ಅಮೇರಿಕಾದ ಡೈರಿಯ ಪುಟಗಳು-3: ಪ್ರವಾಸಿಗರ ಪಾಲಿಗೆ ಸ್ವರ್ಗ ಸಮಾನ;ಅರ್ಕನ್ಸಾ


ನಾವು ಯಾವುದೇ ಊರಲ್ಲಿರಲಿ ನಮ್ಮ ಮಣ್ಣಿನ‌ ನೆನಪು ನಮ್ಮನ್ನ‌ ಅಷ್ಟು ಸುಲಭಕ್ಕೆ ಬಿಡುವುದಿಲ್ಲ. ಅಲ್ಲಿ ನಮ್ಮ ಊರಂತೆ ಕಾಣುವ ಪ್ರದೇಶ, ನಮ್ಮೂರ ತಿಂಡಿ ತಿನಿಸು, ನಮ್ಮ ಭಾಷೆ ಇತ್ಯಾದಿಗಳು ಊರ ನೆನಪ ಯಾವುದಾದರೂ ಒಂದು ರೀತಿಯಲ್ಲಿ ಕೊಡುತ್ತಲೇ ಇರುತ್ತವೆ. ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನನಗೆ ದಟ್ಟ ಕಾಡು, ಮಧ್ಯೆ ಮಧ್ಯೆ ಹರಿಯುವ ಚಿಕ್ಕ ಚಿಕ್ಕ ನದಿಗಳು, ಪುಟ್ಟ ಹುಲ್ಲುಗಾವಲು ಮತ್ತು ಅಲ್ಲಿ ಮೇಯುತ್ತಿರುವ ದನಗಳು, ಸುರಿಯುವ ಮಳೆ ಮುಂತಾದವು ಎಲ್ಲಿ ಕಂಡರೂ ನನ್ನ ಊರ ನೆನಪ ತರಿಸುತ್ತದೆ. ತನ್ನ ಬಹುಪಾಲು ಭಾಗಗಳಲ್ಲಿ ಇಂತಹ ಗುಣಲಕ್ಷಣಗಳನ್ನು ಹೊಂದಿರೋ ಅಮೆರಿಕಾದ ಅರ್ಕನ್ಸಾ ರಾಜ್ಯವು ನನಗೆ ಇಂತಹುದೇ ಅನುಭವ ಕೊಟ್ಟಿತ್ತು. ನ್ಯಾಚುರಲ್ ಸ್ಟೇಟ್ ಅಥವಾ ‘ನೈಸರ್ಗಿಕ ರಾಜ್ಯ’ವೆನ್ನುವ ಅಡ್ಡ ಹೆಸರು ಹೊಂದಿರುವ ಕರ್ನಾಟಕದ ಮುಕ್ಕಾಲರಷ್ಟಿರುವ ಈ ಬಡರಾಜ್ಯದ ಹೆಸರು ಇಲ್ಲಿ ಹರಿಯುವ ಮಿಸ್ಸಿಸ್ಸಿಪ್ಪಿ ನದಿಯ ಉಪನದಿಯಾದ ಅರ್ಕನ್ಸಾಸ್ ನದಿಯಿಂದ ಬಂದಿದೆ.

ಈ ರಾಜ್ಯ ಒಳ್ಳೆಯ ವಿಷಯಗಳಿಗಿಂತ ಬೇಡದ ವಿಷಯಗಳಿಗೆ ಪ್ರಸಿದ್ಧವಾಗಿರುವುದು ಜಾಸ್ತಿ. ತಲಾ ಆದಾಯ, ಶಿಕ್ಷಣ, ಆರೋಗ್ಯ, ಶಿಶು ಮರಣ,ಮಾನವ ಅಭಿವೃದ್ಧಿ ಮುಂತಾದ ಯಾವುದೇ ಸೂಚ್ಯಂಕಗಳನ್ನ ತೆಗೆದುಕೊಳ್ಳಿ ಎಲ್ಲದರಲ್ಲೂ ಕೊನೆಯ ಸ್ಥಾನಗಳಲ್ಲಿ ಈ ರಾಜ್ಯ ಬರುತ್ತದೆ. ಸಹಜವಾಗಿಯೆ ತಾನು ಕೊಡುವ ತೆರಿಗೆಗಿಂತ ಹೆಚ್ಚಿನ ಹಣವನ್ನ ಇದು ಪಡೆದುಕೊಳ್ಳುತ್ತದೆ. ವಾಲ್‌ಮಾರ್ಟ್ ಅಂತಹ ದೈತ್ಯ ಕಂಪನಿಯ ಕೇಂದ್ರ ಇಲ್ಲಿದ್ದರೂ, ಅಮೆರಿಕಾದ ಪ್ರಭಾವಶಾಲಿ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಇಲ್ಲಿಯವರಾಗಿದ್ದರೂ (80 ರ ದಶಕದ ನಂತರ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಕಡೆ ವಾಲಿದ್ದರೂ ತನ್ನ ಮಣ್ಣಿನ ಮಗನ ಗೆಲ್ಲಿಸಲು ಎರಡು ಬಾರಿ ಡೆಮಾಕ್ರಟಿಕ್ ಪಕ್ಷಕ್ಕೆ ಮತ ನೀಡಿದ್ದರು) ಕೂಡ ಅಭಿವೃದ್ಧಿ ಅಷ್ಟಕ್ಕಷ್ಟೇ. ಒಟ್ಟಾರೆಯಾಗಿ ಹೇಳುವುದಾದರೆ ಶ್ರೀಮಂತ ದೇಶದ ಬಡರಾಜ್ಯ.

ಇಂತಹ ಹಿನ್ನೆಲೆಯಿದ್ದರೂ ಪ್ರವಾಸಿಗರ ಪಾಲಿಗೆ ಈ ರಾಜ್ಯ ಸ್ವರ್ಗ ಸಮಾನ. ಶರತ್ಕಾಲದಲ್ಲಿ ಉದುರುವ ಮುನ್ನ ಬಣ್ಣ ಬದಲಿಸಿದ ಎಲೆಗಳ ಸೌಂದರ್ಯ ನೋಡಲು ಪಕ್ಕದ ರಾಜ್ಯಗಳಿಂದ ಜನ ಬರುತ್ತಾರೆ. ಇಲ್ಲಿರುವ ನೈಸರ್ಗಿಕ ಗುಹೆಗಳು, ಆಣೆಕಟ್ಟುಗಳ ಹಿನ್ನೀರು, ದಟ್ಟ ಕಾನನಗಳು ಪ್ರವಾಸಿಗರ ಮನಸ್ಸಿಗೆ ಮುದ ನೀಡುತ್ತವೆ. ಹಾಟ್ ಸ್ಪ್ರಿಂಗ್ ನಗರದಲ್ಲಿರುವ, ದಕ್ಷಿಣ ಭಾರತೀಯರಿಗೆ ಬಹು ಅಪರೂಪವಾದ ಇಲ್ಲಿನ ನೈಸರ್ಗಿಕ ಬಿಸಿನೀರಿನ ಬುಗ್ಗೆಗಳು ಬೆರಗು ಮೂಡಿಸುತ್ತವೆ.

ವಾಲ್‌ಮಾರ್ಟಿನ ಕೇಂದ್ರ ಕಛೇರಿಯಿರುವ ಬೆಂಟನ್‌ವಿಲ್ಲೆ ಬಿಟ್ಟರೆ ಉಳಿದೆಡೆ ಭಾರತೀಯರು ಕಮ್ಮಿಯೇ‌. ಬೇರೆಡೆ ವ್ಯಾಪಾರದಲ್ಲಿ ತೊಡಗಿರುವ, ವೈದ್ಯಕೀಯ ವೃತ್ತಿಯಲ್ಲಿರುವ, ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಅನ್ನ ಸಾಂಬಾರು ರೋಟಿ ಕರಿ ಚಿಕನ್ ಬಿರಿಯಾನಿಯೇ ಬೇಕೆನ್ನುವ ಭಾರತೀಯ ಪ್ರವಾಸಿಗರ ತೃಪ್ತಿ ಪಡಿಸಲು ರೆಸ್ಟೋರೆಂಟುಗಳನ್ನ ಇಟ್ಟಿರುವ (ತಮಾಷೆಗೆ ಹೇಳಿದ್ದಷ್ಟೇ, ಅನೇಕ ಸ್ಥಳೀಯರು ಭಾರತೀಯ ಅಡುಗೆಗಳ ಇಷ್ಟಪಟ್ಟು ತಿನ್ನುತ್ತಾರೆ) ಚಿಕ್ಕ ಸಂಖ್ಯೆಯ ಭಾರತೀಯರ ಕಾಣಬಹುದಷ್ಟೇ. ಏನೇ ಇರಲಿ ಕೇವಲ ಎರಡು ರಾತ್ರಿ ಮೂರು ಹಗಲುಗಳ ಕಾಲ ವಾಸವಾಗಿದ್ದ ಈ ರಾಜ್ಯ ನನಗೆ ಬಹಳ ಇಷ್ಟವಾಗಿತ್ತು. ನನ್ನ ಸಂಸ್ಥೆಯ ಹಿರಿಯ ವ್ಯವಸ್ಥಾಪಕರೊಬ್ಬರ ಜೊತೆ ಅರ್ಕನ್ಸಾವನ್ನು ಹೊಗಳಿದಾಗ ಅಲ್ಲೇನಿದೆಯೋ ಮಣ್ಣು ಎಂದು ಕೇಳಿದ್ದರು. ನನಗಿಷ್ಟವಾದ ಕಾರಣ ಹೇಳಿದಾಗ ಏನೋ ನೆನಪಾದಂತೆ, ಮಲೆನಾಡಿನವರಾದ ತಮ್ಮ ಹೆಂಡತಿಗೂ ಬಹಳ‌ ಇಷ್ಟವಾಗಿತ್ತು ಎಂದರು..

ಮುಂದೆ ನೀವು ಪ್ರವಾಸಿಯಾಗಿ ಅಮೆರಿಕಾಗೆ ಭೇಟಿಕೊಡುವ ಸಂದರ್ಭ ಬಂದರೆ ಇಲ್ಲಿ ಭೇಟಿ ಕೊಡುವ ಸಾಧ್ಯತೆ ಕಮ್ಮಿಯೇ. ದೀರ್ಘಕಾಲ ನೆಲೆ ನಿಲ್ಲಲು ಹೋದರೆ ಒಮ್ಮೆಯಾದರೂ ತಿರುಗಾಡುವ ಮನಸ್ಸು ಮಾಡಿ. ಆದರೆ ನನಗೆ ಫ್ಲೋರಿಡಾಕ್ಕಿಂತ ಅರ್ಕನ್ಸಾ ಇಷ್ಟವಾಯಿತು, ವೇಗಸ್ಸಿಗಿಂತ ಹಾಟ್‌ಸ್ಪ್ರಿಂಗ್ ಇಷ್ಟವಾಯಿತೆಂದರೆ ಜನ ನಿಮ್ಮನ್ನ ವಿಚಿತ್ರ ಪ್ರಾಣಿಗಳ ಗುಂಪಿಗೆ ಸೇರಿಸ್ತಾರೆ ಅಷ್ಟೇ 😁

* ಈ ಪಟವನ್ನು ಅರ್ಕನ್ಸಾದ ಹಾಟ್‌ಸ್ಪ್ರಿಂಗ್ ನಗರದಲ್ಲಿ ತೆಗೆದಿದ್ದು.

ಭಾಗ-2 ರ ಕೊಂಡಿ ಇಲ್ಲಿದೆ:

ಅಮೇರಿಕಾದ ಡೈರಿಯ ಪುಟಗಳು-2: ಸ್ವಾಯತ್ತತೆಯನ್ನು ಬಳಸಿಕೊಂಡು ದೈತ್ಯವಾಗಿ ಬೆಳೆದ ಟೆಕ್ಸಾಸ್

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...