ತೆಂಕಿನ ರಂಗವನ್ನಾಳಿದ ಉಬರಡ್ಕ ಉಮೇಶ ಶೆಟ್ಟಿ ಅರಸಿ ಬಂತು ಯಕ್ಷಗಾನ ಅಕಾಡೆಮಿಯ “ಯಕ್ಷ ಸಿರಿ” ಪ್ರಶಸ್ತಿಯ ಹಿರಿಮೆ

 

 

“ಮೂಡಬಿದಿರೆಗವಳು ಸೂತನೊಳು ಕೂಡುತಾ ಪೋಗಿಹಳು” ಎನ್ನುತ್ತಾ ಅಧರ್ಮದ ನೆಲೆಬೀಡಾದ ಈ ಭೂಲೋಕವನ್ನು ಸುಡುವ ಧರ್ಮದೇವತೆಗಳಿಗೆ ಶಾಂತರಾಗಿ ಎಂದು ಬುದ್ಧಿವಾದವನ್ನು ಹೇಳುವ ನೆಲ್ಯಾಡಿಬೀಡಿನ ಬಲ್ಲಾಳರ ಸೇವಕನಾಗಿ “ಅಣ್ಣಪ್ಪ” ನಾಗಿ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯಾ ಪಾತ್ರ ರಂಗದಲ್ಲಿ ಕಾಣಿಸಿಕೊಂಡು, ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ವೇಷಧಾರಿ, ಉಬರಡ್ಕ ಉಮೇಶ ಶೆಟ್ಟಿ ಒಬ್ಬರು. ತನ್ನ ಅಭಿನಯ, ವಾಕ್ ಚಾತುರ್ಯದಿಂದ ಎಲ್ಲರ ಮನವನ್ನು, ಹಾಗು ಎಲ್ಲ ಪೌರಾಣಿಕ ಪಾತ್ರಕ್ಕೆ ಜೀವ ತುಂಬಿದ ಶ್ರೀಯುತರ ಉಬರಡ್ಕ ಉಮೇಶ ಶೆಟ್ಟಿಯವರು.

ಕಲೆಯ ತವರೂರಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಉಬರಡ್ಕ ಕಿಟ್ಟಣ್ಣ ಶೆಟ್ಟಿ ಮತ್ತು ಯಮುನಾ ರವರ ಗರ್ಭಸಂಜಾತರಾಗಿ ದಿನಾಂಕ 15-07-1958ನೇ ಜನಿಸಿದರು. ಪ್ರಾಥಮಿಕ ಅಧ್ಯಯನವನ್ನು ವಿತ್ತೂರು ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮಾಡಿದರು. ಮನೆಯ ಸುತ್ತಮುತ್ತ ಯಕ್ಷಗಾನದ ವಾತಾವರಣದ ವಿದ್ದ ಕಾರಣ ತನ್ನ 13ನೇ ವಯಸ್ಸಿನಲ್ಲಿ ಧರ್ಮಸ್ಥಳ ಕಲಾಕೇಂದ್ರದಲ್ಲಿ ಗುರುಗಳಾದ ಕುರಿಯ ವಿಠ್ಠಲ ಶಾಸ್ತ್ರೀ ಮತ್ತು ನಾಟ್ಯಾಭ್ಯಾಸಕ್ಕೆ ಪಡ್ರೆ ಚಂದು ಅವರಲ್ಲಿ  ಕಲಿತರು. ನಂತರ ಧರ್ಮಸ್ಥಳ ಮೇಳಕ್ಕೆ ಮೊದಲ ಬಾರಿಗೆ ಬಾಲಗೋಪಾಲ ವೇಷದಲ್ಲಿ ಪಾದಾರ್ಪಣೆ ಮಾಡಿದರು. ಅ ಕಾಲದಲ್ಲಿ ಕಡತೋಕ ಮಂಜುನಾಥ ಭಾಗವತರು ಮತ್ತು ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ, ಕುಂಬ್ಳೆ ಸುಂದರ ರಾವ್, ನಿಡ್ಲೆ ಕೆ. ಗೋವಿಂದ ಭಟ್, ಸೂರಿಕುಮೇರಿ ಗೋವಿಂದ ಭಟ್, ಕುಂಬ್ಳೆ ಶ್ರೀದರ ರಾವ್, ವರ್ಕಾಡಿ ತಾರಾನಾಥ ಬಲ್ಲಯ್ಯ, ಮುಂತಾದವರ ಒಡನಾಟದಿಂದ ಸಮರ್ಥ ಮಾರ್ಗದರ್ಶನದಿಂದ ಪರಿಪೂರ್ಣ ಕಲಾವಿದರಾಗಿ ಹೊರಹೊಮ್ಮಿದರು.

ಧರ್ಮಸ್ಥಳ ಮೇಳದಲ್ಲಿರುವಾಗ ಪುತ್ತೂರು ನಾರಾಯಣ ಹೆಗ್ಗಡೆ ಮತ್ತು ಎಂಪಕಟ್ಟೆ ರಾಮಯ್ಯ ರೈ ಅವರಿಂದ ಪ್ರಭಾವಿತರಾಗಿದ್ದ ಇವರಿಗೆ ಕಡತೋಕ ಮಂಜುನಾಥ ಭಾಗವತರು ಮತ್ತು ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಸಮರ್ಥ ಮಾರ್ಗದರ್ಶನವಿತ್ತು. ಯಕ್ಷಗಾನದ ಮೇರು ಕಲಾವಿದ ಅಳಿಕೆ ರಾಮಯ್ಯ ರೈಯವರ ಅಳಿಯನಾಗಿರುವುದು ಇವರ ಕಲಾ ಪರಿಪೂರ್ಣತೆ ಪ್ರೇರಕವಾದ ಅಂಶವಾಗಿ ತನ್ನದೇ ಆದ ಶೈಲಿಯನ್ನು ನಿರೂಪಿಸಿದರು. ಶ್ರೀಯುತರು ಕಂಸ ವಧೆ ಪ್ರಸಂಗದ “ವಲ್ಲಭೆ ಸಹಿತಾಯಾಗ ವಸುದೇವ ಮಣಿರಥದಲಿ ಕುಳ್ಳಿರ್ಪನಂದು ಉಲ್ಲಾಸದೊಳು ತೇರು ನಡೆಸುತ್ತ ಬರುತಿರ್ಪ ವಲ್ಲಿದ ಕಂಸನಂದು” ಎಂದು ಕಂಸನಾಗಿ ರಂಗಕ್ಕೆ ಬಂದರೆ, ಅತಿಕಾಯ ಮೋಕ್ಷ ಪ್ರಸಂಗದಲ್ಲಿ “ಬನ್ನಿರೈ  ಸಂಸಾರ ಶರಧಿಯ ದಾಟುವರು ಬನ್ನಿರೈ ಮೋಕ್ಷಕಾಂಕ್ಷಿಗಳು” ಎಂದು ಅತಿಕಾಯನಾಗಿ ಬಂದರೆ, ಪ್ರಹ್ಲಾದ  ಚರಿತ್ರೆ ಪ್ರಸಂಗದಲ್ಲಿ “ಅಂದ ಚಂದದೊಳೆಲ್ಲ ಎನ್ನ ಕಂದನೆಣೆ ಯಾರೆಂದು ಇಂದಿವಗೆ ಪ್ರಹ್ಲಾದ ಎಂದು ಪೇಸರಿಡುವೆ” ಎಂದು ಹಿರಣ್ಯಕಶ್ಯಪನಾಗಿ ವಿಜ್ರಂಬಿಸಿದರೆ, “ಚೆಲುವರನು ನೋಡಿದರೆ” ಎಂದು ರಾಮನಾಗಿ ಕುಣಿದರೆ, “ಬಂದನು ದೇವರ ದೇವ”  ಕೃಷ್ಣ, ರಾವಣ, ಶ್ರೀನಿವಾಸ, ಹನುಮಂತ ಮುಂತಾದ ಪಾತ್ರಗಳಿಗೆ ಜೀವವನ್ನು ತುಂಬಿದ ಕಲಾವಿದರು. ಧರ್ಮಸ್ಥಳ ಮೇಳದಲ್ಲಿ ಸುಮಾರು ನಲವತ್ಮೂರು ವರುಷದ ತಿರುಗಾಟದಲ್ಲಿ ದರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಅಣ್ಣಪ್ಪ ಸ್ವಾಮಿಯ ಪಾತ್ರ ಬಹಳ ಪ್ರಸಿದ್ದಿ ಪಡೆಯಿತು. ಧರ್ಮಸ್ಥಳದ ಮೇಳದಲ್ಲಿ ಪುತ್ತೂರು ನಾರಾಯಣ ಹೆಗ್ಗಡೆಯವರು ಅಣ್ಣಪ್ಪ, ಕಂಸ, ಹಿರಣ್ಯಕಶ್ಯಪ, ಮುಂತಾದ ಎದುರು ವೇಷದಲ್ಲಿ ತನ್ನದೇ ಆದ ಶೈಲಿಯನ್ನು ಸೃಷ್ಠಿಸಿ ಕಲಾಭಿಮಾನಿಗಳನ್ನು ರೋಮಾಂಚನಗೊಳಿಸುತ್ತಿದ್ದರು. ಹಿರಿಯರಾದ ಪುತ್ತೂರು ನಾರಾಯಣ ಹೆಗ್ಗಡೆಯವರ ಸ್ಥಾನವನ್ನು ತುಂಬಲು ಸಾಧ್ಯವಾಯಿತು.

ಹೀಗೆ ಶ್ರೀಯುತರಿಗೆ ಬಹರೈನ್ ಕನ್ನಡ ಸಂಘ ದವರು ಕುವೈಟ್ ಬಂಟಾಯನ ಸನ್ಮಾನಿಸಿದ್ದಾರೆ, ಎಡನೀರು ಮಠ ಮೇಳದಲ್ಲಿ ಇರುವಾಗ ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮಿಗಳಿಂದ ಸನ್ಮಾನಿಸಿದ್ದಾರೆ, ಶ್ರೀ ಕೃಷ್ಣ ಯಕ್ಷ ಸಭಾ, ಸತ್ಯಸಾಯಿ ವಿದ್ಯಾ ಸಂಸ್ಥೆ, ಕರಾವಳಿ ಯಕ್ಷಗಾನ ಕಲಾವಿದರು ಬೆಂಗಳೂರು ಇವರಿಂದ ಸನ್ಮಾನಿಸಿದ್ದಾರೆ.1994ರಲ್ಲಿ ದಿಲ್ಲಿಯ ಕಾರ್ಯಕ್ರಮವೊಂದರಲ್ಲಿ ಅಂದಿನ ರಾಷ್ಟ್ರಪತಿ ಶಂಕರದಯಾಳ್ ಶರ್ಮ ಅವರಿಂದ ಗೌರವ ಪುರಸ್ಕಾರ ದೊರಕಿದೆ. ಜಾಗತಿಕ ಬಂಟ ಪ್ರತಿಷ್ಟಾನದ ಬಂಟ ಪ್ರತಿಷ್ಟಾನ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.  2019ನೇ ಸಾಲಿನ ಯಕ್ಷಗಾನ ಉಡುಪಿ ಕಲಾರಂಗದ ಪ್ರಶಸ್ತಿ ದೊರೆತಿದೆ.   2019ನೇ ಸಾಲಿನ ಯಕ್ಷಗಾನ ಅಕಾಡಮಿಯ “ಯಕ್ಷಸಿರಿ” ಪ್ರಶಸ್ತಿಯು ಅರಸಿ ಬಂದಿದೆ. ಹಾಗು ಈ ವರುಷದ 2020ನೇ ಸಾಲಿನ ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿಯು ಅರಸಿ ಬಂದಿದೆ.

ಯಕ್ಷಲೋಕದಲ್ಲಿ ದಣಿಯದೆ ಕುಣಿಯುತ್ತಿದ್ದ ಶ್ರೀಯುತರು  ಯಕ್ಷಗಾನ ಕಲಾವಿದನಾಗಿ ಎಡನೀರು ಮೇಳ, ಕೋಲ್ಲಂಗಾನ, ಕೂಡ್ಲು ,ಹನುಮಗಿರಿ ಮೇಳಗಳಲ್ಲಿ ಪಾತ್ರ ಮಾಡಿದ್ದಾರೆ. ಹೀಗೆ ಮುಂದಿನ ಪೀಳಿಗೆಗೆ ಯಕ್ಷಗಾನ ಉಳಿಸಲು ಯಕ್ಷಗಾನ ನಾಟ್ಯವನ್ನು ಕಲಿಸುತ್ತಿದ್ದಾರೆ ಕಲಿಸುತ್ತಿದ್ದಾರೆ. ಯಕ್ಷಲೋಕದಲ್ಲಿ ರಾರಾಜಿಸುತ್ತಿದ್ದ ಉಬರಡ್ಕ ಉಮೇಶ ಶೆಟ್ಟಿಯವರು 2015ರಲ್ಲಿ ಸ್ವಯಂ ನಿವೃತ್ತಿ ಹೊಂದಿದರು. ಸಹಧರ್ಮಿಣಿ  ಉಷಾ ಪಾಣಿಗ್ರಹಣ ಮಾಡಿ ಆದರ್ಶ ಹಾಗು ಅವಿನಾಶ ಎಂಬ ಪುತ್ರ ರತ್ನರೊಂದಿಗೆ  ಪ್ರಸ್ತುತ ಬೆಳ್ತಂಗಡಿ ತಾಲೂಕಿನ ನಿಡ್ಲೆಯ “”ಕಲಾಕೌಸ್ತುಭ””ದಲ್ಲಿ ವಾಸವಾಗಿದ್ದರೆ. ಹೀಗೆ   ಹೀಗೆ ಇವರ ಮುಂದಿನ ಹಿರಿತನದ ಬದುಕು ಸುಗಮವಾಗಿ ಸಾಗಲಿ ಕಲಾ ದೇವತೆ ಸರಸ್ವತಿಯು ಮತ್ತು ನನ್ನ ಆರಾಧ್ಯದೇವಿಯಾದ ಜಗನ್ಮಾತೆ ಚಾರ ಮಹಿಷಮರ್ದಿನಿ ಅಮ್ಮನವರು ಉತ್ತರೋತ್ತರ ಅಭಿವೃದ್ಧಿ ನೀಡಲಿ ಎಂದು ಹಾರೈಸುತ್ತೇನೆ.

✍️ಪ್ರಸಂಗಕರ್ತರು ಚಾರ ಪ್ರದೀಪ ಹೆಬ್ಬಾರ್

 

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...