ಬಡವರ ಉದರಕ್ಕೆ ಹೊಡೆಯುವ ಕೆಲಸ ಬಿಟ್ಟರೆ ಬಿಜೆಪಿ ಸರಕಾರಗಳ ಸಾಧನೆ ಶೂನ್ಯ : ಮಾಜಿ ಸಚಿವ ರೈ ವಾಕ್ಪ್ರಹಾರ

ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಬಿಜೆಪಿ ಸರಕಾರಗಳು ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ಬಿಟ್ಟರೆ ಬಡವರನ್ನು ಉದ್ದಾರ ಮಾಡುವ ಯಾವುದೇ ಯೋಜನೆಗಳನ್ನು ರೂಪಿಸುತ್ತಿಲ್ಲ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿ ಸರಕಾರ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ 39 ಗ್ರಾಮ ಪಂಚಾಯತ್ ಕಛೇರಿ ಮುಂಭಾಗ ಮಂಗಳವಾರ ಏಕಕಾಲದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಸಾಮೂಹಿಕ ಪ್ರತಿಭಟನೆ ವೇಳೆ ಕಳ್ಳಿಗೆ ಗ್ರಾ ಪಂ ಮುಂಭಾಗ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು ಸಿದ್ದರಾಮಯ್ಯ ಸರಕಾರ ಹೋದ ಬಳಿಕ ರಾಜ್ಯದಲ್ಲಿ ಯಾವುದೇ ಪಂಚಾಯತಿಗೆ ಒಂದೇ ಒಂದು ಮನೆ ನಿವೇಶ ಮಂಜೂರಾತಿ ಆಗಿಲ್ಲ. ಬಡವರ ಬಿಎಪಿಎಲ್ ಕಾರ್ಡು ರದ್ದಾಗುತ್ತಿದೆ, ವಿದ್ಯುತ್ ಬಿಲ್ ಬೇಕಾಬಿಟ್ಟಿ ಬರುತ್ತಿದೆ, ಗ್ಯಾಸ್ ಸಬ್ಸಿಡಿ ರದ್ದಾಗಿದೆ, ಸಾಮಾಜಿಕ ಭದ್ರತಾ ಪಿಂಚಣಿಗಳಾದ ಬಡವರ ತಿಂಗಳ ಮಾಶಾಸನ ಫಲಾನುಭವಿಗಳ ಖಾತೆಗೆ ಜಮೆಯಾಗದೆ ಏಳೆಂಟು ತಿಂಗಳುಗಳೇ ಕಳೆದಿದೆ. ಬಡ ಜನರು ಒಪ್ಪೊತ್ತಿನ ಊಟಕ್ಕಾಗಿ ಬೀದಿಗೆ ಬಂದು ಅಂಗಲಾಚುವ ಪರಿಸ್ಥಿತಿ ಬಂದಿದೆ. ಆದರೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಉಳ್ಳವರ ಅನುಕೂಲಕ್ಕಾಗಿ ಪರ್ಸೆಂಟೇಜ್ ಬರುವ ಕಾಮಗಾರಿಗಳಿಗೆ ಮಾತ್ರ ಮಂಜೂರಾತಿ ನೀಡುತ್ತಿದೆಯೇ ಹೊರತು ಬಡವರಿಗೆ ಅನುಕೂಲವಾಗುವ ಯಾವುದೇ ಯೋಜನೆಗಳಿಗೂ ವೇಗ ನೀಡುತ್ತಿಲ್ಲ. ಬಡವರ ಪರ ಕಾಂಗ್ರೆಸ್ ರೂಪಿಸಿದ ಯೋಜನೆಗಳನ್ನು ಕೂಡಾ ರದ್ದು ಮಾಡುವ ಮೂಲಕ ಬಿಜೆಪಿ ಸರಕಾರಗಳು ಸಂಪೂರ್ಣವಾಗಿ ಬಡವರ ವಿರೋಧಿಯಾಗಿ, ಜನ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕೋವಿಡ್ ನೆಪವೊಡ್ಡಿ ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಲಾಗಿದೆ. ಗ್ರಾಮ ಪಂಚಾಯತ್ ಸದಸ್ಯರುಗಳು ಮಾಜಿಯಾಗಿದ್ದಾರೆ. ಪಂಚಾಯತ್‍ಗಳು ಆಡಳಿತಾಧಿಕಾರಿಗಳ ಕೈಯಲ್ಲಿದೆ. ಒಬ್ಬರೇ ಆಡಳಿತಾಧಿಕಾರಿಗೆ ನಾಲ್ಕೈದು ಪಂಚಾಯತ್‍ಗಳ ಜವಾಬ್ದಾರಿ ನೀಡಲಾಗಿದೆ. ಆದರೆ ಅವರಿಗೆ ಥಂಬ್ ನೀಡುವ ಅಧಿಕಾರ ಕೇವಲ ಒಂದು ಪಂಚಾಯತಿಗೆ ಮಾತ್ರ ಸೀಮಿತಗೊಳಿಸಲಾಗಿದ್ದು, ಉಳಿದ ಪಂಚಾಯತ್‍ಗಳಿಗೆ ಹಣಕಾಸು ಬಿಡುಗಡೆ ಮಾಡಿಕೊಳ್ಳಲು ಸಾಧ್ಯವಾಗದೆ ಅಭಿವೃದ್ದಿ ಕಾರ್ಯಗಳು ಸಂಪೂರ್ಣವಾಗಿ ಕುಂಠಿತಗೊಂಡಿದೆ. ಇಂತಹ ಸಮಸ್ಯೆಗಳಿಗೆ ಪರಿಹಾರವನ್ನೂ ಕಂಡುಕೊಳ್ಳುವ ಪ್ರಯತ್ನ ನಡೆಸದ ಸರಕಾರ ಚುನಾವಣೆಯನ್ನೂ ಮುಂದೂಡುತ್ತಾ ಕಾಲ ಕಳೆಯುವ ಮೂಲಕ ಸ್ಥಳೀಯ ಸರಕಾರಗಳ ಅಧಿಕಾರಕ್ಕೆ ಕತ್ತರಿ ಪ್ರಯೋಗಿಸುತ್ತಿದೆ ಎಂದು ರಮಾನಾಥ ರೈ ಆರೋಪಿಸಿದರು.

ಇದೇ ವೇಳೆ ತಾಲೂಕಿನ ವಿವಿಧ ಪಂಚಾಯತ್‍ಗಳ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪಂಚಾಯತ್ ರಾಜ್ ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿದರು.

ಜಿ ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಮಾಣಿ, ಪ್ರಮುಖರಾದ ಶಿವಪ್ರಸಾದ್ ಕನಪಾಡಿ, ದಿವಾಕರ ಪಂಬದಬೆಟ್ಟು, ಮದುಸೂಧನ್ ಶೆಣೈ, ರಮೇಶ್, ದಯಾನಂದ ಶೆಟ್ಟಿ, ವಿನ್ಸೆಂಟ್ ಪಿಂಟೋ, ರಿಚರ್ಡ್ ಡಿ’ಸೋಜಾ, ಶ್ರೆಯಂಶ ಜೈನ್, ಶೇಖರ್ ಪೂಜಾರಿ ಉಜಿರಡಿ, ಸತೀಶ್ ಕುದಿಂಜ, ಬಾಲಕೃಷ್ಣ ಪೂಜಾರಿ ಕಜಲಚ್ಚಿಲು, ಸ್ವಪ್ನಾ ವಿಶ್ವನಾಥ್, ಪುರುಷೋತ್ತಮ ವಿ ಬಂಗೇರ, ಡೆಂಝಿಲ್ ಹರ್ಮನ್ ನೊರನ್ಹಾ, ಕುಸುಮ ಚಂದ್ರಹಾಸ ನಾಯ್ಕ್, ಜಿತೇಂದ್ರ ಮಲಬೆ, ರೂಪೇಶ್ ಆಚಾರಿ, ಸುನಿಲ್ ಡಿ’ಸೋಜಾ, ಜಿ ಎಂ ಇಬ್ರಾಹಿಂ ಮಂಚಿ, ಮುಹಮ್ಮದ್ ನಂದಾವರ, ಅಬ್ದುಲ್ ರಹಿಮಾನ್, ಶಮೀವುಲ್ಲಾ, ಬದ್ರುದ್ದೀನ್, ವಿಶ್ವನಾಥ, ಗೋಪಾಲ, ಚಂದ್ರಶೇಖರ ಕರ್ಣ, ಮೋಹನ್ ಗೌಡ, ಧನಲಕ್ಷ್ಮೀ ಬಂಗೇರ, ವೀರೇಂದ್ರ ಅಮೀನ್, ಶಾರದಾ ಶೆಟ್ಟಿ, ಅಬ್ದುಲ್ ಲತೀಫ್, ಮಾಣಿಕ್ಯ ರಾಜ್ ಜೈನ್, ಮೋನಕ್ಕ, ಕ್ಲಿಫರ್ಡ್ ಡಿ’ಸೋಜ, ಜಸ್ಟಿನ್ ಮ್ಯಾಥ್ಯೂ. ಬಾಲಕೃಷ್ಣ ಆಳ್ವ ಕೊಡಾಜೆ, ವಿಕೇಶ್ ಶೆಟ್ಟಿ, ಇಬ್ರಾಹಿಂ ಕೆ ಮಾಣಿ, ರಮಣಿ, ಪ್ರೀತಿ ಡಿನ್ನಾ ಪಿರೇರಾ, ಸುನಂದ, ಅಬ್ದುಲ್ ಅಝೀಝ್, ಅಬ್ದುಲ್ ರಝಾಕ್, ನಾಗರಾಜ ಪೂಜಾರಿ, ಮೆಲ್ವಿನ್ ಕಿಶೋರ್ ಮಾರ್ಟಿಸ್, ಹಮೀದ್ ಪಲ್ಕೆ, ಮೂಸಾ ಕರೀಂ, ದಯಾನಂದ ಪೂಜಾರಿ, ಗಿರೀಶ್ ಪೂಜಾರಿ, ಹರೀಶ್ ಮಾಣಿ, ಅಝೀಝ್ ಹಳೀರ, ಹಸೈನಾರ್ ಸೂರಿಕುಮೇರು, ಸಂದೀಪ್ ಮಾಣಿ, ಹನೀಫ್ ಮೊದಲಾದವರು ವಿವಿಧೆಡೆಯ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಧಾನ ವರದಿಗಾರರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...