“ರೈತರು ಬೀದಿಯಲ್ಲಿದ್ದಾರೆ..” (ಅಂಧಾಲೋಕ)

 

ಅಂಧಾಲೋಕ(ವಿಶ್ವಕನ್ನಡಿಗ ನ್ಯೂಸ್): ನೋಟ್ ಬ್ಯಾನ್ ದೇಶದ ಬಡವರನ್ನು ಬೀದಿಪಾಲು ಮಾಡಿತು.
ನಿರುದ್ಯೋಗ ಸಮಸ್ಯೆಯಿಂದಾಗಿ ಯುವಕರು ಬೀದಿಗಿಳಿದರು.
ಎನ್ನಾರ್ಸಿ, ಸಿಎಎ ಹೆಸರಿನಲ್ಲಿ ದೇಶದ ಅಲ್ಪಸಂಖ್ಯಾತರನ್ನು ಬೀದಿಗಿಳಿಸಲಾಯ್ತು.
ಬಿಎಸ್‌ಎನ್‌ಎಲ್ ಸಿಬ್ಬಂದಿಗಳೂ ಬೀದಿಗೆ ಬಂದಿದ್ದಾರೆ.
ಕೊರೋನಾ ಎಂಬ ಮಹಾಮಾರಿ ಜನತೆಯನ್ನು ಮನೆಯೊಳಗೆ ಕೂರುವಂತೆ ಮಾಡಿದರ ಮಧ್ಯೆಯೇ, ಸರಕಾರ ಮತ್ತೊಮ್ಮೆ ಜನರನ್ನು ಬೀದಿಗಿಳಿಸುತ್ತಿದೆ. ಕೃಷಿ ಮಸೂದೆ ಎಂಬ ಕರಾಳ ನೀತಿಯಿಂದಾಗಿ ಮೊದಲೇ ಸಮಸ್ಯೆಗಳ ಸುಳಿಯಲ್ಲಿ ತಡಕಾಡುವ ರೈತರನ್ನು ಇನ್ನಷ್ಟು ತೊಂದರೆಗೀಡಾಗಿಸುವ ಪ್ರಯತ್ನ ನಡೆಯುತ್ತಿದ್ದು, ಇದನ್ನು ವಿರೋಧಿಸಿ ದೇಶದಾದ್ಯಂತ ರೈತರು ಬೀದಿಯಲ್ಲಿದ್ದಾರೆ.

ದುರಹಂಕಾರದ ಆಡಳಿತದಲ್ಲಿ ದೇಶವನ್ನು ಸರ್ವನಾಶ ಮಾಡುತ್ತಾ, ದೇಶದ ಪ್ರಜೆಗಳನ್ನು ಸದಾ ಪೀಡಿಸುತ್ತಾ, ಶ್ರೀಮಂತ ಕಾರ್ಪೊರೇಟರ್ ಗಳು, ಸೆಲೆಬ್ರೆಟಿಗಳನ್ನು ಮಾತ್ರ ತನ್ನ ಮಡಿಲಲ್ಲಿ ಜೋಪಾನ ಕಾಪಾಡಿಕೊಂಡು ಬಿಜೆಪಿ ಸರಕಾರ ಇಷ್ಟರ ತನಕ ಮುಂದುವರಿದಿದೆ. ಪ್ರಜೆಗಳೆಲ್ಲಾ ದಿನನಿತ್ಯ ಒಂದಲ್ಲ ಒಂದು ವಿಚಾರದಲ್ಲಿ ಸರಕಾರ ವಿರುದ್ಧ ಧ್ವನಿಯೆತ್ತುತ್ತಾ, ಹೋರಾಟ ನಡೆಸುತ್ತಲೇ ಇದ್ದಾರೆ. ಇದ್ಯಾವುದಕ್ಕೂ ತಲೆಕೆಡಿಸದ ಸರಕಾರ ಮಾತ್ರ ದರಿದ್ರ ಆಡಳಿತದೊಂದಿಗೆ ದೇಶದವನ್ನು ಸಂಕಷ್ಟದ ಮೇಲೆ ಸಂಕಷ್ಟಕ್ಕೆ ದೂಡುತ್ತಿದೆ.

ಮೇಲ್ನೋಟಕ್ಕೆ ಕೃಷಿ ಮಸೂದೆಯಲ್ಲಿ ರೈತರಿಗೆ ತೊಂದರೆಯಾಗುವಂತೆ ಕಂಡು ಬರುತ್ತಿಲ್ಲವಾದರೂ ಕೂಡ, ಈ ಮೂರು ಮಸೂದೆಗಳ ಬಗ್ಗೆ ಕೂಲಂಕುಷವಾಗಿ ಅವಲೋಕನ ಮಾಡಿದಾಗ ರೈತರು ಇದರಿಂದಾಗಿ ಯಾವ ರೀತಿಯ ಸಮಸ್ಯೆಗೆ ಒಳಗಾಗುತ್ತಾರೆಂಬ ವಿಚಾರ ತಿಳಿಯಬಹುದು. ಹಿಂದೆ ಎನ್ನಾರ್ಸಿ, ಸಿಎಎ ಯಿಂದಲೂ ಕೂಡ ದೇಶದ ಯಾವುದೇ ಪ್ರಜೆಗೆ ಏನೂ ತೊಂದರೆಯಿರದು ಎಂಬ ಸುಳ್ಳು ಭರವಸೆಯ ಮೂಲಕ ಹೋರಾಟಕ್ಕೆ ಮಸಿ ಎರಚುವ ಸರಕಾರದ ಮತ್ತು ಬಿಜೆಪಿ ನಾಯಕರು ಹಾಗೂ ಭಕ್ತಪಡೆಗಳ ಬುದ್ಧಿ ಇಲ್ಲಿಯೂ ಮುಂದುವರಿದಿದೆ. ರೈತರಿಗೆ ಈ ಮಸೂದೆಗಳು ಲಾಭವನ್ನೇ ತಂದುಕೊಡುತ್ತದೆಯೆಂಬ ಪೊಳ್ಳು ಮಾತುಗಳ ಮೂಲಕ ರೈತರ ಹೋರಾಟದ ಕಿಡಿಯನ್ನು ಆರಿಸುವ ಪ್ರಯತ್ನವಾಗುತ್ತಿದೆ.

ತಾನು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಕಾರ್ಪೊರೇಟರ್ ಕಂಪೆನಿಗಳ ಮಧ್ಯವರ್ತಿಯೊಂದಿಗೆ ನ್ಯಾಯವಾದ ಬೆಲೆ ಸಿಗದೇ ಇರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬುದೇ ಈ ಮಸೂದೆಗಳಿಂದ ಇರುವ ಒಟ್ಟಾರೆ ತೊಂದರೆ. ಇದರ ಜೊತೆಗೆ ಅನೇಕ ಸಂಕಷ್ಟಗಳು ರೈತರಿಗೆ ಎದುರಾಗುತ್ತದೆ. ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗದೇ ಇರುವುದು, ಒಪ್ಪಂದ ಮಾಡಿಕೊಂಡ ಬಳಿಕ ಕಾರ್ಪೊರೇಟರ್ ಕಂಪೆನಿಗಲ್ಲದೆ ಬೇರೆಲ್ಲೂ ತಮ್ಮ ಉತ್ಪಾದನೆಯನ್ನು ಮಾರುವ ಅನುಮತಿಯಿಲ್ಲದ್ದು, ಕಂಪೆನಿ ಏಜೆಂಟ್ ಗಳಿಂದ ತಿರಸ್ಕರಿಸಲ್ಪಟ್ಟರೆ ಅದರಿಂದ ಉಂಟಾಗುವ ನಷ್ಟ, ದಿನನಿತ್ಯ ಬಳಕೆಯ ಆಹಾರ ಪದಾರ್ಥಗಳಿಗೆ ಬೆಲೆಯೇರುವುದು… ಹೀಗೆ ಅನೇಕ ಸಮಸ್ಯೆಗಳು ಈ ಮಸೂದೆಗಳಿಂದಾಗಿ ಹುಟ್ಟಿಕೊಳ್ಳುತ್ತದೆ. ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದೇನೆ. ಇದರ ಬಗ್ಗೆಯೇ ವಿವರಿಸುತ್ತಾ ಹೋದಲ್ಲಿ ಬಹಳಷ್ಟಿವೆ.

ದೇಶದಾದ್ಯಂತ ಈ ಮಸೂದೆಗಳ ವಿರುದ್ಧ ಜೋರುಧ್ವನಿ ಕೇಳಿ ಬರುತ್ತಿದ್ದರೂ ಕೂಡ ರಾತ್ರೋ ರಾತ್ರಿ ಇದಕ್ಕೆ ರಾಷ್ಟ್ರಪತಿಗಳಿಂದ ಅಂಕಿತ ದೊರೆತಿವೆ. ಸದನದಲ್ಲಿ ಇದನ್ನು ವಿರೋಧಿಸಿದ 8 ಮಂದಿ ಸಂಸದರನ್ನು ಅಮಾನತು ಮಾಡಲಾಯಿತು‌. ಹಾಗಿದ್ದಲ್ಲಿ ಈ ದೇಶದ ಆಡಳತ ಎತ್ತ ಸಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಸಾಮಾನ್ಯ ಜನರ ಸಮಸ್ಯೆಗಳು ಆಲಿಸದೆ, ಕಷ್ಟಗಳಿಗೆ ಸ್ಪಂದಿಸದೆ ದುರಾಡಳಿತದಿಂದ ತನ್ನ ಅಸ್ತಿತ್ವ ಉಳಿಸಿಕೊಳ್ಳುತ್ತಾ ಸರಕಾರ ಪ್ರಬಲವಾಗಿದೆ. ಅಂಬಾನಿ, ಅದಾನಿಯಂತಹ ಬೃಹತ್ ಕಾರ್ಪೊರೇಟರ್ ಗಳ ಇಚ್ಛೆಗೆ ತಕ್ಕಂತೆಯೇ ದೇಶ ನಡೆಯುತ್ತಿದೆಯೇ ವಿನಃ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ಸರಕಾರವೇನಲ್ಲ. ಸಂವಿಧಾನವನ್ನೇ ತಿರುಚಿ ಸರ್ವಾಧಿಕಾರದ ಆಡಳಿತ ನಡೆಸುತ್ತಿದೆ.

ದೇಶದ ಸಾಮಾನ್ಯ ಜನರನ್ನು ಪದೇ ಪದೇ ಬೀದಿಗಿಳಿಸಿ, ತಮ್ಮದೇ ಕಾರ್ಯಕರ್ತರನ್ನು ಬಳಸಿ ಗಲಭೆಯಾಗುವ ಹಂತಕ್ಕೆ ಹೋರಾಟವನ್ನು ಕೊಂಡೊಯ್ದು ಅದರ ಮೂಲಕ ರಾಜಕೀಯ ಲಾಭ ಪಡೆಯುವ ಸರಕಾರದ ಕ್ರೂರ ಧೋರಣೆಯಿಂದಲೇ ಇಷ್ಟೊಂದು ಸಂಕಷ್ಟಗಳು ಎದುರಾಗುತ್ತಿದೆ. ಇಲ್ಲಿ ಒಂದು ವೇಳೆ ರೈತರ ಹೋರಾಟವೂ ವಿಫಲವಾಯಿತೆಂದರೆ, ಮುಂದೆ ಯಾವ ಹೋರಾಟಕ್ಕೂ ಪ್ರತಿಫಲಶೂನ್ಯ. ಕಾರಣ, ಅನ್ನದಾತನ ಸಂಕಷ್ಟದ ಜೊತೆ ಅನ್ನ ತಿನ್ನುವ ನಾವೆಲ್ಲರೂ ಜೊತೆಯಾಗಬೇಕಿದೆ. ರೈತರು ಸಾಮೂಹಿಕ ಆತ್ಮಹತ್ಯೆ ಮಾಡುವ ಮುನ್ನ ಪ್ರಜ್ಞಾವಂತ ಭಾರತೀಯರು ಒಟ್ಟು ಸೇರಿ ರೈತರಿಗಾಗಿ ಧ್ವನಿಯೆತ್ತಬೇಕಿದೆ‌. ರೈತರಿದ್ದರಷ್ಟೇ ನಮಗೆ ಅನ್ನವಿದೆ. ಇಲ್ಲವಾದಲ್ಲಿ ಪ್ಲಾಸ್ಟಿಕ್ ಅಕ್ಕಿ ತಿಂದು ಬದುಕಬೇಕಾದೀತು. ರೈತ ಈ ದೇಶದ ಸಂಪತ್ತು, ಆತನ ಸಮಸ್ಯೆ ದೇಶದ ಸಮಸ್ಯೆ ಕೂಡ. ಬನ್ನಿ… ರೈತರೊಂದಿಗೆ ಜೊತೆಯಾಗೋಣ..

ಜೈ ಕಿಸಾನ್..

– ಹಕೀಂ ಪದಡ್ಕ

  • cryptorajni
    September 29, 2020 at 12:58 am

    “ರೈತರು ಬೀದಿಯಲ್ಲಿದ್ದಾರೆ..”
    ಅಂತಲ್ಲ “ರೈತರನ್ನು ಬೀದಿಗೆ ಎಳಿದಿದ್ದಾರೆ..”
    ಸ್ವ ಇಚ್ಚೆಯಿಂದ ಬಂದವರಲ್ಲ …

Leave a Reply to cryptorajni Cancel Reply

Your email address will not be published.*

Open chat
1
ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...