ತಮಿಳುನಾಡಿನ ಆರ್ಕಾಟಿನಲ್ಲಿ ಸುಮಾರು ಮುನ್ನೂರು ವರ್ಷಗಳ ಹಿಂದೆ ಓರ್ವ ಸೂಫಿಸಂತ ವಾಸವಾಗಿದ್ದರು. ಅವರ ಹೆಸರು ಹಜ್ರತ್ ಟೀಪು ಮಸ್ತಾನ್ ಔಲಿಯಾ. ಆರ್ಕಾಟ್ ಪ್ರದೇಶವನ್ನು ಆಗ ನವಾಬ್ ಸಾದತ್ ಆಳುತ್ತಿದ್ದನು. ಅವನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ಯಾವ ವೈದ್ಯರು ಗುಣಪಡಿಸಲು ಪ್ರಯತ್ನಿಸಿದರೂ ಔಷಧಿ ಫಲ ಕೊಡಲಿಲ್ಲ. ನವಾಬನಿಗೆ ಇದು ಚಿಂತೆಯ ವಿಷಯವಾಗಿತ್ತು. ಆತನ ಹಿತೈಷಿಗಳು ಹಜ್ರತ್ ಟೀಪು ಮಸ್ತಾನ್ ಗುರುಗಳ ಬಳಿ ಹೋಗಲು ಸಲಹೆ ಕೊಟ್ಟರು. ನವಾಬನು ಗುರುಗಳಿಗೆ ತಾಯಿಯ ಅನಾರೋಗ್ಯದ ವಿಷಯ ತಿಳಿಸಿದನು. ಗುರುಗಳು ಹೇಳಿದರು: ನೀನು ಚಿಕ್ಕವನಿದ್ದಾಗ ನಿನ್ನ ತಂದೆ ತೀರಿಕೊಂಡರು. ರಾಜ್ಯಭಾರವನ್ನೆಲ್ಲ ನಿನ್ನ ತಾಯಿಯವರೇ ನೋಡಿಕೊಳ್ಳುತ್ತಿದ್ದರು. ನಿನ್ನ ತಾಯಿಯವರು ಕುದುರೆಗಳನ್ನು ಕಟ್ಟಲು ಜಾಗಬೇಕೆಂದು ಅಲ್ಲಿಯ ಬಹಳ ಮರಗಳನ್ನು ಕತ್ತರಿಸಿಬಿಟ್ಟರು. ಆ ಮರಗಳಲ್ಲಿ ವಾಸಿಸುತ್ತಿದ್ದ ಪಕ್ಷಿಗಳು ನಿನ್ನ ತಾಯಿಗೆ ಶಾಪ ಹಾಕಿವೆ. ಆದುದರಿಂದ ಅವರ ಖಾಯಿಲೆ ಗುಣಮುಖವಾಗುತ್ತಿಲ್ಲ. ನವಾಬ ಆ ಶಾಪದಿಂದ ಮುಕ್ತಿ ಹೇಗೆ ಪಡೆಯಬಹುದು ಎಂದು ಕೇಳಿದ. ಒಂಬತ್ತು ಲಕ್ಷ ಗಿಡಮರಗಳನ್ನು ನೆಡೆಸಲು ಗುರುಗಳು ಸೂಚಿಸಿ ಪ್ರಾರ್ಥನೆ ಮಾಡಿದರು. ನವಾಬ ಹಾಗೆಯೇ ಮಾಡಿದ. ಅವನ ತಾಯಿ ಗುಣಮುಖಗೊಂಡರು.
ಇಂದು ನಾವು ಅಭಿವೃದ್ಧಿಯ ಹೆಸರಿನಲ್ಲಿ ಅದೆಷ್ಟು ಗಿಡಮರಗಳನ್ನು ನಾಶ ಪಡಿಸುತ್ತಿದ್ದೇವೋ ಊಹೆಗೂ ನಿಲುಕದು. ಜಾಗತಿಕ ತಾಪಮಾನ ಏರಿಕೆಗೆ ಕಾರಣಕರ್ತರು ಯಾರು? ವಾಯುಮಾಲಿನ್ಯ ಮಾಡುತ್ತಿರುವವರು ಯಾರು? ಸರಿಯಾದ ಸಮಯಕ್ಕೆ ಮಳೆ ಬಾರದಿರಲು ಕಾರಣಗಳೇನು? ಉತ್ತರ ನಮಗೆ ಗೊತ್ತಿದ್ದರೂ ನಾವು ಮೂಕರಾಗಿದ್ದೇವೆ. ಆ ಮೂಕ ಪ್ರಾಣಿಪಕ್ಷಿಗಳ ಶಾಪವೋ ಏನೋ ಇಂದು ನಾವು ಪ್ರಕೃತಿ ವಿಕೋಪಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಬಲಿಯಾಗುತ್ತಿದ್ದೇವೆ. ಆದರೂ ಮಾನವನಿಗೆ ಬುದ್ಧಿ ಮಾತ್ರ ಬಂದಿಲ್ಲ. ಮುಂದಿನ ಪೀಳಿಗೆಗಳ ಗತಿ ಏನಾಗುವುದೋ ಸಮಯವೇ ಉತ್ತರ ಕೊಡಲಿದೆ.
ಪ್ರವಾದಿ ಮುಹಮ್ಮದ್ (ಸ) ಗಿಡಮರಗಳನ್ನು ಬೆಳೆಸಲು ಪ್ರೇರಿಪಿಸಿದರೂ ಅದನ್ನು ನಾವು ಇಂದು ಪಾಲಿಸುತ್ತಿಲ್ಲ ಏಕೆ?
– ಜಬೀವುಲ್ಲಾ ಖಾನ್