ಗಲ್ಫ್ ಗಾರನೆಂಬ ಹಣೆಪಟ್ಟಿ ಮತ್ತು ಜೀವನದ ವಾಸ್ತವಿಕತೆ

ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಜನ್ಮನಾಡಿನೊಂದಿಗಿನ ಸ್ನೇಹ ಮನುಷ್ಯನಿಗೆ ರಕ್ತಗತವಾದುದು. ತಿಂದುಂಡು ಬೆಳೆದ ಮಣ್ಣನ್ನು ಯಾರೂ ಪ್ರೀತಿಸದಿರಲಾರರು. ಬಾಲ್ಯದಿಂದಲೇ ಸುಖ ಸಂತೋಷಗಳನ್ನು ಪರಸ್ಪರ ಹಂಚಿ ನಕ್ಕು ನಲಿದ ತನ್ನ ಆತ್ಮೀಯ ಸ್ನೇಹಿತರೊಂದಿಗೆ ಜೀವನದ ಪಯಣದುದ್ದಕ್ಕೂ ಜೊತೆಯಾಗಿಯೇ ಸಂಚರಿಸಬೇಕೆಂಬ ಹೆಬ್ಬಯಕೆ
ಆತನ ಮನಸ್ಸಿನಂತರಾಳದಲ್ಲಿ ಅಚ್ಚಳಿಯದೆ ಮುದ್ರೆಯೊತ್ತಿದ್ದರೂ ದಟ್ಟ ದಾರಿದ್ರ್ಯದಿಂದ ಕಂಗೆಟ್ಟಿದ್ದ ಅದೆಷ್ಟೋ ಅಸಂಖ್ಯಾತ ಕುಟುಂಬಗಳ ಸ್ಥಿತಿಗತಿಗಳನ್ನೇ ಬದಲಾಯಿಸಿದ ಗಲ್ಫ್ ನ ಗಗನಚುಂಬಿ ಬಹು ಮಹಡಿ ಕಟ್ಟಡಗಳು ಮತ್ತು ಗಲ್ಫ್ ನಿಂದ ರಜಾದಿನಗಳನ್ನು ಆಸ್ವಾದಿಸಲು ಆಗಮಿಸುವ ತನ್ನ ಆತ್ಮೀಯ ಮಿತ್ರರ ಘಮಘಮಿಸುವ ಸೆಂಟ್ ಪರಿಮಳ, ಜೀವನ ಶೈಲಿಯಲ್ಲಿನ ಬದಲಾವಣೆ, ಮನೆ ಕಟ್ಟುವ ಯೋಜನೆ,
ಸ್ಥಳ ಖರೀದಿಯನ್ನೊಳಗೊಂಡಂತೆ ಆತನ ಇನ್ನಿತರ ಕಾರುಬಾರುಗಳನ್ನು ಕಣ್ಣಾರೆ ಕಾಣುವಾಗ ಈತನ ಮನಸ್ಸಲ್ಲೂ ಗಲ್ಫ್ ವ್ಯಾಮೋಹ ಚಿಗುರೊಡೆಯಲು ಆರಂಭಗೊಳ್ಳುತ್ತದೆ. ತನ್ನ ಹದಿಹರೆಯದ ಸಹೋದರಿಯರ ಮುಗ್ದ ಮುಖಗಳನ್ನೂ ಮಳೆಗಾಲದಲ್ಲಿ ಸೋರುತ್ತಿರುವ ತನ್ನ ಮನೆಯನ್ನೂ ನೆನಪಿಸುವಾಗ ಊರಲ್ಲಿ ಲಭಿಸುವ ಆದಾಯದಿಂದ ತನ್ನ ಜೀವನದ ಗುರಿಯನ್ನು ತಲುಪುವುದು ಅಸಾಧ್ಯವೆಂಬುವುದನ್ನು ಮನಗಂಡು ಕಡಲಾಚೆಗೆ ವಿಮಾನವನ್ನೇರಲು ನಿರ್ಧರಿಸುತ್ತಾನೆ.

ಈ ನಿರ್ಧಾರ ಆತನಲ್ಲಿ ಸಂತೋಷಕರ ವಾತಾವರಣವನ್ನೇ ಉಂಟುಮಾಡುತ್ತದೆ. ಹಲವು ಕನಸುಗಳ ತಾಜ್ ಮಹಲನ್ನು ತನ್ನ ಮನದಲ್ಲೇ ಕಟ್ಟಿ ಬೆಳೆಸಿ ತಾನು ಕೂಡಾ ಗಲ್ಫ್ ಗಾರ ಎಂದೆನಿಸಿಕೊಳ್ಳಲು ಆತನ ಮನಸ್ಸು ಸದಾ ಸಮಯ ಹಂಬಲಿಸುತ್ತಿರುತ್ತದೆ.
ಮೊದಲ ಗಲ್ಫ್ ಪ್ರಯಾಣ ಆತನಿಗೆ ಹುರುಪು ಮತ್ತು ಹರ್ಷವನ್ನು ಉಂಟುಮಾಡುತ್ತದೆ. ಮಾತನಾಡಲು ಪ್ರಾರಂಭಿಸಿದ ಎಳೆಯ ವಯಸ್ಸಿನಿಂದ ಇಂದಿನವರೆಗೆ ಮೈಲುಗಟ್ಟಲೆ ಆಕಾಶದೆತ್ತರದಲ್ಲಿ ಹಾರಾಡುತ್ತಿದ್ದ ವಿಮಾನಗಳನ್ನು ನೋಡುತ್ತಿದ್ದ ಆತನಿಗೆ ಆ ವಿಮಾನದಲ್ಲಿ ಇನ್ನು ಕೆಲವೇ ತಾಸುಗಳಲ್ಲಿ ತಾನೂ ಹಾರಾಡಲಿದ್ದೇನೆ ಎನ್ನುವ ಅರಿವು ಆತನ ಕುತೂಹಲ ಮತ್ತು ಆತುರತೆಯ ವೇಗವನ್ನು ಹೆಚ್ಚಿಸುತ್ತದೆಯಲ್ಲದೆ, ವಿಮಾನವನ್ನೇರುವ ತವಕ ಆತನನ್ನು ನಿಶ್ಚಿತ ಸಮಯಕ್ಕಿಂತಲೂ ಮೊದಲೇ ತಯಾರಾಗುವಂತೆ ಪ್ರೇರೇಪಿಸುತ್ತದೆ. ಸಂತೋಷ ಮತ್ತು ಸಂತಾಪಗಳ ಮಿಶ್ರಿತ ಮನೋಭಾವನೆಗಳಿಂದ ಕೂಡಿದ ಆತನ ಮೊದಲ ವಿಮಾನ ಪ್ರಯಾಣ ನೆರವೇರಿಸಲ್ಪಟ್ಟು ಆತ ಗಲ್ಫ್ ಲೋಕಕ್ಕೆ ಕಾಲಿಡುತ್ತಾನೆ.

ಗಲ್ಫ್ ಲೋಕಕ್ಕೆ ಪ್ರವೇಶಿಸಿದ ನಂತರ ದಿನ ಕಳೆದಂತೆ ಇಲ್ಲಿನ ನೈಜ ಮುಖ ಅನಾವರಣಗೊಳ್ಳಲು ಆರಂಭಗೊಳ್ಳುತ್ತಲೇ ಹೆತ್ತು ಹೊತ್ತು ಸಾಕಿದ ಮಾತಾಪಿತರನ್ನು ನೆನೆದು ಕಣ್ಣೀರು ಸುರಿಸುತ್ತಾನೆ. ಬಾಳಿನುದ್ದಕ್ಕೂ ನೆರಳಾಗಿ ನಿಂತ ತನ್ನ ಗೆಳೆಯರನ್ನು ನೆನೆದು ಕೊರಗುತ್ತಾನೆ, ಸುಖ ಸಂತೋಷಗಳೆರಡರಲ್ಲೂ ಭುಜಕ್ಕೆ ಭುಜ ಕೊಟ್ಟು ಸಹಕರಿಸಿದ ತನ್ನ ಆತ್ಮೀಯ ಸಂಬಂಧಿಕರನ್ನು ನೆನೆದು ತಾನೇನೋ ವಿಮಾನವನ್ನೇರುವ ಆತುರದಲ್ಲಿ ಗಲ್ಫ್ ಎಂಬ ಪಂಜರದೊಳಗೆ ಸಿಲುಕಿಕೊಂಡೆ ಎಂಬ ಹತಾಶೆಯಲ್ಲೇ ದಿನರಾತ್ರಿಗಳನ್ನು ಕಳೆಯುತ್ತಾನೆ.ತನ್ನ ನಾಡಿನ ನೆನಪಿನಲ್ಲೇ ಆತನ ಗಲ್ಫ್ ಜೀವನ ಮುಂದುವರಿಯುತ್ತದೆ. ಇವೆಲ್ಲವುಗಳ ಹೊರತಾಗಿಯೂ ತಾನು ಗಲ್ಫ್ ಗೆ ತೆರಳಿದ ದಿನ ತನ್ನ ಸಹೋದರಿಯರ ಮುಖದಲ್ಲಿ ನನ್ನ ಗೈರುಹಾಜರಿಯ ನೋವಿನ ಮಧ್ಯೆಯೂ ಮೂಡಿದ ಕನಸಿನ ಆಶಾಗೋಪುರದ ಸಂತೋಷದ ಮುಗುಳ್ನಗು ಆತನ ಅಕ್ಷಿಪಟಲದ ಪರದೆಯಲ್ಲಿ ಪದೇ ಪದೇ ಗೋಚರಿಸುವಾಗ ಆತ ತನ್ನ ಮನಸ್ಸಿನ ನೋವನ್ನೆಲ್ಲಾ ನುಂಗಿಕೊಂಡು ತನ್ನ ಕಾರ್ಯದಲ್ಲಿ ಮುಂದುವರಿಯುತ್ತಾನೆ.

ಕಾಲಚಕ್ರ ಹೀಗೆಯೇ ಉರುಳುತ್ತಿದ್ದುದರ ಮಧ್ಯೆ ಆತನ ಅಭಾವದಲ್ಲಿ ನಡೆದ ತನ್ನ ಆಪ್ತ ಸಂಬಂಧಿಕರ ಮರಣವಾರ್ತೆಗಳು, ಮದುವೆ ಕಾರ್ಯಕ್ರಮಗಳು, ಹಬ್ಬದ ಗೌಜಿ ಗದ್ದಲಗಳೆಲ್ಲವೂ ಆತನನ್ನು ಜೀವನ್ಮೃತವೆಂಬಂತೆ ಬಿಂಬಿಸುತ್ತದೆಯಲ್ಲದೆ ಆತನ ಘಾಸಿಗೊಂಡ ಮನೋವೇದನೆಯನ್ನು ಇನ್ನಷ್ಟೂ ಹೆಚ್ಚಿಸುತ್ತದೆ.
ಈತನ್ಮಧ್ಯೆ ಮನೆಗೆ ಫೋನಾಯಿಸುವಾಗ ತಾಯಿ ಹಿರಿಯ ಮಗಳ ಮದುವೆಯ ವಿಷಯ ಪ್ರಸ್ತಾಪಿಸುತ್ತಾರೆ. ಈತನ ಸಂತೋಷಕ್ಕೆ ಪಾರವೇ ಇಲ್ಲ, ತನ್ನ ಪ್ರೀತಿಯ ಸಹೋದರಿಯ ಕಂಕಣ ಭಾಗ್ಯವನ್ನು ನೆನೆದು ಸಂತೋಷದಿಂದ ಕುಣಿದು ಕುಪ್ಪಳಿಸುತ್ತಾನೆ. ಕಂಡಕಂಡವರಲ್ಲಿ ತನ್ನ ಭಾವೀ ಭಾವನ ಬಗ್ಗೆ ವಿಚಾರಿಸುತ್ತಾನೆ, ಪ್ರಾರ್ಥನೆಯಲ್ಲೇ ನಿರತನಾಗುತ್ತಾನೆ. ಸಾಧ್ಯವಾದುದನ್ನು ಸಾಧ್ಯವಾದಷ್ಟು ಅರಿತು ಉಳಿದೆಲ್ಲವನ್ನೂ ಜಗದೊಡೆಯನಲ್ಲಿ ಸಮರ್ಪಿಸುತ್ತಾನೆ, ಸಹೋದರಿಯ ಕ್ಷೇಮಾಭಿವೃದ್ಧಿಗಾಗಿ ಜಗದೊಡೆಯನಲ್ಲಿ ನಿರಂತರವಾಗಿ ಮೊರೆಯಿಡುತ್ತಾನೆ. ಇನ್ನೂ ಗಲ್ಫ್ ಗೆ ತೆರಳಿ ಎರಡು ವರ್ಷ ಪೂರ್ತಿಯಾಗಿಲ್ಲದ ಕಾರಣ ಒಂದು ವಾರದ ಎಮರ್ಜೆನ್ಸಿ ಲೀವ್ ನಲ್ಲಿ ತೆರಳಿ ಹೇಗೂ ಮದುವೆಯ ಆಭರಣ, ಹಣವನ್ನೆಲ್ಲಾ ಹೊಂದಿಸಿ ಅಲ್ಪ ಸ್ವಲ್ಪ ಸಾಲ ಮಾಡಿ ಹಿರಿಯ ಸಹೋದರಿಯ ಮದುವೆ ತಕ್ಕಮಟ್ಟಿಗೆ ಭರ್ಜರಿಯಾಗಿ ಮುಗಿಸಿ ಸಾಲಗಾರನಾಗಿಯೇ ಭಾರವಾದ ಹೃದಯದೊಂದಿಗೆ ತನ್ನ ಕರ್ತವ್ಯಕ್ಕೆ ಹಾಜರಾಗುತ್ತಾನೆ. ಕರ್ತವ್ಯದ ಮಧ್ಯೆ ಏಕಾಂಗಿತನ ಆತನನ್ನು ಬೆಂಬಿಡದೆ ಕಾಡುತ್ತಿರುತ್ತದೆ. ಕುಟುಂಬದಿಂದ ದೂರವುಳಿದು ಸವೆಸುವ ಪ್ರತಿ ಸೆಕೆಂಡ್ ಗಳು ಮಿನಿಟ್ ಗಳಾಗಿಯೂ ಮಿನಿಟ್ ಗಳು
ಗಂಟೆಗಳಾಗಿಯೂ ಗಂಟೆಗಳು ದಿನಗಳಾಗಿಯೂ ಭಾಸವಾಗುತ್ತದೆ. ತಂದೆ ತಾಯಿಯ ಸಾಮೀಪ್ಯವಿಲ್ಲದ ಗಲ್ಫ್ ಜೀವನ ಇನ್ನು ಸಾಕು ಎಂದು ಮನಸ್ಸಿನಂತರ್ಯ ಮಂತ್ರಿಸುತ್ತಿದ್ದರೂ ತನ್ನ ಜವಾಬ್ದಾರಿಯ ಆಳ ಆತನನ್ನು ಗಲ್ಫ್ ನ ಪ್ರಸಕ್ತ ಸನ್ನಿವೇಶದಲ್ಲೇ ಮುಂದುವರಿಯಲು ಒತ್ತಾಯಿಸುತ್ತದೆ.

ಇವೆಲ್ಲವುಗಳ ಮಧ್ಯೆ ಮೊದಲ ಸಹೋದರಿಯ ಸಾಲದ ಲೆಕ್ಕ ಕೊನೆಯ ಹಂತಕ್ಕೆ ತಲುಪುತ್ತಿರುವಾಗಲೇ ಎರಡನೇ ಸಹೋದರಿಯ ಮದುವೆ ಆಲೋಚನೆಗಳು ಆರಂಭಗೊಳ್ಳುತ್ತದೆ. ಒಟ್ಟಿನಲ್ಲಿ ಆತನ ಜೀವನವೆಂಬುದು ಸಾಲ ಕೊಡುಕೊಳ್ಳುವಿಕೆಗೆ ಸೀಮಿತಗೊಳ್ಳುತ್ತದೆ. ತನ್ನ ವಯಸ್ಸು ಇಪ್ಪತ್ತೆಂಟು ದಾಟುತ್ತಿರುವಾಗ ತನ್ನ ಮದುವೆಗೂ ಇದು ಸಕಾಲವೆಂದು ಮನಗಂಡು ಮುಂದಡಿಯಿಡುತ್ತಾನೆ.
ಎರಡು ತಿಂಗಳ ರಜೆಯನ್ನು ಪಡೆದು ತನ್ನ ಪ್ರಾಣಸಖಿಯ ಅನ್ವೇಷಣೆಯಲ್ಲಿ ತೊಡಗುತ್ತಾನೆ, ಸಹೋದರಿಯ ಮದುವೆ ಖರ್ಚಿನಲ್ಲೇ ತನ್ನ ಮದುವೆಯನ್ನೂ ನೆರವೇರಿಸಬೇಕೆಂಬ ತೀರ್ಮಾನ ಕೈಗೊಳ್ಳುತ್ತಾನೆ. ಸುಮಧುರ ಸುಂದರ ಬಾಳಿನ ಸುಂದರ ಕ್ಷಣಗಳನ್ನು ವೈವಾಹಿಕ ಜೀವನಕ್ಕೆ ಕಾಲಿಟ್ಟ ನೂತನ ದಂಪತಿಗಳ ಸರಸ ಸಲ್ಲಾಪಗಳ ಆಸ್ವಾದನೆಯ ಮಧ್ಯೆ ರಜಾ ದಿನಗಳು ಮುಗಿದು ಹೋದದ್ದು ಮಾತ್ರ ತನ್ನ ಅರಿವಿಗೆ ಬಂದಿದ್ದು ಕಂಪೆನಿಯ ಕರೆ ಬಂದಾಗಲೇ ಆಗಿತ್ತು. ಹತ್ತು ದಿವಸಗಳ ಹೆಚ್ಚುವರಿ ರಜೆಯನ್ನೂ ಕೇಳಿ ಪಡೆದು ಇದ್ದ ಹಣವನ್ನೆಲ್ಲಾ ಖರ್ಚು ಮಾಡಿ ಸಾಲದೆಂಬಂತೆ ಮತ್ತೊಮ್ಮೆ ಸಾಲಗಾರನಾಗಿ ದುಃಖತಪ್ತನಾಗಿಯೇ ಭಾರವಾದ ಹೃದಯದೊಂದಿಗೆ ಮತ್ತೊಮ್ಮೆ ತನ್ನ ಕರ್ತವ್ಯಕ್ಕೆ ಹಾಜರಾಗುತ್ತಾನೆ.

ಈ ಬಾರಿಯ ಆತನ ಗಲ್ಫ್ ಪ್ರವಾಸ ಆತನಲ್ಲಿ ಅನೇಕ ಬದಲಾವಣೆಗಳನ್ನು ತಂದೊಡ್ಡುತ್ತದೆ. ಕುಟುಂಬದಿಂದ ದೂರವುಳಿದು ಜೀವಿಸುವ ಗಲ್ಫ್ ಜೀವನ ಕ್ರಮ ಇನ್ನು ಸಾಕು ಎಂದೆನಿಸುತ್ತದೆ. ಏನಾದರೂ ಮಾಡಿ ಊರಿನಲ್ಲಿಯೇ ಸಣ್ಣ ವ್ಯಾಪಾರವೊಂದನ್ನು ಆರಂಭಿಸಬೇಕೆಂಬ ಇಚ್ಛೆ ಉದಯಿಸುತ್ತದೆ. ಊರಿನಲ್ಲಿಯೇ ಕುಟುಂಬ ಸಮೇತ ಜೀವಿಸುವ ತನ್ನ ಮನದಿಂಗಿತದ ಕಲ್ಪನೆಯಲ್ಲೇ ಕಾಲ ಕಳೆಯುತ್ತಾನೆ. ಇದರ ಮಧ್ಯೆ ತನ್ನ ಮಡದಿಯು ಗರ್ಭವತಿಯಾಗಿದ್ದಾಳೆ ಎನ್ನುವ ವಿಷಯ ತಿಳಿದು ಅತೀವ ಸಂತಸಪಡುತ್ತಾನೆ. ಎರಡೂ ಮನೆಯವರು ತಮ್ಮ ನೂತನ ಅತಿಥಿಯ ವಿಷಯ ತಿಳಿದು ಸಂತಸದ ಕಡಲಲ್ಲಿ ನಕ್ಕು ನಲಿದಾಡುತ್ತಾರೆ. ಎರಡೂ ಕಡೆಯವರು ಒಂದೆಡೆ ಸೇರಿ ಸಿಹಿ ತಿಂಡಿ ಹಂಚಿ ಸಂಭ್ರಮಿಸಿ ಶುಭ ಹಾರೈಸುತ್ತಾರೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಇವೆಲ್ಲವುಗಳನ್ನೂ ಒದಗಿಸಿಕೊಟ್ಟ ಅಲ್ಲಾಹುವನ್ನು ಸ್ತುತಿಸುತ್ತಾರೆ. ಇದರ ಮಧ್ಯೆ ರೀ, ಇಷ್ಟೊಂದು ಸಂಭ್ರಮದ ವಾತಾವರಣದ ವೇಳೆ ತಾವೂ ಜೊತೆಯಲ್ಲಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಹೆಂಡತಿಯ ಸ್ತ್ರೀಸಹಜ ಮಾತು ಆತನ ನಿದ್ದೆಗೆಡಿಸುತ್ತದೆ.

ಸಂತೋಷದ ಮಧ್ಯೆಯೂ ಆತನ ಮನಸ್ಸಿಗೆ ಅಪಾರ ನೋವನ್ನುಂಟುಮಾಡುತ್ತದೆ. ತನ್ನ ಪ್ರೀತಿಯ ಮಡದಿಯ ಮತ್ತು ಮುದ್ದಿನ ಕಂದಮ್ಮನ ಪೂರ್ಣ ಆರೋಗ್ಯಕ್ಕಾಗಿ ರಾತ್ರಿ ಹಗಲೆನ್ನದೆ ಸದಾ ಸಮಯ ಮನನೊಂದು ಪ್ರಾರ್ಥಿಸುತ್ತಲೇ ಇರುತ್ತಾನೆ.
ನಂತರದ ದಿನಗಳಲ್ಲಿ ವೈದ್ಯರ ಭೇಟಿ, ಚೆಕ್ ಅಪ್ ಗಳು, ವಿವಿಧ ರಿಪೋರ್ಟ್ ಗಳು ಇತ್ಯಾದಿಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಾನೆ. ಅದಕ್ಕೆಂದೇ ಒಳ್ಳೆಯ ಮೊತ್ತವನ್ನು ಮೀಸಲಿಡುತ್ತಾನೆ. ದಿನಗಳೆದಂತೆ ಆತನ ಕುತೂಹಲ ಮತ್ತು ಗಾಬರಿ ಹೆಚ್ಚಾಗತೊಡಗುತ್ತದೆ. ಇನ್ನೇನೋ ನೂತನ ಅತಿಥಿಯ ಆಗಮನದ ಕ್ಷಣಗಣನೆಗಳು ಹತ್ತಿರವಾಗುತ್ತಿದ್ದಂತೆ ಮಡದಿಗೆ ಕರೆಮಾಡಿ ಧೈರ್ಯ ತುಂಬುತ್ತಾನೆ, ಆದರೂ ತಾನು ಸ್ವತಃ ದುರ್ಬಲಗೊಂಡು ಕಣ್ಣೀರು ಹರಿಸಿ ತನ್ನ ಸೃಷ್ಟಿಕರ್ತನಿಗೆ ಸಾಷ್ಟಾಂಗವೆರಗಿ ತನ್ನ ದುಃಖವನ್ನೆಲ್ಲಾ ತೋಡಿಕೊಳ್ಳುತ್ತಾನೆ. ಅಷ್ಟೊತ್ತಿಗೆ ತನ್ನ ಮೊಬೈಲ್ ನಲ್ಲಿ ರಿಂಗ್ ಕೇಳಿಸತೊಡಗುತ್ತದೆ. ಅತ್ತ ಕಡೆಯಿಂದ ತಾಯಿಯು ಸಂತೋಷದಿಂದ ಮಗನೇ, ಇಂದು ನೀನು ಮಗುವಿನ ಅಪ್ಪನಾದೆ ಎಂದು ಹೇಳಿ ಮಗು-ಅಳುವಿನ ಶಬ್ದ ಕೇಳಿಸುವಂತೆ ತನ್ನ ಮೊಬೈಲ್ ನ್ನು ಮಗುವಿನ ಹತ್ತಿರ ತಂದಿಡುವಾಗ ಇತ್ತ ಪ್ರವಾಸಿ ಆನಂದ ಬಾಷ್ಪವನ್ನೇ ಸುರಿಸಿ ಮತ್ತೊಮ್ಮೆ ಜಗದೊಡೆಯನ ಮುಂದೆ ಸಾಷ್ಟಾಂಗವೆರಗಿ ಆರೋಗ್ಯವಂತ ಮಗುವನ್ನು ದಯಪಾಲಿಸಿದ ಜಗದೊಡೆಯನ ಮಹಿಮೆಯನ್ನು ಕೊಂಡಾಡುತ್ತಾನೆ. ಮಗುವಿನ ವಿವಿಧ ಭಂಗಿಗಳ ಫೋಟೋಗಳು, ವೀಡಿಯೋಗಳು ಆತನಲ್ಲಿ ಹೊಸ ಚೈತನ್ಯವನ್ನೇ ಉಂಟುಮಾಡುತ್ತದೆ.

ಇನ್ನು ಆತನಿಗೆ ಮಗುವಿನದ್ದೇ ಚಿಂತೆ. ಇನ್ನೊಮ್ಮೆ ರಜಾದಿನದ ಮೇರೆಗೆ ಊರಿಗೆ ಮರಳಲು ಬಾಕಿ ಇರುವ ಆರು ತಿಂಗಳು ಆತನಿಗೆ ಯುಗಗಳಂತೆ ಭಾಸವಾಗತೊಡಗುತ್ತದೆ. ಇನ್ನೇನಿದ್ದರೂ ಗಲ್ಫ್ ಗೆ ಮರಳುವುದಿಲ್ಲ ಎಂದೇ ಪ್ರತಿಜ್ಞೆ ಮಾಡುತ್ತಾನೆ, ಊರಿನಲ್ಲಿ ಏನಾದರೂ ವ್ಯಾಪಾರ ಆರಂಭಿಸಲು ತನ್ನ ಆಪ್ತರಲ್ಲಿ ವಿಚಾರಿಸುತ್ತಲೇ ಇರುತ್ತಾನೆ. ತಾನು ಊರಿಗೆ ತೆರಳುವ ಸಮಯ ಸನಿಹವಾಗುತ್ತಿದ್ದಂತೆ ಸಂತೋಷವೂ ಹೆಚ್ಚಾಗತೊಡಗುತ್ತದೆ. ಈ ಸಲ ತನ್ನ ಲಗೇಜ್ ನಲ್ಲಿ ಮುಖ್ಯ ಪಾಲು ಮಗುವಿನದ್ದೇ. ಸಂತೋಷದಿಂದ ಊರಿಗೆ ತೆರಳುತ್ತಾನೆ. ಮಗುವನ್ನು ಆದಷ್ಟು ಬೇಗ ನೋಡಲೇಬೇಕೆಂಬ ಕುತೂಹಲದಿಂದ ಆರೇಳು ತಿಂಗಳ ಮಗುವನ್ನು ಏರ್ಪೋರ್ಟ್ ಗೆ ಕರೆದುಕೊಂಡು ಬರುವಂತೆ ಪತ್ನಿಯಲ್ಲಿ ವಿನಂತಿಸುತ್ತಾನೆ. ಮಗುವನ್ನು ದೂರದಿಂದ
ಕಾಣುತ್ತಲೇ ಓಡೋಡಿ ಬಂದು ಮಗುವನ್ನೆತ್ತಿ ಮುದ್ದಾಡುತ್ತಾನೆ. ತನ್ನ ಈ ಬಾರಿಯ ರಜಾ ಕಾಲದ ಹೆಚ್ಚಿನ ಸಮಯವನ್ನು ಮಗುವಿನೊಂದಿಗೆ ಕಳೆಯುತ್ತಾನೆ.
ಒಂದು ತಿಂಗಳ ರಜೆಯೂ ಮುಗಿಯುತ್ತಾ ಬರುತ್ತಿದೆ.

ಊರಲ್ಲಿ ವ್ಯಾಪಾರ ಮಾಡಬೇಕೆಂಬ ಆಗ್ರಹ ಇಲ್ಲಿಯೂ ಸಫಲವಾಗದೆ ಕೊನೆಗೂ ತನ್ನ ಜವಾಬ್ದಾರಿಯ ವ್ಯಾಪ್ತಿಯನ್ನರಿತು ಗಲ್ಫ್ ಗೆ ಮರಳುವ ಬಗ್ಗೆಯೇ ಯೋಚಿಸುತ್ತಾನೆ. ಹಲವು ಬಾರಿ ಇಂತಹ ವಿಫಲ ಯೋಚನೆ ಮತ್ತು ಯೋಜನೆಗಳು ಪುನರಾವರ್ತನೆಯಾಗುತ್ತಲೇ ಇರುತ್ತದೆ. ಅಂತೂ ಆತನ ಗಲ್ಫ್ ಜೀವನ ಮುಂದುವರಿಯುತ್ತಲೇ ಇರುತ್ತದೆ.

ಗಲ್ಫ್ ಪ್ರವಾಸಿಯ ಬಗ್ಗೆ ಹಲವಾರು ಅನುಭವಗಳನ್ನು ಬರೆಯಲಿಕ್ಕಿದೆ. ಪ್ರವಾಸಿಗೆ ಸ್ವಲ್ಪ ಮರೆವು ಜಾಸ್ತಿ. ಅದು ಇತರರನ್ನಲ್ಲ, ಸ್ವಂತವನ್ನು. ತನ್ನ ಕುಟುಂಬದ ಒಳಿತಿಗಾಗಿ ಆತ ಸ್ವತಃ ತನ್ನ ಒಳಿತನ್ನು ನಿರ್ಲಕ್ಷಿಸಿ ಸಹಿಸಲಸಾಧ್ಯವಾದ ಯಾತನೆಗಳನ್ನು ಅನುಭವಿಸುತ್ತಾನೆ, ಸ್ವತಃ ಸುಖವನ್ನು ಲೆಕ್ಕಿಸದೆ ಕುಟುಂಬ ಸದಸ್ಯರ ಸುಖಕ್ಕಾಗಿ ಆತ ಮೈಮುರಿದು ದುಡಿಯುತ್ತಾನೆ, ಸ್ವತಃ ಉಪವಾಸಿಗನಾಗಿದ್ದುಕೊಂಡು ಇತರರ ಹಸಿವನ್ನು ನೀಗಿಸುವ ಪ್ರಯತ್ನದಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ, ಹಲವಾರು ವರುಷಗಳ ಕಾಲ ಈ ಮರುಭೂಮಿಯಲ್ಲಿದ್ದುಕೊಂಡು ಸ್ವತಃ ಮನೆ ನಿರ್ಮಿಸಲು ಸಾಧ್ಯವಾಗದಿದ್ದರೂ ಇತರರ ಮನೆ ನಿರ್ಮಾಣ ಕಾರ್ಯದಲ್ಲಿ ಶಕ್ತಿ ಮೀರಿ ಪ್ರಯತ್ನಿಸುತ್ತಾನೆ, ಸ್ವತಃ ಮೇಣದ ಬತ್ತಿಯಂತೆ ಕರಗಿ ಇತರರಿಗೆ ಬೆಳಕಾಗಿ ಕೊನೆಗೆ ತನ್ನಿಂದ ಇನ್ನೇನೂ ಸಾಧ್ಯವಿಲ್ಲ ಎಂದು ಅರಿವಾದಾಗ ಯಾರಿಗೂ ಬೇಡದವನಾಗಿ ತಾಯ್ನಾಡಿಗೆ ಹಿಂದಿರುಗುತ್ತಾನೆ.

ಯಾವುದೇ ಧನ ಸಹಾಯದ ವಿಷಯ ಪ್ರಸ್ತಾಪಿಸಲ್ಪಟ್ಟಾಗ ಅಗ್ರ ಪಂಕ್ತಿಯಲ್ಲಿ ನಿಲ್ಲುವವರು ಗಲ್ಫ್ ಪ್ರವಾಸಿಗಳೇ ಆಗಿದ್ದಾರೆ. ಅಲ್ಲಾಹನು ಎಲ್ಲರನ್ನೂ ಚೆನ್ನಾಗಿಟ್ಟಿರಲಿ ಎಂಬುವುದೇ ಈ ಲೇಖಕನ ಹೃದಯಾಂತರಾಳದ ಪ್ರಾರ್ಥನೆ. ಅಲ್ಲಾಹನು ಸ್ವೀಕರಿಸಲಿ ಆಮೀನ್ ಯಾ ರಬ್ಬಲ್ ಆಲಮೀನ್.

✍️ಮುಹಮ್ಮದ್ ಕುತುಬುದ್ದೀನ್ ಫಯಾಝ್, ದುಬೈ

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...