ ಮುಝೈನ್ ರವರು ಯಶಸ್ವಿ ಬ್ಯುಸಿನೆಸ್ ಮೆನ್,ಶಿಕ್ಷಣ ಪೋಷಕರು,ಎಲ್ಲಕ್ಕಿಂತ ಮಿಗಿಲಾಗಿ ಅಪಾರ ಮಾನವೀಯ ಹೃದಯವಂತಿಕೆಯ ಅಪರೂಪದ ವ್ಯಕ್ತಿತ್ವ.ಕೇವಲ ತನ್ನ ವ್ಯವಹಾರಗಳಲ್ಲಿದ್ದು ತಾನು-ತನ್ನದು ಎಂದು ಸ್ವಾರ್ಥಿಯಾಗದೆ ಸಮಾಜ-ಸಮುದಾಯ ಎಂದು ಮಿಡಿದು ಅದಕ್ಕಾಗಿ ಸ್ಪಂದಿಸಿದವರು.ಇಂತಹ ಶ್ರೇಷ್ಠ ವ್ಯಕ್ತಿತ್ವದ ಸಂದರ್ಶನ ನಡೆಸಿದ ವಿವರ ತಿಳಿದು ಸಂತಸವಾಯಿತು.ಸೃಷ್ಟಿಕರ್ತನು ಅವರಿಗೆ ಆಯುರಾರೋಗ್ಯ ನೀಡಲಿ,ಇನ್ನಷ್ಟು ಸಾಧನೆಗಳನ್ನು ಸಾಧಿಸಲು ಅನುಗ್ರಹಿಸಲಿ.
-ಯೂನುಸ್ ಮಣಿಪಾಲ,ರಿಯಾದ್

ಯೂನುಸ್ ರಿಯಾದ್

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...