“ಚಾರಿಟಿ; ವ್ಯಾಪಾರವಾಗದಿರಲಿ..”(ಅಂಧಾಲೋಕ)

ಅಂಧಾಲೋಕ(ವಿಶ್ವಕನ್ನಡಿಗ ನ್ಯೂಸ್): ದಿನಕ್ಕೊಂದರಂತೆ ಚಾರಿಟಿ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿದೆ. ಒಂದರ್ಥದಲ್ಲಿ ಆಶಾದಾಯಕ ಬೆಳವಣಿಗೆಯಾಗಿದ್ದರೂ ಕೂಡ ಸಮಾಜದ ಅಸಹನೀಯ ಪರಿಸ್ಥಿತಿಯನ್ನವಲೋಕಿಸಿದಾಗ ಮನಸ್ಸಲ್ಲಿ ತಳಮಳವುಂಟಾಗುತ್ತದೆ. ಸಾಮಾಜ ಸೇವಕರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಬಡವರ ಸಂಖ್ಯೆ ಕೂಡ ವೃದ್ಧಿಸುತ್ತಿರುವುದು ವಿಷಾದನೀಯ. ಬರಗೆಟ್ಟ ಆಡಳಿತದಲ್ಲಿ ತಲೆಬುಡವಿಲ್ಲದ ಅರ್ಥವ್ಯವಸ್ಥೆಯಿಂದಾಗಿ ಜೀವನಾಧಾರ ಕಳೆದುಕೊಂಡವರ ಪಟ್ಟಿ ದೀರ್ಘವಿದೆ. ಸಣ್ಣಪುಟ್ಟ ಚಿಕಿತ್ಸೆಗೂ ಲಕ್ಷಕ್ಕೂ ಮಿಕ್ಕ ಹಣ ತೆರಬೇಕಾಗಿ ಬರುವಂತಹ ಸನ್ನುವೇಶದಲ್ಲಿ, ಖಾಸಗಿ ಆಸ್ಪತ್ರೆಗಳು ರೋಗವನ್ನೂ ಉದ್ಯಮವಾಗಿ ಕಾಣಲು ಶುರುಹಚ್ಚಿಕೊಂಡ ಕಾಲದಿಂದ ಇಲ್ಲಿ ಫಲಕಾರಿ ಚಿಕಿತ್ಸೆಯ ಕೊರತೆ ಕಾಡತೊಡಗಿದೆ. ಸಣ್ಣಪುಟ್ಟ ಸಿಸೇರಿಯನ್ ಗೂ ಲಕ್ಷ ಲಕ್ಷ ಶುಲ್ಕ ವಿಧಿಸುವ ಆಸ್ಪತ್ರೆಗಳ ವಿರುದ್ಧ ಧ್ವನಿಯಾಗಲು ನನ್ನ ಮತ್ತು ನಿಮ್ಮಿಂದ ಸಾಧ್ಯವಾಗುತ್ತಿಲ್ಲವಾದಾಗ, ಚಾರಿಟಿ ಸಂಸ್ಥೆಗಳು ಅನಿವಾರ್ಯವಾಗಿ ಹುಟ್ಟಿಕೊಳ್ಳಬೇಕಿದೆ ಮತ್ತು ತಮ್ಮ ಕಾರ್ಯ ಸ್ವರೂಪವನ್ನು ಪ್ರಾಮಾಣಿಕವಾಗಿ ನಡೆಸಿಕೊಡಬೇಕಿದೆ.

ಈಗೀಗ ಚರ್ಚೆಯಾಗುತ್ತಿರುವ ಆಯಾಮದಲ್ಲಿ ಗಮನಿಸಿದಂತೆ ಮತ್ತು ಕೆಲವು ಕಡೆ ಕೇಳಿಸಿಕೊಂಡ ಮಾತಿನಂತೆ ಸ್ವಾರ್ಥ ಲಾಭಕ್ಕಾಗಿ ಮತ್ತು ಪ್ರಚಾರ ಪ್ರಿಯತೆಗಾಗಿ ಸಮಾಜಸೇವೆ ಎಂಬ ಬಿರುದಿನ ಪಟ್ಟಿಯನ್ನು ಸ್ವಯಂ ತನ್ನ ಕೊರಳಿಗೆ ಕಟ್ಟಿಕೊಳ್ಳುವವರ ಅಪ್ರಾಮಾಣಿಕ ನಡೆಯಿಂದಾಗಿ ನಿಸ್ವಾರ್ಥ ಸಮಾಜ ಸೇವಕರು ಮತ್ತು ಪ್ರಾಮಾಣಿಕ ಸೇವೆಗೈಯುವ ಚಾರಿಟಿ ಸಂಸ್ಥೆಗಳಿಗುಂಟಾಗುವ ಬಿಕ್ಕಟ್ಟು ಅಷ್ಟಿಷ್ಟಲ್ಲ. ಸೇವೆ ಎನ್ನುವುದು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಮಾಡಬೇಕಾದ ಕರ್ತವ್ಯ. ಅದು ಎಲ್ಲರ ಮೇಲಿನ ಖಡ್ಡಾಯ ಕರ್ತವ್ಯವೇ ಆಗಿದೆ. ಕೆಲವೇ ಕೆಲವು ಮಂದಿ ಮಾತ್ರ ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಉಳಿದ ಬಹಿತೇಕರು ಕುಳಿತಲ್ಲಿಂದಲೇ ಅವರ ಬೆನ್ನುತಟ್ಟುತ್ತಾರೆ. ಇವೆಲ್ಲದರ ನಡುವಿನ ಅಡ್ಡಗೋಡೆಯಾಗಿ ಪರಿಣಮಿಸಿದ ಸ್ವಘೋಷಿತ ಸಮಾಜ ಸೇವಕರ ಸ್ವಾರ್ಥತೆಯ ಕಾರ್ಯವೈಖರಿ ಮತ್ತು ದುರ್ಲಾಭದ ಮೇಲಿನ ವ್ಯಾಮೋಹ ನಿಷ್ಠಾವಂತ ಸೇವಕರಿಗೂ ಕಂಟಕವನ್ನುಂಟು ಮಾಡಬಲ್ಲದು.

ಯಾವುದೇ ಚಾರಿಟಿ ಸಂಸ್ಥೆ ನಡೆಸುವವರು ಸಹಾಯಾರ್ಥ ಹಣವನ್ನು ಇಡೀ ತಮ್ಮ ಜೇಬಿನಿಂದ ತೆಗೆದು ಕೊಡುತ್ತಿಲ್ಲ. ಸಾವಿರಾರು ಉದಾರ ದಾನಿಗಳ ಹನಿಗಳನ್ನು ಒಟ್ಟುಗೂಡಿಸಿ ಒಂದು ಮೊತ್ತವನ್ನಾಗಿಸಿ ಅರ್ಹರಿಗೆ ತಲುಪಿಸುವ ಕೊಂಡಿಯಷ್ಟೇ ಚಾರಿಟಿ ಸಂಸ್ಥೆಗಳು ಮತ್ತು ಸಮಾಜ ಸೇವಕರು. ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಈ ಪುಣ್ಯದಲ್ಲಿ ಪಾಲು ಇದೆ. ಅದೇರೀತಿ ಆ ಪೂರ್ತಿ ಹಣದ ಮೇಲೆ ಸಂಸ್ಥೆಗೆ ಸಂಪೂರ್ಣ ಜವಾಬ್ದಾರಿ ಇದೆ. ಅದರಿಂದ ಒಂದು ರೂಪಾಯಿ ಕೂಡ ತಮ್ಮ ಸ್ವಂತಕ್ಕಾಗಿ ಬಳಸುವ ಹಕ್ಕು ಯಾರಿಗೂ ಇಲ್ಲ. ಹಾಗಿದ್ದಲ್ಲಿ ಚಾರಿಟಿಯನ್ನೇ ವ್ಯಾಪಾರದಂತೆ ಕಂಡು ಅದರಲ್ಲೇ ತನ್ನ ಅಸ್ತಿತ್ವ ಗಟ್ಟಿಗೊಳಿಸುವ ಕೆಲವು ದುಷ್ಟರ ಪಾಪದ ಪ್ರಮಾಣ ಎಷ್ಟು ದೊಡ್ಡದಿರಬೇಡ?

ಈಗ ವಾಟ್ಸಪ್, ಫೇಸ್ಬುಕ್ ಮೂಲಕ ಚಾರಿಟಿ ಕಾರ್ಯಗಳು ಮುಂದುವರಿಯುತ್ತಿದ್ದು ಪದೇ ಪದೇ ಈ ವೇಳೆ ವಿಚಾರದಲ್ಲಿ ಚರ್ಚೆಯೇಳುತ್ತಿದೆ. ಚರ್ಚೆ ಕೆಲವೊಮ್ಮೆ ತಾರಕಕ್ಕೇರಿ ವೈಯಕ್ತಿಕ ತೇಜೋವಧೆ ತನಕ ತಲುಪುವುದೂ ಉಂಟು. ಸತ್ಯವನ್ನು ಜನರಿಗೆ ಮನದಟ್ಟು ಮಾಡಿಕೊಡುವ ರಭಸದಲ್ಲಿ ನಾಲಗೆಯ ಮೇಲೆ ಹಿಡಿತವಿಲ್ಲದೇ ಹೋದಲ್ಲಿ ಅದು ಮುಂದಕ್ಕೆ ದೊಡ್ಡ ನಷ್ಟವನ್ನುಂಟುಮಾಡೀತು. ಸಾಮಾಜಿಕ ತಾಣಗಳಲ್ಲಿ ವಿಡಿಯೋ ಮತ್ತು ಆರ್ಟಿಕಲ್ ಮುಖಾಂತರ ಜನರ ನೋವನ್ನು ಸಮಾಜದ ಮುಂದಿಟ್ಟು ಅರ್ಹವಾದ ಸಹಾಯಧನ ತಲುಪಿಸುವ ಕಾರ್ಯವೈಖರಿ ಶ್ಲಾಘನೀಯ. ಜೊತೆಗೆ ಸಹಾಯ ನೀಡುವ ಅದರಲ್ಲೂ ಬಹುತೇಕ ಅನಿವಾಸಿ ಭಾರತೀಯರ ಉದಾರ ಮನಸ್ಸು ಅಪ್ಪಿಕೊಳ್ಳಬೇಕಾದುದೇ. ಬಡವನೊಬ್ಬನ ಸಂಕಷ್ಟವನ್ನು ಕಂಡು ಸಮಾಜ ನೀಡಿದ ಸಹಾಯಧನವನ್ನು ಅದೇರೀತಿ ಅರ್ಹರಿಗೆ ತಲುಪಿಸಬೇಕಾದ ಸಂಪೂರ್ಣ ಜವಾಬ್ದಾರಿ ಮತ್ತು ಖರ್ಚುವೆಚ್ಚಗಳ ಸಂಪೂರ್ಣ ಲೆಕ್ಕಾಚಾರಗಳನ್ನು ಜನರ ಮುಂದಿಡಬೇಕಾದ ಕರ್ತವ್ಯ ಸಮಾಜ ಸೇವಕನ ಮೇಲಿದೆ.

ಈ ಜವಾಬ್ದಾರಿಯ ನಡುವೆಯೂ ಸಮಾಜ ಸೇವಕ ಎಂದು ಹೇಳಿಕೊಳ್ಳುವವನೊಬ್ಬ ತನ್ನ ಅಗತ್ಯತೆಗಾಗಿ ಸಹಾಯಾಧನದಿಂದ ತೆಗೆದಿರಿಸುತ್ತಾನೆಂದರೆ ಅಥವಾ ನೊಂದವರ ಬದುಕನ್ನು ತನ್ನ ಪ್ರಚಾರಕ್ಕಾಗಿ ದುರ್ಬಳಕೆ ಮಾಡುತ್ತಿದ್ದಾನೆಂದರೆ ಅದನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕಾದ ಅನಿವಾರ್ಯತೆ ಸಮಾಜದ ಹೊಣೆಗಾರಿಕೆಯಲ್ಲಿದೆ. ಅಲ್ಲದೇ ಹೋದಲ್ಲಿ ಇಡೀ ಜನಸಮೂಹವನ್ನು ಕಬಳಿಸಿ ಪರಾರಿಯಾಗುವ ಹೊತ್ತಲ್ಲಿ ಮೂಕರಾಗಿ ನಿಲ್ಲಬೇಕಾದೀತು. ಮಾತ್ರವಲ್ಲ ಇಂತಹ ದುಷ್ಟ ಮನಸ್ಸುಗಳಿಂದ ತೀರಾ ಸಂಕಷ್ಟಕ್ಕೊಳಗಾಗುವುದು ಪ್ರಾಮಾಣಿಕ ಸಮಾಜ ಸೇವಕರು ಮತ್ತು ಸಹಾಯ ಸ್ವೀಕರಿಸಲು ಅರ್ಹರಾಗಿರುವ ಬಡ ಕುಟುಂಬಗಳು.

ನಿಸ್ವಾರ್ಥ ಸಮಾಜಸೇವೆ ಮಾಡುವ ಮತ್ತು ಸಹಾಯ ಸ್ವೀಕರಿಸಿದವರ ಪ್ರಾರ್ಥನೆಯಲ್ಲೇ ಸಂತೃಪ್ತಿ ಕಾಣುವ ಹಲವಾರು ಮಂದಿ ಜನಸೇವೆ ಮಾಡುವವರು ನಮ್ಮ ಮುಂದಿದ್ದಾರೆ. ಪ್ರಚಾರದ ತೆವಳಿಗೆ ಬಲಿ ಕೊಡದೇ, ತೆರೆಮರೆಯಲ್ಲೇ ಚಾರಿಟಿ ಕಾರ್ಯಗಳನ್ನು ನಡೆಸುತ್ತಾ, ನೊಂದವರ ಪಾಲಿಗೆ ಆಶಾಕಿರಣವಾಗಿ ಬೆಳೆದು ಬರುತ್ತಿರುವ ನಿಷ್ಠಾವಂತ ಮನಸ್ಸುಗಳನ್ನು ದಮನ ಮಾಡುವಲ್ಲಿ ಪ್ರಚಾರ ಪ್ರಿಯ ದುಷ್ಟ ಶಕ್ತಿಗಳು ಬೆನ್ನಹಿಂದೆ ಕೆಲಸಮಾಡುತ್ತಿರುತ್ತದೆ.

ಒಟ್ಟಿನಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದಂತಹ ವಿಚಾರವೇನೆಂದರೆ,
ನೊಂದವರು, ಸಂಕಷ್ಟದಲ್ಲಿರುವವರು, ಚಿಕಿತ್ಸೆಯ ವೆಚ್ಚ ಭರಿಸಲಾಗದೇ ಕಷ್ಟ ಅನುಭವಿಸುವವರು, ನಿರ್ಗತಿಕರು, ಹಸಿವಿನಿಂದ ಬಳಲುತ್ತಿರುವವರು.. ಹೀಗೆ ನಾನಾ ರೀತಿಯ ತೊಂದರೆಗಳನ್ನನುಭವಿಸುತ್ತಿರುವವರಿಗೆ ಸಾಂತ್ವನದ ಧ್ವನಿಯಾಗಿ ತಮ್ಮ ಸಹಾಯವನ್ನು ಮಧ್ಯವರ್ತಿಗಳ (ಚಾರಿಟಿ ಸಂಸ್ಥೆ/ವ್ಯಕ್ತಿ) ಮೂಲಕ ತಲುಪಿಸುವಾಗ ಅದು ನೇರವಾಗಿ ಫಲಾನುಭವಿಗೆ ತಲುಪುತ್ತದೆಯೇ ಎಂಬುದನ್ನು ಖಾತ್ರಿಪಡಿಲೇಬೇಕು.

ಚಾರಿಟಿ ಅಥವಾ ಸಮಾಜ ಸೇವೆ ಎಂಬುದು ಈಗಾಗಲೇ ಒಂದು ವ್ಯಾಪಾರವೆಂಬಂತೆ ಬಿಂಬಿಸಲ್ಪಡುತ್ತಿದೆ. ಇದಕ್ಕೆ ಕೆಲವೊಂದು ಸ್ವಾರ್ಥ, ಪ್ರಚಾರ ಪ್ರಿಯತೆ ಮತ್ತು ಸನ್ಮಾನ ಪ್ರಶಸ್ತಿಗಳಿಗಾಗಿ ಮಾತ್ರ ಸೀಮಿತಗೊಂಡು ಕಾರ್ಯಾಚರಿಸುವ ಸ್ವಘೋಷಿತ ಸಮಾಜ ಸೇವಕರ ನೀಚ ಮನಸ್ಸೇ ಕಾರಣವಾಗಿದೆ. ಸಹಾಯದ ನೆಪದಲ್ಲಿ ಜನರಿಂದ ಹಣ ದೋಚುವ ಚಾಳಿಯು ಈಗ ವ್ಯಾಪಕವಾಗಿದೆ. ಕೆಲವೊಮ್ಮೆ ಯಾವುದೇ ಅಧಿಕೃತ ವಿವರವಿಲ್ಲದ ಸಹಾಯ ಕೋರಿಕೆಯ ಸಂದೇಶಗಳನ್ನು ರವಾನಿಸುವ ಮೂಲಕವೂ ಮೋಸ ಮಾಡಲಾಗುತ್ತಿದೆ. ಈ ರೀತಿಯ ಕೆಲವೊಂದು ಸಂದೇಶಗಳು ವರ್ಷಗಟ್ಟಲೆ ಹರಿದಾಡುತ್ತಲೂ ಇರುತ್ತದೆ. ಒಟ್ಟಾರೆ ಸಾಮಾಜಿಕ ಸೇವೆಯ ಹೆಸರಿನಲ್ಲಿ ನೈಜ ಸಮಾಜ ಸೇವಕರಿಗೆ ಕಂಟಕವಾಗಿ ಮೋಸದ ಜಾಲವು ಹುಟ್ಟಿಕೊಂಡಿರುವುದು ಪ್ರತಿಯೊಂದು ವಿಚಾರದಲ್ಲೂ ಎಚ್ಚರವಹಿಸಿದಲ್ಲಿ ನಮ್ಮ ಹಣ ಪೋಲಾಗದಂತೆ, ಯಾವೊಬ್ಬನ ಜೇಬು ತುಂಬದಂತೆ ತಡೆಯಬಹುದು.

ಕೊನೆಯದಾಗಿ, ನಮ್ಮ ನಡುವಿನ ನಿಷ್ಠಾವಂತ, ಪ್ರಾಮಾಣಿಕ, ನಿಸ್ವಾರ್ಥ ಮನೋಭಾವದೊಂದಿಗೆ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನೈಜ ಸಮಾಜ ಸೇವಕರನ್ನು ಅಭಿನಂದಿಸುತ್ತಾ, ತಮ್ಮ ಅಡಿಪಾಯ ಭದ್ರಗೊಳಿಸಲು, ಪ್ರಚಾರ-ಪ್ರಶಸ್ತಿಗಾಗಿ ಸಮಾಜ ಸೇವೆಯೆಂಬ ಮುಖವಾಡ ತೊಟ್ಟು, ಸಮಾಜದ ನಡುವೆ ಸಾಚಾನಂತೆ ವರ್ತಿಸಿ, ತೆರೆಯ ಹಿಂದೆ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನಸಮುದಾಯವನ್ನು ಮೂರ್ಖರನ್ನಾಗಿಸುವ ನಿಷ್ಠುರ ಸ್ವಘೋಷಿತ ಸಮಾಜ ಸೇವಕರನ್ನು ಮಟ್ಟಹಾಕುವಲ್ಲಿ ನಾವೆಲ್ಲರೂ ಮುತುವರ್ಜಿ ವಹಿಸಬೇಕಾದ ಅನಿವಾರ್ಯತೆ ಮುಂದಿದೆ. ಚಾರಿಟಿ ಎಂಬುದು ಸಂಪೂರ್ಣವಾಗಿ ವಾಣಿಜ್ಯೀಕರಣಗೊಳ್ಳುವ ಮುನ್ನ ಸಮಾಜ ಎಚ್ಚರಗೊಳ್ಳಬೇಕಿದೆ.

-ಹಕೀಂ ಪದಡ್ಕ

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...