ಚಾನಲ್ ಚರ್ಚೆಗೆ ಸರಕಾರಿ ಶಾಲೆಗಳ ವಿಧ್ಯಾಗಮ ಮಾತ್ರ ಆಹಾರ ಯಾಕೆ ?

(www.vknews.in)

ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸಿ ನೆರೆಹೊರೆಯ ಸಮಾನ ಶಾಲೆಗಳನ್ನಾಗಿಸುವ ಕಾಯಕದಲ್ಲಿ ಕಳೆದ ಎರಡು ದಶಕಗಳಿಂದ ಎಸ್ ಡಿ ಎಂ ಸಿ ಹಾಗು ಎಸ್ ಡಿ ಎಂ ಸಿ ಸಮನ್ವಯ ವೇದಿಕೆಯು ಕೆಲಸ ನಿರ್ವಹಿಸುತ್ತಿದೆ.

ಕೊರೋನದ ಸಂದರ್ಭದಲ್ಲಿ ಶಾಲೆಗಳು ಮುಚ್ಚಿದ ಕಾರಣ ನಿರಂತರ ಕಲಿಕೆಗೆಗಾಗಿ ಹಲವು ಶಿಕ್ಷಣ ಸಂಸ್ಥೆಗಳು ಆನ್ ಲೈನ್ ಶಿಕ್ಷಣಕ್ಕೆ ಮೊರೆ ಹೋದವು. ಆದರೆ, ಸರಕಾರಿ ಶಾಲೆ ಮಕ್ಕಳಿಗೆ ಆನ್ ಲೈನ್ ಶಿಕ್ಷಣಕ್ಕೆ ಪೂರಕವಾದ ತಂತ್ರಜ್ಞಾನ ಮತ್ತು ಸೌಲಭ್ಯಗಳು ಇಲ್ಲದ ಕಾರಣ , ಸರಕಾರ, ಶಿಕ್ಷಣ ಸಚಿವರು ,ಶಿಕ್ಷಣ ತಜ್ಞರುಗಳ ಶಿಫಾರಸ್ಸಿನ ಮೇರೆಗೆ ಶಿಕ್ಷಣ ಇಲಾಖೆ ವಿದ್ಯಾಗಮ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಸರ್ಕಾರಿ ಶಾಲೆಗಳಲ್ಲಿರುವ ಮಕ್ಕಳೂ ಸಹ ಕಲಿಕೆಯಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳಲು ಕಾರ್ಯಕ್ರಮವನ್ನು ಜಾರಿಗೊಳಿಸಿತು .

ಇದರಲ್ಲಿ ಶಿಕ್ಷಣ ಸಚಿವರ ಶ್ರಮ ಅಪಾರ ಮತ್ತು ಅಭಿನಂದನೀಯ

ವಿದ್ಯಾಗಮದಿಂದ ಸರಕಾರಿ ಶಾಲೆಯ ಮಕ್ಕಳಿಗೆ ಕೊರೋನ ಕಾಲದಲ್ಲಿಯೂ ಗುಣ ಮಟ್ಟದ ಶಿಕ್ಷಣ ದೊರಕುವಲ್ಲಿ ಸರಕಾರದ ಪ್ರಯತ್ನ ಸಫಲವಾಗಿದೆ.

ಸರಕಾರಿ ಶಾಲೆಗೆ ಮಕ್ಕಳ ದಾಖಲಾತಿ ಕೂಡ ಹೆಚ್ಚಳ ವಾಗಿದ್ದು ಅಂಕಿ ಅಂಶಗಳಿಂದ ತಿಳಿದು ಬರುತ್ತಿದೆ.

ಜೊತೆಗೆ ಹಲವು ಪೋಷಕರು, ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಿಂದ ಬಿಡಿಸಿ ಸರಕಾರಿ ಶಾಲೆಗೆ ಸೇರ್ಪಡೆ ಮಾಡುತ್ತಿರುವುದು ಸಾಮಾನ್ಯ ಸಂಗತಿಯಾಗಿದ್ದು ಹಲವು ಖಾಸಗಿ ಶಾಲೆಗಳಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಈ ಸಮಯದಲ್ಲಿ ವಿದ್ಯಾಗಮದಿಂದ ಶಿಕ್ಷಕರಿಗೆ ಮಕ್ಕಳಿಗೆ ತೊಂದರೆಯಾಗಿದೆ ಎಂದು ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ಮಾಧ್ಯಮಗಳು ದಿನಗಟ್ಟಲೆ ಚರ್ಚೆ ನಡೆಸುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ.
ಈ ಮಾಧ್ಯಮಗಳು ಖಾಸಗಿ ಶಾಲೆಗಳ ಪರ ನಿಂತು ಮಾತನಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.

ಗಮನಿಸಬೇಕಾದ ಅಂಶವೆಂದರೆ , ವಿದ್ಯಾಗಮದ ಬಗ್ಗೆ ಸರಕಾರವು ಸುತ್ತೋಲೆ ಹೊರಡಿಸಿದ ಸಮಯದಲ್ಲೇ ಖಾಸಗಿ ಶಾಲೆಯ ಮಕ್ಕಳನ್ನು ಎಸ್ ಡಿ ಎಂ ಸಿ ಮತ್ತು ಸರಕಾರಿ ಶಾಲಾ ಶಿಕ್ಷಕರು ಮನವೊಲಿಸಿ ತಮ್ಮ ಶಾಲೆಗೆ ದಾಖಲಾತಿ ಮಾಡುತ್ತಿದ್ದಾರೆ ಎನ್ನುವ ಸುಳ್ಳು ಅಪವಾದವನ್ನು ಕೂಡ ಖಾಸಗಿ ಶಾಲೆಯವರು ಮಾಡಿದ್ದರು.

ಎಲೆಕ್ಟ್ರಾನಿಕ್ ಮಾಧ್ಯಮದ ಮೇಲಿನ ಚರ್ಚೆಗಳು ಸರಕಾರಿ ಶಾಲೆಗಳ ವಿದ್ಯಾಗಮದ ಬಗ್ಗೆ ಮಾತ್ರ ಇರುವುದು ಸಂಶಯಕರವಾಗಿದೆ.
ರಾಜ್ಯದಲ್ಲಿ ಕೊರೋನವು ತುಂಬಾ ಕಡಿಮೆ ಇದ್ದ ಸಂಧರ್ಭದಲ್ಲಿ ಲೋಕ್ ಡೌನ್ ಘೋಷಣೆ ಮಾಡಿದಾಗ ಮರಣ ಹೊಂದಿದ ಅಸಂಖ್ಯಾತ ವಲಸೆ ಕಾರ್ಮಿಕರ ಬಗ್ಗೆಯಾಗಲಿ,ಕೋವಿಡ್ ವಾರಿಯರ್ ಗಳಾಗಿ ಪ್ರಾಣಾರ್ಪಣೆ ಗೈದ ಡಾಕ್ಟರ್ ಗಳು, ಅಸಂಖ್ಯಾತ ಆಸ್ಪತ್ರೆಯ ನೌಕರರ ಬಗ್ಗೆ, ಹಗಲಿರುಳು ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರ ಬಗ್ಗೆಯಾಗಲಿ ಮಾತನಾಡದೆ ಮೌನ ವಾಗಿರುವ ಈ ಮಾಧ್ಯಮಗಳು ಸರಕಾರಿ ಶಾಲೆಯ ಮಕ್ಕಳಿಗೆ ವರವಾಗಿರುವ ವಿದ್ಯಾಗಮದ ಬಗ್ಗೆ ಅಪಪ್ರಚಾರ ಮಾಡುವುದನ್ನು ಅವರ ಜನವಿರೋಧಿ ಇಬ್ಬಗೆಯ ನೀತಿಯಿಂದ ಅರ್ಥೈಸಿ ಕೊಳ್ಳಬೇಕಿದೆ.

ಕೇವಲ ಟಿ ಆರ್ ಪಿ ಹೆಚ್ಚಿಸಕೊಳ್ಳಲು ಮನ ಬಂದಂತೆ ಮಾತನಾಡಿ , ತೀರ್ಮಾನಗಳನ್ನು ಕೊಡುವ ಇವರು ಪ್ರಜಾಸತ್ತೆಯನ್ನು ಹಾಗು ನ್ಯಾಯಾಂಗವನ್ನುಅಣಕಿಸಿದಂತಿದೆ.

ಈಗ ರಾಜ್ಯದಲ್ಲಿ ಕೋರೋನ ಹೆಚ್ಚು ಹರಡುತ್ತಿರುವುದು ಸತ್ಯ. ಇದೇ ಸಂದರ್ಭದಲ್ಲಿ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡು ಎಲ್ಲಾ ಚಟುವಟಿಕೆಗಳನ್ನು ಪ್ರಾರಂಭಿಸಿದ್ದೇವೆ. ಆದರೆ ಸರ್ಕಾರಿ ಶಾಲೆಗಳನ್ನು ತೆರೆಯುವ ಬಗ್ಗೆ ಅನಗತ್ಯ ಚರ್ಚೆಗಳು ನಡೆಯುತ್ತಿವೆ.

ಸರಕಾರಿ ಶಾಲೆಗಳನ್ನು ತೆರೆಯುವುದಿಲ್ಲ ವಿದ್ಯಾಗಮ ನಡೆಸಲು ಅನುಮತಿಸುವುದಿಲ್ಲ ಎಂದಾದರೆ ಮಾಲ್, ಸಿನಿಮಾ, ಹೋಟೆಲ್, ಜಿಮ್ ,ಬಾರ್ ಮತ್ತು ರೆಸ್ಟೋರೆಂಟ್, ಸರ್ಕಾರಿ ಕಚೇರಿ , ಸಾಮಾಜಿಕ ಸಮಾರಂಭಗಳು, ಚುನಾವಣೆ ಎಲ್ಲವನ್ನೂ ಮುಚ್ಚಿ ಲಾಕ್ ಡೌನ್ ಮಾಡುವುದು ಸೂಕ್ತವಲ್ಲವೇ? ಈ ಮಾಧ್ಯಮಗಳು ಆ ಬಗ್ಗೆ ಯಾಕೆ ಚರ್ಚಿಸುತ್ತಿಲ್ಲ?

ಸರಕಾರಿ ಶಾಲೆಯ ಪ್ರಾರಂಭ ಮತ್ತು ವಿದ್ಯಾಗಮದಿಂದಾಗಿ ಕೊರೋನಾ ಹೆಚ್ಚುತ್ತಿದೆ ಎನ್ನುವುದಾದರೆ , ಸರಕಾರವೇ ಅನುಮತಿಸಿದ ಮಾಲ್, ಸಿನಿಮಾ, ರೆಸ್ಟೋರೆಂಟ್, ಬಾರ್ ಮತ್ತು ರೆಸ್ಟೋರೆಂಟ್, ಸರ್ಕಾರಿ ಕಚೇರಿ ಗಳಿಂದ ಕೂಡ ಕೊರೋನ ವು ಹರಡುವುದಿಲ್ಲವೇ. ಇದೆಂಥಹ ಇಬ್ಬಗೆಯ ವಿತಂಡ ವಾದ

ಕೋರೋನದ ಕಾರಣದಿಂದಾಗಿ ಬಡವರ , ಕೃಷಿ ಕಾರ್ಮಿಕರ, ವಲಸಿಗರ ಮತ್ತು ದುರ್ಬಲ ವರ್ಗದ ಮಕ್ಕಳಿಗೆ ಶಿಕ್ಷಣ ದೊಂದಿಗೆ ಆಹಾರ ,ಪೌಷ್ಠಿಕಾಂಶ , ಆರೋಗ್ಯದ ಸೌಲಭ್ಯಗಳು ಸಿಗದಂತಾಗಿವೆ. ಸರಕಾರಿ ಶಾಲೆಗಳು ಮಕ್ಕಳಿಗೆ ಶಿಕ್ಷಣವನ್ನು ಮಾತ್ರ ನೀಡದೆ, ಮಕ್ಕಳಿಗೆ ಬೇಕಾದ ಪೌಷ್ಟಿಕ ಅಂಶವನ್ನು ಒಳಗೊಂಡ ಬಿಸಿ ಹಾಲು, ಬಿಸಿ ಊಟ, ವಿಟಮಿನ್ ಮಾತ್ರೆ, ಆರೋಗ್ಯ ತಪಾಸಣೆ ಯಂತಹ ಸಮಗ್ರ ಪ್ರಗತಿಯ ಕೇಂದ್ರವಾಗಿದ್ದು ಮಕ್ಕಳ ರಕ್ಷಣೆಗೆ ಪೂರಕವಾಗಿದೆ.

ಈ ಸಂದರ್ಭದಲ್ಲಿ ಮಕ್ಕಳಿಗೆ ಈ ಬಗೆಯ ಬೆಂಬಲ ಅತ್ಯವಶ್ಯಕವಾಗಿ ಬೇಕಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಅಯೋಗ, ಯುನಿಸೆಫ್, ಯುನೆಸ್ಕೊ ಇತ್ಯಾದಿ ಮಕ್ಕಳ ಹಕ್ಕುಗಳ ಸಂಸ್ಥೆಗಳು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಶಾಲೆಗಳನ್ನು ಶೀಘ್ರವಾಗಿ ಪುನಾರಾರಂಭಿಸುವುದು ಸರ್ಕಾರಗಳ ಆದ್ಯತೆಯಾಗಬೇಕೆಂದು ಒತ್ತಿ ಹೇಳಿವೆ.

ಸರ್ಕಾರಿ ಶಾಲೆಗಳು ತೆರೆಯ ಬೇಕೇ ಬೇಡವೇ ಎನ್ನುವುದರ ಬಗ್ಗೆ ಶಾಲೆಗಳ ನಿಜವಾದ ವಾರಸುದಾರರು ಮತ್ತು ಪೋಷಕರ ಪ್ರತಿನಿಧಿಗಳಾದ ಎಸ್ ಡಿ ಎಂಸಿ ಯವರನ್ನು ಶಿಕ್ಷಕರನ್ನು ಕೇಳಬೇಕು.

ಈ ಸಂಕಷ್ಟದ ಸಮಯದಲ್ಲಿ ಸರಕಾರವು ಬಡವರ , ಕೃಷಿ ಕಾರ್ಮಿಕರ, ವಲಸಿಗರ ಮತ್ತು ದುರ್ಬಲ ವರ್ಗದ ಪರವಾಗಿ ನಿಲ್ಲಬೇಕು. ಗ್ರಾಮಾಂತರ ಪ್ರದೇಶದ ಬಡ ಮತ್ತು ಅವಕಾಶ ವಂಚಿತ ಮಕ್ಕಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸರ್ಕಾರ ಯೋಚಿಸಬೇಕು.

ಮಾಧ್ಯಮಗಳು ಜನರನ್ನು ದಾರಿ ತಪ್ಪಿಸುವುದೇ ತಮ್ಮ ಉದ್ಯೋಗವನ್ನಾಗಿಸಿ ಕೊಂಡಿದ್ದು ಸರಕಾರ ಈಗಲಾದರೂ ಇಂತವರ ಬಗ್ಗೆ ಕಠಿಣ ನಿಲುವನ್ನು ತಾಳುವಂತಾಗಲಿ. ಬಡಜನರಿಗೆ ಬೆಂಬಲವಾಗಿರುವ ಮತ್ತು ಮಕ್ಕಳ ಬದುಕಿಗೆ ಮೂಲಾಧಾರವಾಗಿರುವ ಸರ್ಕಾರಿ ಶಾಲೆಗಳು ಹಂತ ಹಂತವಾಗಿ ಪ್ರಾರಂಭವಾಗಲಿ.

ಈ ಬಗ್ಗೆ ಸನ್ಮಾನ್ಯ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರು ಬಡಜನರ ಪರನಿಂತು ಸರ್ಕಾರಿ ಶಾಲೆಗಳನ್ನು ಪ್ರಾರಂಭಿಸುವ ತೀರ್ಮಾನ ಕೈಗೊಳ್ಳಬೇಕಾಗಿದೆ.

ಮೊಯ್ದಿನ್ ಕುಟ್ಟಿ.
ರಾಜ್ಯಾಧ್ಯಕ್ಷರು
ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...