ಬಂಟ್ವಾಳ ಹಾಗೂ ವಿಟ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ಇಲಾಖಾ ಮೊಬೈಲ್ ಫೋನ್ ವಿತರಣೆ

ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ ಮತ್ತು ವಿಟ್ಲ ಪೋಷಣ್ ಅಭಿಯಾನ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಮೇಲ್ವಿಚಾರಕಿಯರಿಗೆ ಮೊಬೈಲ್ ಫೋನ್ ವಿತರಣಾ ಕಾರ್ಯಕ್ರಮ ಬಿ ಸಿ ರೋಡಿನ ಸ್ತ್ರೀ ಶಕ್ತಿಭವನದಲ್ಲಿ ಶುಕ್ರವಾರ ನಡೆಯಿತು.

ಮೊಬೈಲ್ ಫೋನ್ ವಿತರಿಸಿ ಮಾತನಾಡಿದ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್, ತಂತ್ರಜ್ಞಾನದ ಯುಗದಲ್ಲಿ ಸರಕಾರಿ ಇಲಾಖೆಯ ಯೋಜನೆಗಳನ್ನು ಶೀಘ್ರವಾಗಿ ಜನರಿಗೆ ತಲುಪಲು ಸಹಾಯವಾಗುವ ನಿಟ್ಟಿನಲ್ಲಿ ತಂತ್ರಜ್ಞಾನದ ಬಳಕೆ ಅನಿವಾರ್ಯವಾಗಿದೆ. ಅಭಿವೃದ್ಧಿಗೆ ಸಹಾಯವಾಗುವಂತೆ ಮತ್ತು ಇಲಾಖೆಯ ಕಾರ್ಯಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಲು, ನಿತ್ಯ ದಾಖಲೆಗಳನ್ನು ಅಪ್ಡೇಟ್ ಮಾಡುವ ಉದ್ದೇಶದಿಂದ ಮೊಬೈಲ್ ಫೋನ್ ಇಲಾಖೆ ನಿಮಗೆ ನೀಡಿದೆ. ಸರಕಾರ ಇಲಾಖೆಗಳಿಗೆ ನೀಡುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಯಶಸ್ವಿಯಾಗಲು ಅಧಿಕಾರಿಗಳ ಶ್ರಮ ಅತ್ಯಂತ ಹೆಚ್ಚಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಮಾತನಾಡಿ, ತಂತ್ರಜ್ಞಾನದ ಮೂಲಕ ಕಾರ್ಯ ನಿರ್ವಹಿಸಿದಾಗ ಜನರಿಗೆ ಉತ್ತಮ ಹಾಗೂ ಶೀಘ್ರ ಸೇವೆ ನೀಡಲು ಸಾಧ್ಯವಿದೆ ಎಂದರು.

ಬಂಟ್ವಾಳ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ರಾಜಣ್ಣ ಮಾತನಾಡಿ, ಅಂಗನವಾಡಿ ಕಾರ್ಯಕರ್ತರಿಗೆ ಗ್ರಾಮದ ಜನರ ಸಂಪೂರ್ಣ ಮಾಹಿತಿ ಇರುತ್ತದೆ. ಹಾಗಾಗಿ ಸರಕಾರದ ಯೋಜನೆಗಳು ಸರಿಯಾಗಿ ತಲುಪುವಲ್ಲಿ ಇಲಾಖೆಯ ಜವಾಬ್ದಾರಿ ಮಹತ್ತರವಾಗಿದೆ, ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ ಹೆಗ್ಗಳಿಕೆ ಕೂಡ ಇವರದು ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ. ಶೆಟ್ಟಿ ಉಪಸ್ಥಿತರಿದ್ದರು. ವಿಟ್ಲ ಸಿ.ಡಿ.ಪಿ.ಒ. ಸುಧಾಜೋಶಿ ಸ್ವಾಗತಿಸಿ, ಬಂಟ್ವಾಳ ಸಿ.ಡಿ.ಪಿ.ಒ ಗಾಯತ್ರಿ ಕಂಬಳಿ ವಂದಿಸಿದರು. ಹಿರಿಯ ಮೇಲ್ವಿಚಾರಿಕಿ ಬಿ. ಭಾರತಿ ಕಾರ್ಯಕ್ರಮ ನಿರೂಪಿಸಿದರು.

ಬಂಟ್ವಾಳ ಮತ್ತು ವಿಟ್ಲ ಸೇರಿದಂತೆ ಒಟ್ಟು 588 ಮಂದಿಗೆ ಮೊಬೈಲ್ ಫೋನ್ ವಿತರಿಸಲಾಯಿತು. ಮೊಬೈಲ್ ಜೊತೆಗೆ ಪವರ್ ಬ್ಯಾಂಕ್, ಮೆಮೊರಿ ಕಾರ್ಡ್, ಸ್ಕ್ರೀನ್ ಗಾರ್ಡ್, ಬ್ಯಾಕ್ ಕವರ್, ಇಯರ್ ಫೋನ್, ಪೌಚ್ ವಿತರಿಸಲಾಗಿದೆ.

ಪ್ರಧಾನ ವರದಿಗಾರರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...