ಬಾಹುಬಲಿ ಸ್ವಾಮಿ ಪಾದಾಭಿಷೇಕ, ಪ್ರತಿಭೋತ್ಸವ
ಕಾರ್ಕಳ ( ವಿಶ್ವಕನ್ನಡಿಗ ನ್ಯೂಸ್): ವಿಶ್ವದ ವಿಶಿಷ್ಟ ಬೆಳದಿಂಗಳ ಸಾಹಿತ್ಯ ಸಮ್ಮೇಳನಕ್ಕೆ ವಿಶ್ವದ ವಿಶಿಷ್ಟ ಬಾಹುಬಲಿಯ ಪದತಲದಲ್ಲಿ ಮುಹೂರ್ತ ನೆರವೇರುವುದು ಒಂದು ಐತಿಹಾಸಿಕ ಕ್ಷಣ ಎಂದು ಹೆಸರಾಂತ ಕನ್ನಡ-ತುಳು ಸಾಹಿತಿ ನಂದಳಿಕೆ ನಾರಾಯಣ ಶೆಟ್ಟಿ ಮುಂಬಯಿ ಅಭಿಪ್ರಾಯ ಪಟ್ಟರು.
ಅವರು 12 ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಮುಹೂರ್ತ, ಶ್ರೀ ಗೊಮಟೇಶ್ವರ ಪಾದಪೂಜೆ, ಮಕ್ಕಳ ಪ್ರತಿಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಮುಂಬಯಿಯಲ್ಲಿ ಹೊಟೇಲುಕಾರ್ಮಿಕರಿಗೆ ಗೌರವ ತರುವ ಉದ್ದೇಶದಿಂದ ಅವರಿಗೆ ಸಾಂಸ್ಖೃತಿಕ ಸ್ಪರ್ಧೆಗಳನ್ನು, ಕಥೆ, ಕವನ, ಪ್ರಬಂಧ ಸ್ಪರ್ಧೆಗಳನ್ನು ನಡೆಸಿ ಹೊಸತನ ಮೆರೆದಿದ್ದ ಶೇಖರ ಅಜೆಕಾರು ಅವರ ವಿಶಿಷ್ಟ ಪರಿಕಲ್ಪನೆಯ ಬೆಳದಿಂಗಳ ಸಮ್ಮೇಳನ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
ಗೊಮ್ಮಟೇಶ್ವರ ಬೆಟ್ಟದ ಪ್ರಧಾನ ಅರ್ಚಕ ಸಿದ್ಧಾರ್ಥ ಇಂದ್ರ ಅವರು ಪಾದಪೂಜೆಯನ್ನು ನೆರವೇರಿಸಿದರು.ವಿಶ್ವವನ್ನು ಗೆದ್ದ ಬಾಹುಬಲಿ ಸ್ವಾಮಿ ಎಲ್ಲವನ್ನು ತ್ಯಜಿಸಿ ಯಾವುದೇ ಗರ್ವ ತೋರದೆ ನಮಗೆಲ್ಲಾ ಬೆಳಕಾಗಿದ್ದಾರೆ. ಇಲ್ಲಿ ಎರಡು ಬೆಳದಿಂಗಳ ಸಮ್ಮೇಳನಕ್ಕೆ ಅವಕಾಶವಾಗಿತ್ತು. ಹಾಗಾಗಿ ಮುಂದಿನ ಸಮ್ಮೇಳನದ ಮುಹೂರ್ತ ಇಲ್ಲಿ ನಡೆಸಲು ಖುಷಿ ಎಂದು ಸಮ್ಮೇಳನ ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರು ಹೇಳಿದರು.
ಬೆಳದಿಂಗಳು ಹೊಸ ಪ್ರತಿಭೆಗಳಿಗೆ ಅವಕಾಶದ ಆಗರವಾಗಿ ಬೆಳೆವ ಸಿರಿಗಳ ಗೌರವದ ವೇದಿಕೆಯಾಗಿ ನೂರಾರು ಮಂದಿಯನ್ನು ಬೆಳೆಸಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಗೋರೂರು ಘಟಕದ ಸಂಚಾಲಕಿ ರೇಶ್ಮಾ ಹೇಳಿದರು.
ಸ್ವಸ್ತಿಕ್ ಪ್ರೊಡಕ್ಷನ್ನ ಸುರೇಂದ್ರ ಮೋಹನ್ ಮುದ್ರಾಡಿ, ಶಾಂತಿನಿಕೇತನ ಸೌಹಾರ್ಧ ಸಹಕಾರಿಯ ಆಡಳಿತಾಧಿಕಾರಿ ನರೇಂದ್ರ ಎಸ್. ಸದಾಶಿವ ಶೆಟ್ಟಿ, ಲೇಖಕ ದೊರೈಸ್ವಾಮಿ,ಸಮಿತಿಯ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಎಸ್.ಅಜೆಕಾರು, ಸಮಿತಿಯ ಸದಸ್ಯರಾದ ಶಶಿಕಲಾ ಜೆ. ಕೆ ಬೆಳುವಾಯಿ, ಸಂತೋಷ ಜೈನ್ ಮೊದಲಾದವರು ಉಪಸ್ಥಿತರಿದ್ದರು.
ಹಿರಿಯ ತ್ರಿಭಾಷಾ ಕವಿ ಕಾಂತಾವರ ಶಿವಾನಂದ ಶೆಣೈ ಅವರು ಗೋಮಟೇಶ್ವರ ವರ್ಣನೆಯ ಕವಿತೆಯನ್ನು ಹಾಡಿದರು. ಅನೇಕ ಸಂಗೀತ ಸ್ಪರ್ಧೆಗಳಲ್ಲಿ ವಿಜೇತರಾಗಿರುವ, ದ.ಕ. ಜಿಲ್ಲಾ ರಾಜ್ಯೋತ್ಸವ ಸಾಧಕ ಪುರಸ್ಕಾರ ಪಡೆದಿರುವ ಖ್ಯಾತ ಬಾಲ ಕಲಾವಿದೆ ತನುಶ್ರೀ ಮಂಗಳೂರು, ನ್ಯಾಶನಲ್ ಟ್ಯಾಲೆಂಟೆಡ್ ಡ್ಯಾನ್ಸರ್ ಗೌರವ ಪಡೆದಿರುವ ಶೃಜನ್ಯ ಜೆ.ಕೆ ಬೆಳುವಾಯಿ, ಯಕ್ಷಗಾನದಲ್ಲಿ ಮಿಂಚುತ್ತಿರುವ ಬಾಲ ಪ್ರತಿಭೆ ಪ್ರಥಮ್ ಮಾರೂರು, ಐದರ ಹರೆಯದ ಬಾಲಪ್ರತಿಭೆ ತನಿಶಾ ಕಾರ್ಕಳ, ಸುನಿಧಿ ಎಸ್, ಸುನಿಜ ಅಜೆಕಾರು ಮತ್ತು ಆಗಮ ಜೈನ್ ಅವರು ಸಂಗೀತ, ನೃತ್ಯ, ಯಕ್ಷ ನೃತ್ಯ ಮಾಡಿ ಗಮನಸೆಳೆದರು. ಕಾರ್ಕಳ ಜೈನ ಸಹೋದರಿಯರು ದೇವರನಾಮ ನಡೆಸಿಕೊಟ್ಟರು.
ಸಮಿತಿಯ ಸದಸ್ಯ ದೀಪಕ್ ಎನ್ ದುರ್ಗಾ ಕಾರ್ಯಕ್ರಮ ನಿರ್ವಹಿಸಿದರು, ಸುನಿಧಿ ಎಸ್ ಅಜೆಕಾರು ವಂದಿಸಿದರು.