ಬಂಟ್ವಾಳ ಪುರಸಭಾ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಪದಗ್ರಹಣ ಸಮಾರಂಭ

ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಸಮಾಜದ ತಳಮಟ್ಟದ ವರ್ಗದ ಮಂದಿಗೆ ಅಧಿಕಾರ ಸಿಗುವುದನ್ನು ತಪ್ಪಿಸುವ ಉದ್ದೇಶದಿಂದಾಗಿ ಪಟ್ಟಭದ್ರರು ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಬಂಟ್ವಾಳ ಪುರಸಭೆಗೆ ಕಳೆದ ಎರಡು ವರ್ಷಗಳಿಂದ ಅಧ್ಯಕ್ಷರಿಲ್ಲದೆ ನಲುಗಿ ಹೋಗಿತ್ತು ಎಂದು ಮಾಜಿ ಸಚಿವ ಬಿ ರಮಾನಾಥ ರೈ ಝಾಡಿಸಿದರು.

ಬಂಟ್ವಾಳ ಪುರಸಭಾ ಕಛೇರಿಯಲ್ಲಿ ಬುಧವಾರ ನಡೆದ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದ ಮುಹಮ್ಮದ್ ಶರೀಫ್ ಶಾಂತಿಅಂಗಡಿ ಹಾಗೂ ಜೆಸಿಂತಾ ಡೊ’ಸೋಜ ಮೆಲ್ಕಾರ್ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಧಿಕಾರಶಾಹಿಗಳು ಅಧಿಕಾರ ನಡೆಸುತ್ತಿರುವುದರಿಂದ ಇಂದು ಅಭಿವೃದ್ದಿಗೆ ಶನಿಕಾಲ ಹಿಡಿದಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿ ಕಳೆದ ಎರಡೂವರೆ ವರ್ಷಗಳಿಂದ ಯಾವುದೇ ಅಭಿವೃದ್ದಿ ಕಾರ್ಯಗಳಿಲ್ಲದೆ, ಜನಪರ ಧ್ಯೇಯೋದ್ದೇಶಗಳಿಲ್ಲದೆ ಸೊರಗಿ ಹೋಗಿದೆ ಎಂದರು. ಕೆಲವೊಂದು ಪಂಚಾಯತ್ ಆಡಳಿತಗಳ ರಾಜಕೀಯ ಪ್ರೇರಿತ ನಿರ್ಧಾರಗಳಿಂದ ಬಂಟ್ವಾಳ ಪುರಸಭೆಯು ನಗರ ಸಭೆಯಾಗಿ ಮೇಲ್ದರ್ಜೆಗೇರುವುದು ತಪ್ಪಿಹೋಗಿ ಹೆಚ್ಚಿನ ಅನುದಾನ ಬರುವುದು ನಿಲ್ಲುವಂತಾಗಿದೆ ಎಂದ ರಮಾನಾಥ ರೈ ಪುರಸಭಾ ವ್ಯಾಪ್ತಿಗೆ ಆದ್ಯತೆ ಮೇಲೆ ಮಂಜೂರುಗೊಳಿಸಿದ ಸಮಗ್ರ ಒಳಚರಂಡಿ ಯೋಜನೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಇಂದು ನೆನೆಗುದಿಗೆ ಬಿದ್ದಿದೆ ಎಂದು ಆರೋಪಿಸಿದರು.

ಈ ಬಾರಿ ಪುರಸಭೆಯ ಅಧಿಕಾರ ಮತ್ತೆ ಕಾಂಗ್ರೆಸ್ ಪಾಲಿಗೆ ಬಂದಿದ್ದು, ನೂತನ ಅಧ್ಯಕ್ಷರು ಹಾಗೂ ಸದಸ್ಯರುಗಳು ಒಗ್ಗಟ್ಟಾಗಿ ಇಚ್ಛಾಶಕ್ತಿಯಿಂದ ಕೆಲಸ ಮಾಡಿ ಪುರವಾಸಿಗಳ ಎಲ್ಲಾ ಕನಸುಗಳನ್ನು ಈಡೇರಿಸಬೇಕು ಎಂದು ಮಾಜಿ ಸಚಿವ ರೈ ಸಲಹೆ ನೀಡಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ ಅವರು, ಮಾಜಿ ಸಚಿವ ರಮಾನಾಥ ರೈ ಅವರ ಸಲಹೆ ಪಡೆದು ಬಂಟ್ವಾಳವನ್ನು ಮಾದರಿ ಪುರಸಭೆಯನ್ನಾಗಿ ಮಾಡುವುದರ ಜೊತೆಗೆ ಅಭಿವೃದ್ದಿಯಲ್ಲಿಯೂ ಮಾದರಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ನೂತನ ಉಪಾಧ್ಯಕ್ಷೆ ಜೆಸಿಂತಾ ಡಿ’ಸೋಜ ಮಾತನಾಡಿ, ಸಚಿವರಾಗಿದ್ದಾಗಲೇ ಮಹಿಳಾ ಪ್ರತಿನಿಧಿಗಳನ್ನು ಉದ್ದೇಶಿಸಿ ನನಗಿಂತ ನಾಲ್ಕು ಹೆಜ್ಜೆ ನೀವು ಮುಂದೆ ಇಡಬೇಕು ಎಂಬ ಸಲಹೆ ನೀಡುತ್ತಿದ್ದ ರಮಾನಾಥ ರೈ ಅವರ ಉತ್ತಮ ಮನಸ್ಸು ಹಾಗೂ ಅಭಿವೃದ್ದಿ, ಜನಪರ ಪ್ರವೃತ್ತಿಯೇ ನಮಗೂ ಅಧಿಕಾರಾವಧಿಯಲ್ಲಿ ಮಾದರಿ ಎಂದರು.

ಜಿ ಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮಂಜುಳಾ ಮಾವೆ, ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪುರಸಭಾ ಸದಸ್ಯ ಮೂನಿಶ್ ಅಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದರು.

ಪುರಸಭಾ ಸಿಬ್ಬಂದಿ ಅಬ್ದುಲ್ ರಝಾಕ್ ಸ್ವಾಗತಿಸಿ, ಪುರಸಭಾ ಸದಸ್ಯ ವಾಸು ಪೂಜಾರಿ ವಂದಿಸಿದರು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಕಾರ್ಯಕ್ರಮ ನಿರೂಪಿಸಿದರು.

ಪ್ರಧಾನ ವರದಿಗಾರರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...